ಕಲಬುರಗಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ 45 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ತೀವ್ರ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಾರ್ವಜನಿಕರು, ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಬಿಸಿಲಿನಲ್ಲಿ ತಿರುಗಾಡುವುದು ಕಡಿಮೆ ಮಾಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯೆ ಬಿ.ಫೌಜಿಯಾ ತರುನ್ನುಮ್ ತಿಳಿಸಿದ್ದಾರೆ.ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಅತಿ ಹೆಚ್ಚು ಬಿಸಿಲು ಇರುವುದರಿಂದ ಅನಗತ್ಯವಾಗಿ ಮನೆಯಿಂದ ಹೊರಬರಕೂಡದು.
ಬಾಯಾರಿಕೆ ಇಲ್ಲದಿದ್ದರೂ ನಿಯಮಿತ ನೀರು ಕುಡಿಯಬೇಕು. ಹೊರಹೋಗಲೇಬೇಕಾದ ಸಂದರ್ಭದಲ್ಲಿ ಹಗುರವಾದ, ತಿಳಿಬಣ್ಣದ ಹತ್ತಿ ಬಟ್ಟೆ ಧರಿಸಿ ಮತ್ತು ಛತ್ರಿ ಅಥವಾ ಟೋಪಿ ಬಳಸಿ. ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಎಳನೀರು, ಮಜ್ಜಿಗೆ ಹಾಗೂ ಮನೆಯಲ್ಲಿ ಸಿದ್ಧಪಡಿಸಿದ ಓಆರ್ಎಸ್ ದ್ರಾವಣ ಸೇವಿಸಬೇಕು.ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಮಧ್ಯಾಹ್ನ ಬದಲು ಬೆಳಗ್ಗೆ ಅಥವಾ ಸಂಜೆ ವೇಳೆ ಕೆಲಸ ಮಾಡಬೇಕು. ಕಾರ್ಮಿಕ ಇಲಾಖೆ ಮಧ್ಯಾಹ್ನ 12ರಿಂದ 3ರವರೆಗೆ ಹೊರಾಂಗಣ ಕೆಲಸ ಕಡ್ಡಾಯವಾಗಿ ನಿಲ್ಲಿಸಲು ಆದೇಶಿಸಿದೆ. ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದು ಮಾಲೀಕರ ಜವಾಬ್ದಾರಿ. ಗಂಟೆಗೊಮ್ಮೆ 15 ನಿಮಿಷ ವಿಶ್ರಾಂತಿ ನೀಡಲು ಸೂಚಿಸಲಾಗಿದೆ.ಪಶು ಸಂಗೋಪನಾ ಇಲಾಖೆಯು ಜಾನುವಾರುಗಳಿಗೆ ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಕೆಲಸ ನೀಡಬಾರದೆಂದು ತಿಳಿಸಿದೆ. ದನಕರುಗಳಿಗೆ ನೆರಳಿನ ವ್ಯವಸ್ಥೆ ಜತೆ ಮೇವಿನ ಕೊರತೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ವಿದ್ಯುತ್ ಇಲಾಖೆ ಆಸ್ಪತ್ರೆ ಮತ್ತು ಕುಡಿಯುವ ನೀರಿನ ಪೂರೈಕೆ ಸ್ಥಳಗಳಿಗೆ ಅಡೆತಡೆಯಿಲ್ಲದೆ ವಿದ್ಯುತ್ ನೀಡಲು ಸನ್ನದ್ಧವಾಗಿದೆ.ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಬಿಸಿಲಿನ ತಾಪಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ವಿಶೇಷ ಟಕ ತೆರೆಯಲಾಗಿದೆ. ತಲೆಸುತ್ತು, ವಾಂತಿ ಅಥವಾ ವಿಪರೀತ ಸುಸ್ತು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಜಿಲ್ಲಾಡಳಿತದ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇನ್ನಷ್ಟು ಓದಿ
ಇನ್ನಷ್ಟು ಓದಿ

