Dailyhunt Logo
  • Light mode
    Follow system
    Dark mode
    • Play Story
    • App Story
2024ರ ದುರಂತ ನೆನಪಿಸಿದ ವಯನಾಡ್‌ ಭೂ ಕುಸಿತ; ಅವಘಡಕ್ಕೆ ಕಾರಣ ವಿವರಿಸಿದ ಸರ್ಕಾರ

2024ರ ದುರಂತ ನೆನಪಿಸಿದ ವಯನಾಡ್‌ ಭೂ ಕುಸಿತ; ಅವಘಡಕ್ಕೆ ಕಾರಣ ವಿವರಿಸಿದ ಸರ್ಕಾರ

Vishwavani 2 weeks ago

ತಿರುವನಂತಪುರಂ, ಜು. 7: ತಡವಾಗಿ ಆರಂಭವಾದ ಮಾನ್ಸೂನ್‌ ಇದೀಗ ಅಬ್ಬರಿಸುತ್ತಿದೆ. ಅದರಲ್ಲೂ ಕೇರಳಂನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಜೋರಾಗಿ ಮಳೆ ಸುರಿಯುತ್ತಿದ್ದು, ವಯನಾಡ್‌ನಲ್ಲಿ ಭೂ ಕುಸಿತ (Wayanad Landslide)ಸಂಭವಿಸಿದೆ. 2024ರ ಭೀಕರ ದುರಂತವನ್ನು ನೆನಪಿಸುವ ಮಾದರಿಯಲ್ಲಿ ಬೃಹತ್‌ ಪ್ರಮಾಣದ ಮಣ್ಣಿನ ರಾಶಿ ಕುಸಿದು ಬಿದ್ದಿದ್ದು, ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಚರಣೆ ನಾಳೆಯೂ ಮುಂದುವರಿಯಲಿದೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ಕೋಝಿಕ್ಕೋಡ್‌ ಜಿಲ್ಲೆಯೊಂದಿಗೆ ಸಂಪರ್ಕ ಕಲ್ಪಿಸುವ ಆನೆಕಂಪೋಯಿಲ್-ಕಲ್ಲಾಡಿ- ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯ (Anakkampoyil - Kalladi - Meppadi Tunnel) ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮೀನಾಕ್ಷಿ ಸೇತುವೆಯ ಬಳಿ ಈ ಭೂಕುಸಿತ ಸಂಭವಿಸಿದೆ. ಇದು ಮಾನವ ನಿರ್ಮಿತ ದುರಂತ ಎಂದು ಕೃಷಿ ಸಚಿವ ಟಿ. ಸಿದ್ದಿಕ್‌ (T Siddique) ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪಶ್ಚಿಮ ಘಟ್ಟದಂತಹ ಸೂಕ್ಷ ಪರಿಸರದಲ್ಲಿ ನಡೆಯುವ ಬೃಹತ್‌ ಕಾಮಗಾರಿಗಳಿಂದಾಗುವ ಅನಾಹುತಗಳ ಬಗ್ಗೆ ಸಚಿವರ ಈ ಹೇಳಿಕೆ ಬೆಳಕು ಚೆಲ್ಲಿದ್ದು, ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಹಿಂದೆಯೇ ಪರಿಸರ ತಜ್ಞರು ಎಚ್ಚರಿಸಿದ್ದು, ಅವರ ಮಾತುಗಳು ಮುನ್ನೆಲೆಗೆ ಬಂದಿವೆ. ಸುರಂಗ ಕಾಮಗಾರಿಗಾಗಿ ಗುಡ್ಡ ಕೊರೆದು ವೈಜ್ಞಾನಿಕವಾಗಿ ಮಣ್ಣನ್ನು ವಿಲೇವಾರಿ ಮಾಡದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಸಚಿವ ಸಿದ್ದಿಕ್‌ ಹೇಳಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:

ಸಚಿವ ಸಿದ್ದಿಕ್‌ ಹೇಳಿದ್ದೇನು?

ಭೂ ಕುಸಿತದ ಬಗ್ಗೆ ಮಾಹಿತಿ ನೀಡಿದ ಅವರು ಸುರಂಗ ಕೊರೆದ ಮಣ್ಣನ್ನು ಸರಿಯಾಗಿ ವಿಲೇವಾರಿ ಮಾಡುವ ಬಗ್ಗೆ ಹಲವು ಬಾರಿ ಸೂಚಿಸಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ದುರಂತ ಸಂಭವಿಸಿದೆ ಎಂದು ದೂರಿದ್ದಾರೆ. ʼʼಸುರಂಗ ಯೋಜನೆ ಭಾಗವಾಗಿ ಸಂಗ್ರಹವಾದ ಮಣ್ಣು ಮತ್ತು ಕೆಸರನ್ನು ಅವೈಜ್ಞಾನಿಕವಾಗಿ ಸಿಕ್ಕ ಸಿಕ್ಕಲ್ಲಿ ಸುರಿದ ಪರಿಣಾಮವನ್ನು ನಾವಿಂದು ಎದುರಿಸುತ್ತಿದ್ದೇವೆ. ಈ ಬಗ್ಗೆ ಎಚ್ಚರಿಸಿದ್ದರೂ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಂಡಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆʼʼ ಎಂದು ಹೇಳಿದ್ದಾರೆ.

ದೇವರ ನಾಡನ್ನು ನಡುಗಿಸಿದ ಮತ್ತೊಂದು ಭೂಕುಸಿತ; ಟ್ಯಾಂಕರನ್ನು 10 ಅಡಿ ತಳ್ಳಿದ ಭೀಕರ ಪ್ರವಾಹ

ಆನೆಕಂಪೋಯಿಲ್-ಕಲ್ಲಾಡಿ- ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯಿಂದ ಪರಿಸರದ ಮೇಲಾಗುವ ಹಾನಿಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸಚಿವರ ಈ ಹೇಳಿಕೆ ಗಮನ ಸೆಳೆದಿದೆ. ಜೂನ್‌ 20ರಂದೇ ಸರ್ಕಾರ ಕಾಮಗಾರಿಯ ಮಣ್ಣಿನ ರಾಶಿಯನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಸೂಚಿಸಿತ್ತು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಸಣ್ಣ ಮಟ್ಟಿನ ಭೂಕುಸಿತವೂ ಸಂಭವಿತ್ತು. ಹಾಗಿದ್ದರೂ ಗುತ್ತಿಗೆದಾರರು ಸುರಂಗ ಕಾಮಗಾರಿ ನಡೆಯುವ ಸ್ಥಳದಿಂದ ಮಣ್ಣನ್ನು ವಿಲೇವಾರಿ ಮಾಡಿರಲಿಲ್ಲ.

ಏನಿದು ಯೋಜನೆ?

ಆನೆಕಂಪೋಯಿಲ್-ಕಲ್ಲಾಡಿ- ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯು ಕೋಝಿಕ್ಕೋಡ್‌ ಮತ್ತು ವಯನಾಡ್‌ ನಡುವಿನ ಪಯಣದ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಕಳೆದ ಬಾರಿಯ ಎಲ್‌ಡಿಎಫ್‌ ಸರ್ಕಾರದ ಮಹತ್ವಾಂಕಾಕ್ಷಿ ಯೋಜನೆಯಾದ ಇದರ ಬಜೆಟ್‌ ಬರೋಬ್ಬರಿ 2,134 ಕೋಟಿ ರುಪಾಯಿ. ಪದೇ ಪದೆ ಭೂಕುಸಿತ ಸಂಭವಿಸುವ ತಾಮರಶ್ಶೆರಿ ಘಾಟಿಗೆ ಪರ್ಯಾಯವಾಗಿ ಈ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಎರಡು ಲೇನ್‌ಗಳ, ಸುಮಾರು 8.1 ಕಿ.ಮೀ. ಉದ್ದದ ಈ ಸುರಂಗ ರಸ್ತೆ 2 ಜಿಲ್ಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಉತ್ತರ ಕೇರಳಂ ಮತ್ತು ಬೆಂಗಳೂರು ನಡುವಿನ ಪ್ರಮುಖ ಕಾರಿಡಾರ್‌ ಆಗಿಯೂ ಈ ಸುರಂಗ ಕಾರ್ಯ ನಿರ್ವಹಿಸಲಿದೆ ಎಂದು ಎಲ್‌ಡಿಎಫ್‌ ಸರ್ಕಾರ ಹೇಳಿತ್ತು. ಇದು ಈ ಯೋಜನೆ ಸಾಕಾರಗೊಂಡರೆ ದೇಶದ 3ನೇ ಅತಿ ಉದ್ದದ ಅವಳಿ ಸುರಂಗ ಮಾರ್ಗವಾಗಲಿದೆ. ಅದಾಗ್ಯೂ ಪರಿಸರಕ್ಕೆ ಹಾನಿಯಾಗುವ ಕಾರಣಕ್ಕೆ ಈ ಯೋಜನೆ ಕೈ ಬಿಡುವಂತೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.

ವಯನಾಡಿನಲ್ಲಿ ಮತ್ತೆ ಮುನಿದ ಪ್ರಕೃತಿ: ನಿರಂತರ ಮಳೆಯಿಂದ ಭೂಕುಸಿತ, ಇಬ್ಬರು ಸಾವು

ಈ ಯೋಜನೆ ಮುಂದುವರಿಯುತ್ತ ಅಥವಾ ನಿಂತೇ ಹೋಗುತ್ತ ಎನ್ನುವ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿ ವಿ.ಡಿ. ಸತೀಶನ್‌ ಅವರ ನಿರ್ಧಾರದ ಮೇಲೆ ಈ ಯೋಜನೆಯ ಭವಿಷ್ಯ ನಿಂತಿದೆ ಎಂದು ಮೂಲಗಳು ತಿಳಿಸಿವೆ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani