Wednesday, 28 Oct, 11.53 pm ವಿಜಯವಾಣಿ

ಸಮಸ್ತ-ಕರ್ನಾಟಕ
ಸರ್ಕಾರಕ್ಕೆ ಸವಾಲಾದ ಮೀಸಲಾತಿ; ವಾಲ್ಮೀಕಿ ನಾಯಕ, ಕುರುಬ ಸಮುದಾಯದಿಂದ ತೀವ್ರ ಹೋರಾಟ

| ರಮೇಶ ಜಹಗೀರದಾರ್ ದಾವಣಗೆರೆ

ರಾಜ್ಯದ ವಾಲ್ಮೀಕಿ ನಾಯಕ ಮತ್ತು ಕುರುಬ ಸಮುದಾಯಗಳ ಮೀಸಲು ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕರೊನಾ ಭೀತಿ ಮತ್ತು ಚುನಾವಣೆ ಪರ್ವದ ನಡುವೆ ಈ ಸೂಕ್ಷ್ಮ ವಿಚಾರದ ಸವಾಲನ್ನು ಸರ್ಕಾರ ಎದುರಿಸಬೇಕಾಗಿದೆ.

ಪರಿಶಿಷ್ಟ ಪಂಗಡ ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂಬುದು ವಾಲ್ಮೀಕಿ ನಾಯಕ ಸಮಾಜದ ಬಹುದಿನಗಳ ಬೇಡಿಕೆಯಾಗಿದೆ. ಎಸ್ಟಿಗೆ ಸೇರ್ಪಡೆ ಮಾಡಬೇಕೆಂಬ ಕುರುಬ ಜನಾಂಗದ ಒತ್ತಾಯ ಹೋರಾಟದ ಸ್ವರೂಪ ಪಡೆದುಕೊಂಡಿದೆ. ವಾಲ್ಮೀಕಿ ಗುರುಪೀಠವಿರುವುದು ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ. ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠವಿರುವುದೂ ಇದೇ ತಾಲೂಕಿನ ಬೆಳ್ಳೂಡಿಯಲ್ಲಿ. ಹಾಗಾಗಿ ಇಲ್ಲಿಂದಲೇ ಮೀಸಲು ಹೋರಾಟದ ರೂಪುರೇಷೆಗಳು ಸಿದ್ಧವಾಗಿವೆ.

ವಾಲ್ಮೀಕಿ ನಾಯಕರ ಬೇಡಿಕೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳ ವರೆಗೆ ತೆಗೆದುಕೊಂಡು ಹೋಗಲು ಆ ಸಮುದಾಯದ ನಾಯಕರಾದ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವ ವಹಿಸಿಕೊಂಡಿದ್ದಾರೆ. ಕುರುಬರ ಎಸ್ಟಿ ಹೋರಾಟ ಸಮಿತಿಯ ಮುಖಂಡತ್ವವನ್ನು ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ ವಹಿಸಿಕೊಂಡಿದ್ದಾರೆ. ಮೀಸಲು ಬೇಡಿಕೆಯನ್ನು ಪಡೆದುಕೊಳ್ಳಲು ಪಕ್ಷಾತೀತ ಹೋರಾಟ ಎಂದು ಉಭಯ ಸಮುದಾಯಗಳೂ ಹೇಳಿಕೊಂಡಿವೆ.

ಶ್ರೀಗಳ ಪಾದಯಾತ್ರೆ: ಮೀಸಲಾತಿ ಹೋರಾಟದ ಪ್ರಮುಖ ಘಟ್ಟವೇ ಪಾದಯಾತ್ರೆ. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲು ಆಗ್ರಹಿಸಿ 2019ರ ಜೂನ್​ನಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹರಿಹರ ತಾಲೂಕು ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು.ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿಯನ್ನು ರಚಿಸಿತು. ಅದಾದ ನಂತರ ಸಮ್ಮಿಶ್ರ ಸರ್ಕಾರದ ಪತನವಾಗಿದ್ದರಿಂದ ಮೀಸಲಾತಿ ವಿಚಾರ ನನೆಗುದಿಗೆ ಬಿತ್ತು. ಈಗ ಮತ್ತೆ ಆ ಹೋರಾಟ ಮುನ್ನೆಲೆಗೆ ಬಂದಿದೆ. ಬೇಡಿಕೆ ಈಡೇರಿಸಲು ಸರ್ಕಾರ ಒಂದು ತಿಂಗಳ ಗಡುವು ಕೇಳಿದೆ.

ಹೋರಾಟ ಸಮಾವೇಶಗಳು

ಕುರುಬ ಸಮುದಾಯದ ಕುಲಶಾಸ್ತ್ರ ಅಧ್ಯಯನ ಪ್ರಗತಿ ಯಲ್ಲಿದೆ. ಮತ್ತೊಂದು ಕಡೆ ಪರಿಶಿಷ್ಟ ಪಂಗಡ ಮೀಸಲು ಸವಲತ್ತು ನೀಡಲು ಆಗ್ರಹಿಸಿ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಸಮಾವೇಶಗಳನ್ನು ನಡೆಸಲು ಕುರುಬರ ಎಸ್ಟಿ ಹೋರಾಟ ಸಮಿತಿ ನಿರ್ಧರಿಸಿದೆ. ನ. 8 ರಂದು ಕಾಗಿನೆಲೆಯಲ್ಲಿ ಮಹಿಳಾ ಸಮಾವೇಶ ನಿಗದಿಯಾಗಿದೆ. ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಜ. 15 ರಂದು ಕಾಗಿನೆಲೆಯಿಂದ ಪಾದಯಾತ್ರೆ ಆರಂಭಿಸುವರು. ಫೆ. 7 ರಂದು ಬೆಂಗಳೂರಿಗೆ ತಲುಪುವರು. ಅಂದು ಸಮಾವೇಶ ನಡೆಯಲಿದೆ.

ಪಂಚಮಸಾಲಿಗಳಿಂದ ಸತ್ಯಾಗ್ರಹ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಸುವರ್ಣ ವಿಧಾನಸೌಧದ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಉದ್ಯೋಗ ಹಾಗೂ ಶಿಕ್ಷಣದಲ್ಲಿ ಸಮುದಾಯಕ್ಕೆ ಮೀಸಲಾತಿ ಅನಿವಾರ್ಯವಾಗಿದೆ. ಆರಂಭಿಕ ಹಂತದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಒತ್ತಾಯಿಸಿದರು. ಈ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಬಿಎಸ್​ವೈ ಎರಡು ಬಾರಿ ಮುಖ್ಯಮಂತ್ರಿ ಆಗಲು ನಮ್ಮ ಸಮಾಜದ ಬಹುದೊಡ್ಡ ಪಾತ್ರವಿದೆ. ಜತೆಗೆ ಸಮಾಜದ ಋಣಭಾರವಿದೆ. ಹೀಗಾಗಿ ಸಿಎಂ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತು ಶೀಘ್ರ ತಮ್ಮ ಅಭಿಪ್ರಾಯ ತಿಳಿಸಬೇಕು. ಸರ್ಕಾರದ ಸ್ಪಂದನೆ ಗಮನಿಸಿ ಮುಂದಿನ ಹೋರಾಟ ಕೈಗೊಳ್ಳಲಾಗುವುದು

ಎಂದು ತಿಳಿಸಿದರು. ಸಚಿವ ರಮೇಶ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಮುರಗೇಶ ನಿರಾಣಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮದು ಶಾಂತಿಯುತ ಹೋರಾಟ. ನಮಗೆ ಅರ್ಹತೆಯಿದೆ, ಪರಿಶಿಷ್ಟ ಪಂಗಡ ಮೀಸಲಾತಿ ಕೊಡಿ ಎಂಬುದು ಸರ್ಕಾರಕ್ಕೆ ನಮ್ಮ ಬೇಡಿಕೆಯಾಗಿದೆ.

| ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕನಕ ಗುರುಪೀಠ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top