ಡೆಹ್ರಾಡೂನ್/ನವದೆಹಲಿ : ಕರೊನಾ ಉಲ್ಬಣದ ಈ ಸಮಯದಲ್ಲಿ ಆಕ್ಸಿಜನ್ ನಂತರದಲ್ಲಿ ಅತಿಹೆಚ್ಚು ಬೇಡಿಕೆ ಇರುವ ವಸ್ತುವೆಂದರೆ ರೆಮ್ಡೆಸಿವಿರ್ ಆಯಂಟಿವೈರಲ್ ಚುಚ್ಚುಮದ್ದು. ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಲ್ಲಿ ವೈರಲ್ ಲೋಡ್ ಇಳಿಸಲು ಉಪಯೋಗಿಸುವ ಈ ಮದ್ದು ದುರ್ಲಭವಾಗಿದೆ. ಜೊತೆಗೇ ಕಳ್ಳ ಮಾರುಕಟ್ಟೆಯಲ್ಲಿ ಎಷ್ಟೋ ಪಟ್ಟು ಹೆಚ್ಚು ಹಣಕ್ಕೆ ಮಾರಾಟವಾಗುತ್ತಿದೆ.
ಇದೀಗ ನಕಲಿ ರೆಮ್ಡೆಸಿವಿರ್ ತಯಾರಿಸಿ ಮಾರಾಟ ಮಾಡುವ ದಂಧೆಯೂ ಆರಂಭವಾಗಿದೆ ಎನ್ನಲಾಗಿದೆ. ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ನಕಲಿ ರೆಮ್ಡೆಸಿವಿರ್ಅನ್ನು ವ್ಯಾಕುಲರಾದ ರೋಗಿಗಳ ಸಂಬಂಧಿಗಳಿಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿರುವ ಖದೀಮರು ಹೆಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ದುಡ್ಡಿಗಾಗಿ ನಕಲಿ ಔಷಧಿ ಮಾರುತ್ತಿರುವವರ ಬಗ್ಗೆ ಎಚ್ಚರದಿಂದಿರಲು ಜನರಿಗೆ ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಬಂದ ಉಪಯುಕ್ತ ಮಾಹಿತಿಯನ್ನನುಸರಿಸಿ ದೆಹಲಿ ಪೊಲೀಸರು ಉತ್ತರಾಖಂಡದ ಕೋತ್ದ್ವಾರದಲ್ಲಿ ನಕಲಿ ರೆಮ್ಡೆಸಿವಿರ್ (COVIPRI) ಇಂಜೆಕ್ಷನ್ಗಳನ್ನು ತಯಾರಿಸುತ್ತಿದ್ದ 'ಫಾರ್ಮಸಿಟಿಕಲ್' ಘಟಕವೊಂದನ್ನು ಪತ್ತೆ ಹಚ್ಚಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನಕಲಿ ಇಂಜೆಕ್ಷನ್ಗಳನ್ನು ಉತ್ಪಾದಿಸಿ ಒಂದು ವಯಲ್ಗೆ 25,000 ರೂ. ಬೆಲೆ ಪಡೆದು ಮಾರುತ್ತಿದ್ದ 5 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಎಸ್.ಎನ್.ಶ್ರೀವಾಸ್ತವ ಹೇಳಿದ್ದಾರೆ.
ಈ ಕಾರ್ಯಾಚರಣೆ ವೇಳೆ, ಮಾರಾಟಕ್ಕೆ ಸಿದ್ಧವಿದ್ದ 196 ನಕಲಿ ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ಜಪ್ತಿಗೊಳಿಸಲಾಗಿದೆ. ನಕಲಿ ಔಷಧವನ್ನು ಪ್ಯಾಕ್ ಮಾಡಲು ಇಟ್ಟುಕೊಂಡಿದ್ದ ಪ್ಯಾಕಿಂಗ್ ಮೆಷಿನ್ಗಳು, 3000 ಖಾಲಿ ವಯಲ್ಗಳನ್ನು ದೆಹಲಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ಮಾಡಿದಾಗ ಅದಾಗಲೇ 2,000 ನಕಲಿ ಇಂಜೆಕ್ಷನ್ಗಳನ್ನು ಔಷಧಿ ಪಡೆಯಲು ವ್ಯಾಕುಲರಾದ ಜನರಿಗೆ ಮಾರಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಕರೊನಾ ರೋಗಿಗಳಿಗೆ 'ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ' ಎಂದ ಪೊಲೀಸ್ !

