ಹುಬ್ಬಳ್ಳಿ: Temple anniversary ಇಲ್ಲಿಯ ಮಡಿವಾಳನಗರದ ಮಡಿವಾಳ ಮಾಚಿದೇವರ ದೇವಸ್ಥಾನದ 9ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಮಡಿವಾಳರ ಕೋ ಆಫ್ ಕ್ರೆಡಿಟ್ ಸೊಸೈಟಿ 29ನೇ ವಾರ್ಷಿಕೋತ್ಸವ ಸಮಾರಂಭ ಆಗಸ್ಟ್ 16ರಂದು ಏರ್ಪಡಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಸತೀಶ ಕೌತಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ರಘು ಕೌಟಿಲ್ಯಾ, ಮೇಯರ್ ದುರ್ಗಮ್ಮ ಬೆಜವಾಡ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಅನಿತಾ ಚಳಕೇರಿ, ಉದ್ಯಮಿ ಪ್ರಕಾಶ ಪಾಟೀಲ, ವೈ.ಡಿ. ನವಲಗುಂದ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಂತದ 46 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಸಮಾಜದ ಮುಖಂಡರಾದ ನವೀನಕುಮಾರ ಮಡಿವಾಳರ, ಸಂದೀಪ ಹುಣಚಿ, ಸುರೇಶ ಮಡಿವಾಳರ, ಶ್ರೀಕಾಂತ ಮಡಿವಾಳರ, ರಂಗಸ್ವಾಮಿ ಬಳ್ಳಾರಿ ಇತರರು ಗೋಷ್ಠಿಯಲ್ಲಿದ್ದರು.

