Dailyhunt
Salary Management: ಲಕ್ಷ ರೂಪಾಯಿ ಸಂಬಳವಿದ್ದರೂ ಹಣ ಉಳಿಯುತ್ತಿಲ್ಲವೇ? ಅಸಲಿ ಕಾರಣ ಇಲ್ಲಿದೆ ನೋಡಿ!

Salary Management: ಲಕ್ಷ ರೂಪಾಯಿ ಸಂಬಳವಿದ್ದರೂ ಹಣ ಉಳಿಯುತ್ತಿಲ್ಲವೇ? ಅಸಲಿ ಕಾರಣ ಇಲ್ಲಿದೆ ನೋಡಿ!

ಬೆಂಗಳೂರು: ತಿಂಗಳ ಮೊದಲ ವಾರದಲ್ಲಿ ಕೈತುಂಬಾ ಸಂಬಳ ಬಂದಾಗ ರಾಜನಂತೆ ಬದುಕುವ ನಾವು, ಅದೇ ತಿಂಗಳ ಕೊನೆಯ ವಾರ ಬರುವಷ್ಟರಲ್ಲಿ ಒಂದು ಸಣ್ಣ ಖರ್ಚಿಗೂ ಪರದಾಡುವ ಸ್ಥಿತಿ(Salary Management) ಎದುರಿಸುತ್ತೇವೆ. 'ಸಂಬಳ ಬಂತು, ಬಿಲ್ ಕಟ್ಟಿದೆ, ಮುಗಿದೇ ಹೋಯ್ತು' ಎಂಬುದು ಇಂದಿನ ಬಹುತೇಕ ಉದ್ಯೋಗಿಗಳ ಗೋಳು.
ಹಣ ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಉಳಿಸುವುದು ಮತ್ತು ನಿರ್ವಹಿಸುವುದು ಅಷ್ಟೇ ಮುಖ್ಯ. ನೀವು ಕೂಡ ಪ್ರತಿ ತಿಂಗಳ ಕೊನೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ನಿಮ್ಮ ಈ 5 ಅಭ್ಯಾಸಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ.

1. ಆದಾಯ ಹೆಚ್ಚಾದಂತೆ ಆಡಂಬರ ಬೇಡ

ಬಹಳಷ್ಟು ಜನರಿಗೆ ಸಂಬಳದಲ್ಲಿ ಸ್ವಲ್ಪ ಏರಿಕೆಯಾದ ತಕ್ಷಣ ಅಥವಾ ಬೋನಸ್ ಬಂದ ತಕ್ಷಣ ಹೊಸ ಫೋನ್ ತೆಗೆದುಕೊಳ್ಳುವುದು, ದುಬಾರಿ ಕಾರು ಬುಕ್ ಮಾಡುವುದು ಅಥವಾ ಅನಗತ್ಯ ಐಷಾರಾಮಿ ವಸ್ತುಗಳನ್ನು ಖರೀದಿಸುವ ಹವ್ಯಾಸವಿರುತ್ತದೆ. ಇದನ್ನು 'ಲೈಫ್ ಸ್ಟೈಲ್ ಇನ್ಫ್ಲೇಷನ್' ಎನ್ನಲಾಗುತ್ತದೆ. ನಿಮ್ಮ ಆದಾಯ ಹೆಚ್ಚಾದಾಗ ಖರ್ಚನ್ನು ಹೆಚ್ಚಿಸುವ ಬದಲು, ಹೂಡಿಕೆಯನ್ನು ಹೆಚ್ಚಿಸಿ. ಆಗ ಮಾತ್ರ ಭವಿಷ್ಯದಲ್ಲಿ ನೀವು ಆರ್ಥಿಕವಾಗಿ ಸದೃಢರಾಗಲು ಸಾಧ್ಯ.

2. ಪರ್ಸನಲ್ ಲೋನ್ ಎಂಬ 'ಸುಳಿ'ಯಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಸುಲಭವಾಗಿ ವೈಯಕ್ತಿಕ ಸಾಲ (Personal Loan) ನೀಡುತ್ತವೆ. ಆದರೆ ನೆನಪಿಡಿ, ಇದರ ಬಡ್ಡಿದರ ಅತ್ಯಂತ ಹೆಚ್ಚಿರುತ್ತದೆ. ಸಣ್ಣಪುಟ್ಟ ಆಸೆಗಳಿಗಾಗಿ ಅಥವಾ ಅನಿವಾರ್ಯವಲ್ಲದ ಅಗತ್ಯಗಳಿಗಾಗಿ ಸಾಲ ಮಾಡುವುದು ನಿಮ್ಮ ಮಾಸಿಕ ಬಜೆಟ್ ಅನ್ನು ಸಂಪೂರ್ಣವಾಗಿ ಹಳಿ ತಪ್ಪಿಸುತ್ತದೆ. ತುರ್ತು ಪರಿಸ್ಥಿತಿ ಇಲ್ಲದ ಹೊರತು ಪರ್ಸನಲ್ ಲೋನ್ ತೆಗೆದುಕೊಳ್ಳುವ ಸಾಹಸಕ್ಕೆ ಕೈಹಾಕಬೇಡಿ.

3. ಇಎಂಐ (EMI) ಮಿತಿ ಮೀರದಿರಲಿ

ಸಾಲ ಮಾಡುವುದು ತಪ್ಪಲ್ಲ, ಆದರೆ ಅದು ನಿಮ್ಮ ಆದಾಯದ ಮಿತಿಯೊಳಗೆ ಇರಬೇಕು. ಹಣಕಾಸು ತಜ್ಞರ ಪ್ರಕಾರ, ನಿಮ್ಮ ಒಟ್ಟು ಸಂಬಳದ ಶೇ. 25 ರಿಂದ 30ಕ್ಕಿಂತ ಹೆಚ್ಚು ಹಣ ಇಎಂಐ ರೂಪದಲ್ಲಿ ಹೋಗಬಾರದು. ಒಂದು ವೇಳೆ ನಿಮ್ಮ ಸಂಬಳದ ಅರ್ಧದಷ್ಟು ಭಾಗ ಸಾಲದ ಕಂತುಗಳಿಗೇ ಹೋದರೆ, ಉಳಿದ ಹಣದಲ್ಲಿ ಜೀವನ ನಡೆಸುವುದು ದುಸ್ತರವಾಗುತ್ತದೆ. ಸಾಲ ಮಾಡುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಹತ್ತು ಬಾರಿ ಯೋಚಿಸಿ.

4. ಸಂಕಷ್ಟದ ಕಾಲಕ್ಕೆ ಇರಲಿ 'ತುರ್ತು ನಿಧಿ'

ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಕೆಲಸ ಕಳೆದುಕೊಳ್ಳುವುದು ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ನಿಮ್ಮ ಉಳಿತಾಯವೇ ನಿಮ್ಮ ಕೈಹಿಡಿಯುತ್ತದೆ. ಹಾಗಾಗಿ, ಕನಿಷ್ಠ 6 ತಿಂಗಳ ನಿಮ್ಮ ಜೀವನ ನಿರ್ವಹಣೆಗೆ ಬೇಕಾಗುವಷ್ಟು ಹಣವನ್ನು 'ಎಮರ್ಜೆನ್ಸಿ ಫಂಡ್' ಆಗಿ ಪ್ರತ್ಯೇಕವಾಗಿ ಇರಿಸಿ. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

5. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಜಾಣತನವಿರಲಿ

ಕ್ರೆಡಿಟ್ ಕಾರ್ಡ್ ಅನ್ನು 'ಉಚಿತ ಹಣ' ಎಂದು ಭಾವಿಸುವುದು ಅತಿದೊಡ್ಡ ತಪ್ಪು. ಕ್ರೆಡಿಟ್ ಕಾರ್ಡ್ ಮಿತಿಯ ಶೇ. 30 ರಿಂದ 40ರಷ್ಟು ಮಾತ್ರ ಬಳಸುವುದು ಉತ್ತಮ ಆರ್ಥಿಕ ಶಿಸ್ತು. ಸಕಾಲದಲ್ಲಿ ಬಿಲ್ ಪಾವತಿಸದಿದ್ದರೆ ಚಕ್ರಬಡ್ಡಿಯ ಸುಳಿಗೆ ಸಿಲುಕಿ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಹಾಳಾಗಬಹುದು. ಕ್ರೆಡಿಟ್ ಕಾರ್ಡ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಿ, ಮೋಜು-ಮಸ್ತಿಗಲ್ಲ.
ಈ ಐದು ಸೂತ್ರಗಳನ್ನು ಅಳವಡಿಸಿಕೊಂಡರೆ, ನೀವು ತಿಂಗಳ ಕೊನೆಯ ವಾರದಲ್ಲಿ ಸಾಲಕ್ಕಾಗಿ ಕೈಚಾಚುವ ಅಗತ್ಯವಿರುವುದಿಲ್ಲ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಬಹುದು,(ಏಜೆನ್ಸೀಸ್​).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani