(ಲೇಖಕರು ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯರು)ನರೇಂದ್ರ ಮೋದಿ ಈಗ ಭಾರತದಲ್ಲಿ ಅತ್ಯಂತ ದೀರ್ಘಾವಧಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ, ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪ್ರಧಾನಿಯಾಗಿದ್ದಾರೆ ಎಂಬುದು ಸಂತೋಷದ ಸಂಗತಿ. ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿಸಿದ್ದಾರೆ ಎಂಬುದಕ್ಕಷ್ಟೇ ಅಲ್ಲ, ಇದು ಭಾರತದ ಪ್ರಜಾಪ್ರಭುತ್ವದ ವಿಜಯದ ಬಗ್ಗೆ ಸಾಕಷ್ಟು ವಿಶದಪಡಿಸುತ್ತದೆ ಎಂಬ ಕಾರಣಕ್ಕಾಗಿಯೂ ನನಗೆ ಸಂತೋಷವಾಗಿದೆ.
ಭಾರತ ಕೇವಲ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ, ಬದಲಿಗೆ ಸಮೃದ್ಧವಾಗಿ ಬೆಳೆದು ಅದ್ಭುತ ಯಶಸ್ಸಿನ ಕಥೆಯಾಗಿ ಹೊರಹೊಮ್ಮಿದೆ. ಆ ಯಶೋಗಾಥೆಗೆ ಮೋದಿಯವರ ಕೊಡುಗೆ ಅಪಾರ, ಐತಿಹಾಸಿಕ.ನೆಹರು 1952ರವರೆಗೆ ಚುನಾಯಿತರಾಗದ ಪ್ರಧಾನಿಯಾಗಿಯೇ ಮುಂದುವರಿದಿದ್ದರು. ಅಷ್ಟೇ ಪ್ರತಿಭಾವಂತ ಮತ್ತು ಸಮರ್ಪಿತ ಮುಖಂಡರ ನಡುವೆ, 1947ರ ಅಸಾಧಾರಣ ಪರಿಸ್ಥಿತಿಗಳಲ್ಲಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಪ್ರಧಾನಿಯಾಗಿ ನೆಹರು ಅವರ ನಾಮನಿರ್ದೇಶನವನ್ನು ಖಚಿತಪಡಿಸಿದ್ದು ಜನಸಾಮಾನ್ಯರ ಮೇಲಿದ್ದ ಮಹಾತ್ಮ ಗಾಂಧೀಜಿಯವರ ಒಂದು ರೀತಿಯ ವಿಟೋ ಅಧಿಕಾರ ಮತ್ತು ಅವರ ನೈತಿಕ ಆದೇಶವೇ ಆಗಿತ್ತು. ಗಾಂಧೀಜಿ ಆಶೀರ್ವಾದ ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಭಾವಳಿಯೊಂದಿಗೇ ಅವರು 1952ರ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸಿದರು. ಆಗ ಕಾಂಗ್ರೆಸ್ನ ಏಕಸ್ವಾಮ್ಯವಿತ್ತು. ಅದಕ್ಕೆ ಯಾವುದೇ ರಾಜಕೀಯ ಸ್ಪರ್ಧೆಯೇ ಇರಲಿಲ್ಲ.ಆ ಸಾರ್ವತ್ರಿಕ ಚುನಾವಣೆಯಲ್ಲಿ 53 ರಾಜಕೀಯ ಪಕ್ಷಗಳು ಕಣದಲ್ಲಿದ್ದರೂ, ಅವುಗಳ ಉಪಸ್ಥಿತಿ ಹಾಗೂ ಪ್ರಭಾವ ತೀರಾ ನಗಣ್ಯವಾಗಿತ್ತು. ಅಲ್ಲಿಂದ ಹಿಡಿದು, ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಮತ್ತು ನಂತರ 2024ರಲ್ಲಿ ದೇಶದ ಅತ್ಯುನ್ನತ ಹುದ್ದೆಗೆ ಏರಿದ ಸಮಯಕ್ಕೆ, ಭಾರತ ಸಂಪೂರ್ಣವಾಗಿ ಭಿನ್ನವಾದ ರಾಷ್ಟ್ರವಾಗಿ ಮಾರ್ಪಟ್ಟಿತ್ತು. ದೇಶದ ಭೌಗೋಳಿಕ ಗಾತ್ರ, ಸಾಂಸ್ಕೃತಿಕ ವೈವಿಧ್ಯ, ಆರ್ಥಿಕತೆ ಮತ್ತು ನಾಗರಿಕರ ವೈಚಾರಿಕ ಪ್ರಬುದ್ಧತೆಯ ದೃಷ್ಟಿಯಿಂದ ಅದು ಅಕ್ಷರಶಃ ಗುರುತಿಸಲಾಗದಷ್ಟು ಬದಲಾಗಿತ್ತು.2014 ಅಥವಾ 2024ಕ್ಕೆ ಹೋಲಿಸಿದರೆ 1952ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುವುದು ಸುಲಭವಾಗಿತ್ತು ಎಂದು ಹೇಳುವುದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಅದು ತರ್ಕಬದ್ಧ ಅನಿಸಿಕೆಯಾಗಲಾರದು. ನಾನು 1996ರಲ್ಲಿ ಪ್ರಧಾನಿಯಾದಾಗಲೂ, ದೇಶದ ರಾಜಕೀಯ ಸನ್ನಿವೇಶಗಳು, ನಿಯತಾಂಕಗಳು ಮತ್ತು ಸ್ಪರ್ಧೆಯ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದವು. ರಾಷ್ಟ್ರವು ಹೆಚ್ಚು ಪ್ರಶ್ನಿಸುವ, ರಾಜಕೀಯವಾಗಿ ಹೆಚ್ಚು ತೊಡಗಿಸಿಕೊಳ್ಳುವ ಮತ್ತು ಪ್ರಬುದ್ಧ ದೇಶವಾಗಿ ಮಾರ್ಪಟ್ಟಿತ್ತು. ನೆಹರು-ಗಾಂಧಿ ವಂಶಾವಳಿಯ ಹೊರಗಿನ ಪ್ರಧಾನಿಗಳಿಗೆ ಹಕ್ಕು ಸಾಧಿಸಲು ಯಾವುದೇ ಭವ್ಯ ಪ್ರಭಾವಳಿ ಇರಲಿಲ್ಲ. ತಮಗೆ ಪೂರಕವಾಗಿ ಬಳಸಿಕೊಳ್ಳಲು ಅವರಿಗೆ ಯಾವುದೇ ವಂಶಪಾರಂಪರ್ಯ ಸವಲತ್ತುಗಳಾಗಲಿ, ಉನ್ನತ ಹಿನ್ನೆಲೆಯಾಗಲಿ ಅಥವಾ ರಾಜಕೀಯ ಆಶ್ರಯದ ಬೆಂಬಲವಾಗಲಿ ಇರಲಿಲ್ಲ.ಮೋದಿ ಮತ್ತು ನನ್ನ ವಿಷಯದಲ್ಲೂ ಅಷ್ಟೇ, ಇತರ ಅನೇಕ ಪ್ರಧಾನಿಗಳಿಗಿದ್ದ ಸಾಮಾಜಿಕ- ಸಾಂಸ್ಕೃತಿಕ ಬಂಡವಾಳದ ಶ್ರೀಮಂತಿಕೆ ನಮ್ಮ ಬಳಿ ಇರಲಿಲ್ಲ. ನಾನು ಕೇವಲ 11 ತಿಂಗಳು ಪ್ರಧಾನಿಯಾಗಿದ್ದೆ. ಆದರೆ ಮೋದಿ ಯಾವ ದೈವಿಕ ಆಶೀರ್ವಾದವನ್ನು ಪಡೆದಿದ್ದಾರೋ ಏನೋ, ತಾವೂ ದಣಿಯದಂತೆ, ಜನರಲ್ಲಿಯೂ ಬೇಸರ ಮೂಡದಂತೆ ಮುಂದುವರಿಯುತ್ತಿರುವುದನ್ನು ಕಂಡು ವಿಸ್ಮಿತನಾಗುತ್ತೇನೆ. ಅವರ ಈ ದಣಿವರಿಯದ ಶಕ್ತಿ ಮತ್ತು ಸಹಿಷ್ಣುತೆ, ನೆಹರು ಅವರಲ್ಲಿ ಕಂಡಿದ್ದಕ್ಕಿಂತ ಭಿನ್ನವಾಗಿದೆ. ನೆಹರು ಕಾಲದಿಂದ ಇಂದಿನವರೆಗಿನ ಕೆಲವು ಆಸಕ್ತಿದಾಯಕ ಅಂಕಿಅಂಶಗಳನ್ನು ಗಮನಿಸೋಣ. ಇದು ಮಹತ್ತರ ಬದಲಾವಣೆಯ ಆಳ ಮತ್ತು ತೀವ್ರತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
ರಾಜಕೀಯ ಸ್ಪರ್ಧೆಯ ದೃಷ್ಟಿಯಿಂದಷ್ಟೇ ನೋಡುವುದಾದರೆ, 1952ರ ಚುನಾವಣೆಯ ಕಣದಲ್ಲಿದ್ದದ್ದು ಕೇವಲ 53 ಪಕ್ಷಗಳು. ಆದರೆ ಮೋದಿ 2024ರ ಚುನಾವಣೆಯಲ್ಲಿ 2,593 ಪಕ್ಷಗಳನ್ನು ಎದುರಿಸಬೇಕಾಯಿತು. ನೆಹರು ಕಾಲದಲ್ಲಿ ಮತದಾರರ ಸಂಖ್ಯೆ ಕೇವಲ 17 ಕೋಟಿಯಷ್ಟಿತ್ತು, 2014ರ ವೇಳೆಗೆ ಅದು 83 ಕೋಟಿಗೆ ತಲುಪಿತು. ಇನ್ನು 1952ರಲ್ಲಿ 34 ಕೋಟಿಯಾಗಿದ್ದ ಭಾರತದ ಜನಸಂಖ್ಯೆ, ಇಂದು 146 ಕೋಟಿಗೂ ಅಧಿಕವಾಗಿದೆ. ನನ್ನನ್ನು ಆಕರ್ಷಿಸಿದ ಮತ್ತೊಂದು ಅಂಶವೆಂದರೆ, ನೆಹರು ಸಚಿವ ಸಂಪುಟ ದೇಶದ ವಿವಿಧ ಸಮುದಾಯಗಳ ಜನಸಂಖ್ಯೆಯ ಗಾತ್ರವನ್ನಾಗಲಿ, ಭಾರತದ ಸಾಂಸ್ಕೃತಿಕ- ಜಾತಿ ವೈವಿಧ್ಯವನ್ನಾಗಲಿ ಸರಿಯಾಗಿ ಪ್ರತಿಬಿಂಬಿಸುತ್ತಿರಲಿಲ್ಲ. ನೆಹರು ಪ್ರಧಾನಿಯಾಗಿ ಮೂರನೇ ಹಾಗೂ ಅಂತಿಮ ಅವಧಿಯಲ್ಲಿದ್ದಾಗಲೂ, ಸಂಪುಟದ ಸ್ವರೂಪ ಆಶ್ಚರ್ಯಕರವಾಗಿ ಅಸಮತೋಲನದಿಂದ ಕೂಡಿತ್ತು. ಹೆಚ್ಚಾಗಿ ಮೇಲ್ಜಾತಿಯ ಪುರುಷರಿಂದಲೇ ತುಂಬಿತ್ತು. ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಕಾಕಾ ಕೇಳ್ಕರ್ ಆಯೋಗದ ವರದಿಯನ್ನು ನೆಹರು ನೇರವಾಗಿ ತಿರಸ್ಕರಿಸಿದ್ದರು. ಮೋದಿ ಸಂಪುಟದಲ್ಲಿ ಅದ್ಭುತ ಸಾಮಾಜಿಕ ವೈವಿಧ್ಯವಿದೆ. ಇದರಲ್ಲಿ 27 ಒಬಿಸಿ, 10 ಪರಿಶಿಷ್ಟ ಜಾತಿ, 5 ಪರಿಶಿಷ್ಟ ಪಂಗಡಗಳ ಸದಸ್ಯರಿದ್ದಾರೆ. ಮಹಿಳೆಯರ ಪ್ರಾತಿನಿಧ್ಯವೂ ಹೆಚ್ಚಾಗಿದೆ.ಮಹಿಳೆಯರಿಗೆ ಐತಿಹಾಸಿಕ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ದೇಶವನ್ನು ಮತ್ತಷ್ಟು ಸದೃಢ ಒಕ್ಕೂಟವನ್ನಾಗಿ ಮಾಡಲು, ಮೋದಿ ಏಪ್ರಿಲ್ನಲ್ಲಿ ಸಂಸತ್ತಿನ ಬಲ ವಿಸ್ತರಿಸುವ ಪ್ರಸ್ತಾಪ ಮಂಡಿಸಿದರು. ಅವರು ಈಗಾಗಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಸತ್ತಿನ ಗಾತ್ರ ವಿಸ್ತರಿಸುವ ಪ್ರಯತ್ನಗಳನ್ನು ಖಂಡಿತವಾಗಿಯೂ ಮುಂದುವರಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ಹಲವು ರಂಗಗಳಲ್ಲಿ ಹೆಚ್ಚು ಸ್ವಯಂಜಾಗೃತವಾಗಿದೆ. ನೆಹರು ಕಾಲದ ಆಡಳಿತಕ್ಕೆ ಹೋಲಿಸಿದರೆ, ಇಂದು ವೈವಿಧ್ಯಮಯ ಧ್ವನಿಗಳು ಮತ್ತು ತೀವ್ರ ಚರ್ಚೆಗಳಿರುವ ಜೀವಂತ ಪ್ರಜಾಪ್ರಭುತ್ವವಾಗಿದ್ದೇವೆ. ಜಾತಿ ಜಾಗೃತಿ, ಸಾಂವಿಧಾನಿಕ ಹಕ್ಕುಗಳು, ನಾಗರಿಕ ಹಕ್ಕುಗಳು, ಲಿಂಗ ಸಮಾನತೆಯ ಪ್ರಜ್ಞೆ, ಪರಿಸರ ಕಾಳಜಿಗಳೆಲ್ಲವೂ ಅಭೂತಪೂರ್ವ ಮಟ್ಟಕ್ಕೆ ತಲುಪಿವೆ. ನೆಹರು ಕಾಲದಲ್ಲಿ ಬಹುಪಾಲು ಜನ ಅನಕ್ಷರಸ್ಥರಾಗಿದ್ದರು. ಹೊಸದಾಗಿ ಬಂದಿದ್ದ ಪ್ರಜಾಸತ್ತಾತ್ಮಕ ಸರ್ಕಾರದಿಂದ ತಾವೇನನ್ನು ನಿರೀಕ್ಷಿಸಬೇಕು ಎಂಬ ಸ್ಪಷ್ಟ ಅರಿವೂ ಜನರಿಗಿರಲಿಲ್ಲ. ಆದರೆ ಇಂದಿನ ನಾಗರಿಕರು, ರಾಷ್ಟ್ರ ಮತ್ತು ಪ್ರಜಾಪ್ರಭುತ್ವದ ಒಳಿತಿಗಾಗಿ, ಹೆಚ್ಚು ವಿದ್ಯಾವಂತರಾಗಿದ್ದಾರೆ ಹಾಗೂ ಪ್ರಬುದ್ಧರಾಗಿದ್ದಾರೆ. ದೇಶದ ಯಾವುದೇ ವಿದ್ಯಮಾನವೂ ಅವರ ಸೂಕ್ಷ್ಮ ಗಮನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇನ್ನಷ್ಟು ಓದಿ

