Dailyhunt Logo
  • Light mode
    Follow system
    Dark mode
    • Play Story
    • App Story
ಗುರುಗಳ ಆಶೀರ್ವಾದವೇ ಯಶಸ್ಸಿನ ರಹಸ್ಯ: ಹಂದನಕೆರೆ, ತಿಪಟೂರು ಕಾಡಸಿದ್ದೇಶ್ವರ ಮಠಗಳೊಂದಿಗೆ ಡಿಕೆಶಿಗೆ ಅವಿನಾಭಾವ ಬಾಂಧವ್ಯ

ಗುರುಗಳ ಆಶೀರ್ವಾದವೇ ಯಶಸ್ಸಿನ ರಹಸ್ಯ: ಹಂದನಕೆರೆ, ತಿಪಟೂರು ಕಾಡಸಿದ್ದೇಶ್ವರ ಮಠಗಳೊಂದಿಗೆ ಡಿಕೆಶಿಗೆ ಅವಿನಾಭಾವ ಬಾಂಧವ್ಯ

Vishwavani 1 week ago

- ಧನಂಜಯ್, ಚಿಕ್ಕನಾಯಕನಹಳ್ಳಿ

ಚಿಕ್ಕನಾಯಕನಹಳ್ಳಿ, ಜೂ. 3: ರಾಜ್ಯ ರಾಜಕಾರಣದ ಮಹಾನ್ 'ವಿಜಯ ಸಾರಥಿʼ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳೊಂದಿಗೆ ಅವರಿಗಿರುವ ದಶಕಗಳ ಅವಿನಾಭಾವ ಬಾಂಧವ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ತಾವು ಯಾವುದೇ ಸಂಕಷ್ಟದಲ್ಲಿದ್ದಾಗ ಹಾಗೂ ಇಂದು ರಾಜ್ಯದ ಅತ್ಯುನ್ನತ ಸಿಎಂ ಗಾದಿ ಏರುವವರೆಗೂ ಅವರು ಈ ಭಾಗದ ಮಠಗಳ ಆಶೀರ್ವಾದ ಪಡೆದಿರುವುದು ಜಗಜ್ಜಾಹೀರು.

ಹಂದನಕೆರೆ ಮಠ ಹಾಗೂ ನೊಣವಿನಕೆರೆ ಅಜ್ಜಯ್ಯನ ಒಡನಾಟ

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗುರು ಗಿರಿ ಸಿದ್ದೇಶ್ವರ ಮಠಕ್ಕೆ ವೈಯಕ್ತಿಕ ಹಾಗೂ ರಾಜಕೀಯ ಸವಾಲುಗಳ ಸಂದರ್ಭದಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದನ್ನು ಡಿಕೆಶಿ ರೂಢಿಸಿಕೊಂಡಿದ್ದಾರೆ. ಅದೇ ರೀತಿ, ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನವರನ್ನು ತಮ್ಮ ಪರಮ ಗುರುಗಳೆಂದು ಭಾವಿಸಿರುವ ಅವರು, ಅಜ್ಜಯ್ಯನವರ ದಿವ್ಯ ಮಾರ್ಗದರ್ಶನ, ಆಶೀರ್ವಾದ ಹಾಗೂ ಭವಿಷ್ಯವಾಣಿಯ ಬಲದಿಂದಲೇ ಇಂದು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ ಎಂಬುದು ಭಕ್ತರ ದೃಢ ನಂಬಿಕೆ.

"ಇದು ರಾಜಕೀಯದಾಟಿದ ದೈವಿಕ ಬಾಂಧವ್ಯ"

ʼಡಿ.ಕೆ. ಶಿವಕುಮಾರ್ ಅವರಿಗೆ ಹಂದನಕೆರೆ ಮಠ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನವರೆಂದರೆ ಸಾಕ್ಷಾತ್ ದೈವ ಸನ್ನಿಧಿಗಳು. ಇಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನಮ್ಮ ತಾಲೂಕಿನ ಮಠಗಳ ಮತ್ತು ಭಕ್ತರ ಪ್ರಾರ್ಥನೆಗೆ ಸಂದ ಜಯವಾಗಿದೆ. ನಮ್ಮ ನಾಯಕರ ಮೇಲಿರುವ ಅಜ್ಜಯ್ಯನವರ ಆಶೀರ್ವಾದದ ಬಲವೇ ಇಂದು ಅವರನ್ನು ರಾಜ್ಯ ರಾಜಕಾರಣದ ಅತ್ಯುನ್ನತ ಶಿಖರದಲ್ಲಿ ತಂದು ನಿಲ್ಲಿಸಿದೆʼ ಎಂದು ಕಾಂಗ್ರೆಸ್ ಮುಖಂಡ ನಿರುವಗಲ್ ಗೋಪಿಕೃಷ್ಣ ಹರ್ಷ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿ ಡಿಕೆಶಿಯವರ ಆಡಳಿತಕ್ಕೆ ಮಠಗಳ ಶ್ರೀರಕ್ಷೆ ಇದೆ

ʼನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ರಾಜಕೀಯ ಭಕ್ತರಾಗಿ ಉಳಿದಿಲ್ಲ, ಬದಲಿಗೆ ಮಠದ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಯಾಗಿ ನಿಲ್ಲುವ ಮನೆಮಗನಂತೆ ನಡೆದುಕೊಳ್ಳುತ್ತಾರೆ. ನೊಣವಿನಕೆರೆ ಅಜ್ಜಯ್ಯನವರ ದಿವ್ಯ ಮಾರ್ಗದರ್ಶನ ಮತ್ತು ಹಂದನಕೆರೆ ಸಿದ್ದೇಶ್ವರ ಮಠದ ಪುಣ್ಯಶಕ್ತಿ ಡಿಕೆಶಿಯವರ ಬೆನ್ನಿಗಿದೆ. ಇಂದು ಅವರು ಸಿಎಂ ಆಗಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ತಂದಿದೆʼ ಎಂದು ಪ್ರಮುಖ ಮುಖಂಡ ಎಣ್ಣೆಗೆರೆ ಪ್ರಶಾಂತ್ ಕೊಂಡಾಡಿದರು.

ಹಂದನಕೆರೆ ಮತ್ತು ತಿಪಟೂರು ಕಾಡಸಿದ್ದೇಶ್ವರ ಮಠದ ನೊಣವಿನಕೆರೆ ಅಜ್ಜಯ್ಯನವರೊಂದಿಗಿನ ಡಿ.ಕೆ. ಶಿವಕುಮಾರ್ ಅವರ ಸಂಬಂಧವು ಭಕ್ತಿ ಮತ್ತು ನಂಬಿಕೆಯ ಗಟ್ಟಿ ತಳಹದಿಯ ಮೇಲೆ ನಿರ್ಮಾಣವಾಗಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಭಕ್ತ ಮಹಾಜನತೆ ಕ್ಷೇತ್ರದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani