ಉಡುಪಿ:ಜಿಲ್ಲೆಯ ಅರ್ಹ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಮೀನುಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಮೀನುಗಾರರಿಗೆ ಉಚಿತವಾಗಿ 'ಮೀನುಗಾರಿಕಾ ಸಲಕರಣೆ ಕಿಟ್‌ಗಳನ್ನು ವಿತರಿಸಲಾಗುವುದು.
ಇದರೊಂದಿಗೆ, ಮೀನು ಮಾರಾಟವನ್ನು ಸುಲಭಗೊಳಿಸಲು 'ಮತ್ಸವಾಹಿನಿ' ಯೋಜನೆಯಡಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಖರೀದಿಗೆ ಧನಸಹಾಯ ನೀಡಲಾಗುತ್ತಿದ್ದು, ಕರಾವಳಿ ತಾಲೂಕುಗಳ ಮೀನುಗಾರರ ಸುರಕ್ಷತೆಗಾಗಿ ಉಚಿತ ಜೀವರಕ್ಷಕ ಸಾಧನಗಳನ್ನು ಸಹ ವಿತರಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಅತ್ಯಂತ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಆಸಕ್ತರು ಜುಲೈ 31ರ ಒಳಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
ಜೂ. 24ರಿಂದ 26ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ - vishwanews24
ಆನ್‌ಲೈನ್ ಅರ್ಜಿ ಸಲ್ಲಿಕೆಯ ನಂತರ ಅದರ ಮೂಲ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಉಡುಪಿ, ಕುಂದಾಪುರ ಅಥವಾ ಕಾರ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

