Monday, 18 Jan, 10.54 pm ವಿಜಯವಾಣಿ

ಕ್ರೀಡೆ
ಸ್ಪಿನ್​ ದಿಗ್ಗಜ ಬಿಎಸ್ ಚಂದ್ರಶೇಖರ್‌ಗೆ ಅನಾರೋಗ್ಯ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚೇತರಿಕೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದ ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಬಿಎಸ್ ಚಂದ್ರಶ್ರೇಖರ್ ಸಣ್ಣ ಪ್ರಮಾಣದ ಪಾರ್ಶ್ವವಾಯುವಿನ ಹೊಡೆತದಿಂದ ಬಳಲಿದ್ದು, ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 75 ವರ್ಷದ ಚಂದ್ರಶೇಖರ್ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಅವರ ಕುಟುಂಬ ಸೋಮವಾರ ತಿಳಿಸಿದೆ.

ಕಳೆದ ಶುಕ್ರವಾರ ಸಂಜೆಯ ವೇಳೆ ಚಂದ್ರಶೇಖರ್ ಆಯಾಸವಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರ ಮಾತುಗಳು ಸ್ವಲ್ಪ ತೊದಲುತ್ತಿದ್ದವು. ಅದರ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ಪತ್ನಿ ಸಂಧ್ಯಾ ಚಂದ್ರಶೇಖರ್ ಭಾಗ್ವತ್ 'ವಿಜಯವಾಣಿ'ಗೆ ತಿಳಿಸಿದ್ದಾರೆ. 'ತೀರಾ ಸಣ್ಣ ಪ್ರಮಾಣದ ಪಾರ್ಶ್ವವಾಯುವಿನ ಹೊಡೆತ ಎದುರಿಸಿರುವ ಚಂದ್ರಶೇಖರ್ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದ್ದು, ಬುಧವಾರ ಅಥವಾ ಗುರುವಾರ ಮನೆಗೆ ಮರಳಲಿದ್ದಾರೆ' ಎಂದು ಸಂಧ್ಯಾ ವಿವರಿಸಿದ್ದಾರೆ.

ಮೈಸೂರು ಮೂಲದ ಚಂದ್ರಶೇಖರ್‌ರನ್ನು ವೈದ್ಯರ ಸಲಹೆಯ ಮೇರೆಗೆ ಆಸ್ಟರ್ ಆರ್‌ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರು ರೆಗ್ಯುಲರ್ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದು, ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ ಎಂದು ಸಂಧ್ಯಾ ತಿಳಿಸಿದ್ದಾರೆ.

'ಮಿದುಳಿನಲ್ಲಿ ಅಲ್ಪಪ್ರಮಾಣದ ಬ್ಲಾಕ್ ಕಂಡುಬಂದಿದ್ದು, ಚಿಕಿತ್ಸೆಯ ನಂತರ ಅವರು ವಾರದೊಳಗೆ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಜೀವದ ಬಗ್ಗೆ ಯಾವುದೇ ಭೀತಿ ಇಲ್ಲ. ಚಂದ್ರ ಅವರ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಅಭಿಮಾನಿಗಳಿಗೆ ಸುದ್ದಿ ತಲುಪಿಸಿ. ಅವರ ವಿಲ್‌ಪವರ್ ಅತ್ಯಂತ ಬಲಿಷ್ಠವಾಗಿದೆ' ಎಂದು ಸಂಧ್ಯಾ ಹೇಳಿದ್ದಾರೆ.

ಭಾಗ್ವತ್ ಸುಬ್ರಮಣ್ಯ ಚಂದ್ರಶೇಖರ್ 1964ರಿಂದ 1979ರವರೆಗೆ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಭಾರತ ಪರ 58 ಟೆಸ್ಟ್ ಆಡಿ 242 ವಿಕೆಟ್ ಕಬಳಿಸಿದ್ದರು. ಬಿಷನ್ ಸಿಂಗ್ ಬೇಡಿ, ಇಎಎಸ್ ಪ್ರಸನ್ನ, ಎಸ್. ವೆಂಕಟರಾಘವನ್ ಅವರ ಜತೆಗೂಡಿ 1960, 70ರ ದಶಕದಲ್ಲಿ ಬಲಿಷ್ಠ ಸ್ಪಿನ್ ವಿಭಾಗ ರಚಿಸಿದ್ದ ಬಿಎಸ್ ಚಂದ್ರಶೇಖರ್, ಭಾರತ ತಂಡಕ್ಕೆ ಹಲವಾರು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದರು. ಅಮೋಘ ಕ್ರಿಕೆಟ್ ಸಾಧನೆಗಳಿಗಾಗಿ ಅವರು ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದಾರೆ.

ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!

ಬಾಲ್ಯದಲ್ಲಿಯೇ ಪೋಲಿಯೊದಿಂದಾಗಿ ಅವರ ಬಲಗೈ ಊನವಾಗಿತ್ತು. ಬಳಿಕ ಇದೇ ಕೈಯಿಂದ ಲೆಗ್ ಸ್ಪಿನ್ ಮಾಂತ್ರಿಕರಾಗಿ ಬದಲಾಗಿದ್ದ ಚಂದ್ರಶೇಖರ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಿಂತ (167) ಹೆಚ್ಚು ವಿಕೆಟ್ (242) ಗಳಿಸಿರುವ ಕೇವಲ ಇಬ್ಬರು ಕ್ರಿಕೆಟಿಗರ ಪೈಕಿ ಒಬ್ಬರೆನಿಸಿದ್ದಾರೆ. ಭಾರತ ಪರ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ್ದಾರೆ.

1971ರ ಓವಲ್ ಟೆಸ್ಟ್‌ನಲ್ಲಿ ಚಂದ್ರಶೇಖರ್ 38 ರನ್‌ಗೆ 6 ವಿಕೆಟ್ ಕಬಳಿಸಿದ ಸಾಧನೆಯ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿತ್ತು. ಬಳಿಕ 1978ರ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 104 ರನ್‌ಗೆ 12 ವಿಕೆಟ್ ಕಬಳಿಸಿದ್ದ ಅವರು, ಆಸೀಸ್ ನೆಲದಲ್ಲಿ ಭಾರತಕ್ಕೆ ಮೊಟ್ಟಮೊದಲ ಟೆಸ್ಟ್ ಗೆಲುವು ತಂದುಕೊಟ್ಟಿದ್ದರು.

ದೇಶೀಯ ಟಿ20 ಫೈಟ್​, ಕರ್ನಾಟಕ ಗೆಲುವು ಕಂಡರೂ ನಾಕೌಟ್ ಸಾಧ್ಯತೆ ಕ್ಷೀಣ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top