Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ: ದಾಖಲಾತಿ ಹೆಚ್ಚಲಿ

ಸಂಪಾದಕೀಯ: ದಾಖಲಾತಿ ಹೆಚ್ಚಲಿ

ರಾಜ್ಯ ಶಾಲಾ ಶಿಕ್ಷಣದಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 66 ಸಾವಿರಕ್ಕೆ ಕುಸಿದಿದೆ. ಕಳೆದ ಮೂರು ವರ್ಷಗಳಲ್ಲಿ 2.12 ಲಕ್ಷ ಮಕ್ಕಳ ಸಂಖ್ಯೆ ಕುಸಿತಗೊಂಡಿದೆ. ಅಲ್ಲದೆ, ದೇಶಾದ್ಯಂತ ಕೂಡ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಮಕ್ಕಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ದೇಶದಲ್ಲಿ ಶಾಲೆಗಳು ಶಾಶ್ವತವಾಗಿ ಮುಚ್ಚುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ದೇಶದಲ್ಲಿ ಒಂದೇ ವರ್ಷದಲ್ಲಿ 8,077 ಶಾಲೆಗಳು ಮುಚ್ಚಲ್ಪಟ್ಟಿವೆ. ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 12.15 ಕೋಟಿಯಿಂದ 11.89 ಕೋಟಿಗೆ ಕುಸಿದಿದೆ. ಕರ್ನಾಟಕದಲ್ಲಿ 281 ಶಾಲೆಗಳನ್ನು ಮುಚ್ಚಲಾಗಿದೆ. ತೆಲಂಗಾಣದಲ್ಲಿ 1392, ಪಶ್ಚಿಮ ಬಂಗಾಳದಲ್ಲಿ 568, ಆಂಧ್ರಪ್ರದೇಶದಲ್ಲಿ 474, ತಮಿಳುನಾಡಿನಲ್ಲಿ 369, ಹಿಮಾಚಲ ಪ್ರದೇಶದಲ್ಲಿ 266 ಶಾಲೆಗಳು ಬಾಗಿಲು ಹಾಕಿವೆ. ದೇಶದಲ್ಲಿ ಒಬ್ಬರೇ ಅಧ್ಯಾಪಕರಿರುವ ಶಾಲೆಗಳ ಸಂಖ್ಯೆ 1 ಲಕ್ಷಕ್ಕಿಂತ ಅಧಿಕವಾಗಿದೆ. ಮತ್ತೊಂದೆಡೆ, ದೇಶದ 5,663 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದಿದ್ದರೂ, 20,667 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಲೋಕದಲ್ಲಿ ಈ ರೀತಿಯ ನಿರ್ಲಕ್ಷ್ಯ ಏಕೆ? ಸುಧಾರಣೆಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮತ್ತು ಅದರ ಜತೆಗೆ ಕೌಶಲವು ವ್ಯಕ್ತಿನಿರ್ವಣ ಮತ್ತು ವೃತ್ತಿನಿರ್ವಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ, ಸರ್ಕಾರಿ ಶಾಲೆಗಳು ಇಡೀ ಶಿಕ್ಷಣ ವ್ಯವಸ್ಥೆಯ ಜೀವನಾಡಿ. ಗ್ರಾಮಾಂತರ, ಅರೆ ಗ್ರಾಮಾಂತರ ಮಾತ್ರವಲ್ಲದೆ ಕರೊನಾ ನಿಯಂತ್ರಣಕ್ಕೆ ಬಂದ ಮೇಲೆ ನಗರಪ್ರದೇಶಗಳಲ್ಲೂ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಗೆ ಬೇಡಿಕೆ ಹೆಚ್ಚುತ್ತ ಬಂದಿದೆ. ಆದರೆ, ಕನಿಷ್ಠ ಮೂಲಸೌಕರ್ಯಗಳು, ಶಿಕ್ಷಕರು ಮತ್ತು ಗುಣಮಟ್ಟದ ಶಿಕ್ಷಣವಿಲ್ಲದ ಶಾಲೆಗಳನ್ನು ಮಕ್ಕಳು ಅನಿವಾರ್ಯವಾಗಿ ಬಿಡುವಂತಾಗಿದೆ. ಹೀಗೆ ಅರ್ಧದಲ್ಲೇ ಶಾಲೆಯನ್ನು ತೊರೆದು ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ಶಕ್ತಿ ಈ ಶಾಲೆಗಳಿಗೆ ಇದೆ. ಆದರೆ, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಸಮಸ್ಯೆಗಳಿಂದಲೇ ಈ ಶಾಲೆಗಳು ನಲುಗುತ್ತಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹೇಗೆ? ಅದಕ್ಕಾಗಿ, ಬಡ ಪಾಲಕರು ಸಹ ಸಾಲಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂಥ ಸ್ಥಿತಿ ಸೃಷ್ಟಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ವಿಸ್ತರಣೆಯ ಜತೆಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಮತ್ತು ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಸಿದ್ಧಪಡಿಸದಿದ್ದಲ್ಲಿ ಮುಂದಿನ ದಿನಗಳು ಕಷ್ಟಕರ. ಸರ್ಕಾರಿ ಶಾಲೆಗಳನ್ನು ಜ್ಞಾನ ಪ್ರಸರಣದ ಸಶಕ್ತ ಕೇಂದ್ರಗಳನ್ನಾಗಿಸಬೇಕು. ಈ ಕುರಿತು ಪ್ರಬಲ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಲ್ಲಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಖುಷಿಯಿಂದ ಬರುವುದರಲ್ಲಿ ಅನುಮಾನವಿಲ್ಲ. ಶಾಲೆಯಿಂದ ಹೊರಗುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರಲು ಸಾಮೂಹಿಕ ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆಯಬೇಕಿದೆ.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani