Dailyhunt
CSK vs PBKS: ಚೆನ್ನೈಗೆ ಸತತ ಎರಡನೇ ಸೂಲು, ಚೆಪಾಕ್‌ನಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್‌!

CSK vs PBKS: ಚೆನ್ನೈಗೆ ಸತತ ಎರಡನೇ ಸೂಲು, ಚೆಪಾಕ್‌ನಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್‌!

Vishwavani 2 weeks ago

ಚೆನ್ನೈ: ಶ್ರೇಯಸ್‌ ಅಯ್ಯರ್‌ (Shreyas Iyer) ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್‌ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ, ತನ್ನ ಎರಡನೇ ಪಂದ್ಯದಲ್ಲಿ(CSK vs PBKS) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆಯಿತು. ಸತತ ಎರಡನೇ ಗೆಲುವಿನ ಮೂಲಕ ಆತಿಥೇಯ ಪಂಜಾಬ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.

ಐಪಿಎಲ್‌ ಇತಿಹಾಸದಲ್ಲಿಯೇ 200ಕ್ಕೂ ಅಧಿಕ ಮೊತ್ತದ ಗುರಿಯನ್ನು ಮೂರು ಬಾರಿ ಯಶಸ್ವಿಯಾಗಿ ಚೇಸ್‌ ಮಾಡಿದ ಸಾಧನೆಗೆ ಪಿಬಿಕೆಎಸ್‌ ಭಾಜನವಾಯಿತು.

ಶುಕ್ರವಾರ ಇಲ್ಲಿ ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆ ನೀಡಿದ್ದ 207 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡ, ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳ ಆಟದ ನೆರವಿನಿಂದ 18.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 210 ರನ್‌ಗಳಿಸಿ ಗೆದ್ದು ಬೀಗಿತು. ಇನ್ನು 200ಕ್ಕೂ ಅಧಿಕ ರನ್‌ಗುರಿ ನೀಡಿದರೂ ಸಿಎಸ್‌ಕೆ ಬೌಲಿಂಗ್‌ ವೈಫಲ್ಯದಿಂದ ಸೋಲು ಒಪ್ಪಿಕೊಂಡಿತು.

IPL 2026: 2 ಬಾರಿ ಬ್ಯಾಟ್‌ ಟೆಸ್ಟ್‌ನಲ್ಲಿ ವಿಫಲರಾದ ಆಯುಷ್‌ ಮ್ಹಾತ್ರೆ! ಮುಂದೇನಾಯ್ತು ಗೊತ್ತೆ?

ಪ್ರಿಯಾಂಶ್‌-ಪ್ರಭ್‌ಸಿಮ್ರನ್‌ ಅಬ್ಬರ

ಇನಿಂಗ್ಸ್‌ ಆರಂಭಿಸಿದ ಪ್ರಿಯಾಂಶ್‌ ಆರ್ಯ ಹಾಗೂ ಪ್ರಭ್‌ ಸಿಮ್ರನ್‌ ಸಿಂಗ್‌ ಅಬ್ಬರಿಸಿ ಮೊದಲನೇ ವಿಕೆಟ್‌ಗೆ 61 ರನ್‌ ಗಳಿಸಿ ಪಂಜಾಬ್‌ಗೆ ಭರ್ಜರಿ ಅಡಿಪಾಯವನ್ನು ಹಾಕಿಕೊಟ್ಟರು. ಪ್ರಿಯಾಂಶ್‌ ಆರ್ಯ ಪವರ್‌ಪ್ಲೇನಲ್ಲಿ ಆಡಿದ ಕೇವಲ 11 ಎಸೆತಗಳಲ್ಲಿ 354.55ರ ಸ್ಟ್ರೈಕ್‌ ರೇಟ್‌ನಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 39 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಪ್ರಭ್‌ ಸಿಮ್ರಾನ್‌ 34 ಎಸೆತಗಳಲ್ಲಿ 43 ರನ್‌ ಗಳಿಸಿದರು. ಕೂಪರ್‌ ಕನೋಲಿ ಕೂಡ 36 ರನ್‌ ಗಳಿಸಿದರು.

ಶ್ರೇಯಸ್‌ ಅಯ್ಯರ್‌ ಅರ್ಧಶತಕ

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ನಾಯಕ ಶ್ರೇಯಸ್‌ ಅಯ್ಯರ್‌ 29 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ನ ಚೇಸಿಂಗ್‌ನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಇನ್ನೇನು ತಂಡವನ್ನು ಗೆಲ್ಲಿಸುವ ಸಮಯದಲ್ಲಿ ಔಟ್‌ ಆದರು. ಆದರೆ, ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ (9) ಹಾಗೂ ಶಶಾಂಕ್‌ ಸಿಂಗ್‌ (14) ಅವರು 19ನೇ ಓವರ್‌ನಲ್ಲಿ ಪಂದ್ಯವನ್ನು ಮುಗಿಸಿದರು.

206 ರನ್‌ ಕಲೆ ಹಾಕಿದ ಸಿಎಸ್‌ಕೆ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಆಯುಷ್‌ ಮ್ಹಾತ್ರೆ (73 ರನ್‌) , ಶಿವಂ ದುಬೆ (43 ರನ್‌) ಹಾಗೂ ಸರ್ಫರಾಝ್‌ ಖಾನ್‌ (32 ರನ್‌೦ ಅವರ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 206 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ಗೆ 207 ರನ್‌ಗಳ ಕಠಿಣ ಗುರಿಯನ್ನು ನೀಡಿತು.

ಗಾಯಕ್ವಾಡ್‌-ಮ್ಹಾತ್ರೆ ಜುಗಲ್‌ಬಂದಿ

ಸಿಎಸ್‌ಕೆ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ (7), ತಮ್ಮ ಎರಡನೇ ಪಂದ್ಯದಲ್ಲಿಯೂ ವಿಫಲರಾದರು. ಅವರು ಕ್ಸೀವಿಯರ್‌ ಬಾರ್ಲೆಟ್‌ ಎಸೆತದಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಕೀಪರ್‌ ಕೈಗೆ ಕ್ಯಾಚ್‌ ಕೊಟ್ಟರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಋತುರಾಜ್‌ ಗಾಯಕ್ವಾಡ್‌ ಹಾಗೂ ಆಯುಷ್‌ ಮ್ಹಾತ್ರೆ 55 ಎಸೆತಗಳಲ್ಲಿ 96 ರನ್‌ಗಳನ್ನು ಕಲೆ ಹಾಕಿ ಸಿಎಸ್‌ಕೆಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು.

IPL 2026: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್‌ ಶರ್ಮಾಗೆ ದಂಡ

ಆಯುಷ್‌ ಮ್ಹಾತ್ರೆ ಸ್ಪೋಟಕ ಅರ್ಧಶತಕ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಭರ್ಜರಿ ಬ್ಯಾಟ್‌ ಮಾಡಿದ ಆಯುಷ್‌ ಮ್ಹಾತ್ರೆ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಆಡಿದ ಆಡಿದ 43 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಸಿಎಸ್‌ಕೆ ಪರ ಚೆಪಾಕ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಬ್ಯಾಟರ್‌ ಎನಿಸಿಕೊಂಡರು. ಇವರ ಜೊತೆಗೆ ಶಿವಂ ದುಬೆ 27 ಎಸೆತಗಳಲ್ಲಿ 43 ರನ್‌ ಕೊಡುಗೆ ನೀಡಿದರೆ, ಸರ್ಫರಾಝ್‌ ಖಾನ್‌ 12 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 32 ರನ್‌ ಸಿಡಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani