Dailyhunt
ಸಂಪಾದಕೀಯ: ಶಾಂತಿಯೇ ಆದ್ಯತೆಯಾಗಲಿ

ಸಂಪಾದಕೀಯ: ಶಾಂತಿಯೇ ಆದ್ಯತೆಯಾಗಲಿ

ಜಾಗತಿಕ ವಲಯದಲ್ಲಿ ತೀವ್ರ ತಲ್ಲಣ ಮೂಡಿಸಿದ್ದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾತ್ಕಾಲಿಕವಾಗಿಯಾದರೂ ಶಮನಗೊಂಡಿರುವುದು ಸಮಾಧಾನಕರ ಬೆಳವಣಿಗೆ. ಎರಡು ವಾರಗಳ ಕದನವಿರಾಮಕ್ಕೆ ಮೂರೂ ದೇಶಗಳು ಒಪ್ಪಿವೆ. ಆದರೆ, ಈ ಕ್ರಮ ತೆಗೆದುಕೊಳ್ಳಲು ತುಂಬ ವಿಳಂಬ ಮಾಡಿದವು ಎಂದೇ ಹೇಳಬೇಕು.
ಕದನವಿರಾಮದ ನಿರ್ಧಾರವನ್ನು ಇನ್ನೂ ಸ್ವಲ್ಪ ಮುಂಚೆ ತಳೆದಿದ್ದರೆ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಿತ್ತು. ಅಷ್ಟಕ್ಕೂ, ಎಲ್ಲ ಸಮಸ್ಯೆಗಳಿಗೆ ಯುದ್ಧ ಪರಿಹಾರವಲ್ಲ. ಮಾತುಕತೆಯ ದ್ವಾರ ತೆರೆದಿಟ್ಟು, ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳುವ ಅವಕಾಶ ಇದ್ದೇ ಇದೆ. ಶಾಂತಿ ಸ್ಥಾಪನೆಯೇ ಜಾಗತಿಕ ವಲಯದ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸಂವಾದದ ದಾರಿಯನ್ನು ಸುಗಮಗೊಳಿಸಬೇಕು.

ಇಂದಿನ ಜಾಗತಿಕ ಸನ್ನಿವೇಶದಲ್ಲಿ ಮಾನವಕುಲದ ಉಳಿವಿಗೆ ಇರುವ ಏಕೈಕ ದಾರಿಯೇ 'ಯುದ್ಧವಿಲ್ಲದ ಜಗತ್ತು'. ತಂತ್ರಜ್ಞಾನ ಮತ್ತು ಆರ್ಥಿಕತೆ ಬೆಳೆದಂತೆಲ್ಲ, ಯುದ್ಧದ ಸ್ವರೂಪವೂ ಭಯಾನಕವಾಗುತ್ತಿದೆ. ಯುದ್ಧಗಳು ನಡೆಯುವಾಗ ಮೊದಲು ಬಲಿಯಾಗುವುದೇ ಮಾನವ ಹಕ್ಕುಗಳು. ಶಾಂತಿ ನೆಲೆಸಿದಾಗ ಮಾತ್ರ ವ್ಯಕ್ತಿಗೆ ಬದುಕುವ, ಶಿಕ್ಷಣ ಪಡೆಯುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ಸಿಗುತ್ತವೆ. ಸ್ಥಿರತೆ ಇರುವ ದೇಶಗಳಲ್ಲಿ ಹೂಡಿಕೆಗಳು ಹೆಚ್ಚುತ್ತವೆ. ಯುದ್ಧದ ಭೀತಿ ಇಲ್ಲದಿದ್ದಾಗ ಸರ್ಕಾರಗಳು ಶಸ್ತ್ರಾಸ್ತ್ರಗಳಿಗಾಗಿ ವ್ಯಯಿಸುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳ ಮೇಲೆ ಹೂಡಬಹುದು. ಅಲ್ಲದೆ, ಆಧುನಿಕ ಯುದ್ಧಗಳು ಪರಿಸರದ ಮೇಲೆ ಚೇತರಿಸಿಕೊಳ್ಳಲಾಗದಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತವೆ. ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳು ಭೂಮಿ, ನೀರು ಮತ್ತು ಗಾಳಿಯನ್ನು ದಶಕಗಳ ಕಾಲ ಕಲುಷಿತಗೊಳಿಸುತ್ತವೆ. ಶಾಂತಿಯುತ ಜಗತ್ತು ಮಾತ್ರ ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಸಾಧ್ಯ. ಶಾಂತಿ ಸ್ಥಾಪನೆಯ ಪ್ರಯತ್ನಗಳು ತೀವ್ರಗೊಂಡರೆ ಯುದ್ಧ ಪೀಡಿತ ಪ್ರದೇಶಗಳಿಂದ ಜನರು ಜೀವ ಉಳಿಸಿಕೊಳ್ಳಲು ಬೇರೆ ದೇಶಗಳಿಗೆ ಓಡಿಹೋಗುವುದು ತಪ್ಪುತ್ತದೆ. ಇದು ಜಾಗತಿಕ ಮಟ್ಟದ ನಿರಾಶ್ರಿತರ ಬಿಕ್ಕಟ್ಟನ್ನು ನಿವಾರಿಸುತ್ತದೆ. ಸತತ ಭಯ ಮತ್ತು ಅನಿಶ್ಚಿತತೆಯ ನಡುವೆ ಬದುಕುವ ಜನರ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ದೇಶಗಳ ನಡುವೆ ನಂಬಿಕೆ ಬೆಳೆದಾಗ ವೈಜ್ಞಾನಿಕ ಸಂಶೋಧನೆಗಳು, ಬಾಹ್ಯಾಕಾಶ ಅನ್ವೇಷಣೆ ಮತ್ತು ವೈದ್ಯಕೀಯ ರಂಗದಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಪ್ರಸ್ತುತ, ಪರಮಾಣು ಯುಗದಲ್ಲಿದ್ದೇವೆ. ಒಂದು ಸಣ್ಣ ತಪ್ಪು ಇಡೀ ಜಗತ್ತನ್ನೇ ನಾಶ ಮಾಡುವ ಸಾಧ್ಯತೆ ಹೊಂದಿದೆ. ಯುದ್ಧವು ಯಾರು ಸರಿ ಎಂಬುದನ್ನು ನಿರ್ಧರಿಸುವುದಿಲ್ಲ, ಬದಲಿಗೆ ಯಾರು 'ಉಳಿದಿದ್ದಾರೆ' ಎಂಬುದನ್ನು ಮಾತ್ರ ನಿರ್ಧರಿಸುತ್ತದೆ. ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿಯಲ್ಲ; ಅದು ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಯ ಉಪಸ್ಥಿತಿ. ಸ್ಥಿರತೆ ಇದ್ದಾಗ ಮಾತ್ರ ಮುಂದಿನ ಪೀಳಿಗೆಗೆ ನಾವು ಸುಭದ್ರವಾದ ಭೂಮಿಯನ್ನು ಹಸ್ತಾಂತರಿಸಲು ಸಾಧ್ಯ. ಈ ನಿಟ್ಟಿನಲ್ಲಿ, ಇರಾನ್-ಅಮೆರಿಕ ನಡುವೆ ಏರ್ಪಟ್ಟಿರುವ ಕದನ ವಿರಾಮ ಮಹತ್ವದ್ದು. ಆದರೆ, ಎರಡು ವಾರಗಳಲ್ಲಿ ಈ ರಾಷ್ಟ್ರಗಳು ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು ಮತ್ತೆ ಸಂಘರ್ಷದ ದಾರಿ ತುಳಿಯಬಾರದು. ಸಂಘರ್ಷವು ಭರಿಸಲು ಆಗದಷ್ಟು ನಷ್ಟವನ್ನೇ ಸೃಷ್ಟಿಸುವ ಜತೆಗೆ ದೇಶಗಳ ನಡುವಿನ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಳೆದ 40 ದಿನಗಳ ಯುದ್ಧವು ಇಂಥ ಹಲವು ಘಟನೆಗಳಿಗೆ ನಿದರ್ಶನವಾಗಿದ್ದು, ಜಾಗತಿಕ ನಾಯಕರೆನಿಸಿಕೊಂಡವರು ಇನ್ನಾದರೂ ವಿವೇಚನೆಯಿಂದ ನಡೆದುಕೊಳ್ಳಬೇಕು. ಇತರ ದೇಶಗಳು ಕೂಡ ಇದರಿಂದ ಪಾಠ ಕಲಿತು, ಭವಿಷ್ಯದಲ್ಲಿ ಪ್ರಮಾದ ಎಸಗದಂತೆ ಜಾಗ್ರತೆ ವಹಿಸಬೇಕು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani