ಸೇಡಂ: ಕೊಂತನಪಲ್ಲಿಯಲ್ಲಿ ಅಲ್ಪಸಂಖ್ಯಾತ ಸಮುದಾಯ ಭವನ (ಶಾದಿಮಹಲ್) ನಿರ್ಮಾಣಕ್ಕೆ ಮುಂದಾಗಿದ್ದು, ಆದರೆ ಜನರೇ ಇಲ್ಲದ ಸ್ಥಳದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಹೀಗಾಗಿ ಜನವಸತಿ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿಪತ್ರ ಸಲ್ಲಿಸಿರುವ ಅವರು, ಸುಮಾರು 25ಲಕ್ಷ ರೂ. ವೆಚ್ಚದ ಕಾಮಗಾರಿಗೆ ಏ.17ರಂದು ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ, ಗುತ್ತಿಗೆದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲಸ ನಡೆಯುತ್ತಿರುವ ಪ್ರದೇಶದಲ್ಲಿ ಕೆಲ ಜನ ಮಾತ್ರ ಇರುತ್ತಾರೆ. ಜನ ಸಂಪರ್ಕವಿಲ್ಲ ಪ್ರದೇಶದಲ್ಲಿ ಜನೋಪಯೋಗಿ ಕಟ್ಟಡಗಳು ನಿರ್ಮಾಣಗೊಂಡರೆ ಹಾಳಾಗಿ ಹೋಗುತ್ತವೆ. ಗ್ರಾಮದ ಮುಸ್ಲಿಂ ಸಮಾಜದ ಹಿರಿಯರು ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ಸ್ಥಳ ನೀಡಲು ಸಿದ್ಧರಿದ್ದಾರೆ. ಆದರೂ ಸರ್ಕಾರ ಮತ್ತು ಸ್ಥಳಿಯ ಶಾಸಕರು ಇದರ ಬಗ್ಗೆ ಏಕೆ ಆಸಕ್ತಿವಹಿಸುತ್ತಿಲ್ಲ ತಿಳಿಯದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಜಾನುವಾರುಗಳಿಗಾಗಿ ನೀರಿನ ತೊಟ್ಟಿ, ಸಾರ್ವಜನಿಕರ ಶೌಚಗೃಹ ನಿರ್ಮಾಣಗೊಂಡಿದೆ, ಆದರೆ ಉಪಯೋಗಿಸದೆ ಹಾಳಾಗಿ ಹೋಗಿವೆ. ಇದೀಗ ಸಮುದಾಯ ಭವನವು ಅದೇ ಸಾಲಿಗೆ ಸೇರುತ್ತದೆ. ಕೂಡಲೇ ಮೇಲಾಧಿಕಾರಿಗಳು ಗಮನಿಸಿ ಕಾಮಗಾರಿ ನಿಲ್ಲಿಸಿ, ಗ್ರಾಮದ ಮಧ್ಯ ಭಾಗಕ್ಕೆ ಕಟ್ಟಡ ನಿರ್ಮಾಣ ಮಾಡುವ ಕೆಲಸ ವರ್ಗಾಯಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. ಪ್ರಮುಖರಾದ ಮೌಲಾನಾ ಹಾಜಿ, ಅಬ್ದುಲ್ ಸಾಬ್, ನರೇಶ ಗಡ್ಡಿಮಿದಿ, ಮುಕ್ತಾರ್ ಪಾಶಾ, ರಿಯಾಜ್ ನಿಜಾಮರ್, ಅಬ್ದುಲ್ ಅಜೀಜ, ಸೋಯೆಬ್ ಖಾಸಿಂಸಾಬ್, ಅತಕುರ್ ರೆಹಮಾನ್, ರಫೀಕ್, ಜಮೀಲ್, ಶರೀಫ್, ಲಾಲ್ಅಹ್ಮದ್, ಅಜಮ್, ಬಾಬುಸಾಬ, ಖಾಸಿಂಸಾಬ್, ಚಾಂದಪಾಶಾ, ರಸೀದಸಾಬ್, ಅಜೀಜಮಿಯಾ, ರಹೆಮಾನ್ಸಾಬ್, ಸಲೋದ್ದಿನ್, ಬಾಬುಮಿಯಾ ಇತರರಿದ್ದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

