Dailyhunt
DC vs RR: ವೈಭವ್‌ ಸೂರ್ಯವಂಶಿಯನ್ನು ಎದುರಿಸುವಾಗ ಭಯಪಟ್ಟಿದ್ದೆ ಎಂದ ಕೈಲ್‌ ಜೇಮಿಸನ್‌!

DC vs RR: ವೈಭವ್‌ ಸೂರ್ಯವಂಶಿಯನ್ನು ಎದುರಿಸುವಾಗ ಭಯಪಟ್ಟಿದ್ದೆ ಎಂದ ಕೈಲ್‌ ಜೇಮಿಸನ್‌!

Vishwavani 2 weeks ago

ಜೈಪುರ: ಶುಕ್ರವಾರ ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (DC vs RR) ತಂಡ ಗೆಲುವು ಪಡೆದಿತ್ತು. ಆದರೆ, ಈ ಪಂದ್ಯದಲ್ಲಿ ಕೇಂದ್ರ ಬಿಂದುವಾಗಿದ್ದ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ (Vaibhav Sooryavanshi)ಅವರನ್ನು ಕೈಲ್‌ ಜೇಮಿಸನ್‌ (Kyle Jamieson) ಬೌಲ್ಡ್‌ ಮಾಡುವ ಮೂಲಕ ಡೆಲ್ಲಿ ತಂಡದ ಆತಂಕವನ್ನು ಕಡಿಮೆ ಮಾಡಿದ್ದರು.

ಅಂದ ಹಾಗೆ ವೈಭವ್‌ ವಿಕೆಟ್‌ ಕಿತ್ತ ಬಳಿಕ ಜೇಮಿಸನ್‌ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದರ ಪರಿಣಾಮ ಕೈಲ್‌ ಜೇಮಿಸನ್‌ಗೆ ಬಿಸಿಸಿಐ ದಂಡವನ್ನು ವಿಧಿಸಿದೆ. ಈ ಬಗ್ಗೆ ಪಂದ್ಯದ ಬಳಿಕ ಡೆಲ್ಲಿ ವೇಗಿ ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಹಾಗೂ ತಮ್ಮ ನಡುವೆ ನಡೆದಿದ್ದ ಪೈಪೋಟಿ ಬಗ್ಗೆ ಜೇಮಿಸನ್‌ ವಿವರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಯಂಗ್‌ ಬ್ಯಾಟ್ಸ್‌ಮನ್‌ ಅನ್ನು ಎದುರಿಸಿದಾಗ ತಾನು ಇಷ್ಟರ ಮಟ್ಟಿಗೆ ಭಯಪಟ್ಟದ್ದು ಇದೇ ಮೊದಲು ಎಂದು ಕಿವೀಸ್‌ ಒಪ್ಪಿಕೊಂಡಿದ್ದಾರೆ. ಬ್ಯಾಟ್‌ ಮಾಡುತ್ತಿದ್ದ ವೈಭವ್‌ಗೆ ಜೇಮಿಸನ್‌ ಯಾರ್ಕರ್‌ ಹಾಕಿ ಬೌಲ್ಡ್‌ ಮಾಡಿದ್ದರು. ನಂತರ ರಿಯಾನ್‌ ಪರಾಗ್‌, ಧ್ರುವ್‌ ಜುರೆಲ್‌ ಹಾಘೂ ಡೊನೊವಾನ್‌ ಫೆರೆರಾ ಅವರು ಉತ್ತಮ ಬ್ಯಾಟ್‌ ಮಾಡಿ ತಮ್ಮ ತಂಡದ ಮೊತ್ತವನ್ನು 225ಕ್ಕೆ ತಲುಪಿಸಿದ್ದರು.

ಸೂರ್ಯವಂಶಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿ ಘರ್ಜಿಸಿದ ಜೇಮಿಸನ್; ವಿಡಿಯೊ ವೈರಲ್‌

"ನನ್ನ ಜೀವನದಲ್ಲಿ 15ನೇ ವಯಸ್ಸಿನ ಬಾಲಕನನ್ನು ಎದುರಿಸುವಾಗ ಇಷ್ಟೊಂದು ಭಯಗೊಂಡಿರುವುದು ಇದೇ ಮೊದಲ ಬಾರಿ ಎಂದು ನಾನು ಭಾವಿಸುತ್ತೇನೆ. ಆದರೆ ಹೌದು, ಪಂದ್ಯಕ್ಕೂ ಮುನ್ನ ನಾವು ಸ್ವಲ್ಪ ಯೋಜನೆ ಮಾಡಿಕೊಂಡಿದ್ದೆವು. ಅದು ಫಲ ನೀಡಿದ್ದು ಸಂತೋಷಕರವಾಗಿದೆ," ಎಂದು ಐಪಿಎಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗಿರುವ ವಿಡಿಯೊದಲ್ಲಿ ಕೈಲ್‌ ಜೇಮಿಸನ್ ತಿಳಿಸಿದ್ದಾರೆ.

ಪಂದ್ಯಕ್ಕೂ ಮುನ್ನ ತನ್ನ ತಂಡ ರೂಪಿಸಿದ್ದ ಯೋಜನೆಗಳ ಕುರಿತು ಮಾತನಾಡಿದ ಜೇಮಿಸನ್, ರಾಜಸ್ಥಾನ್ ರಾಯಲ್ಸ್‌ನ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡುವುದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಎಷ್ಟು ಮಹತ್ವವಾಗಿತ್ತು ಎಂಬುದನ್ನು ಒತ್ತಿ ಹೇಳಿದ್ದಾರೆ.

"ಎಲ್ಲಾ ತಂಡಗಳು ರಾಜಸ್ಥಾನ್ ತಂಡವನ್ನು ಗಮನಿಸಿದಾಗ ಅವರ ಆರಂಭಿಕ ಬ್ಯಾಟ್ಸ್‌ಮನ್‌ಗಳೇ ವೇಗವಾಗಿ ರನ್‌ಗಳನ್ನು ಗಳಿಸಿ ಸ್ಪೋಟಕ ಆರಂಭವನ್ನು ನೀಡುತ್ತಾರೆ. ಸ್ಟಾರ್ಕ್‌ ಒಂದು ಫುಲ್‌ಟಾಸ್ ಮೂಲಕ ಒಬ್ಬರನ್ನು ಔಟ್ ಮಾಡಿದರು, ನಾನು ಯಾರ್ಕರ್ ಮೂಲಕ ಮತ್ತೊಬ್ಬರನ್ನು ಔಟ್ ಮಾಡಿದೆ. ಪವರ್‌ಪ್ಲೇ ಅವಧಿಯಲ್ಲಿ ಆರಂಭದಲ್ಲೇ ವಿಕೆಟ್ ಪಡೆಯುವುದರಿಂದ ರನ್‌ಗಳ ಹರಿವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಯಿತು," ಎಂದು ಕಿವೀಸ್‌ ವೇಗಿ ತಿಳಿಸಿದ್ದಾರೆ.

ಗಾಯಾಳು ಲುಂಗಿ ಎನ್‌ಗಿಡಿ ಅವರ ಬದಲಿಗೆ ಡಿಸಿ ತಂಡಕ್ಕೆ ಸೇರಿದ್ದ ಜೇಮಿಸನ್, ಹೊಸ ಬಾಲ್ ಪಾಲುದಾರ ಮಿಚೆಲ್ ಸ್ಟಾರ್ಕ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಆಸ್ಟ್ರೇಲಿಯಾದ ಈ ವೇಗಿ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

RR vs DC: ರಾಹುಲ್‌-ನಿಸ್ಸಾಂಕ ಅಬ್ಬರ: ರಾಜಸ್ಥಾನ್‌ ಎದುರು ಗೆದ್ದು ಬೀಗಿದ ಡೆಲ್ಲಿ

"ಅವರು ವಿಶ್ವಮಟ್ಟದ ಆಟಗಾರರು. ಇಂತಹ ಆಟಗಾರರು ನಿಮ್ಮ ತಂಡದಲ್ಲಿದ್ದರೆ ಅದು ದೊಡ್ಡ ಲಾಭ. ಅವರು ಸರಿಯಾದ ಸಮಯದಲ್ಲಿ ಬಂದಿದ್ದಾರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾವು ಸ್ವಲ್ಪ ಮುನ್ನಡೆಯಬೇಕಾಗಿತ್ತು. ಅವರೊಂದಿಗೆ ಹೊಸ ಬಾಲ್ ಹಂಚಿಕೊಳ್ಳುವುದು ಸಂತೋಷಕರ ಅನುಭವ, ಅದು ನಿಜವಾಗಿಯೂ ವಿಶೇಷ," ಎಂದು ಕೈಲ್‌ ಜೇಮಿಸನ್‌ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani