ಮೈಸೂರು:ದೀನ ದಲಿತರ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್, ಶೋಷಿತರಿಗೆ ವಂಚನೆ ಮಾಡುತ್ತಲೇ ಬರುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದರು.ಬಿಜೆಪಿ ಎಸ್‌ಟಿ ಮೋರ್ಚಾದಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ 'ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜನಾಂಗಕ್ಕೆ ಶೇ.7 ಮೀಸಲಾತಿ ನೀಡಬೇಕು.
ಪಕ್ಷಾತೀತವಾಗಿ ಹೋರಾಟ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಎಸ್ಟಿ ಪ್ರವರ್ಗಕ್ಕೆ ಅಗಿರುವ ಅನ್ಯಾಯವನ್ನು ಸರಿ ಪಡಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಸರ್ಕಾರ ಯಾವುದೇ ಪಕ್ಷದವರಿದ್ದರೂ ಜನಾಂಗಕ್ಕೆ ಅನ್ಯಾಯವಾಗ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಕೋರಿದರು. ಮೀಸಲಾತಿ ನೀಡುವ ವಿಷಯವಾಗಿ ಕೇಂದ್ರ ಸರ್ಕಾರ ಷೆಡ್ಯೂಲ್‌ನಲ್ಲಿ ಸೇರಿಸಬೇಕು ಎಂದು ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ತಮಿಳುನಾಡು ಸರ್ಕಾರದ ಪ್ರಕರಣದಲ್ಲಿ ಮೀಸಲಾತಿ ವಿಷಯದಲ್ಲಿ ಷೆಡ್ಯೂಲ್ ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದರು.ಕಾಂಗ್ರೆಸ್‌ನಲ್ಲಿ 15 ಜನ ಎಸ್ಟಿ ಪ್ರವರ್ಗದಿಂದ ಚುನಾಯಿತರಾದ ಶಾಸಕರಿದ್ದಾರೆ. ಎಲ್ಲರೂ ಒಟ್ಟಾಗಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಬೇಕು. ನಾನೇ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಿ, ಇನ್ನಿತರೆ ನಾಯಕರನ್ನು ಭೇಟಿ ಮಾಡಿಸುತ್ತೇನೆ. ಒಟ್ಟಾಗಿ ಬರಬೇಕು ಎಂದು ರಮೇಶ್ ಜಾರಕಿಹೊಳಿ ಬಹಿರಂಗ ಆಹ್ವಾನ ನೀಡಿದರು.ಧ್ವನಿ ಎತ್ತುತ್ತಿಲ್ಲ : ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಎಸ್ಟಿ ಪ್ರವರ್ಗಕ್ಕೆ ಕಾಂಗ್ರೆಸ್ ಮಾಡಿರುವ ದ್ರೋಹದ ಕುರಿತು ಕಾಂಗ್ರೆಸ್ ಶಾಸಕರು ಧ್ವನಿ ಎತ್ತುತ್ತಿಲ್ಲ. 187 ಕೋಟಿ ರೂ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಾಗಲೂ ತುಟಿ ಬಿಚ್ಚಲಿಲ್ಲ ಎಂದು ಟೀಕಿಸಿದರು. ರಾಜ್ಯಸಭೆ, ವಿಧಾನಸಭೆಗೆ ನಾಮ ನಿರ್ದೇಶನವಾಗುವ ಸಮಯದಲ್ಲಿ ಉಗ್ರಪ್ಪ ಪ್ರಚಾರಕ್ಕಾಗಿ ಮೀಸಲಾತಿ ಪರ ಮಾತನಾಡಿದರೂ ಬಳಿಕ ಸುಮ್ಮನಾದರು. ಕಾಂಗ್ರೆಸ್‌ಗೆ ಎಸ್ಟಿ ಮತ ಮಾತ್ರ ಬೇಕು. ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮೂಲೆ ಗುಂಪು : ಮಾಜಿ ಸಂಸದ ಬಿ.ಬಿ. ನಾಯಕ ಮಾತನಾಡಿ, ಡಿ.ದೇವರಾಜ ಅರಸು ಅವರಿಗೆ ಅಪಮಾನ ಮಾಡಿದ್ದ ಕಾಂಗ್ರೆಸ್, ಈಗ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಿದೆ. ಕೇವಲ ಅಧಿಕಾರಕ್ಕಾಗಿ ದೀನ, ದಲಿತರು, ಶೋಷಿತರ ಹೆಸರು ಹೇಳಿಕೊಳ್ಳುತ್ತಿದೆ ಎಂದು ದೂರಿದರು. ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಎಲ್ಲ ಪ್ರವರ್ಗದವರಿಗೆ ಶೇ.75 ಮೀಸಲಾತಿ ನೀಡಿದ್ದರು. ಆದರೆ ಚುನಾಯಿತ ಸರ್ಕಾರಗಳಿಗೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಾಜಿ ಸಚಿವ ರಾಜುಗೌಡ ನಾಯಕ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ತಿಪ್ಪರಾಜ ಹಲಾಲ್ದಾರ್, ಮಾಜಿ ಸಂಸದ ಬಿ.ವಿ.ನಾಯಕ, ಫಕೀರಪ್ಪ, ಮಾಜಿ ಶಾಸಕ ರಾಮಚಂದ್ರಪ್ಪ, ಮುಖಂಡರಾದ ಅಪ್ಪಣ್ಣ, ನಾಗೇಂದ್ರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿದ್ದರಾಜು, ನವೀನ್‌ಕುಮಾರ್, ರಾಮಕೃಷ್ಣ ಇತರರು ಇದ್ದರು.
ಇನ್ನಷ್ಟು ಓದಿ

