Dailyhunt Logo
  • Light mode
    Follow system
    Dark mode
    • Play Story
    • App Story
Belagavi News: ಆರ್‌ಎಸ್‌ಎಸ್‌-ಕಾಂಗ್ರೆಸ್‌ ತಿಕ್ಕಾಟದ ನಡುವೆ ರಾಜ್ಯಕ್ಕೆ ಮೋಹನ್ ಭಾಗವತ್ ಭೇಟಿ; ಜುಲೈ 6ರಂದು ಬೆಳಗಾವಿಗೆ ಆಗಮನ

Belagavi News: ಆರ್‌ಎಸ್‌ಎಸ್‌-ಕಾಂಗ್ರೆಸ್‌ ತಿಕ್ಕಾಟದ ನಡುವೆ ರಾಜ್ಯಕ್ಕೆ ಮೋಹನ್ ಭಾಗವತ್ ಭೇಟಿ; ಜುಲೈ 6ರಂದು ಬೆಳಗಾವಿಗೆ ಆಗಮನ

Vishwavani 2 weeks ago

ಬೆಳಗಾವಿ, ಜು. 3: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat)ಜುಲೈ 6 ರಂದು ಬೆಳಗಾವಿಗೆ ಆಗಮಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ (Belagavi News). ಇತ್ತೀಚೆಗೆ ಆಡಳಿತರೂಢ ಕಾಂಗ್ರೆಸ್‌ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಘರ್ಷ ತಾರಕಕ್ಕೇರಿರುವ ಮಧ್ಯೆ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಕೆರಳಿಸಿದೆ.

ಮೋಹನ್ ಭಾಗವತ್ ಅವರ ಭೇಟಿ ಬಗ್ಗೆ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಜುಲೈ 6ರಿಂದಲೇ ಸಂಘದ ವಿವಿಧ ಸ್ತರದ ಸ್ವಯಂ ಸೇವಕರ ಸಭೆಗಳು ಆರಂಭವಾಗಲಿದ್ದು, ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಜುಲೈ 10ರಿಂದ 12ರ ವರೆಗೆ ನಡೆಯಲಿದೆ.

ಈ ಸಭೆಯಲ್ಲಿ ದೇಶದಾದ್ಯಂತದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಸಂಘದ ಸಂಘಟನಾ ವ್ಯವಸ್ಥೆಯಂತೆ ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳಿಂದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಸಹ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

2026ರ ಮಾರ್ಚ್‌ನಲ್ಲಿ ಹರಿಯಾಣದ ಸಮಾಲ್ಖಾದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನಂತರ, ಏಪ್ರಿಲ್, ಮೇ ಹಾಗೂ ಜೂನ್‌ನಲ್ಲಿ ದೇಶದಾದ್ಯಂತ ವಿವಿಧ ಹಂತಗಳ ಸಂಘ ಶಿಕ್ಷಣ ವರ್ಗಗಳು ಯಶಸ್ವಿಯಾಗಿ ನಡೆದವು. ಬೆಳಗಾವಿ ಸಭೆಯಲ್ಲಿ ಶಾಖಾ ಮಟ್ಟದಲ್ಲಿ ವಾರ್ಷಿಕ ಕಾರ್ಯ ಯೋಜನೆಯ ಅನುಷ್ಠಾನದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಯಲಿದೆ.

ಸಂಘ ಶತಾಬ್ದಿ ವರ್ಷದ ಅಂಗವಾಗಿ ನಡೆದಿರುವ ಶಾಖಾ ಕಾರ್ಯದ ವಿಸ್ತರಣೆಯ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಶಾಖೆಗಳ ಸಂಖ್ಯೆಯನ್ನು ಇನ್ನಷ್ಟು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. ಅಲ್ಲದೆ, 2026ರ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ, ಶತಾಬ್ದಿ ವರ್ಷದಲ್ಲಿ ಪೂರ್ಣಗೊಂಡ ಕಾರ್ಯಕ್ರಮಗಳ ಅವಲೋಕನ, ಉಳಿದಿರುವ ಕಾರ್ಯಕ್ರಮಗಳ ಯೋಜನೆ ಹಾಗೂ ಸರಸಂಘಚಾಲಕರ 2026-27ರ ಪ್ರವಾಸ ಯೋಜನೆ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂ ಧರ್ಮದ ಪುನರುತ್ಥಾನಕ್ಕೆ ಎಲ್ಲರೂ ಕೈ ಜೋಡಿಸಿ; ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ

ಸಂಘ ಶತಾಬ್ದಿ ವರ್ಷದ (2025-26) ಉಳಿದ ಕಾರ್ಯಕ್ರಮಗಳು 2026ರ ಅಕ್ಟೋಬರ್ 20ರಂದು ವಿಜಯದಶಮಿಯವರೆಗೆ ಮುಂದುವರಿಯಲಿವೆ. ಸಭೆಯಲ್ಲಿ ಭಾಗವಹಿಸುವ ಪ್ರಚಾರಕರು ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿ ಹಾಗೂ ಜನಗಣತಿ ಸೇರಿದಂತೆ ಸಮಕಾಲೀನ ಪ್ರಮುಖ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, ಅವುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ ಸರ್ಕಾರ್ಯವಾಹರಾದ ಡಾ. ಕೃಷ್ಣಗೋಪಾಲ್, ಸಿ.ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ತ, ಆಲೋಕ್ ಕುಮಾರ್, ಅತುಲ್ ಲಿಮಯೆ, ಜತೆಗೆ ಅಖಿಲ ಭಾರತೀಯ ಕಾರ್ಯ ವಿಭಾಗ ಪ್ರಮುಖರು ಹಾಗೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani