Dailyhunt Logo
  • Light mode
    Follow system
    Dark mode
    • Play Story
    • App Story
ವನ್ಯಜೀವಿಗಳಿಗಾಗಿ ನೀರಿನ ಮೂಲ ಅಭಿವೃದ್ಧಿ I wild animal

ವನ್ಯಜೀವಿಗಳಿಗಾಗಿ ನೀರಿನ ಮೂಲ ಅಭಿವೃದ್ಧಿ I wild animal

ರವಿಂದ ಅಕ್ಲಾಪುರ ಶಿವಮೊಗ್ಗಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ ಜಿಲ್ಲೆಯಲ್ಲಿ ನೂರಾರು ಕೆರೆ (lake) ಗಳನ್ನು ಅಭಿವೃದ್ಧಿಪಡಿಸಿ ನೀರಿನ ಮೂಲಗಳನ್ನು ಸಂರಕ್ಷಿಸಲಾಗಿದೆ. ತ್ಯಾವರೆಕೊಪ್ಪ ಹುಲಿ (tiger) ಮತ್ತು ಸಿಂಹಧಾಮದಲ್ಲೂ ಕೆರೆಗಳನ್ನು ಅಭಿವೃದ್ಧಿ ಮಾಡಿರುವುದು ಇತಿಹಾಸ.
ಇದೀಗ ನಮ್ಮ ಕಾಡು-ನಮ್ಮ ಕೆರೆ ಯೋಜನೆ ಮೂಲಕ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಕೆರೆಗಳ ಪುನಶ್ಚೇತನಕ್ಕೆ ಧರ್ಮಸ್ಥಳ (dharmastala) ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ.
18 ಲಕ್ಷ ರೂ. ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧವಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುವ ಸಣ್ಣ ಕೆರೆಗಳಲ್ಲಿರುವ ಕಸ, ಕಡ್ಡಿ, ಹೂಳು ತೆಗೆದು, ಅದನ್ನು ಮತ್ತಷ್ಟು ವಿಸ್ತರಿಸುವುದು ಈ ಯೋಜನೆಯಲ್ಲಿ ಸೇರಿದೆ. ಹಳ್ಳಿಗಳಲ್ಲಿನ ಕೆರೆಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜತೆಗೆ ಸ್ಥಳೀಯ ಜನರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು.ಇಲ್ಲಿ ಕೇವಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವೇ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಕಾಮಗಾರಿಯಲ್ಲಿ ಯಂತ್ರೋಪಕರಣಗಳ ಬಳಕೆ, ಟ್ರಾೃಕ್ಟರ್ ಮೂಲಕ ಕೆರೆಗಳ ಹೂಳು ಸಾಗಣೆ ಮಾಡುವುದು ಎಲ್ಲವನ್ನೂ ಗ್ರಾಮಾಭಿವೃದ್ಧಿ ಯೋಜನೆ ಮೂಲಕವೇ ಮಾಡುತ್ತಿರುವುದು ವಿಶೇಷವಾಗಿದೆ.
ಈಗಾಗಲೇ ಗುರುತಿಸಿರುವ ಕೆರೆಗಳಲ್ಲಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ಮಳೆಗಾಲ ಆರಂಭವಾಗುವುದರೊಳಗಾಗಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲ ರೀತಿ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. "

ನಮ್ಮ ಊರು-ನಮ್ಮ ಕೆರೆ ಯೋಜನೆಯಲ್ಲಿ ಜನರ ಸಹಭಾಗಿತ್ವ ಪಡೆಯಲಾಗುತ್ತಿತ್ತು. ಹೂಳು ಸಾಗಿಸುವುದು ಅಲ್ಲಿನ ಜನರ ಜವಾಬ್ದಾರಿ ಆಗಿರುತ್ತಿತ್ತು. ಆದರೆ ಈಗ ಕೈಗೊಂಡಿರುವ ನಮ್ಮ ಕಾಡು-ನಮ್ಮ ಕೆರೆ ಯೋಜನೆಯಲ್ಲಿ ಎಲ್ಲವನ್ನೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವೇ ನಿರ್ವಹಣೆ ಮಾಡಲಾಗುತ್ತದೆ.

- ಯಶೋದಾ ಶಿವಮೊಗ್ಗ ಕ್ಷೇತ್ರಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಐದು ಸಾವಿರ ಪ್ರಾಣಿಗಳಿಗೆ ಅನುಕೂಲ

ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿನ ಸಕ್ರೆಬೈಲು ಹಾಗೂ 15ನೇ ಮೈಲಿಗಲ್ಲು ಕಾಡಿನಲ್ಲಿರುವ 8 ಕೆರೆಗಳನ್ನು ಅಭಿವೃದ್ಧಿ ಮಾಡುವುದರಿಂದ ಕಾಡಿನಲ್ಲಿರುವ ಐದು ಸಾವಿರ ಪ್ರಾಣಿಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಜನವರಿ ಬಳಿಕ ಈ ಅರಣ್ಯ ಪ್ರದೇಶದಲ್ಲಿರುವ ಸಣ್ಣ ಕೆರೆಗಳಲ್ಲಿ ನೀರಿನ ಸಂಗ್ರಹ ಇಲ್ಲದಂತಾಗುತ್ತದೆ. ಈ ಸಂದರ್ಭದಲ್ಲಿ ವನ್ಯಜೀವಿಗಳು ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗುವ ಸಂಭವವೇ ಹೆಚ್ಚು. ಇದು ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೂ ಕಾರಣವಾಗುತ್ತದೆ.ಅರಣ್ಯದೊಳಗಿನ ನೀರಿನ ಸೆಲೆ ನಶಿಸುವ ಪರಿಣಾಮ ಕಾಡು ಪ್ರಾಣಿಗಳು ಶಿವಮೊಗ್ಗ-ಮಂಗಳೂರು ಹೆದ್ದಾರಿ ದಾಟಿಕೊಂಡು ತುಂಗಾ ಹಿನ್ನೀರಿಗೆ ಬರಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಣ್ಣ ಪುಟ್ಟ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆಗಳೂ ಇವೆ. ಈ ಎಲ್ಲ ಕಾರಣದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿರುವ ಕಾರ್ಯ ಅತೀ ಮಹತ್ವದ್ದೆನಿಸಿದೆ. ಈ ಕೆರೆಗಳನ್ನು ಅಭಿವೃದ್ಧಿಪಡಿಸುವುದರಿಂದ ಕಾಡಿಗೆ ತೆರಳುವ ಸಕ್ರೆಬೈಲು ಬಿಡಾರದ ಆನೆಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಕಾಡು ಪ್ರಾಣಿಗಳಿಗೆ ನೀರೊದಗಿಸುವುದು ಮಾತ್ರವಲ್ಲದೇ ಅರಣ್ಯದೊಳಗೆ ಕಾಡು ಜಾತಿಯ ಸಸಿಗಳನ್ನು ನೆಟ್ಟು ಭವಿಷ್ಯದಲ್ಲಿ ಅದರ ಮೂಲಕ ಪ್ರಾಣಿಗಳಿಗೆ ಹಣ್ಣು ಸಿಗುವಂತೆ ನೋಡಿಕೊಳ್ಳುವ ಕೆಲಸವನ್ನು ಅನೇಕ ಕಡೆಗಳಲ್ಲಿ ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ.
ಮೊದಲ ಯೋಜನೆ ಯಶಸ್ವಿ
ನಮ್ಮ ಕಾಡು-ನಮ್ಮ ಕೆರೆ ಯೋಜನೆ ಇದೀಗ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಕಾರ್ಯಗತವಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ನಮ್ಮ ಕಾಡು-ನಮ್ಮ ಕೆರೆ ಯೋಜನೆ ಮೂಲಕ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ವರ್ಷ ಜುಲೈನಲ್ಲಿ ಒಟ್ಟು 10 ಕೆರೆಗಳನ್ನು ಅಭಿವೃದ್ಧಿಪಡಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸ್ವತಃ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಆ ಸಂದರ್ಭದಲ್ಲಿ ಒಟ್ಟು 14.11 ಲಕ್ಷ ರೂ. ವೆಚ್ಚದಲ್ಲಿ 10 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರಿಂದ ಹೆಚ್ಚುವರಿಯಾಗಿ8.53 ಕೋಟಿ ಲೀಟರ್ ನೀರು ಸಂಗ್ರಹವಾಗುತ್ತಿದೆ.

"

ಈವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲೆಯಲ್ಲಿ 67 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ತ್ಯಾವರೆಕೊಪ್ಪ ಸಿಂಹಧಾಮದಲ್ಲಿ 10 ಕೆರೆಗಳು ಹಾಗೂ ಆಗುಂಬೆ ಸಮೀಪ ಒಂದು ಕೆರೆಯನ್ನು ವನ್ಯಜೀವಿಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಸಕ್ರೆಬೈಲು ಅರಣ್ಯದಲ್ಲಿ ವನ್ಯಜೀವಿ ವಿಭಾಗ ಅನುಮತಿ ನೀಡಿದ ಪ್ರದೇಶದಲ್ಲಿ 8 ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತಿದೆ.

- ಮುರಳೀಧರ ಶೆಟ್ಟಿ ಜಿಲ್ಲಾ ನಿರ್ದೇಶಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ




ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani