Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ| ಏಷ್ಯಾದಲ್ಲಿ ಹೆಚ್ಚಿದ ಭಾರತದ ಪ್ರಭಾವ

ಸಂಪಾದಕೀಯ| ಏಷ್ಯಾದಲ್ಲಿ ಹೆಚ್ಚಿದ ಭಾರತದ ಪ್ರಭಾವ

ಆಸ್ಟ್ರೇಲಿಯಾದ ಪ್ರಮುಖ ಚಿಂತಕರ ಚಾವಡಿಯಾದ ಲೋವಿ ಇನ್ಸ್ಟಿಟ್ಯೂಟ್ ಸೋಮವಾರ ಬಿಡುಗಡೆ ಮಾಡಿರುವ 'ಏಷ್ಯಾ ಪವರ್ ಇಂಡೆಕ್ಸ್ 2026'ರ ವರದಿಯ ಪ್ರಕಾರ, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಭಾವ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಅಮೆರಿಕ ಮತ್ತು ಚೀನಾದ ನಂತರದ ಸ್ಥಾನದಲ್ಲಿರುವ ಭಾರತ, ತನ್ನ ಒಟ್ಟು ಪವರ್ ಸ್ಕೋರ್ ಅನ್ನು 40.5 ಅಂಕಗಳಿಗೆ ಹೆಚ್ಚಿಸಿಕೊಂಡಿರುವುದು ಪ್ರಾದೇಶಿಕ ಭೌಗೋಳಿಕ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

2026ರಲ್ಲಿ ಭಾರತದ ಪ್ರಾದೇಶಿಕ ಪ್ರಭಾವ ಹೆಚ್ಚಾಗಲು ಕೇವಲ ಒಂದೇ ಕ್ಷೇತ್ರದ ಪ್ರಗತಿ ಕಾರಣವಲ್ಲ; ಬದಲಾಗಿ ಬಹುಮುಖಿ ಕಾರ್ಯತಂತ್ರಗಳು ಇದಕ್ಕೆ ಪೂರಕವಾಗಿವೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ನೆರೆಯ ಹಾಗೂ ಇಂಡೋ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಹೆಚ್ಚುತ್ತಿರುವ ರಕ್ಷಣಾ ಪಾಲುದಾರಿಕೆಯು ಭಾರತದ ಕಾರ್ಯತಂತ್ರದ ತೂಕವನ್ನು ಹೆಚ್ಚಿಸಿದೆ. ಸಮತೋಲಿತ ವಿದೇಶಾಂಗ ನೀತಿಯ ಮೂಲಕ ವಿವಿಧ ಬಣಗಳೊಂದಿಗೆ ಸಂಬಂಧ ಕಾಯ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಸಮುದಾಯದ ಪ್ರಭಾವವು ದೇಶದ ಸಾಫ್ಟ್ ಪವರ್ ಅನ್ನು ವಿಸ್ತರಿಸಿದೆ. ಇದು ಏಷ್ಯಾದ ಇತರ ರಾಷ್ಟ್ರಗಳೊಂದಿಗೆ ಜನಸಂಪರ್ಕವನ್ನು ಗಟ್ಟಿಗೊಳಿಸಲು ನೆರವಾಗಿದೆ. ಜನಸಂಖ್ಯಾ ಲಾಭಾಂಶ, ತಾಂತ್ರಿಕ ಆವಿಷ್ಕಾರಗಳು ಮತ್ತು ದೀರ್ಘಕಾಲೀನ ಬೆಳವಣಿಗೆಯ ಸಾಮರ್ಥ್ಯವು ಭವಿಷ್ಯದ ಸಂಪನ್ಮೂಲಗಳ ವಿಭಾಗದಲ್ಲಿ ಭಾರತಕ್ಕೆ ಉತ್ತಮ ಅಂಕಗಳನ್ನು ತಂದುಕೊಟ್ಟಿದೆ.

ವರದಿಯು ಭಾರತದ ಸಕಾರಾತ್ಮಕ ಬೆಳವಣಿಗೆಗಳನ್ನು ಗುರುತಿಸುವುದರ ಜೊತೆಗೆ, ಗಮನಹರಿಸಬೇಕಾದ ಪ್ರಮುಖ ಕ್ಷೇತ್ರವೊಂದರತ್ತಲೂ ಬೊಟ್ಟು ಮಾಡಿದೆ. ಭಾರತದ ಆರ್ಥಿಕ ಸಾಮರ್ಥ್ಯದ ಸ್ಕೋರ್ 26.4 ಅಂಕಗಳಿಗೆ ಇಳಿಕೆಯಾಗಿದೆ. ಈ ವಿಭಾಗದಲ್ಲೂ ಭಾರತ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದರೂ, ಅಂಕಗಳ ಕುಸಿತವು ನೀತಿ ನಿರೂಪಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಪೂರೈಕೆ ಸರಪಳಿಯ ಸವಾಲುಗಳು ಮತ್ತು ದೇಶೀಯ ಹೂಡಿಕೆಯ ವೇಗವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಈ ಅಂಕಿಅಂಶಗಳು ಸೂಚಿಸುತ್ತವೆ.

ಏಷ್ಯಾದ ಶಕ್ತಿ ರಾಜಕಾರಣದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ತೀವ್ರವಾಗಿರುವ ಈ ಸಂದರ್ಭದಲ್ಲಿ, ಭಾರತದ ಈ ಬೆಳವಣಿಗೆಯು ಪ್ರಾದೇಶಿಕ ಸ್ಥಿರತೆಯ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಅನೇಕ ಏಷ್ಯನ್ ರಾಷ್ಟ್ರಗಳು ತಮ್ಮ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗಾಗಿ ಪರ್ಯಾಯ ಶಕ್ತಿ ಕೇಂದ್ರಗಳತ್ತ ನೋಡುತ್ತಿವೆ. ಇಂತಹ ಸಮಯದಲ್ಲಿ ಭಾರತವು ತನ್ನ ರಾಜತಾಂತ್ರಿಕ ಮತ್ತು ರಕ್ಷಣಾ ಬಲವನ್ನು ಆರ್ಥಿಕ ಸುಧಾರಣೆಗಳೊಂದಿಗೆ ಸಮನ್ವಯಗೊಳಿಸಬೇಕಿದೆ. ಆದರೆ, ಆರ್ಥಿಕ ಅಸಮಾನತೆಯ ಅಂತರವನ್ನು ತಗ್ಗಿಸಲು ನಿರ್ದಿಷ್ಟ ಯೋಜನೆಗಳ ಅಗತ್ಯವಿದೆ. ದೇಶದಲ್ಲಿ ಉದ್ಯಮಗಳಿಗೆ ಸಾಕಷ್ಟು ವಿನಾಯಿತಿ ನೀಡುತ್ತಿದ್ದರೂ, ಅದರಿಂದ ಉದ್ಯೋಗ ಸೃಷ್ಟಿ ಮತ್ತು ಅರ್ಥಿಕ ಬೆಳವಣಿಗೆಗೆ ನಿರೀಕ್ಷಿತ ವೇಗ ದೊರಕುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇತ್ತೀಚೆಗೆ ಉದ್ಯಮಿಗಳ ಸಮಾವೇಶದಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ದೇಶದಲ್ಲಿ ಒಂದೆಡೆ ಸಿರಿವಂತರ ಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ, ಬಡ ಹಾಗೂ ಮಧ್ಯಮ ವರ್ಗದವರು ಬೆಲೆಯೇರಿಕೆಯ ಸಮಸ್ಯೆಯಿಂದ ತತ್ತರಿಸಿದ್ದಾರೆ ಎಂಬ ವಾಸ್ತವವನ್ನು ಕಡೆಗಣಿಸುವಂತಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Vijayvani