ಇತ್ತೀಚೆಗೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೃತ್ಯಗಳು ಹೆಚ್ಚಾಗುತ್ತಿವೆ. ಈ ಗಡಿಗಳನ್ನು ಮೀರಿ, ಪ್ರತಿಯೊಬ್ಬ ನಾಗರಿಕನೂ ಒಂದಾಗಿ ಸಮಾಜ ಹಾಗೂ ದೇಶವನ್ನು ಭವಿಷ್ಯದ ಆತಂಕದಿಂದ ಕಾಪಾಡುವ ಬೃಹತ್ ಆಂದೋಲನ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಯುವಜನರು ದುಶ್ಚಟಗಳಿಗೆ ದಾಸರಾಗುವುದು ಹೆಚ್ಚುತ್ತಿದೆ. ನಗರ ಪ್ರದೇಶಗಳಿಂದ ಹಳ್ಳಿಗಳಿಗೂ ಇದು ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜವನ್ನು ನಶೆ ಮುಕ್ತಗೊಳಿಸುವುದು ಕೇವಲ ಪೊಲೀಸ್ ಇಲಾಖೆ ಅಥವಾ ಸರ್ಕಾರದ ಕೆಲಸವಲ್ಲ. ಇಡೀ ಸಮಾಜವೇ ಜವಾಬ್ದಾರಿ ವಹಿಸಿಕೊಂಡು ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕಿದೆ ಎಂದರು. ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆ ತೊರೆದು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿ ಮಾಡುವ ಒಂದು ಯೂನಿಟ್ ರಕ್ತದಾನವು ಮೂರು ಜೀವಗಳನ್ನು ಉಳಿಸಬಲ್ಲದು. ಹಾಗಾಗಿ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೋಮಲ ಅಕ್ಕ ಮಾತನಾಡಿ, ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ದಿವ್ಯ ಜೀವನ ಹಾಗೂ ಅವರ ಸಮಾಜ ಸೇವೆಯನ್ನು ಸ್ಮರಿಸಿದರು. 70 ಬಾರಿ ರಕ್ತದಾನ ಮಾಡಿ ಸನ್ಮಾನ ಸ್ವೀಕರಿಸಿದ ಸೆಸ್ಕ್‌ನ ನಿವೃತ್ತ ಉದ್ಯೋಗಿ ರವಿಶಂಕರ್ ಮಾತನಾಡಿದರು. ವಿರಾಜಪೇಟೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಪೊಲೀಸ್ ಸಿಬ್ಬಂದಿ ರಕ್ತದಾನ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಗಗನ್, ರವಿಶಂಕರ್ ಸೇರಿದಂತೆ ಬ್ರಹ್ಮಕುಮಾರಿ ಕೇಂದ್ರದ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.