Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿಗೆ ಮುಂಗಾರು ಮಳೆ ಎಂಟ್ರಿ ಯಾವಾಗ? ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

ಬೆಂಗಳೂರಿಗೆ ಮುಂಗಾರು ಮಳೆ ಎಂಟ್ರಿ ಯಾವಾಗ? ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

Vishwavani 1 month ago

ಬೆಂಗಳೂರು, ಜೂ. 5: ಹಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಸುರಿದ ಮುಂಗಾರು ಪೂರ್ವ ಮಳೆ ಮತ್ತು ಗುಡುಗು-ಮಿಂಚು ಸಹಿತ ಮಳೆಯ (Rain) ನಂತರ, ನೈಋತ್ಯ ಮುಂಗಾರು ಅಧಿಕೃತವಾಗಿ ಕರ್ನಾಟಕ ಪ್ರವೇಶಿಸಿದೆ. ಇದರಿಂದ ರಾಜ್ಯದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂಗಾರು (Monsoon Season) ಆರಂಭವಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಘೋಷಿಸಿದೆ.

ಬೆಂಗಳೂರಿಗೆ ಮಾನ್ಸೂನ್ ಯಾವಾಗ?

ಜೂನ್ 5ರಂದು ಬಿಡುಗಡೆ ಮಾಡಿದ ಐಎಂಡಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಂದಿನ ಎರಡ್ಮೂರು ದಿನಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ನಿರೀಕ್ಷೆಯಿದೆ. ಪ್ರಸ್ತುತ ಇದೇ ರೀತಿಯ ಹವಾಮಾನ ಸ್ಥಿತಿಗಳು ಮುಂದುವರಿದರೆ, ಜೂನ್ 7 ಮತ್ತು ಜೂನ್ 9ರ ನಡುವೆ ಮಾನ್ಸೂನ್ ಮಾರುತ ರಾಜ್ಯ ರಾಜಧಾನಿಯನ್ನು ತಲುಪುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯ ಮುನ್ಸೂಚನೆ:

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ 2-3 ಮಿಮೀಗಿಂತ ಹೆಚ್ಚು ಮಳೆಯಾಗಿದ್ದು, ಗಂಟೆಗೆ 30-35 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ ನಿರಂತರ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ 2 ದಿನಗಳಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಇತರ ಭಾಗಗಳಿಗೆ ಮಾನ್ಸೂನ್ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ಮುಂದಿನ 4 ದಿನ ಭರ್ಜರಿ ಮಳೆ ಸಾಧ್ಯತೆ

ಮುಂಗಾರು ಕರ್ನಾಟಕದ ಇನ್ನಷ್ಟು ಭಾಗಗಳಿಗೆ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ ಇದು ಸಂಪೂರ್ಣ ಗೋವಾವನ್ನು ಆವರಿಸಿ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಿಗೂ ವ್ಯಾಪಿಸುವ ಸಾಧ್ಯತೆಯಿದೆ. ಇದರೊಂದಿಗೆ, ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಕೆಲವು ಪ್ರದೇಶಗಳಲ್ಲಿಯೂ ಹಾಗೂ ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿಯೂ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ.

ಐದು ದಿನ ತಡವಾಗಿ ತಲುಪಿದ ಮಾನ್ಸೂನ್‌ ಮಾರುತ

ನೈಋತ್ಯ ಮಾನ್ಸೂನ್ ಗುರುವಾರ (ಜೂನ್‌ 4) ಕೇರಳಂ ತಲುಪಿತು. ಐಎಂಡಿ ತನ್ನ ಹಿಂದಿನ ಮುನ್ಸೂಚನೆಯಲ್ಲಿ ಊಹಿಸಿದ ದಿನಾಂಕಕ್ಕಿಂತ ಐದು ದಿನಗಳ ನಂತರ ಮುಂಗಾರು ಮಳೆ ಆಗಮಿಸಿತು. ಸಾಮಾನ್ಯವಾಗಿ, ಮಾನ್ಸೂನ್ ಜೂನ್ 1ರ ಸುಮಾರಿಗೆ ಕೇರಳಂ ತಲುಪುತ್ತದೆ. ಮೇ 26ರ ವೇಳೆಗೆ ರಾಜ್ಯಾದಾದ್ಯಂತ ಕಾಲೋಚಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ತಡವಾಗಿ ಆಗಮಿಸಿದರೂ, ಜೂನ್ ಮೂರನೇ ವಾರದ ವೇಳೆಗೆ ದೇಶದ ಹೆಚ್ಚಿನ ಭಾಗಗಳಿಗೆ ಮಾನ್ಸೂನ್ ಆವರಿಸುವ ನಿರೀಕ್ಷೆಯಿದೆ. ಮುಂಗಾರು ಮಳೆ ಕೃಷಿಗೆ ಪ್ರಯೋಜನಕಾರಿಯಾಗುವ ನಿರೀಕ್ಷೆಯಿದ್ದರೂ, ಈ ಋತುವಿನಲ್ಲಿ ಒಟ್ಟಾರೆ ಮಳೆಯ ಪ್ರಮಾಣದ ಬಗ್ಗೆ ಕಳವಳಗಳು ಮುಂದುವರೆದಿವೆ. 2026ರಲ್ಲಿ ಸರಾಸರಿಯ ಶೇ. 90ರಷ್ಟು ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani