Dailyhunt Logo
  • Light mode
    Follow system
    Dark mode
    • Play Story
    • App Story
ಸಂಪತ್ತಿನಿಂದಲ್ಲ, ಸಂತೃಪ್ತಿಯಿಂದ ಸಿಗುತ್ತದೆ ನಿಜವಾದ ಆನಂದ!

ಸಂಪತ್ತಿನಿಂದಲ್ಲ, ಸಂತೃಪ್ತಿಯಿಂದ ಸಿಗುತ್ತದೆ ನಿಜವಾದ ಆನಂದ!

(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)

[https://srimadhusudansai.com]

ಮಾರುಕಟ್ಟೆಯಲ್ಲಿ ಖರೀದಿಸುವ ಪ್ರತಿಯೊಂದು ವಸ್ತುವಿಗೂ ಬೆಲೆಯ ಚೀಟಿ ಇರುತ್ತದೆ. ವಸ್ತುವಿನ ಗುಣಮಟ್ಟ, ಅದರ ತಯಾರಿಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಬೆಲೆ ನಿರ್ಧಾರವಾಗುತ್ತದೆ.

ಆದರೆ ಪ್ರೀತಿ, ಭಕ್ತಿ, ತ್ಯಾಗ ಮತ್ತು ಸೇವೆಗಳಿಗೆ ಬೆಲೆ ಕಟ್ಟಲು ಸಾಧ್ಯವೇ? ಇವುಗಳನ್ನು ಹಣ ಕೊಟ್ಟು ಖರೀದಿಸಲೂ ಸಾಧ್ಯವಿಲ್ಲ. ಏಕೆಂದರೆ, ಇವುಗಳ ನಿಜವಾದ ಮೌಲ್ಯ ಇರುವುದು ಅವುಗಳ ಹಿಂದಿರುವ ಪರಿಶುದ್ಧ ಭಾವನೆಯಲ್ಲಿ. ದೇವರನ್ನು ಒಲಿಸಿಕೊಳ್ಳಲು ಸಂಪತ್ತು, ಅಧಿಕಾರ, ಪ್ರಭಾವ ಅಥವಾ ಆಡಂಬರಗಳ ಅಗತ್ಯವಿಲ್ಲ. ಅಹಂಕಾರವಿಲ್ಲದ ಪ್ರೀತಿ ಮತ್ತು ನಿಷ್ಕಲ್ಮಷ ಭಕ್ತಿಯೊಂದೇ ಸಾಕು ಎಂಬುದನ್ನು ಶ್ರೀಕೃಷ್ಣನ ಜೀವನದ ಹಲವು ಪ್ರಸಂಗಗಳು ನಮಗೆ ತಿಳಿಸುತ್ತವೆ.

ಶ್ರೀಕೃಷ್ಣನ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಆತನ ಪತ್ನಿಯರಾದ ಸತ್ಯಭಾಮೆ ಮತ್ತು ರುಕ್ಮಿಣಿ ನಿರ್ಧರಿಸುತ್ತಾರೆ. ಬಡವರಿಗೆ ದಾನ ನೀಡುವುದರ ಜೊತೆಗೆ ಕೃಷ್ಣನ ದೇಹದ ತೂಕಕ್ಕೆ ಸಮನಾದ ಚಿನ್ನವನ್ನು ದಾನ ಮಾಡಲು ಬಯಸುತ್ತಾರೆ. ಕೃಷ್ಣನನ್ನು ತಕ್ಕಡಿಯ ಒಂದು ಬದಿಯಲ್ಲಿ ಕೂರಿಸಿ, ಮತ್ತೊಂದು ಬದಿಯಲ್ಲಿ ಚಿನ್ನವನ್ನು ಹಾಕುತ್ತಾ ಹೋಗುತ್ತಾರೆ. ಆದರೆ ಎಷ್ಟೇ ಚಿನ್ನ ಹಾಕಿದರೂ ಕೃಷ್ಣನಿದ್ದ ತಕ್ಕಡಿ ಮೇಲೇಳುವುದಿಲ್ಲ. ತಮ್ಮಲ್ಲಿದ್ದ ಎಲ್ಲ ಚಿನ್ನವನ್ನೂ ಅರ್ಪಿಸಿದರೂ ತಕ್ಕಡಿ ಸಮತೋಲನಕ್ಕೆ ಬರುವುದಿಲ್ಲ. ಕೊನೆಗೆ ರುಕ್ಮಿಣಿ ಒಂದು ತುಳಸಿದಳದ ಮೇಲೆ ಕೃಷ್ಣನ ನಾಮವನ್ನು ಬರೆದು ತಕ್ಕಡಿಯಲ್ಲಿಡುತ್ತಾಳೆ. ಆಶ್ಚರ್ಯವೆಂಬಂತೆ ತಕ್ಷಣ ತಕ್ಕಡಿ ಸಮತೋಲನಕ್ಕೆ ಬರುತ್ತದೆ. ಅಪಾರ ಪ್ರಮಾಣದ ಚಿನ್ನದಿಂದ ಸಾಧ್ಯವಾಗದಿದ್ದುದನ್ನು ಒಂದು ತುಳಸಿದಳ ಸಾಧಿಸುತ್ತದೆ. ಅದಕ್ಕೆ ಕಾರಣ ಅದರಲ್ಲಿದ್ದ ಭಕ್ತಿಯ ಶಕ್ತಿ. ಸತ್ಯಭಾಮೆ ಮತ್ತು ರುಕ್ಮಿಣಿಯರ ದಾನದಲ್ಲಿ ಅಹಂಕಾರದ ಸಣ್ಣ ಎಳೆ ಬೆರೆತಿದ್ದರೆ, ರುಕ್ಮಿಣಿಯ ತುಳಸಿದಳದಲ್ಲಿ ಸಂಪೂರ್ಣ ಶರಣಾಗತಿಯ ಭಾವವಿತ್ತು. ದೇವರಿಗೆ ಬೇಕಾಗಿರುವುದು ಸಂಪತ್ತಿನ ಪ್ರದರ್ಶನವಲ್ಲ, ಪರಿಶುದ್ಧವಾದ ಪ್ರೀತಿ ಎಂಬುದನ್ನು ಈ ಕಥೆ ಸಾರುತ್ತದೆ.

ಇದೇ ಸತ್ಯವನ್ನು ವಿದುರನ ಮನೆಯಲ್ಲಿ ಶ್ರೀಕೃಷ್ಣ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾನೆ. ಪಾಂಡವರ ಪರವಾಗಿ ಕೌರವರೊಂದಿಗೆ ಶಾಂತಿ ಸಂಧಾನ ನಡೆಸಲು ಹಸ್ತಿನಾವತಿಗೆ ಬಂದ ಕೃಷ್ಣನ ಮಾತುಕತೆ ವಿಫಲವಾಗುತ್ತದೆ. ಧೃತರಾಷ್ಟ್ರ, ದುರ್ಯೋಧನ ಮತ್ತು ಭೀಷ್ಮ ಸೇರಿದಂತೆ ಅನೇಕರು ಕೃಷ್ಣನಿಗೆ ತಮ್ಮ ಅರಮನೆಗಳಲ್ಲಿ ಆತಿಥ್ಯ ನೀಡಲು ಆಹ್ವಾನಿಸುತ್ತಾರೆ. ಆದರೆ ಕೃಷ್ಣ ಆಯ್ಕೆ ಮಾಡಿಕೊಳ್ಳುವುದು ಅರಮನೆಯನ್ನಲ್ಲ; ಸರಳ ಗುಡಿಸಲಿನಲ್ಲಿ ವಾಸಿಸುತ್ತಿದ್ದ ವಿದುರನ ಮನೆಯನ್ನು. ವಿದುರನಲ್ಲಿ ಚಿನ್ನ, ಬೆಳ್ಳಿ, ರತ್ನಗಳಿಂದ ಅಲಂಕೃತವಾದ ಅರಮನೆಯಿರಲಿಲ್ಲ. ಕೃಷ್ಣನಿಗೆ ಉಣಬಡಿಸಲು ವಿಶೇಷ ಭೋಜನವೂ ಇರಲಿಲ್ಲ. ಆದರೂ ಕೃಷ್ಣನ ಒತ್ತಾಯದ ಮೇರೆಗೆ ಆತಿಥ್ಯ ನೀಡಲು ಮುಂದಾಗುತ್ತಾನೆ. ಭಕ್ತಿಪರವಶನಾದ ವಿದುರನು ಬಾಳೆಹಣ್ಣಿನ ಸಿಪ್ಪೆಯನ್ನೇ ಕೃಷ್ಣನಿಗೆ ಅರ್ಪಿಸಿ, ಹಣ್ಣನ್ನು ಬಿಸಾಡುತ್ತಿರುತ್ತಾನೆ. ಕೃಷ್ಣನೂ ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ರಾಜವೈಭವದ ಆತಿಥ್ಯಕ್ಕಿಂತ ಬಡವನ ಮನೆಯಲ್ಲಿ ದೊರೆತ ನಿಷ್ಕಲ್ಮಷ ಪ್ರೀತಿಯೇ ಕೃಷ್ಣನಿಗೆ ಮೌಲ್ಯಯುತವಾಗಿತ್ತು. ದೇವರು ಸಂಪತ್ತಿನ ಒಡೆಯನನ್ನು ಹುಡುಕುವುದಿಲ್ಲ; ಪರಿಶುದ್ಧ ಹೃದಯದ ಒಡೆಯನನ್ನು ಹುಡುಕುತ್ತಾನೆ.

ಇಂತಹ ಪ್ರೀತಿಯನ್ನೇ ಕೃಷ್ಣ ಗೋಪಿಕೆಯರಿಂದಲೂ ಬಯಸುತ್ತಿದ್ದನು. ಯಶೋದೆಯ ಮನೆಯಲ್ಲಿ ಉತ್ತಮ ಗುಣಮಟ್ಟದ ಬೆಣ್ಣೆ ಸಾಕಷ್ಟಿದ್ದರೂ ಕೃಷ್ಣ ಗೋಪಿಕೆಯರ ಮನೆಗಳಿಗೆ ಹೋಗಿ ಬೆಣ್ಣೆ ಕದಿಯುತ್ತಿದ್ದುದೇಕೆ ಎಂದು ಯಶೋದೆ ಪ್ರಶ್ನಿಸುತ್ತಾಳೆ. ಅದಕ್ಕೆ ಕೃಷ್ಣ ನೀಡಿದ ಉತ್ತರ ಬಹಳ ಅರ್ಥಪೂರ್ಣ. ತಾಯಿ ಪ್ರೀತಿಯಿಂದ ನೀಡುವ ಬೆಣ್ಣೆಯಲ್ಲಿ ಮೋಹವಿದೆ; ಗೋಪಿಕೆಯರು ಭಕ್ತಿಯಿಂದ ಅರ್ಪಿಸುವ ಬೆಣ್ಣೆಯಲ್ಲಿ ಪರಿಶುದ್ಧ ಪ್ರೀತಿಯಿದೆ ಎಂಬುದು ಕೃಷ್ಣನ ಮಾತಿನ ಸಾರ. ದೊಡ್ಡ ದೊಡ್ಡ ಋಷಿಮುನಿಗಳಿಗೂ ಅರ್ಥವಾಗದ ದೈವಿಕ ಪ್ರೀತಿಯನ್ನು ಸರಳ ಮನಸ್ಸಿನ ಗೋಪಿಕೆಯರು ತಮ್ಮ ಭಕ್ತಿಯಿಂದ ಅರ್ಥಮಾಡಿಕೊಂಡಿದ್ದರು. ದೇವರಿಗೆ ಬೇಕಾಗಿರುವುದು ಆಡಂಬರವಲ್ಲ, ಅಹಂಕಾರ ಮತ್ತು ಸ್ವಾರ್ಥವಿಲ್ಲದ ಪ್ರೀತಿ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.

ಆದರೆ ಇಂದಿನ ಮನುಷ್ಯನ ಬದುಕು ಬಹುತೇಕ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಸಂಪತ್ತು, ಸ್ಥಾನಮಾನ, ಐಷಾರಾಮಿ ಜೀವನಗಳ ಹಿಂದೆ ಓಡುವಾಗ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಎತ್ತರದ ಕಟ್ಟಡಗಳು, ದುಬಾರಿ ಕಾರುಗಳು, ದೊಡ್ಡ ಮನೆಗಳು ಕಂಡಾಗ ಅವುಗಳ ಮಾಲೀಕರು ಅತ್ಯಂತ ಸುಖವಾಗಿದ್ದಾರೆ ಎಂದು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಅವರ ಬದುಕು ಕೂಡ ಹೋಲಿಕೆ, ಸ್ಪರ್ಧೆ, ಅಸೂಯೆ ಮತ್ತು ಆತಂಕಗಳಿಂದ ತುಂಬಿರಬಹುದು. ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚು ಸಂಪಾದಿಸಬೇಕು, ಹೆಚ್ಚು ಆಸ್ತಿ ಹೊಂದಬೇಕು, ಹೆಚ್ಚು ಪ್ರಸಿದ್ಧರಾಗಬೇಕು ಎಂಬ ಹಂಬಲಕ್ಕೆ ಕೊನೆಯೇ ಇರುವುದಿಲ್ಲ. ಹೊರನೋಟಕ್ಕೆ ಬಂಗಾರದ ಪಂಜರದಂತೆ ಕಾಣುವ ಬದುಕಿನೊಳಗೆ ಮನುಷ್ಯನೇ ಬಂಧಿಯಾಗಿರುತ್ತಾನೆ. ಮುಖದಲ್ಲಿ ನಗುವಿದ್ದರೂ ಮನಸ್ಸಿನಲ್ಲಿ ಭವಿಷ್ಯದ ಚಿಂತೆ, ಸಾಲದ ಒತ್ತಡ ಮತ್ತು ಸ್ಪರ್ಧೆಯ ಭಯ ಕಾಡುತ್ತಿರುತ್ತದೆ.

ಕೋತಿಯನ್ನು ಹಿಡಿಯಲು ಬೇಟೆಗಾರರು ಬಳಸುವ ಒಂದು ತಂತ್ರವಿದೆ. ಕಿರಿದಾದ ಬಾಯಿಯ ಮಡಕೆಯಲ್ಲಿ ಶೇಂಗಾ ಕಾಳುಗಳನ್ನು ಹಾಕುತ್ತಾರೆ. ಕೋತಿ ಕೈಯನ್ನು ಒಳಗೆ ಹಾಕಿ ಕಾಳುಗಳನ್ನು ಹಿಡಿಯುತ್ತದೆ. ಆದರೆ ಕೈತುಂಬ ಕಾಳು ಹಿಡಿದಿರುವುದರಿಂದ ಕೈಯನ್ನು ಹೊರಗೆ ತೆಗೆಯಲು ಸಾಧ್ಯವಾಗುವುದಿಲ್ಲ. ಕಾಳುಗಳನ್ನು ಬಿಡಲು ಮನಸ್ಸಿಲ್ಲದೆ ಅದು ಅಲ್ಲಿಯೇ ಸಿಕ್ಕಿಬಿಳುತ್ತದೆ. ವಾಸ್ತವದಲ್ಲಿ ಕೈಯನ್ನು ಖಾಲಿ ಮಾಡಿದರೆ ಕ್ಷಣಾರ್ಧದಲ್ಲಿ ಮುಕ್ತವಾಗಬಹುದು. ಮನುಷ್ಯನ ಬದುಕೂ ಹೀಗೆಯೇ. ಆಸೆಗಳನ್ನು ಬಿಗಿಯಾಗಿ ಹಿಡಿದುಕೊಂಡಷ್ಟೂ ಬಂಧನ ಹೆಚ್ಚುತ್ತದೆ. ಅವುಗಳನ್ನು ಬಿಟ್ಟುಕೊಟ್ಟಾಗ ಮಾತ್ರ ಸ್ವಾತಂತ್ರ್ಯ ದೊರೆಯುತ್ತದೆ. ನಾವು ಸಂಪತ್ತನ್ನು ಹೊಂದಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ಅನೇಕ ಸಂದರ್ಭಗಳಲ್ಲಿ ಸಂಪತ್ತೇ ನಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತದೆ.

ಆದಿ ಶಂಕರಾಚಾರ್ಯರು ಒಮ್ಮೆ ಹಸುವನ್ನು ಹಗ್ಗದಿಂದ ಎಳೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ಶಿಷ್ಯರಿಗೆ ಒಂದು ಪ್ರಶ್ನೆ ಕೇಳಿದರು. ಹಸು ಮನುಷ್ಯನನ್ನು ಅವಲಂಬಿಸಿದೆಯೇ ಅಥವಾ ಮನುಷ್ಯ ಹಸುವನ್ನು ಅವಲಂಬಿಸಿದ್ದಾನೆಯೇ? ಶಿಷ್ಯರು ಹಸುವಿಗೆ ಆಹಾರ ಮತ್ತು ಆರೈಕೆಯ ಅಗತ್ಯವಿರುವುದರಿಂದ ಅದು ಮನುಷ್ಯನನ್ನು ಅವಲಂಬಿಸಿದೆ ಎಂದರು. ಆಗ ಶಂಕರರು ಹಸುವನ್ನು ಕಟ್ಟಿದ್ದ ಹಗ್ಗವನ್ನು ಕತ್ತರಿಸಿದರು. ತಕ್ಷಣವೇ ಹಸು ಓಡಿಹೋಯಿತು. ಆಗ ಮನುಷ್ಯನೇ ಹಗ್ಗವನ್ನು ಹಿಡಿದುಕೊಂಡಿದ್ದರಿಂದ ಹಸುವನ್ನು ಅವಲಂಬಿಸಿದ್ದಾನೆ ಎಂಬ ಸತ್ಯ ಶಿಷ್ಯರಿಗೆ ಅರಿವಾಯಿತು. ಹಾಗೆಯೇ, ಮನುಷ್ಯನು ತನ್ನ ಆಸೆಗಳನ್ನು ಹಿಡಿದುಕೊಂಡಿರುವುದೇ ಅವನ ಬಂಧನಕ್ಕೆ ಕಾರಣ. ಆಸೆಗಳನ್ನು ತ್ಯಜಿಸಿದಾಗಲೇ ನಿಜವಾದ ಮುಕ್ತಿ ಸಾಧ್ಯ. ತೊಂಬತ್ತೊಂಬತ್ತು ರೂಪಾಯಿಗಳನ್ನು ಕೊಟ್ಟು ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳಬಹುದು ಎಂಬ ಮಾತಿದೆ. ಆ ಒಂದು ರೂಪಾಯಿಯನ್ನು ಸೇರಿಸಿ ನೂರು ರೂಪಾಯಿ ಮಾಡಬೇಕೆಂಬ ಚಿಂತೆಯಲ್ಲೇ ಆತ ಮುಳುಗುತ್ತಾನೆ. ಇರುವುದರಲ್ಲಿ ಸಂತೋಷಪಡುವ ಬದಲು ಇಲ್ಲದಿರುವುದರ ಹಿಂದೆ ಓಡುತ್ತಾನೆ.

ಸಂಪತ್ತು ಎಷ್ಟೇ ಇದ್ದರೂ ಅದು ಶಾಶ್ವತವಲ್ಲ. ಅಪಾರ ಆಸ್ತಿಯ ಒಡೆಯನಾಗಿದ್ದ ವ್ಯಾಪಾರಿಯೊಬ್ಬ ಸಾಲದ ಸುಳಿಯಲ್ಲಿ ಸಿಲುಕಿದಾಗ ತನ್ನ ಸಂಪತ್ತಿನ ಮೌಲ್ಯ ಕುಸಿಯುವುದನ್ನು ಕಂಡು ಆತಂಕಕ್ಕೊಳಗಾಗುತ್ತಾನೆ. ಸಾಲ ತೀರಿಸುವ ಸಾಮರ್ಥ್ಯವಿದ್ದರೂ ತನ್ನ ಆಸ್ತಿಯ ಮೌಲ್ಯ ಕುಸಿಯಬಹುದೆಂಬ ಭಯ ಅವನನ್ನು ಕಾಡುತ್ತದೆ. ಆಗ ಅವನಿಗೆ ತಿಳಿದುಬರುವ ಸತ್ಯವೆಂದರೆ, ಹಣಕ್ಕಿಂತ ಪ್ರಾಮಾಣಿಕತೆ ಮತ್ತು ಒಳ್ಳೆಯ ಹೆಸರು ಮುಖ್ಯ ಎಂಬುದು. ನಷ್ಟವಾದರೂ ಸಾಲವನ್ನು ಮರುಪಾವತಿಸಿ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತಾನೆ. ಜನರು ಅವನ ಪ್ರಾಮಾಣಿಕತೆಯ ಮೇಲೆ ಇಟ್ಟಿದ್ದ ವಿಶ್ವಾಸವೇ ಮುಂದೆ ಅವನ ಬದುಕನ್ನು ಮತ್ತೆ ಕಟ್ಟಲು ನೆರವಾಗುತ್ತದೆ. ಹಣ ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು; ಆದರೆ ನಂಬಿಕೆ ಮತ್ತು ಒಳ್ಳೆಯ ಹೆಸರು ಕಳೆದುಕೊಂಡರೆ ಮರಳಿ ಗಳಿಸುವುದು ಕಷ್ಟ.

ಸಂಸ್ಕೃತದ ಒಂದು ಸುಭಾಷಿತವೂ ಇದೇ ಸತ್ಯವನ್ನು ಸಾರುತ್ತದೆ.

ಅಸ್ಥಿರಂ ಜೀವಿತಂ ಲೋಕೇ ಅಸ್ಥಿರಂ ಯೌವನಂ ಧನಮ್​

ಅಸ್ಥಿರಂ ದಾರಾಪುತ್ರಾದಿ ಸತ್ಯಂ ಕೀರ್ತಿ@ ದ್ವಯಂ ಸ್ಥಿರಮ್​

ಜೀವನ, ಯೌವನ, ಸಂಪತ್ತು ಮತ್ತು ಕೌಟುಂಬಿಕ ಬಂಧಗಳು ಎಲ್ಲವೂ ಅಶಾಶ್ವತ. ಆದರೆ ಸತ್ಯ ಮತ್ತು ವ್ಯಕ್ತಿ ಗಳಿಸಿದ ಒಳ್ಳೆಯ ಹೆಸರು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಆದ್ದರಿಂದ ಸಂಪತ್ತಿನ ಸಂಗ್ರಹಕ್ಕಿಂತ ಸನ್ನಡತೆ ಮತ್ತು ಸತ್ಕಾರ್ಯಗಳ ಮೂಲಕ ಗೌರವ ಗಳಿಸುವುದು ಮುಖ್ಯ. ನಿಜವಾದ ಶ್ರೀಮಂತಿಕೆ ಎಂದರೆ ಹಣವಿರುವುದಲ್ಲ; ಸಂತೋಷ, ಶಾಂತಿ ಮತ್ತು ಸಂತೃಪ್ತಿಯಿಂದ ಬದುಕಲು ಸಾಧ್ಯವಾಗುವುದಾಗಿದೆ.

ಹಾಗಾದರೆ ಸಂಪತ್ತನ್ನು ಸಂಪಾದಿಸಬಾರದೇ? ಖಂಡಿತ ಸಂಪಾದಿಸಬೇಕು. ಆದರೆ ಸಂಪತ್ತು ನಮ್ಮ ಬದುಕಿನ ಸಾಧನವಾಗಬೇಕೇ ಹೊರತು, ಬದುಕನ್ನೇ ನಿಯಂತ್ರಿಸುವ ಶಕ್ತಿಯಾಗಬಾರದು. ಅಗತ್ಯ ಮತ್ತು ದುರಾಸೆಯ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಹಸಿವನ್ನು ನೀಗಿಸಲು ತಿನ್ನಬೇಕು; ನಾಲಿಗೆಯ ರುಚಿಯ ದಾಸರಾಗಬಾರದು. ಅಗತ್ಯಕ್ಕೆ ತಕ್ಕಂತೆ ಉಡುಪು ಧರಿಸಬೇಕು; ಇತರರನ್ನು ಮೆಚ್ಚಿಸುವುದಕ್ಕಾಗಿ ಆಡಂಬರ ಮಾಡಬಾರದು. ನಮ್ಮ ಬಳಿ ಇರುವುದನ್ನು ಹಂಚಿಕೊಳ್ಳಬೇಕು. ಪ್ರೀತಿ, ಕರುಣೆ ಮತ್ತು ಸೇವೆಯ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು.

ಯುವಜನತೆ ವಿಶೇಷವಾಗಿ ಈ ಸತ್ಯವನ್ನು ಅರಿಯಬೇಕು. ಇತರರ ಸಂಪತ್ತು, ಜೀವನಶೈಲಿ ಮತ್ತು ಸಾಧನೆಗಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವ ಬದಲು, ತಮ್ಮಲ್ಲಿರುವುದಕ್ಕೆ ಕೃತಜ್ಞರಾಗಿರಬೇಕು. ಹಣ ಗಳಿಸುವ ಸ್ಪರ್ಧೆಗಿಂತ ಸೇವೆ, ದಯೆ ಮತ್ತು ಮಾನವೀಯತೆಯಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು. ಎಲ್ಲರೂ ಒಂದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬ ಕಾರಣಕ್ಕೆ ಆ ದಾರಿಯೇ ಸರಿಯೆಂದು ಭಾವಿಸಬಾರದು. ತಪ್ಪು ದಾರಿಯಲ್ಲಿ ಸಾವಿರಾರು ಜನರು ನಡೆದರೂ ಅದು ಸರಿಯಾದ ದಾರಿಯಾಗುವುದಿಲ್ಲ. ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಅದರದ್ದೇ ಆದ ಫಲವಿದೆ. ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲ, ಕೆಟ್ಟ ಕರ್ಮಕ್ಕೆ ಕೆಟ್ಟ ಫಲ..

ಕೊನೆಗೂ ಬದುಕಿನ ನಿಜವಾದ ಶ್ರೀಮಂತಿಕೆ ಬ್ಯಾಂಕ್​ ಖಾತೆಯಲ್ಲಿರುವ ಹಣದಿಂದಲೋ, ಧರಿಸುವ ಆಭರಣಗಳಿಂದಲೋ ಅಳೆಯಲಾಗುವುದಿಲ್ಲ. ನಮ್ಮಿಂದ ಮತ್ತೊಬ್ಬರ ಬದುಕಿಗೆ ಎಷ್ಟು ಬೆಳಕು ಸಿಕ್ಕಿದೆ, ಎಷ್ಟು ಜನರ ಕಣ್ಣೀರು ಒರೆಸಿದ್ದೇವೆ, ಎಷ್ಟು ಪ್ರೀತಿಯನ್ನು ಹಂಚಿದ್ದೇವೆ ಎಂಬುದೇ ನಮ್ಮ ಬದುಕಿನ ನಿಜವಾದ ಲೆಕ್ಕ. ಜಗತ್ತನ್ನು ಬೆನ್ನಟ್ಟಿದಷ್ಟೂ ಅದು ದೂರವಾಗುತ್ತದೆ; ಆದರೆ ದೇವರ ಕಡೆಗೆ ಒಂದು ಹೆಜ್ಜೆ ಇಟ್ಟರೆ ಆತ ನೂರು ಹೆಜ್ಜೆ ಮುಂದೆ ಬರುತ್ತಾನೆ. ಸೇವೆ, ತ್ಯಾಗ, ಸಂತೃಪ್ತಿ ಮತ್ತು ಪ್ರೀತಿಯೇ ನಿಜವಾದ ಆನಂದದ ಹಾದಿ. ಜಗತ್ತಿನಲ್ಲಿ ಬದುಕಬೇಕು; ಆದರೆ ಜಗತ್ತಿನ ಆಸೆ&ಆಮಿಷಗಳು ನಮ್ಮೊಳಗೆ ನೆಲೆಸಲು ಅವಕಾಶ ಕೊಡಬಾರದು. ಅದುವೇ ನಿಜವಾದ ಸ್ವಾತಂತ್ರ್ಯ, ಅದುವೇ ಆನಂದಮಯ ಜೀವನ.

Dailyhunt
Disclaimer: This content has not been generated, created or edited by Dailyhunt. Publisher: Vijayvani