| (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)
ಈ ಭರತ ಭೂಮಿಯು ಸಾವಿರಾರು ವರುಷಗಳಿಂದ ಸಾಂಸ್ಕೃತಿಕ ಅಸ್ತಿತ್ವವನ್ನು ಹೊಂದಿದೆ. ಆದರೆ 77 ವರುಷಗಳ ಹಿಂದೆ ನಾವು ಒಂದು ಗಣರಾಜ್ಯವಾದೆವು. ಸಂವಿಧಾನದಲ್ಲಿ ಎಲ್ಲ ನಿಯಮಗಳು ಬರೆಯಲ್ಪಟ್ಟಿರುವುದರಿಂದ ಒಂದು ಗಣರಾಜ್ಯವಾಗುತ್ತದೆ.ಬಹುಪಾಲು ಧರ್ಮಗಳೂ ಸಂವಿಧಾನವನ್ನು ಹೊಂದಿರುತ್ತವೆ. ಇದು ದೈವದಿಂದ, ಪೀಳಿಗೆಗಳಿಂದ ಅಥವಾ ದೇವದೂತರಿಂದ ಬರೆದವುಗಳೆಂದು ಹೇಳಲಾಗುತ್ತದೆ. ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗೆ ಅವಕಾಶವಿಲ್ಲ ಎಂದಾಗ ಅದನ್ನು ತಿದ್ದಲಾಗುವುದಿಲ್ಲ. ಆದರೆ ಗಣರಾಜ್ಯದ ಸಂವಿಧಾನದಲ್ಲಿ ಮನೋಧರ್ಮಕ್ಕೆ ಹಾಗೂ ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗಳನ್ನು ತರಬಹುದು. ಏಕೆಂದರೆ ಅದು ಒಂದು ಪದ್ಧತಿಯ ಸಮಾನ ಕಾನೂನಿಗೆ ಎಲ್ಲರೂ ಬದ್ಧರಾಗಿರುವಂತೆ ನಮ್ಮೆಲ್ಲರೊಳಗಿನ ಒಪ್ಪಂದವಾಗಿರುತ್ತದೆ. ಇದರಿಂದ ಯಾವುದೇ ವಿಚಾರದಲ್ಲಿಯೂ ಘರ್ಷಣೆಯುಂಟಾಗುವುದಿಲ್ಲ.
ಪ್ರಸ್ತುತದಲ್ಲಿ, ದೇಶದ ಒಂದು ಸಣ್ಣ ಭಾಗದಲ್ಲಿ ಯಾವಾಗಲೂ ವಾಕ್ ಸ್ವಾತಂತ್ರ್ಯ ಅಥವಾ ಅದು ಇಲ್ಲದಿರುವಿಕೆಯ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ. ಸ್ವಾತಂತ್ರ್ಯ ಎನ್ನುವುದು ಸರಿಯಾದ ಪದವಲ್ಲ, ಏಕೆಂದರೆ ಯಾರಾದರೂ ಸ್ವಾತಂತ್ರ್ಯದ ಕುರಿತು ಮಾತನಾಡಿದ ಕೂಡಲೇ ಅವರು ಬೇಜವಾಬ್ದಾರಿಯ ಕೆಲಸಗಳನ್ನು ಮಾಡುವುದನ್ನು ನಾನು ಕಂಡಿದ್ದೇನೆ. ಜವಾಬ್ದಾರಿ ಎನ್ನುವುದೇ ಸರಿಯಾದ ಪದ. ಏಕೆಂದರೆ, ಜವಾಬ್ದಾರಿ ಎಲ್ಲಿ ಇಲ್ಲವೋ ಅಲ್ಲಿ ಯಾವುದೇ ಸ್ವಾತಂತ್ರ್ಯವೂ ಇರುವುದಿಲ್ಲ. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಿದಾಗ ಮಾತ್ರ ಅಲ್ಲಿ ಸ್ವಲ್ಪ ಸ್ವಾತಂತ್ರ್ಯವಿರುತ್ತದೆ. ಪರಸ್ಪರ ಬೇಜವಾಬ್ದಾರಿಯಿಂದ ವರ್ತಿಸಿದರೆ, ಅಲ್ಲಿ ಘರ್ಷಣೆಗಳುಂಟಾಗುತ್ತವೆ, ಸ್ವಾತಂತ್ರ್ಯವಲ್ಲ.
ಈ ಜನರು ಇನ್ನೂ ಕ್ರಾಂತಿಯ ಪ್ರಣಯ ಪ್ರಕರಣದಲ್ಲೇ ಬದುಕುತ್ತಿದ್ದಾರೆ. ಅದು ಮತ್ತೊಂದು ಕಾಲದ ಪ್ರೇಮ ಪ್ರಕರಣ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಇಂದಿನ ಜಗತ್ತಿನಲ್ಲಿ ಅಂತಹ ಯಾವುದಕ್ಕೂ ಸ್ಥಳವಿಲ್ಲ. ಇಂದು ನೀವು ಒಂದು ಕ್ರಾಂತಿಯನ್ನುಂಟುಮಾಡಲು ಅಪೇಕ್ಷಿಸಿದರೆ, ನೂರು ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಅಥವಾ ಹತ್ತು ಲಕ್ಷ ಸಸಿಗಳನ್ನು ನೆಡಿ. ಒಂದು ಪರಿಹಾರಕ್ಕಾಗಿ ನಿಮ್ಮಲ್ಲಿ ಕ್ರಾಂತಿಕಾರಿ ಯೋಜನೆಯ ಆಲೋಚನೆ ಇದೆಯೇ ಎನ್ನುವುದೇ ಸಂಗತಿಯಾಗಿದೆ.
ಆಧುನಿಕ ಪ್ರಜಾಪ್ರಭುತ್ವದ ವರದಾನ: ಹಿಂದಿನ ಕಾಲದಲ್ಲಿ ಪ್ರಪಂಚವು ಬಂದೂಕುಗಳನ್ನು ಹಿಡಿದ ಪ್ರಜಾಪೀಡಕರಿಂದ ಆಳಲ್ಪಡುತ್ತಿತ್ತು. ಹೀಗಾಗಿ ಹೊಡೆದಾಟ ಹಾಗೂ ಕೊಲ್ಲುವುದು ಅವರಿಗೆ ಕ್ರಾಂತಿ ಎಂದಾಗಿತ್ತು. ಈಗ ಬಹುತೇಕವಾಗಿ ಸಂಪೂರ್ಣ ವಿಶ್ವವು ಪ್ರಜಾಪ್ರಭುತ್ವವಾಗಿದೆ. ನೀವೇನಾದರೂ ಬದಲಾವಣೆಯನ್ನು ತರಬೇಕೆಂದು ಇಚ್ಛಿಸಿದರೆ, ವಿಶೇಷವಾಗಿ ಈ ದೇಶದಲ್ಲಿ ನೀವು ಕೇವಲ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೂಲಕವೇ ಮಾಡಬೇಕು, ಅದಕ್ಕೆ ನಮಗೊಂದು ಚೌಕಟ್ಟಿದೆ- ಅದುವೇ ಸಂವಿಧಾನ.
ಸಂವಿಧಾನವು ನಮ್ಮಲ್ಲಿನ ಒಂದು ಒಡಂಬಡಿಕೆ, ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕ ಹಾಗೆ ಅದರಲ್ಲಿ ಬದಲಾವಣೆಗಳನ್ನು ಮಾಡಬಹುದಾಗಿದೆ. ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾಯಿತಗೊಂಡ ಸರ್ಕಾರದ ಮೂಲಭೂತ ಕರ್ತವ್ಯಗಳಲ್ಲಿ ಇದೂ ಒಂದಾಗಿದೆ. ಯಥಾಸ್ಥಿತಿಯನ್ನು ನಾಶ ಮಾಡುವಲ್ಲಿ, ಶಕ್ತಿಯ ಸಮೀಕರಣಗಳನ್ನು ಪ್ರಶ್ನಿಸುವಲ್ಲಿ, ಪ್ರತ್ಯೇಕ ಬಣ, ನಿಯಂತ್ರಣ ಕೂಟ, ಏಕಸ್ವಾಮ್ಯ ಮತ್ತು ಪ್ರತ್ಯೇಕತಾ ಮನೋವೃತ್ತಿಯನ್ನು ಕುಂದಿಸುವುದರಲ್ಲಿ ಪ್ರಜಾಪ್ರಭುತ್ವವು ಒಂದು ಪ್ರಬಲವಾದ ಮಾರ್ಗವಾಗಿದೆ. ಆದರೆ ಪ್ರಜಾಪ್ರಭುತ್ವದ ಸಾರವು ಭಿನ್ನಾಭಿಪ್ರಾಯವಲ್ಲ. ಪ್ರಜಾಪ್ರಭುತ್ವದ ತಿರುಳೆಂದರೆ ಜನರ ಆಯ್ಕೆಯನ್ನು ಗೌರವಿಸುವುದು, ಅದನ್ನು ಪರಿಗಣಿಸುವುದು. ಸರಕಾರವು ಜನರ ಸಂಕಲ್ಪದ ಅಭಿವ್ಯಕ್ತಿಯೇ. ನಾವು ಚುನಾಯಿಸಿದ ನಾಯಕರು ದೇಶಕ್ಕಾಗಿ ಕಾರ್ಯನಿರ್ವಹಿಸದೇ ಇದ್ದರೆ ಅವರನ್ನು ಬದಲಾಯಿಸುವುದು ನಮ್ಮ ಕರ್ತವ್ಯ.ಚುನಾವಣೆಯಲ್ಲಿ ಮತಪೆಟ್ಟಿಗೆಗಳು ಅಧಿಕಾರದ ಬದಲಾವಣೆಯ ಮೇಲೆ ಪರಿಣಾಮ ಬೀರುವುದೇ ಆಧುನಿಕ ಪ್ರಜಾಪ್ರಭುತ್ವದ ಕೊಡುಗೆ. ಯಾವುದೇ ರಕ್ತಪಾತವಿಲ್ಲದೆ ಅಧಿಕಾರದಿಂದ ಹೊರಗೆ ಕಳಿಸುವ ಸಾಧನವನ್ನು ನಾವು ಕಂಡುಕೊಂಡಿರುವುದು ಒಂದು ಅದ್ಭುತ ಸಾಧನೆ.
ವಾಕ್ಸ್ವಾತಂತ್ರ್ಯ ಉಳಿಸಿಕೊಳ್ಳುವುದು: ಒಮ್ಮೆ ನಾವು ಮತಪೆಟ್ಟಿಗೆಗೆ ಗೌರವ ನೀಡುವುದನ್ನು ಆಯ್ದುಕೊಂಡೆವೆಂದರೆ, ನಮ್ಮ ಸ್ವಯಂ ನಿರ್ಧಾರವನ್ನು ಸಾಮೂಹಿಕ ನಿರ್ಧಾರಕ್ಕೆ ಮೌನಸಮ್ಮತಿಯ ಮೂಲಕ ಅಧೀನಗೊಳಿಸಿಕೊಂಡಿದ್ದೇವೆ ಎಂದಾಗುತ್ತದೆ. ಇದರರ್ಥ ನಾವು ನಮ್ಮ ವಾಕ್ಸ್ವಾತಂತ್ರ್ಯದ ಅಥವಾ ವಿರೋಧಿಸುವ ಹಕ್ಕನ್ನು ಕಳೆದುಕೊಂಡೆವು ಎಂದೇ? ಹಾಗೇನಲ್ಲ. ನಮ್ಮ ವ್ಯಕ್ತಿಗತ ವಾಕ್ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ, ತಾರತಮ್ಯ ಗ್ರಹಿಕೆ ಮತ್ತು ಭಿನ್ನಾಭಿಪ್ರಾಯದ ಸಾಮರ್ಥ್ಯ, ಮಾತುಕತೆ ಹಾಗೂ ವಾದದ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ಬಹು ಮುಖ್ಯ. ಈ ವ್ಯಕ್ತಿ ಸ್ವಾತಂತ್ರ್ಯಗಳು ಹೆಮ್ಮೆಯಿಂದ ಪ್ರತಿಷ್ಠಾಪಿಸಲ್ಪಟ್ಟು ದೃಢವಾಗಿ ರಕ್ಷಿತವಾಗಿರುವುದರಿಂದ ಮಾತ್ರವೇ ಪ್ರಜಾಪ್ರಭುತ್ವ ಕಾರ್ಯಶೀಲವಾಗಿರುವುದು. ನಾವು ವ್ಯಕ್ತಿಸ್ವಾತಂತ್ರ್ಯಕ್ಕಾಗಿ ಆಗ್ರಹಪೂರ್ವಕವಾಗಿ ಹೋರಾಡುವವರಾಗುವ ಮೊದಲು, ಜವಾಬ್ದಾರಿಯುತ ಪ್ರಜೆಗಳಾಗಿರುವುದೂ ಮುಖ್ಯ. ಜಾತಿ, ಧರ್ಮ, ಲಿಂಗ ಅಥವಾ ಆದರ್ಶಗಳ ಆಧಾರದ ಮೇಲೆ ಗುಂಪುಗಳನ್ನು ಕಟ್ಟುವ ಮಾರ್ಗಗಳನ್ನು ಹುಡುಕಿಕೊಂಡು ಸಾಮೂಹಿಕವಾಗಿ ಮತ ಗಳಿಸುವ ಒಂದು ವ್ಯವಸ್ಥೆಯು ನಿಜವಾದ ಪ್ರಜಾಪ್ರಭುತ್ವವಲ್ಲ. ಅದು ಪ್ರಜಾಪ್ರಭುತ್ವದ ವೇಷದಲ್ಲಿರುವ ಊಳಿಗಮಾನ್ಯ ಪದ್ಧತಿ.
ಅನುಶಾಸನಗಳ ಸಂಸ್ಕೃತಿಯಲ್ಲ: ಒಂದು ವಿಶ್ವಾಸಾರ್ಹ ಆಧ್ಯಾತ್ಮಿಕ ಪ್ರಕ್ರಿಯೆಯಂತೆ ವರ್ತಿಸುತ್ತಿರುವ ಪ್ರಜಾಪ್ರಭುತ್ವವು ವ್ಯಕ್ತಿಸ್ವಾತಂತ್ರ್ಯದ ಕಲ್ಪನೆಯ ಮೇಲೆ ಆಧಾರಗೊಂಡಿದೆ. ಆದರೆ ವ್ಯಕ್ತಿಗಳು ಜನಪ್ರಿಯವಾದ ರಾಜಕೀಯ ಹಾಗೂ ಮತಧರ್ಮದ ಪ್ರಚಾರಗಳ ಮೋಹವನ್ನೂ ಮೀರಿ ನೋಡಿದಾಗಲೇ ನಿಜವಾದ ಪ್ರಜಾಪ್ರಭುತ್ವದ ಹಾಗೂ ನಿಜವಾದ ಆಧ್ಯಾತ್ಮಿಕತೆಯ ಉದಯವಾಗುವುದು. ಎರಡೂ ವಿಷಯಗಳಲ್ಲೂ, ವ್ಯಕ್ತಿಯು ಶ್ರೀಮಂತವರ್ಗದವರ ಒತ್ತಡ ಹಾಗೂ ಸ್ವಜನ ಪಕ್ಷಪಾತ, ಸಂಕುಚಿತ ಸಾಮೂಹಿಕ ಆಸಕ್ತಿಗಳು ಹಾಗೂ ಅಧಿಕಾರಕ್ಕಾಗಿ ಪ್ರಭಾವ ಬೀರುವ ಶಕ್ತಿಗಳಿಂದ ಹೊರಬರಬೇಕು. ಭಾರತದ ಸೊಗಸೇನೆಂದರೆ, ನಾವು ಈ ರಾಷ್ಟ್ರವನ್ನು ವೈವಿಧ್ಯಗಳ ಆಧಾರದ ಮೇಲೆ ರೂಪಿಸಿಕೊಂಡಿದ್ದೇವೆ. ಏಕರೂಪತೆಯು ರಾಷ್ಟ್ರರಚನೆಗೆ ಸೂತ್ರವಾಗಿದೆ. ಜನರ ಗುಣಲಕ್ಷಣ, ಆಹಾರ ಪದ್ಧತಿ, ವೇಷಭೂಷಣ, ಸಂಗೀತ ಮತ್ತು ನಾಟ್ಯ, ಇವೆಲ್ಲವೂ ದೇಶದ ಪ್ರತಿ 100 ಕಿ.ಮೀ.ಗಳ ಅಂತರದಲ್ಲಿ ಬದಲಾಗುತ್ತದೆ. ಈ ಸಂಸ್ಕೃತಿಯು ಪ್ರಪಂಚದಲ್ಲಿ ಬಹಳ ಜಟಿಲ ಹಾಗೂ ವರ್ಣರಂಜಿತವಾಗಿದೆ. ನಾವು ಇದೇ ರೀತಿಯಲ್ಲಿರುವುದು ಅತ್ಯಂತ ಮುಖ್ಯ.
ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಉತ್ತೇಜಿಸಲು ಎಲ್ಲಿಯವರೆಗೆ ಧೈರ್ಯ ಮಾಡಿದ್ದೇವೆಂದರೆ ಇಲ್ಲಿ 1300ಕ್ಕಿಂತಲೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳಿವೆ, ಸುಮಾರು 30 ಅಧಿಕೃತ ಭಾಷೆಗಳ ಸಾಹಿತ್ಯ ಭಂಡಾರಗಳಿವೆ. ಇತರ ದೇಶಗಳಿಗೆ ಹೋಲಿಸಿದರೆ, ಬಹುಶಃ ನಮ್ಮ ಒಂದೇ ದೇಶದಲ್ಲಿ ಬಹು ಸಂಖ್ಯೆಯ ಕುಶಲಕಲೆಗಳಿವೆ ಎನಿಸುತ್ತದೆ. ನಮ್ಮ ದೇಶವು ಕೇವಲ ಪ್ರಪಂಚದ ಪ್ರತಿಯೊಂದು ಧಾರ್ವಿುಕ ಪಂಥಗಳ ನಿಲಯವೇ ಅಲ್ಲದೆ, ವಿವಿಧ ರೀತಿಯ ಉಪಾಸನೆಗಳ, ವ್ಯಕ್ತಿಯ ವಿವಿಧ ರೀತಿಯ ಆಂತರಿಕ ಯೋಗಕ್ಷೇಮವನ್ನು ಸಮೀಪಿಸುವ ಹಾಗೂ ಪ್ರಪಂಚವು ಎಂದೂ ಕಾಣದ ಅತ್ಯುನ್ನತ ಯೋಗಕ್ಷೇಮವನ್ನು ನೀಡುವ ಮನೆಯೂ ಆಗಿದೆ. ಆದರೆ ನಾವು ನಮ್ಮ ವೈವಿಧ್ಯವನ್ನು ಒಂದು ಸಾಧ್ಯತೆಯನ್ನಾಗಿ ಬಳಸಿಕೊಳ್ಳಬೇಕು. ನಾವು ನಮ್ಮ ದೇಶದ ಬಹುವಿಧದ ಅಂಶವನ್ನು ಬಳಸಿಕೊಳ್ಳಬೇಕು. ನಾವು ಹೊಂದಿರುವ ವರ್ಣರಂಜಿತ ಅಸ್ತಿತ್ವವನ್ನು ಒಂದು ಶ್ರೇಷ್ಠ ಆಸ್ತಿಯಂತೆ ನೋಡಿಕೊಳ್ಳಬೇಕು. ನಮ್ಮ ವಿಭಿನ್ನತೆಗಳನ್ನು ಸಂಭ್ರಮಿಸೋಣ, ಭೇದಭಾವನೆಗಳನ್ನಲ್ಲ.
ಹಿಂದೆಂದೂ ಇಲ್ಲದಂತಹ ಅವಕಾಶ: ನೀವು ಯಾವುದೇ ಸಿದ್ಧಾಂತವನ್ನು ನಂಬಿದ್ದರೂ, ಯಾವುದೇ ಜಾತಿ, ಮತ, ಕುಲಕ್ಕೆ ಸೇರಿದ್ದರೂ ದೇಶದ ಸಮಸ್ಯೆಗಳಿಗೆ ಅದು ಹೇಗೆ ಪರಿಹಾರ ಆಗಬಹುದೆಂಬುದನ್ನು ಕಂಡುಕೊಳ್ಳಬೇಕು. ನಿಮ್ಮ ಧರ್ಮ, ನಂಬಿಕೆ, ಸಂಸ್ಕೃತಿ ಈ ದೇಶಕ್ಕೆ ಹೇಗೆ ಉಪಯೋಗ ಆಗಬಹುದೆಂಬುದನ್ನು ಕಂಡುಕೊಳ್ಳಿ. ನಿಮ್ಮ ಧರ್ಮ ವ್ಯಕ್ತಿಗತ ಅನುಸರಣೆಯಾಗಿರಲಿ. ಜಾತಿ ಕೇವಲ ಈ ದೇಶದ ವಿವಿಧ ಸಂಸ್ಕೃತಿಗಳ ಕಸೂತಿಯಂತಿರಲಿ. ನಾವು ಸಿದ್ಧಾಂತ, ಧರ್ಮ, ಜಾತಿ ಮತ್ತು ಮತವನ್ನು ವಿಭಾಗಿಸುವ ಶಕ್ತಿಯನ್ನಾಗಿ ಬಳಸಬಾರದು.
ಹಲವಾರು ದೇಶಗಳಿಗಿಂತ ನಾವು 25-30 ವರ್ಷ ಹಿಂದುಳಿದಿದ್ದೇವೆ. ನಾವೊಂದು ದೇಶವಾಗಿ, ನಮ್ಮಲ್ಲಿರುವ ಬುದ್ಧಿವಂತಿಕೆ, ಜ್ಞಾನ, ಇತಿಹಾಸ, ಸಾಂಸ್ಕೃತಿಕ ಬಲದಿಂದ ಬೇರೆ ದೇಶಗಳೊಡನೆ ಬಲವಾದ ರಾಷ್ಟ್ರಸೌಹಾರ್ದದಿಂದ ಒಂದು ದೃಢವಾದ ನೆಲೆಯನ್ನು ಕಂಡುಕೊಂಡಿಲ್ಲ. ನಮ್ಮ ಜನರ ಜೀವನ ಮಟ್ಟವನ್ನು ಬೇರೆ ದೇಶಗಳೊಂದಿಗೆ ಹೋಲಿಸಿದರೆ, ಏಷ್ಯಾ ಖಂಡವೂ ಸೇರಿದಂತೆ ನಾವು ಬಹುತೇಕ ದೇಶಗಳೊಂದಿಗೆ ಸಮನಾಗಿಲ್ಲ. ಅದನ್ನು ಸಾಕಾರಗೊಳಿಸಲು ಇದೊಂದು ಸದವಕಾಶ.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರವೂ, 100 ಕೋಟಿಗೂ ಹೆಚ್ಚಿನ ಜನರ ಹೃದಯದಲ್ಲಿ ಮತ್ತು ಮನಸ್ಸುಗಳಲ್ಲಿ ಭವ್ಯ ಭಾರತದ ಕನಸು ಜ್ವಲಂತವಾಗಿದೆ. ಅವರೆಲ್ಲರೂ ಈ ರಾಷ್ಟ್ರವನ್ನು ಕಟ್ಟುವುದಕ್ಕಾಗಿ ಕಟಿಬದ್ಧರಾದರೆ, ಈ ಮಾನವ ಕೋಟಿಯ ಇತಿಹಾಸದಲ್ಲೇ ಯಾರೂ ಸಾಧಿಸದೇ ಇರುವುದನ್ನು ಸಾಧಿಸಬಹುದು- ಜನರ ಜೀವನ ಮಟ್ಟವನ್ನು ಮತ್ತೊಂದು ಎತ್ತರಕ್ಕೆ ಒಯ್ಯಬಹುದು. ಕೆಲವು ದೇಶಗಳಲ್ಲಿ ಇದನ್ನು ಬಲದಿಂದ ಮಾಡಲಾಗಿದೆ. ಆದರೆ ಯಾವುದೇ ಒಂದು ಪೀಳಿಗೆಯಲ್ಲಿ 60 ಕೋಟಿ ಜನರನ್ನು ಒಂದು ಜೀವನಮಟ್ಟದಿಂದ ಮತ್ತೊಂದು ಮೇಲ್ತರದ ಜೀವನಮಟ್ಟಕ್ಕೆ ಏರಿಸಿಲ್ಲ. ಇಂದು ಅಂತಹ ಅವಕಾಶ ನಮ್ಮ ಮುಂದಿದೆ.

