Tuesday, 22 Sep, 11.20 am ವಿಜಯವಾಣಿ

ಮುಖಪುಟ
ಸ್ತ್ರೀಯರೇ ದುಷ್ಟರಾದರೆ ಸಮಾಜದ ಗತಿ?

ಸ್ತ್ರೀ-ಪುರುಷರನ್ನು ಭಿನ್ನ ಕಾರ್ಯಗಳಿಗಾಗಿಯೇ ದೇವರು ಸೃಷ್ಟಿಸಿದ್ದಾನೆ, ಎರಡೂ ಒಂದೇ ಅಲ್ಲ, ಇಲ್ಲಿ ಸಮ, ವಿಷಮ ಪ್ರಶ್ನೆ ಸಲ್ಲ ಎಂಬುದು ರಸ್ಕಿನ್​ನ ವಾದ. ಗಂಡಸು ಬೇಟೆಯಾಡುತ್ತಾನೆ, ಗೃಹದಾಚೆಗೆ ಅವನ ಕಾರ್ಯ. ಕುಟುಂಬ ಭರಣ, ರಕ್ಷಣೆ, ಇತ್ಯಾದವು ಅವನ ಪಾಲು. ಗೃಹದ ಓರಣ, ಎಲ್ಲರನ್ನೂ ಸಂಭಾಳಿಸುವುದು, ಮಕ್ಕಳಿಗೆ ಮಾರ್ಗದರ್ಶನ ಇತ್ಯಾದಿ ಇವಳದು.

'ಸ್ತ್ರೀಸಮಾನತೆ' ಕೂಗಿನ ಅತಿರೇಕಿಗಳ ಗಮನಕ್ಕಾಗಿ, ಅವರು ಗಮನಿಸದ ಅಂಶಗಳ ಬಗೆಗೆ ಇಲ್ಲಿ ಅವಲೋಕನ ಉಚಿತವೆನಿಸುತ್ತದೆ. ಸಂದರ್ಭ, ಈಗಿನ ರಾಗಿಣಿ, ಸಂಜನಾ, ಕೇರಳ ಮೂಲದ ಬಂಗಾರ ಕಳ್ಳಸಾಗಣೆಯ ಮಾನಿನಿ, ಹಿಂದಿನ ನೀರಾ ರಾಡಿಯಾ, ಇನ್ನೂ ಇತರೇತರರ ಹಿನ್ನೆಲೆಯಲ್ಲಿ ನೋಡುವುದೂ ಇದೆ. ಭಗವದ್ಗೀತೆಯಲ್ಲಿ ಅರ್ಜುನನ ವಿಷಾದ ಪ್ರಸಂಗದಲ್ಲಿ ಈ ಮಾತು-ಶೀರ್ಷಿಕೆಯದು ಬರುತ್ತದೆ. 'ಸ್ತ್ರೀಯರೆಲ್ಲ ದುಷ್ಟರಾದರೆ ಸಮಾಜದಲ್ಲಿ ಅವ್ಯವಸ್ಥೆ, ಕೋಲಾಹಲ, ಅರಾಜಕತೆ, ಅಸ್ಥಿರತೆ ಉಂಟಾಗುತ್ತದೆ'-ಅಂತ. 'ಸ್ತ್ರೀಷು ದುಷ್ಟಾನು ವಾಷ್ಣೇನಯ ಜಾಯತೇ ವರ್ಣ ಸಂಕರತೆ' ಎಂದು. 'ದುಷ್ಟರು' ಎಂದರೆ 'ವಿಲನ್ಸ್' ಎಂದರ್ಥದಲ್ಲಿ ಅಲ್ಲ. 'ದುಷ್ಟರು, ದೂಷಿತರು, ದೋಷವುಳ್ಳವರು, ಕಳಂಕಿತರಾದವರು, ಚಾರಿತ್ರ್ಯ ಕಳಕೊಂಡವರು, 'Fallen' ಎಂಬ ವಿಶಾಲ, ಸಾಮಾಜಿಕ ಹಿನ್ನೆಲೆಯಲ್ಲಿ ಈ ಶಬ್ದವನ್ನು ನೋಡಿದಾಗ ಈಗ ಡ್ರಗ್ಸ್ ದಂಧೆಯಲ್ಲಿ ವ್ಯಾಪಾರ, ಹಣ ಶೇಖರಣೆಯ ಸಾಧಕರಾಗಿ, ದೊಡ್ಡ ಕುಳಗಳ ಏಜೆಂಟರಾಗಿ, ಗಾಳವಾಗಿ, ಸಿಕ್ಕಿಕೊಂಡ ಎಲ್ಲರೂ, ಹಿಂದಿನ, ಇಂದಿನ ಎಲ್ಲರೂ ರಾಜಕಾರಣಿಗಳೂ, ಮಂತ್ರಿಗಳೂ, ಎಂ.ಎಲ್.ಎ, ಎಂಪಿಗಳೂ, ನಟಿಯರೂ ಸೇರುತ್ತಾರೆ.

ಅರ್ಜುನನ ಪ್ರಶ್ನೆಯ ಹಿನ್ನೆಲೆ ಬೇರೆಯಿದ್ದೀತು. 'ಇಷ್ಟು ಕೋಟಿ ಜನ ಯೋಧರು ಯುದ್ಧದಲ್ಲಿ ಸತ್ತು, ಅವರ ಮಡದಿಯರೆಲ್ಲ ವಿಧವೆಯರಾದರೆ ಬೇರೆ ಪುರುಷರ ಸಂಗದಲ್ಲಿ ಉಳಿದ ಯೌವ್ವನ, ಆಯುಷ್ಯ ಕಳೆಯುತ್ತ, ವ್ಯಭಿಚಾರದಲ್ಲಿ ಹುಟ್ಟಿದ ಮಕ್ಕಳಿಗೆ ಗೌರವ, ಉದ್ಯೋಗ, ಪದವಿ, ಪ್ರತಿಷ್ಠೆಗಳು ಸಿಗದೆ, ಅದಕ್ಕಾಗಿ ಕಲಹ, ಅಂತರ್ಯುದ್ಧ, ರಾಜಕಾರಣಿಗಳ ಆಶ್ರಯದಲ್ಲಿ ಇತರರನ್ನು ಕೊಲ್ಲುವ ವಿಷಕನ್ಯೆಯರಾಗಿಯೂ, ಹೇಗೋ, ಸಮಾಜ ಕೆಡುತ್ತದೆ' ಎಂಬುದು ಅವನ ಆತಂಕ! ಯುದ್ಧವಾದರೆ ಈ ಪರಿಣಾಮ ಎಂಬುದು ಅವನ ವಾದ. ಅರ್ಜುನ ಓಡಿ ಹೋದರೂ ಅದೇ ಪರಿಣಾಮ ಎಂಬುದು ಗೀತಾಚಾರ್ಯನ ವಾದ. ಸ್ತ್ರೀಯರ ಆಧಿಪತ್ಯ, ರಾಜಕೀಯ ಕಿತಾಪತಿಗಳಿಗೆ ಹಿಂದಿನ ಈಜಿಪ್ತಿನ ರಾಣಿ ಕ್ಲಿಯೋಪಾತ್ರಾ, ಇಂಗ್ಲೆಂಡಿನ ರಾಣಿ ಮೊದಲನೇ ಎಲಿಜಬೆತ್, ಗ್ರೀಸಿನ ರಾಣಿ ಹೆಲನ್, ಇಂಗ್ಲೆಂಡಿನ 'ಬ್ಲಡಿ ಮೇರಿ' ಇಂಥವರು ಕುಖ್ಯಾತ ಉದಾಹರಣೆಗಳು. ಈಚೆಗೆ? ಭಾರತದ ಸರ್ವಾಧಿಕಾರಿ, ತುರ್ತು ಪರಿಸ್ಥಿತಿಯ ನಾಯಕಿ, ಇಂದಿರಾರನ್ನು ಎಲ್ಲಿ ಸೇರಿಸುತ್ತೀರಿ? ಅವರ ಪೂರ್ವಾಪರ ಚರಿತ್ರೆಗಳು ಇತರರನ್ನು ಹಿಂದಿಕ್ಕುತ್ತವೆ. ಸೋನಿಯಾ ದರ್ಬಾರು ನಡೆದ ಕಥೆ ನಾನು ಬರೆಯುವುದೇ ಬೇಡ.

ನೇಪಾಳದ ಓಲಿಯವರನ್ನು ಬುಟ್ಟಿಗೆ ಹಾಕಿಕೊಂಡು, ಕಮ್ಯುನಿಸಂನ ಏಜೆಂಟರನ್ನಾಗಿಸಿದ, ಚೀನೀ ರಾಯಭಾರಿಣಿ, 'ಕ್ಸಿ' ಅವರ ನೇಮಕಾತಿಯ ವಿಷಕನ್ಯೆಯ ಕಥೆ ತೀರಾ ಇತ್ತೀಚಿನದು. 'ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ' ಎಂದವರು ಲೋಕ ಬಿಟ್ಟ ಸಂನ್ಯಾಸೀ ವರ್ಗದವರು. ಯಾವುದು ಮಾಯೆಯಲ್ಲ?

ಇಬ್ಬರು ಸ್ತ್ರೀಯರು ಅಸಹಾಯಶೂರನಾದ ದಶರಥನ ಯೋಜನೆಯನ್ನೇ ತಲೆಕೆಳಗಾಗಿಸಿ, ರಾಮನನ್ನೇ ಕಾಡಿಗೆ ಕಳುಹಿಸಿದರಲ್ಲ? ಇದು ಮಾಯೆಯಲ್ಲದೆ ಬೇರೇನು? ವಾಜಪೇಯಿ ಅವರ ಪ್ರಥಮ ಸರ್ಕಾರಕ್ಕೆ ಇದೇ ಗತಿ ತಂದ ಜಯಲಲಿತಾ, ಮಮತಾ ಸಾಮಾನ್ಯರೇ? ಶಶಿಕಲಾ ಸಾಮಾನ್ಯರೇ? ಈಗಿನದೇನು? ಯಾವಾಗಿನದೇನು? ರಾವಣನನ್ನು ರಾಮ ಬಾಣಕ್ಕೆ ತುತ್ತಾಗಿಸಿ ಲಂಕೆಯನ್ನೇ ನಾಶ ಮಾಡಿದ ಶೂರ್ಪಣಖಿ ಸಾಮಾನ್ಯಳೇ? ಅವಳ ಗಂಡ-'ವಿದ್ಯುಜ್ವಿಹ್ವ'-ಎಲೆಕ್ಟ್ರಿಕ್ ಟಂಗ್ಡ್' ಎಂಬುವವನು ಯಾವ ಪಾರ್ಟಿಯವನೋ? ರಾವಣ ಕೊಂದುದಕ್ಕೆ ಇವಳು ಪರಿಹಾರ ಕೇಳಿದಳು-'ರಾಜಕೀಯ ಅಧಿಕಾರ ಕೊಡು' ಅಂತ! ಸೋತವರನ್ನೆಲ್ಲ ಗವರ್ನರ್ ಆಗಿ ಮಾಡುವ, ಕಾಂಗ್ರೆಸ್ ಪರಿಪಾಠಕ್ಕೆ ಅದು ಆದಿ! ಜನಸ್ಥಾನಕ್ಕೆ ಇವಳನ್ನು ಗವರ್ನರ್ ಮಾಡಿದ ರಾವಣ, ಇವಳ ಕೈಕೆಳಗೆ ಖರದೂಷಣ ತ್ರಿಶಿರಾದಿಗಳ ಸೇನೆಯನ್ನೇ ನಿಯೋಜಿಸಿದ.

ಇವಳದು ಮೂರು ಪಾಯಿಂಟ್ ಪ್ರೋಗ್ರಾಂ. 'ಪಿಬ, ವಿಹರ, ರಮಸೈ ಭುಂಕ್ಷ ್ವೋಗಾನ್'-'ಕುಡಿ-ಮಾದಕದ್ರವ್ಯ ಸೇವಿಸಿ ಮತ್ತನಾಗು, ಸ್ತ್ರೀ-ಪುರುಷ ಭೋಗ ಮಾಡು, ಬೇಕಾದ್ದು ಅನುಭವಿಸು' ಎಂದು. ಇವಳೂ ಅಲ್ಲಿ ರಾವಣನೂ ಹೇಳುತ್ತಾರೆ. 'ಸೀತೆಯನ್ನು ನಾನು ಕೊಂದು, ತಿಂದು, ತೇಗುತ್ತೇನೆ. ನನ್ನೊಡನೆ 'ತತಃ ಪರ್ವತ ಶೃಂಗಾಣಿ, ಏನಾನಿ ವಿವಿಧಾನಿಚ| ಪಶ್ಯನ್ ಸಹ ಮಯಾಕಾಂತ, ದಂಡಕಾನ್, ವಿಚರಿಷ್ಯಸಿ' ಅಂತ ನಾಚಿಕೆ ಬಿಟ್ಟು ಶ್ರೀರಾಮನಿಗೆ ಇವಳು ಹೇಳುವುದು, ರಾಗಿಣಿ, ಸಂಜನಾ ಇನ್ನಿತರರ ಮಾತು, ರೀತಿಗಳಿಗೆ ಒಪುಪತ್ತದೆ. 'ಬೆಟ್ಟ, ನದಿತೀರ, ವಿಹಾರಸ್ಥಳಗಳು-ಊಟಿ, ಶಿಮ್ಲಾ, ಕೊಡೈಕನಾಲ್, ಈಗ ಲಂಕಾ, ಕ್ಯಾಸಿನೋ ಪಾರ್ಟಿ-ಇಲ್ಲೆಲ್ಲ ಸುತ್ತಾಡುತ್ತ, ನನ್ನೊಡನೆ ಭೋಗಿಸಿ, ಸುಖವಾಗಿರು' ಎಂಬ ಯೋಜನೆ ಹಾಕಿಕೊಡುತ್ತಾಳೆ. ನೆಹ್ರೂ ತಂಗಿ ವಿಜಯಲಕ್ಷ್ಮೀ ಪಂಡಿತ್, ನೆಹ್ರೂ ಕಾಲದಲ್ಲೇ ಬ್ರಿಟನ್​ಗೆ ಹೈಕಮಿಷನರ್​ರಾಗಿ ನೇಮಿಸಲ್ಪಟ್ಟು, 'Butterfly Pandit' ಎಂಬ ಬಿರುದನ್ನು ಸಂಪಾದಿಸಿದ್ದರು! ತಿಳಿಯಿತೆ? 'ಬಟರ್​ಫ್ಲೈ' ಎಂದರೆ ಚಿಟ್ಟೆ, ಪಾತರಗಿತ್ತಿ. ಯಾವ ಹೂವಿನ ಮೇಲೂ ಬಹಳ ಹೊತ್ತು ಕೂತುಕೊಳ್ಳದ ಸಣ್ಣ ಜಂತು! ಎಂತಹ ಉದಾಹರಣೆ?

ಇಲ್ಲಿ ಅಣ್ಣ ತಂಗಿಯರದು ಒಂದೇ ಚಾಳಿ, ಜಾಲ! ಇಲ್ಲೆಲ್ಲ ಸ್ತ್ರೀಸಮಾನತೆ ಕೂಗುಮಾರಿಯ ಅಬ್ಬರದವರು ಮಾತೆತ್ತುವುದೇ ಇಲ್ಲ. ಇವರು ಶೋಷಿತರೋ? ಶೋಷಕರೋ? ಹೇಳಿಬಿಡಿ. ಅದೇ ರಾಮಾಯಣ ಕಾಲದಲ್ಲೇ ಸೀತೆ, ಮಂಡೋದರಿ, ಶಬರಿ, ಕೌಸಲ್ಯೆ, ಸುಮಿತ್ರೆಯರಂಥ ನಾರೀ ಮಣಿಯರೂ ಇದ್ದರು! ಊರ್ವಿುಳೆಯ ತ್ಯಾಗ ಕಡಿಮೆಯದೇ? ಲೋಕದಲ್ಲಿ ಈಗಲೂ ಸದಾಚಾರ, ಸಚ್ಚಾರಿತ್ರ್ಯದಲ್ಲಿರುವ ಕೋಟಿ ಕೋಟಿ ಭಾರತ ಸ್ತ್ರೀಯರಿದ್ದಾರೆ. ಶ್ರೀರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ಮಾತೆಯವರ ಶೀಲ, ತ್ಯಾಗ, ಸೇವೆ, ಸಂಯಮ, ಅನುಕರಿಸಿದ ಎಷ್ಟು ಜನರಿಲ್ಲ? ಕಳಂಕಿತ ಚಾರಿತ್ರ್ಯರು, ಸಿನಿಮಾ, ನಾಟಕ, ರಾಜಕೀಯಗಳಲ್ಲಿರುತ್ತ, ಕೆಟ್ಟ ರೋಲ್ ಮಾಡೆಲ್​ಗಳಾಗಿರುವುದು, ಇವರಿಗೇ ಪ್ರಚಾರ ಸಿಗುವುದೂ ಭಾರತದ ದುರಂತ! ಸಾಮಾಜಿಕ ಕ್ಷೇಮಕ್ಕೆ ಇವರನ್ನು ಬದಿಗಿಟ್ಟು ಪ್ರಚಾರ ತಡೆಯುವುದನ್ನು ಟಿ.ವಿ.ವಾಹಿನಿಗಳು ಮಾಡುವುದಿಲ್ಲ. ಅವರೇ ಇವರಿಗೆ ಪ್ರಚಾರ ಸಾಮಗ್ರಿ.

ರಾಜಕೀಯ ಎಂದೆನಲ್ಲ? ಹೇಳಿಬಿಡುತ್ತೇನೆ. ಅಧಿಕಾರ, ಚುನಾಯಿತ ಸ್ಥಾನಗಳಲ್ಲಿ ಶೇಕಡ 33 ಮೀಸಲಿಟ್ಟು ಸ್ತ್ರೀಯರನ್ನು ಕುಟುಂಬ ನಿರ್ವಹಣಾಚೆಗೆ ತರುವ ಕಾಯ್ದೆಯ ರೀತಿ ಒಪ್ಪಿಗೆಯಾಗದವರಲ್ಲಿ ನಾನು ಒಬ್ಬ ಇದ್ದೇನು? ಹುಡುಗ-ಹುಡುಗಿಯರು ಮನೆಯಲ್ಲಿ ಹೇಳುವ ಕೇಳುವವರಿಲ್ಲದೆ ಇಂದು ಸಂಜನಾ, ರಿಯಾ, ರಾಗಿಣಿಯರಾಗುತ್ತಿರುವುದಕ್ಕೆ, ಇವರ ಬೆನ್ನು ಬಿದ್ದ ಹುಡುಗಿಯರಿಗೆ ಯಾರು ಹೊಣೆ? ಇತ್ತ ಯಾರಾದರೂ ಮಾತಾಡುತ್ತಾರೆಯೇ?

ಜಾನ್ ರಸ್ಕಿನ್ ಎಂಬ ಚಿಂತಕ, ಬರಹಗಾರ 'Sesame and Lillies' (ಸೆಸೇಮ್ ಆಂಡ್ ಲಿಲ್ಲೀಸ್) ಎಂಬ ಅದ್ಭುತ ಗ್ರಂಥ ಬರೆದ. ಅದನ್ನು ಅನೇಕ ವರ್ಷ ಪಠ್ಯವನ್ನಾಗಿ ನಾನು ಪಾಠ ಮಾಡಿ, ದಾರಿ ತಪ್ಪಿದ, ತಲೆ ತಿರುಗಿದ ಹುಡುಗಿಯರನ್ನು ದಾರಿಗೆ ತರುವ ಯತ್ನ ಮಾಡಿದ್ದೇನೆ. ಆ ದಿನಗಳಲ್ಲಿ ನನ್ನ ಕ್ಲಾಸುಗಳು ಇತರ ವರ್ಗದ, ಇತರ ಕಾಲೇಜುಗಳ ಹುಡುಗಿಯರಿಂದಲೂ ತುಂಬಿರುತ್ತಿದ್ದು, ಪ್ರಶ್ನೋತ್ತರ ಲಹರಿಗಳಲ್ಲಿ, ವಿಚಾರಗಳು ಎಲ್ಲೂ ಸುತ್ತುತ್ತಾ, ನನ್ನನ್ನು ಕುತೂಹಲದಿಂದ ಆಲಿಸುತ್ತಿದ್ದರು. ನೆನಪಿದೆ. 'ಸೆಸೇಮ್ ಎಂದರೆ ಸಾಸಿವೆ ಹೂವು. ಲಿಲ್ಲೀಸ್ ಎಂದರೆ ಕನ್ನೈದಿಲೆ ಹೂವು. ಇದು ಸ್ತ್ರೀಸ್ವಭಾವ, ಕೋಮಲತೆ, ಸೌಂದರ್ಯ, ಮಾರ್ದವಗಳಿಗೆ ಪ್ರತೀಕ. ಸಾಸಿವೆ ಹಾಗಲ್ಲ! ಖಾರದ ಕಾಳು. ಅದರ ಹೂವು ನೋಡಲು ನೈದಿಲೆಯಷ್ಟು ಮೋಹಕ ಅಲ್ಲ. ಎರಡೂ ದೈವಸೃಷ್ಟಿಯೇ ಆದರೂ, ಸ್ವಭಾವ, ಕರ್ತವ್ಯ, ನಿರ್ದಿಷ್ಟ ಕ್ಷೇತ್ರಗಳು ಬೇರೆ ಬೇರೆಯೇ. ಹಾಗೆ ಸ್ತ್ರೀ-ಪುರುಷರನ್ನು ಭಿನ್ನ ಕಾರ್ಯಗಳಿಗಾಗಿಯೇ ದೇವರು ಸೃಷ್ಟಿಸಿದ್ದಾನೆ, ಎರಡೂ ಒಂದೇ ಅಲ್ಲ, ಇಲ್ಲಿ ಸಮ, ವಿಷಮ ಪ್ರಶ್ನೆ ಸಲ್ಲ ಎಂಬುದು ರಸ್ಕಿನ್​ನ ವಾದ.

ಗಂಡಸು ಬೇಟೆಯಾಡುತ್ತಾನೆ, ಗೃಹದಾಚೆಗೆ ಅವನ ಕಾರ್ಯ. ಕುಟುಂಬ ಭರಣ, ರಕ್ಷಣೆ, ಇತ್ಯಾದವು ಅವನ ಪಾಲು. ಗೃಹದ ಓರಣ, ಎಲ್ಲರನ್ನೂ ಸಂಭಾಳಿಸುವುದು, ಮಕ್ಕಳಿಗೆ ಮಾರ್ಗದರ್ಶನ ಇತ್ಯಾದಿ ಇವಳದು. ಮಕ್ಕಳ ಭಾಷೆಗೆ 'ಮಾತೃ'ಭಾಷೆ ಎನ್ನುತ್ತಾರೆ. 'ಪಿತೃಭಾಷೆ' ಎಂಬಿರುವೇನಿರಯ್ಯ? 'ಮಾತೃಭೂಮಿ' ಎನ್ನುತ್ತೇವೆ. 'ಪಿತೃಭೂಮಿ' ಶಬ್ದಕ್ಕೆ ಸ್ಮಶಾನ ಎಂದರ್ಥವಿದೆ. ಅದು ಹಿಟ್ಲರಿನ 'Fallen Land' ಮಾವೋನ ಪಿತೃಭೂಮಿ ಆದದ್ದು ನೋಡಿದ್ದಿರಲ್ಲ? ಮನುಷ್ಯನ ಆದಿಯಾದ ದೈವ ಕಲ್ಪನೆ-'ತಾಯಿ'-Mother worship.. ಆಫ್ರಿಕಾ, ಆಸ್ಟ್ರೇಲಿಯಾ, ಬೊರ್ನಿಯಾ, ಹಳೆಯ ಇಂಡೋನೇಷ್ಯಾ, ಸ್ಪಾನಿಷರು. ಪೋರ್ತಗಿಸರು ಹಾಳು ಮಾಡಿದ ದಕ್ಷಿಣ ಅಮೆರಿಕ, ಮೆಕ್ಸಿಕೋ, ಎಲ್ಲೆಲ್ಲೂ ಮಾತೃಪೂಜೆಯೇ ಇದ್ದು, ಅನಿವಾರ್ಯ ಹರಡುವಿಕೆಯಲ್ಲಿ ಕ್ಯಾಥೊಲಿಕರಲ್ಲೂ Mother Mary ಕಲ್ಪನೆಗೆ 'ಮ್ಯಾಡೊನಾ' ಆಗಿ ಪರಿಪಾಠವಾಯ್ತು. ಪ್ರಾಟೆಸ್ಟೆಂಟರು ಅದನ್ನು ನಿರಾಕರಿಸಿದರು. ಇಸ್ಲಾಂ ಮಾತೃಕಲ್ಪನೆ ಒಪ್ಪದೆ ಬರ್ಬರ ದಾರಿಯಲ್ಲಿ ಸಾಗಿದ್ದು 1300 ವರ್ಷಗಳ ಚರಿತ್ರೆ. ಬೇಂದ್ರೆ ಹೇಳುತ್ತಿದ್ದರು-'ತಾ' ಎಂದರೆ 'ಈ'ಯುವಳು ತಾಯಿ ಅಂತ.

ನಮ್ಮಲ್ಲಿ ಕೊಲಾರಮ್ಮ, ಪಟ್ಟಲದಮ್ಮ, ಕೊಲ್ಲಾಪುರಿಯಮ್ಮ, ಕಬ್ಬಾಳಮ್ಮ, ನಮ್ಮೂರಿನ ಒಳಕೋಟೆಯಮ್ಮ, ಕೆಂಪುಕೆರೆ-ಕೆಂಕೇರಮ್ಮ-ಹೀಗೆ ಸಾವಿರಾರು ಹಳ್ಳಿ, ಊರುಗಳಲ್ಲಿರುವ ಮಾತೃದೇವಾಲಯಗಳನ್ನು ನೋಡಿ! ಅದು ತಾಯಿಯ ಕಲ್ಪನೆ. ರಾಕ್ಷಸರಿಗೆ ಸಿಂಹಸ್ವಪ್ನವಾಗಿ, ಸಿಂಹವಾಹಿನಿಯಾಗಿರುವ ದುರ್ಗೆ, ಚಾಮುಂಡಿ, ಸಪ್ತಮಾತೃಕಿಯರು-ಈಚೆಗೆ ಝಾನ್ಸೀ ರಾಣಿ ಕಿತ್ತೂರ ಚೆನ್ನಮ್ಮ, ಕೆಳದಿಯ ರಾಣಿ, ಓಬವ್ವ ಇಂಥವರಿಗೆ ಮಾದರಿಯಾದರೂ ಇದು ಸಾರ್ವಕಾಲಿಕ ರೂಪವಲ್ಲ. ಆಗಂತುಕ, ಆರೋಪಿತ, ರೂಪಿ. ಸದಾಶಿವನು ಮಹಾರುದ್ರ ಕಾಲ ಆದಂತೆ. ಆದುದರಿಂದ ಕುಟುಂಬ ಸ್ವಾಸ್ಥ್ಯ, ಸಾಮ್ಯ ಕ್ಷೇಮಗಳಿಗೆ, ಆಧಾರಸ್ತಂಭರಾಗಿರಬೇಕಾದ ಸ್ತ್ರೀಯು ಈಚೆಗೆ ಅರುಂಧತೀ ರಾಯ್ ಆಗುವುದು, ಮೇಧಾ ಪಾಟ್ಕರ್ ಆಗುವುದು, ಮಾತಾಡಬೇಕಿದ್ದಲ್ಲಿ ಮೌನವಾಗಿರುವುದು, ಸುಮ್ಮನಿರಬೇಕಾದಲ್ಲಿ ಗಳಹುವುದೂ ಭಾರತಕ್ಕೆ ಕ್ಷೇಮವಲ್ಲ. ಮೋದಿಯವರೇ! ಈ ರಿಯಾ, ರಾಗಿಣಿ, ಸಂಜನಾ ಇಂಥವರ ರೋಲ್ ಮಾಡೆಲ್ ಅನ್ನು ಹಿಂಬದಿಗೆ ಸರಿಸುವ ಕರ್ತವ್ಯ ನಿಮ್ಮ ಸರ್ಕಾರದ ಮೇಲಿದೆ. ಬಿಟ್ಟರೆ, ಸೋನಿಯಾ ಆಧಿಪತ್ಯದಲ್ಲಿ ಎಲ್ಲರೂ ಪ್ರಿಯಾಂಕಾ, ಹಿಂದಿನ ಜಯಂತಿ ನಟರಾಜನ್, ರೇಣುಕಾ ಚೌಧರಿ, ತಾರಕೇಶ್ವರೀ ಸಿನ್ಹಾ, ಇಂತಹವರಾಗಿ, ಭಾರತೀಯ ಆದರ್ಶಗಳೇ ಮಾಯವಾಗಿ, ಹಾಳಾಗುತ್ತೇವೆ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಷಬೀಜದಿಂದ ಅಮೃತವೃಕ್ಷ ಹೇಗೆ ಬೆಳೆಯಬೇಕು?

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top