
2019 ಕನ್ನಡ ಸಾಂಸ್ಕೃತಿಕ ಲೋಕದ ಪಾಲಿಗೆ ಸಿಹಿ-ಕಹಿಗಳ ಮಿಶ್ರಣ. ಕೆಲವು ಹಿರಿಯರ ಅಗಲುವಿಕೆಯ ನೋವು, ಪ್ರಶಸ್ತಿ, ಗೌರವಗಳ ಸಂಭ್ರಮ ಈ ಸಲವೂ ಇತ್ತು. ಕನ್ನಡ ಸಾಹಿತ್ಯ ಸಮ್ಮೇಳನದೊಂದಿಗೇ ಚಾಲನೆಗೊಂಡ ವರ್ಷದಲ್ಲಿ ಹಲವರು ಸಾಹಿತ್ಯ ಚಟುವಟಿಕೆಯಲ್ಲಿ ಗಂಭೀರವಾಗಿದ್ದರು ಎಂಬುದು ಸಮಾಧಾನದ ಸಂಗತಿ. ಶಾಸ್ತ್ರೀಯ ಸ್ಥಾನಮಾನ ಕೇಂದ್ರದ ಸ್ಥಳ ವಿವಾದಕ್ಕೆ ಮುಕ್ತಿ ದೊರೆತ ಸಂತಸ ಒಂದೆಡೆಯಾದರೆ ಸರ್ಕಾರ ನೀಡುವ ಧನಸಹಾಯ ಸ್ಥಗಿತಗೊಳಿಸಿ ಸಾಂಸ್ಕೃತಿಕ ಲೋಕದ ಕುರಿತು ಸರ್ಕಾರವೇ ಸಂವೇದನೆ ಕಳೆದುಕೊಂಡ ವಿಪರೀತಕ್ಕೂ ಈ ವರ್ಷ ಸಾಕ್ಷಿಯಾಯಿತು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ವಿದ್ಯಾಕಾಶಿ ಧಾರವಾಡದಲ್ಲಿ ಜನವರಿ ಮೊದಲ ವಾರದಲ್ಲಿಯೇ ಅಖಿಲ ಭಾರತ 84 ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಈ ನುಡಿಜಾತ್ರೆ ಜರುಗಿತು. 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ 2020ರ ಫೆ.5ರಿಂದ 7ರವರೆಗೆ ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಳ ಕಲಬುರಗಿಯಲ್ಲಿ ನಡೆಯಲಿದ್ದು, ಕನ್ನಡದ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಧನಸಹಾಯ ಸ್ಥಗಿತ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಸಾವಿರದಷ್ಟು ಸಂಘಸಂಸ್ಥೆಗಳಿಗೆ ನೀಡುತ್ತ ಬಂದಿರುವ ಧನಸಹಾಯ ಯೋಜನೆಯನ್ನೇ ರದ್ದುಗೊಳಿಸುವುದಾಗಿ ಇಲಾಖೆಯ ಅಂದಿನ ಸಚಿವ ಡಿ.ಕೆ. ಶಿವಕುಮಾರ್ ನಿರ್ಧಾರ ಸಾಂಸ್ಕೃತಿಕ ಲೋಕಕ್ಕೆ 'ಬಂಡೆ'ಯಂತೆ ಅಪ್ಪಳಿಸಿತು. ಯೋಜನೆಯಲ್ಲಿ ಕೆಲವು ದೋಷಗಳಿದ್ದು, ನಕಲಿ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂಬ ಕಾರಣ ನೀಡಿ ಸ್ಥಗಿತಕ್ಕೆ ಆದೇಶಿಸಲಾಯಿತು. ಆದರೆ ಸಮಾಜ ಕಲ್ಯಾಣ ಇಲಾಖೆಗೆ ಈ ನಿರ್ಧಾರ ಸಂವಹನವಾಗದೆ ಎಸ್ಸಿಎಸ್ಪಿ ಟಿಎಸ್ಪಿ ಅಡಿಯಲ್ಲಿ ದಲಿತ ಸಂಸ್ಥೆಗಳಿಗೆ ಧನಸಹಾಯ ನೀಡಿಕೆಗೆ ಇಲಾಖೆ ಅರ್ಜಿ ಕರೆದಿದ್ದು, ಸಾಂಸ್ಕೃತಿಕ ಲೋಕದಲ್ಲಿ ಮತ್ತಷ್ಟು ಮೌನಕ್ಕೆ ಕಾರಣವಾಯಿತು. 2020ರಲ್ಲಿ ಮತ್ತೆ ಧನಸಹಾಯ ಆರಂಭವಾಗುವ ಮುನ್ಸೂಚನೆಯನ್ನು ಈಗಿನ ಸಂಸ್ಕೃತಿ ಸಚಿವರು ನೀಡಿದ್ದಾರೆ ಎಂಬ ಅಧಿಕಾರಿಗಳ ಮಾತಿನ ಸತ್ಯಾಸತ್ಯತೆ 2020ರಲ್ಲೇ ತಿಳಿಯಬೇಕು.
ರಂಗಶಂಕರಕ್ಕೆ 15 ವರ್ಷ
ಶಂಕರ್ನಾಗ್ ಹಾಗೂ ಅರುಂಧತಿ ಕಲ್ಪನೆಯ ಕೂಸು, ಬೆಂಗಳೂರಿನ 'ರಂಗಶಂಕರ' ಸ್ಥಾಪನೆಯಾಗಿ 2019ಕ್ಕೆ 15 ವರ್ಷ ಸಂದಿತು. ಹವ್ಯಾಸಿ ನಾಟಕ ಕ್ಷೇತ್ರವನ್ನೂ ಜೀವನ ನಿರ್ವಹಣೆಗೆ ಅನುವಾಗುವಂತೆ ರೂಪಿಸುತ್ತಿರುವ ರಂಗಶಂಕರಕ್ಕೆ ಅರುಂಧತಿ ನಾಗ್ ನೇತೃತ್ವ. ಸದಾ ಇದಕ್ಕೆ ಮಾರ್ಗದರ್ಶಕರಂತಿದ್ದ ಕಾರ್ನಾಡರು ಇಲ್ಲದ ವಾರ್ಷಿಕೋತ್ಸವ ಈ ಸಲ ನಡೆಯಿತು.
62 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್, ನಾ. ಸೋಮೇಶ್ವರ, ಡಾ. ಗುರುರಾಜ ಕರ್ಜಗಿ ಸೇರಿ 62 ಸಾಧಕರಿಗೆ ಪ್ರದಾನ ಮಾಡಲಾಯಿತು.
ನೃಪತುಂಗ ಪ್ರಶಸ್ತಿಗೆ ಹಿರಿಯ ಕವಿ ಚೆನ್ನವೀರ ಕಣವಿ ಭಾಜನರಾದರು. ಬೆಂಗಳೂರು ಮೂಲದ ಇಂಡೋ-ಅಮೆರಿಕನ್ ಬರಹಗಾರ್ತಿ ಮಾಧುರಿ ವಿಜಯ್ ತಮ್ಮ ಚೊಚ್ಚಲ ಕೃತಿ 'ದಿ ಫಾರ್ ಫೀಲ್ಡ್' ಗಾಗಿ ಜೆಸಿಬಿ ಪ್ರಶಸ್ತಿಗೆ ಪಾತ್ರರಾದರು. - 25 ಲಕ್ಷ ರೂ. ನಗದು ಪುರಸ್ಕಾರವುಳ್ಳ ಇದು ದೇಶದಲ್ಲಿ ಅತಿಹೆಚ್ಚು ನಗದು ನೀಡುವ ಸಾಹಿತ್ಯ ಪ್ರಶಸ್ತಿಯಾಗಿದೆ.
ವಿವೇಕ ರೈ, ಎಚ್.ಎಸ್. ವೆಂಕಟೇಶಮೂರ್ತಿ, ದೇಶಾಂಶ ಹುಡಗಿ, ಸಾಯಿಸುತೆ, ಎ.ಕೆ. ಹಂಪಣ್ಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ. ಕುಪ್ಪನಹಳ್ಳಿ ಭೈರಪ್ಪ ಅವರಿಗೆ ಬಾದರಾಯಣ ವ್ಯಾಸ ಸಮ್ಮಾನ್ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿ ಪುರಸ್ಕಾರ.
ಕಾಯ್ಕಿಣಿಗೆ ಡಿಎಸ್ಸಿ ಪ್ರಶಸ್ತಿ: ಜಯಂತ್ ಕಾಯ್ಕಿಣಿ ಅವರ 'ನೋ ಪ್ರೆಸೆಂಟ್ ಪ್ಲೀಸ್' ಕೃತಿಗೆ ದಕ್ಷಿಣ ಏಷ್ಯಾ ಸಾಹಿತ್ಯ ಡಿಎಸ್ಸಿ ಪ್ರಶಸ್ತಿ. ಈ ಕಥೆಗಳನ್ನು ಅನುವಾದ ಮಾಡಿದ ತೇಜಸ್ವಿನಿ ನಿರಂಜನ ಕೂಡ 25 ಸಾವಿರ ಡಾಲರ್ ಮೊತ್ತದ ಈ ಪ್ರಶಸ್ತಿ ಹಂಚಿಕೊಂಡರು.
ಮೈಸೂರಿನಲ್ಲಿ ಶಾಸ್ತ್ರೀಯ ಕೇಂದ್ರ
'ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ಹೋರಾಟ' ಎಂಬ ಸುದ್ದಿಗಳು ನಿಂತು, ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ ದಶಕವೇ ಕಳೆದರೂ ಬಗೆಹರಿಯದಿದ್ದ ಶಾಸ್ತ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸ್ಥಳದ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ತೆರೆ ಎಳೆದಂತೆ ಕಂಡಿತು. ಬೆಂಗಳೂರು ಬದಲಾಗಿ ಮೈಸೂರಿನಲ್ಲೆ ಕೇಂದ್ರವನ್ನು ಸ್ಥಾಪನೆ ಮಾಡುವುದಾಗಿ ಸಚಿವ ಸಿ.ಟಿ. ರವಿ ಅವರು 'ವಿಜಯವಾಣಿ', 'ದಿಗ್ವಿಜಯ 247 ನ್ಯೂಸ್' ಆಯೋಜಿಸಿದ್ದ ಸಂವಾದದಲ್ಲಿ ಮೊದಲ ಬಾರಿ ಪ್ರಕಟಿಸಿದರು.
ಬಗೆಹರಿಯದ ನಾಡಗೀತೆ ಗೊಂದಲ
ಅನೇಕ ವರ್ಷಗಳಂತೆಯೇ ಕುವೆಂಪು ವಿರಚಿತ ನಾಡಗೀತೆಗೆ ನಿರ್ದಿಷ್ಟ ಧಾಟಿ, ಸಮಯ ನಿಗದಿಪಡಿಸುವಲ್ಲಿ 2019ನೇ ಇಸವಿಯೂ ವಿಫಲವಾಯಿತು. ಪೂರ್ಣ ಗೀತೆಯನ್ನೇ 2.30 ನಿಮಿಷದಲ್ಲಿ ಹಾಡಬೇಕು ಎಂದು ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗ್ರಹಿಸಿದ ಸಾರ್ವಜನಿಕ ಅಭಿಪ್ರಾಯದಲ್ಲಿ ಒತ್ತಡ ಕೇಳಿ ಬಂದಿದ್ದರೂ ಅದ್ಯಾವ ಕಾರಣಕ್ಕೆ ಸರ್ಕಾರಗಳು ಅಂತಿಮಗೊಳಿಸಲು ಹಿಂದೇಟು ಹಾಕುತ್ತಿವೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು. ನ.1ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಂತೂ ಆಲಾಪ, ಪುನರಾವರ್ತನೆಗಳ ಜತೆಗೆ ನಾಲ್ಕೂವರೆ ನಿಮಿಷ ನಾಡಗೀತೆ ಹಾಡಲಾಯಿತು.
ಜಯಂತಿಗಳ ಪುನರಾವಲೋಕನ ಚರ್ಚೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 25ಕ್ಕೂ ಹೆಚ್ಚು ಮಹಾಪುರುಷರ, ಪುರಾಣ ವ್ಯಕ್ತಿಗಳ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಬಹುತೇಕವು ಆಯಾ ಜಾತಿ ಸಮಾವೇಶಗಳಾಗಿವೆ ಎಂಬ ಸಣ್ಣ ಧ್ವನಿ 2019ರಲ್ಲಿ ಬಲ ಪಡೆದುಕೊಂಡಿತು. ಜಯಂತಿಗಳ ಸ್ವರೂಪ ಬದಲು ಮಾಡದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪುನರಾವಲೋಕನಕ್ಕೆ ಚಾಲನೆ ದೊರಕಿದೆ.
2019ರಲ್ಲಿ ಪುಸ್ತಕ ಜಗತ್ತಿನಲ್ಲಿ ಹೆಚ್ಚಿನ ಏರಿಕೆ ಆಗಿಲ್ಲವಾದರೂ ತೀರಾ ಕುಸಿತವೇನೂ ಕಂಡಿಲ್ಲ. ಇ-ಪುಸ್ತಕಗಳೆಡೆಗೆ ಚರ್ಚೆ ನಡೆಯುತ್ತಿದ್ದರೂ, ಇ-ಪುಸ್ತಕ ಓದಬಹುದಾದ ಯುವಜನರು ಇಂಗ್ಲಿಷ್ ಕಡೆ ಮುಖ ಮಾಡಿದ್ದಾರೆ, ಕನ್ನಡ ಓದುವ ಹಿರಿಯರು ತಂತ್ರಜ್ಞಾನದಲ್ಲಿ ಹಿಂದುಳಿದಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಪುಸ್ತಕ ಜಗತ್ತಿದೆ.
| ಪ್ರಕಾಶ್ ಕಂಬತ್ತಳ್ಳಿ ಅಂಕಿತ ಪುಸ್ತಕ
2019ರ ಪ್ರಮುಖ ಚಟುವಟಿಕೆ
2018ನೇ ಸಾಲಿನ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಪಂಪ ಪ್ರಶಸ್ತಿಗೆ ಸಂಶೋಧಕ ಪ್ರೊ. ಷ. ಷಟ್ಟರ್ , ಟಿ. ಚೌಡಯ್ಯ ಪ್ರಶಸ್ತಿಗೆ ಸಂಗೀತ ಕಲಾವಿದ ಟಿ.ಎನ್. ಕೃಷ್ಣನ್, ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಿತು.
ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ಉಸ್ಮಾನ್ಸಾಬ್ ಖಾದರ್ಸಾಬ್ ಅವರಿಗೆ 42 ವರ್ಷವಾಗಿದ್ದು, ನಿಯಮದಂತೆ 60 ವರ್ಷವಾಗಿಲ್ಲ ಎಂಬ ಕಾರಣಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೆಸರನ್ನು ಕೈಬಿಡಲಾಯಿತು.
ಛಾಯಾಚಿತ್ರಕಾರ ಶ್ರೀವತ್ಸ ಪ್ರತಿ ವರ್ಷ ನಡೆಸುವ ವಿಶ್ವ ಮಹಿಳಾ ಕಲಾ ಉತ್ಸವದ 7ನೇ ಅವತರಣಿಕೆ ಡಿ.25ಕ್ಕೆ ನೆರವೇರಿದ್ದು, ಈ ಬಾರಿ ವಿಶ್ವದ ಅನೇಕ ಕಡೆಗಳಿಂದ ಹಾಮೋನಿಯಂ ವಾದಕಿಯರು ಭಾಗವಹಿಸಿದ್ದರು.
ಡಾ. ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿಗೆ 40 ವರ್ಷ ತುಂಬಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡಿ.29ಕ್ಕೆ ರಾಷ್ಟ್ರೀಯ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಸೇರಿ ಅನೇಕರು ಭಾಗವಹಿಸಲಿದ್ದಾರೆ.
ಪ್ರಸಿದ್ಧ ಯಕ್ಷಗಾನ ಭಾಗವತ ಸತೀಶ್ ಪಟ್ಲ ಅವರನ್ನು ಕಟೀಲು ಮೇಳದ ವೇದಿಕೆಯಿಂದ ಅರ್ಧಕ್ಕೆ ಎಬ್ಬಿಸಿ ಕಳಿಸಿದ ಘಟನೆ ನವೆಂಬರ್ನಲ್ಲಿ ನಡೆದು ಸಂಚಲನ ಮೂಡಿಸಿತು.
ನಡೆಯದ ನುಡಿಸಿರಿ
ಪ್ರತಿವರ್ಷ ಅಚ್ಚುಕಟ್ಟಾಗಿ ನಡೆದು ಜನ ಮೆಚ್ಚುಗೆಗೆ ಪಾತ್ರವಾಗುವ ಆಳ್ವಾಸ್ ನುಡಿಸಿರಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾದ ಕಾರಣದಿಂದ ಈ ಸಲ ನಡೆಯಲಿಲ್ಲ. ನ. 14 ರಿಂದ 17ರವರೆಗೆ ನಡೆಯಬೇಕಿದ್ದ ಈ ವಿಜೃಂಭಣೆಯ ಸಾಂಸ್ಕೃತಿಕ ಉತ್ಸವವನ್ನು ಜನರ ಕಷ್ಟ ಕಾಲದಲ್ಲಿ ನಡೆಸದಿರಲು ಆಳ್ವಾಸ್ ಪ್ರತಿಷ್ಠಾನ ನಿರ್ಧರಿಸಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ
ಕನ್ನಡದ ಹಿರಿಯ ಸಾಹಿತಿ ಡಾ. ವಿಜಯಾ ಅವರ ಆತ್ಮಕಥನ 'ಕುದಿ ಎಸರು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಕಟವಾಗಿದೆ. ಬರುವ ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. 'ಕಾಡು ಕನಸಿನ ಬೀದಿಗೆ' ಕಾದಂಬರಿಗಾಗಿ 2019ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಚಂದ್ರಕಾಂತ ಕರದಳ್ಳಿ ಭಾಜನರಾದರೆ ಯುವ ಪುರಸ್ಕಾರಕ್ಕೆ 'ಬೇರು' ಕಾದಂಬರಿ ಗಾಗಿ ಶ್ರೀಧರ ಬನವಾಸಿ ಪಾತ್ರರಾದರು.
ಬೆಂಗಳೂರು ಸಾಹಿತ್ಯ ಉತ್ಸವ
ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆ ನಡುವೆಯೇ ನ.9-10ಕ್ಕೆ ಬೆಂಗಳೂರು ಸಾಹಿತ್ಯ ಉತ್ಸವದ 8ನೇ ಅವತರಣಿಕೆ ನಡೆಯಿತು. ದೇವದತ್ತ ಪಟ್ನಾಯಕ್, ವಿಲಿಯಂ ಡಾಲ್ರಿಂಪಲ್, ಪ್ರತಿಭಾ ನಂದಕುಮಾರ್, ಎಚ್.ಎಸ್. ಶಿವಪ್ರಕಾಶ್ ಮುಂತಾದವರು ಭಾಗವಹಿಸಿದ್ದರು. ಕನ್ನಡದಲ್ಲಿ ಗೋಷ್ಠಿಗಳು ನಡೆದರೂ, ಇಂಗ್ಲಿಷ್ ಗೋಷ್ಠಿಗಳ ಹೋಲಿಕೆಯಲ್ಲಿ ಪ್ರೇಕ್ಷಕರ ಕೊರತೆ ಇತ್ತು.
ಅಗಲಿದ ಗಣ್ಯರು : ಸಾಹಿತಿಗಳಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್, ಎಲ್. ವಿ. ಶಾರದಾ, ಬಿ. ಎ. ಸನದಿ, ರಂ.ಶ. ಲೋಕಾಪುರ, ಚನ್ನಣ್ಣ ವಾಲಿಕಾರ್, ಕೆ. ಬಿ. ಸಿದ್ಧಯ್ಯ, ಕೋ. ಚನ್ನಬಸಪ್ಪ, ನವರತ್ನ ಶ್ರೀನಿವಾಸ ರಾಜಾರಾಮ್ ಚಂದ್ರಕಾಂತ ಕರದಳ್ಳಿ, ಎಂ. ರಾಮಚಂದ್ರ, ಶೇಷನಾರಾಯಣ, ಜಿ.ಕೆ ರವೀಂದ್ರಕುಮಾರ್, ಯಕ್ಷಗಾನ ಕಲಾವಿದರಾದ ನೆಬ್ಬೂರು ನಾರಾಯಣ ಭಾಗವತ, ಜಲವಳ್ಳಿ ವೆಂಕಟೇಶರಾವ್ ಹಾಗೂ ಚಿತ್ರ ಕಲಾವಿದ ಮಿಲಿಂದ್ ನಾಯಕ್.
ಇಂಗ್ಲಿಷ್ ಸಂಬಳದ ಭಾಷೆ, ಕನ್ನಡ ಉಂಬಳದ ಭಾಷೆ ಎಂಬ ಮಾತು ಬದಲಾಗಬೇಕು. ಕನ್ನಡ ಸಂಬಳದ ಭಾಷೆಯೂ ಆಗಿ ರೂಪುಗೊಳ್ಳಬೇಕು ಎಂಬ ಅಭಿಲಾಷೆ ಇದೆ. ಭಾಷೆ ಹಾಗೂ ಸಂಸ್ಕೃತಿ ಬೇರೆಬೇರೆಯಲ್ಲ. ಭಾಷೆಯನ್ನು ಮರೆತರೆ ನಮ್ಮ ಸಂಸ್ಕೃತಿಯನ್ನೂ ಮರೆತಂತೆ.
| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ಪುಸ್ತಕ ಲೋಕ
ಹೊಸ ಬಿಡುಗಡೆ
ಟಾಪ್ 5
ಕನ್ನಡ ಮಾರ್ದನಿ
ರಾ. ನಂ. ಚಂದ್ರಶೇಖರ
ಎಲ್- ಜೋಗಿ
ಹಸಿರು ಹಂಪೆ: ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್
ಕಿ.ರಂ. ಲೋಕ: ಶೂದ್ರ ಶ್ರೀನಿವಾಸ
ಸಮರ ಭೈರವಿ
ಸಂತೋಷ್ ತಮ್ಮಯ್ಯ
ಸದ್ದು ಮಾಡಿದ ಟಾಪ್ 5
ಶಂಕರ ವಿಹಾರ: ಕೆ.ವಿ. ಅಕ್ಷರ
ಪುನರ್ವಸು: ಡಾ. ಗಜಾನನ ಶರ್ಮ
ಹಿತ್ತಲ ಜಗತ್ತು- ರಹಮತ್ ತರೀಕೆರೆ
ರೆಬೆಲ್ ಸುಲ್ತಾನರು
ಸಂಯುಕ್ತ ಪುಲಿಗಲ್
ನಿರ್ಲಿಪ್ತ: ಶತಾವಧಾನಿ
ಡಾ. ಆರ್. ಗಣೇಶ್
ಅಕಾಡೆಮಿ ಅಧ್ಯಕ್ಷರ ಬದಲಾವಣೆ
ಯಥಾಪ್ರಕಾರ 2014ರಂತೆಯೇ 2019ರಲ್ಲಿ ಸರ್ಕಾರ ಬದಲಾದಾಗ ಅಕಾಡೆಮಿಗಳ ಅಧ್ಯಕ್ಷ ಸ್ಥಾನ ಬದಲಾಯಿತು. ಯಕ್ಷಗಾನ ಅಕಾಡೆಮಿ ಹೊರತುಪಡಿಸಿ ಎಲ್ಲ ಅಕಾಡೆಮಿಗಳ ಅಧ್ಯಕ್ಷರನ್ನೂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಬದಲಾವಣೆ ಮಾಡಿತು. ಅಕಾಡೆಮಿಗಳಲ್ಲಿ ರಾಜಕೀಯ ತೂರಿಸಬಾರದು ಎಂಬ ವಾದಕ್ಕೆ ಈ ಬಾರಿಯೂ ಬಲ ಸಿಗಲಿಲ್ಲ.
ವಿಜಯವಾಣಿ ಟೀಂ: ರಾಜಶೇಖರ ಜೋಗಿನ್ಮನೆ, ರಮೇಶ ದೊಡ್ಡಪುರ ವಿನ್ಯಾಸ: ಅಶ್ವತ್ಥ ಕೃಷ್ಣ