Dailyhunt Logo
  • Light mode
    Follow system
    Dark mode
    • Play Story
    • App Story
H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

Vishwavani 3 months ago

ತುಂಟರಗಾಳಿ

ಸಿನಿಗನ್ನಡ

ಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು- ಇದು ನಿರ್ದೇಶಕ ಕೆ.ವಿ. ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು. ಕೆ.ವಿ. ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾಗಳನ್ನು ಮಾಡಿದ ನಿರ್ದೇಶಕರ ಹೆಸರು.

ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.1, ಬೆಳ್ಳಿ ಮೋಡಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ರಾಜು. ಕೆ.ವಿ. ರಾಜು ಅವರು ಅನೇಕ ಅದ್ಬುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ಅವರ 'ಹುಲಿಯಾ' ಚಿತ್ರದಿಂದಲೇ.

ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ 'ಸೋ ಕಾಲ್ಡ್' ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂಥ ಚಿತ್ರಗಳ ಸಾಲಿ ನಲ್ಲಿ ಕೇಳಿಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ 'ಹುಲಿಯಾ'. ಆದರೆ ಈಗಲೂ ಕೆ.ವಿ. ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ 'ಹುಲಿಯಾ' ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ‌

Hari Paraak Column: ಸಾಮಾನ್ಯರ ಮದುವೆ: ಹೊಂಡಕ್ಕೆ ಬಿದ್ದಿದ್ದು ರಶ್ಮಿಕಾ ಮದುವೆ: ʼಕೊಂಡʼಕ್ಕೆ ʼಬಿದ್ದಿದ್ದುʼ

ಆ ಚಿತ್ರದ ಖದರ್ರೇ ಹಾಗೆ. ಇಂದಿಗೂ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ 'ಹುಲಿಯಾ' ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ. ಈ ಚಿತ್ರದ ಕಥೆ ಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ಕಥೆ ಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ.

ಯಾಕಂದ್ರೆ ಇತ್ತೀಚೆಗೆ ತಮಿಳಿನಲ್ಲಿ ಬಂದ ಧನುಷ್ ಅಭಿನಯದ 'ಅಸುರನ್' ಚಿತ್ರ ಹೆಚ್ಚು ಕಮ್ಮಿ 'ಹುಲಿಯಾ' ಚಿತ್ರದ ಧಾಟಿಯ ಇತ್ತು. ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಕಥೆ 'ಹುಲಿಯಾ' ಚಿತ್ರದ್ದು. ಒಂದೇ ವ್ಯತ್ಯಾಸ ಅಂದ್ರೆ ಕೆ.ವಿ. ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು. ಅಂದರೆ ಬಡವರು ತಿರುಗಿಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆ.ವಿ. ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು.

ದೇವರಾಜ್ ಮತ್ತು ಅರ್ಚನಾ ಅವರ ಕುಟುಂಬವು ಮೇಲ್ವರ್ಗದವರ ತುಳಿತಕ್ಕೆ ಸಿಕ್ಕು ನಾಶವಾಗುವ ಕಥೆ ಇಲ್ಲಿತ್ತು. ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿ ಬಂದಿತ್ತು. ಅದರಲ್ಲೂ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿ ದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ ನಟ ವಿಷ್ಣುವರ್ಧನ್ ಅವರು, "ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾರ್ಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ" ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು. ‌

ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತು‌ ಹೋಯಿತು. "ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆ.ವಿ. ರಾಜು ಕೇಳಲಿಲ್ಲ" ಅನ್ನೋ ಚಿತ್ರದ ನಿರ್ಮಾಪಕ ಗೋವಿಂದು ಕೂಡ, 'ನಿಮ್ಮ ಹೆಸರೇನು?' ಅಂತ ಯಾರಾದ್ರೂ ಕೇಳಿದ್ರೆ, 'ಹುಲಿಯಾ ಗೋವಿಂದು' ಅಂತಲೇ ಹೇಳ್ತಾರೆ. ಅದು ಆ ಚಿತ್ರದ ತಾಕತ್ತು.‌

ಲೂಸ್‌ ಟಾಕ್‌ - ಡೊನಾಲ್ಡ್‌ ಟ್ರಂಪ್

ಏನ್ರೀ ಭಾರತ ಎಲ್ಲದಕ್ಕೂ ನಿಮ್ಮ ಪರ್ಮಿಷನ್ ತಗೋಬೋಕು ಅನ್ನೋ ಥರ ಅಧಿಕಾರ ಚಲಾಯಿಸ್ತಾ ಇದ್ದೀರಲ್ಲ?

- ಹೌದು, ಅದಕ್ಕೆ ಇನ್ನು ಮುಂದೆ ನೀವು ಇಂಡಿಯ ನೇರವಾಗಿ ನಂಗೇ ವೋಟ್ ಹಾಕಿಬಿಡಿ. ಯಾಕಂದ್ರೆ ಇಷ್ಟು ದಿನ ಇಂಡಿಯಾದಲ್ಲಿ ನೀವು ಇವಿಎಂ ಮೂಲಕ ಯಾರಿಗೆ ವೋಟ್ ಹಾಕಿದ್ರೂ ಅದು ಬಿಜೆಪಿಗೆ ಹೋಗುತ್ತೆ ಅನ್ನೋ ಆರೋಪ ಇತ್ತು. ಈಗ ನೀವು ಬಿಜೆಪಿಗೆ ವೋಟ್ ಹಾಕಿದ್ರೂ ಅದು ನಂಗೇ ಬರುತ್ತೆ.

ಸರಿ ಹೋಯ್ತು, ಮುಂದಿನ ಸಲ ಇಂಡಿಯಾದಲ್ಲಿ ನೀವೇ ಎಲೆಕ್ಷನ್ನಿಗೆ ನಿಂತ್ಕೊಂಡ್‌ ಬಿಡಿ

- ಓಕೆ, ಓಕೆ. ನೀವು ಶ್ರೀರಾಮನಿಗೆ ಹಾಕೋ ವೋಟನ್ನ ನೇರವಾಗಿ ಜೀಸಸ್ ಕ್ರೈಗೇ ಹಾಕಿ ಬಿಡಿ

ಅದೂ ಸರಿನೇ, ಆದ್ರೂ ನಿಮ್ಮಿಂದಾಗಿ ನಮ್ಮ 'ಟಾಕ್ಸಿಕ್' ಸಿನಿಮಾ ರಿಲೀಸ್ ಮುಂದಕ್ಕೆ ಹೋಯ್ತಲ್ಲ?

- ಹ್ಹೆ, ಹ್ಹೆ, ಹ್ಹೆ, 'ಟಾಕ್ಸಿಕ್' ಮತ್ತು 'ಧುರಂಧರ್-2' ಮಧ್ಯೆ ಯುದ್ಧ ನಿಲ್ಲಿಸಿದ್ದು ನಾನೇ ಅಂತ ಇನ್ಮೇಲೆ ಹೇಳ್ಕೊಂಡ್ ಓಡಾಡ್ತೀನಿ, ಆವಾಗ್ಲಾದ್ರೂ ನೊಬೆಲ್ ಶಾಂತಿ ಪ್ರಶಸ್ತಿ ಬರುತ್ತೇನೋ ನೋಡೋಣ.

ಅಲ್ರೀ, ಅದೇನ್ ಶಾಂತಿ ಪ್ರಶಸ್ತಿ ಅಂತ ಸಾಯ್ತಿರ, ಸಾಯಿಸ್ತೀರ? ನಿಮಗೇಕೆ ಕೊಡಬೇಕು ಶಾಂತಿ ಪ್ರಶಸ್ತಿ?

- ಅವೆಲ್ಲ ಗೊತ್ತಿಲ್ಲ. ನಂಗೆ ನೊಬೆಲ್ 'ಶಾಂತಿ' ಪ್ರಶಸ್ತಿ ಕೊಡೋವರೆಗೂ ನಾನು ಪ್ರಪಂಚದಲ್ಲಿ 'ಹಿಂಸೆ' ಮಾಡಿಸ್ತಾನೇ ಇರ್ತೀನಿ, ಹಿಂಸೆ ಕೊಡ್ತಾನೇ ಇರ್ತೀನಿ ಅಷ್ಟೇ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಕಾಲೇಜಿನ ರನ್ನಿಂಗ್ ರೇಸ್‌ನಲ್ಲಿ ಖೇಮು ಯಾವಾಗಲೂ - ಬರುತ್ತಿದ್ದ. ಹಾಗಂತ ಅವನಿಗೆ ಕೆಪಾಸಿಟಿ ಇತ್ತು ಅಂತಲ್ಲ. ಓಡುವಾಗ ಏನಾದ್ರೂ ಮೋಸ ಮಾಡಿ ಇನ್ನೊಬ್ಬರು - ಬರೋ‌ ದನ್ನು ತಪ್ಪಿಸಿ ಬಿಡುತ್ತಿದ್ದ. ನಂತರ ಹಾಸ್ಟೆಲಿಗೆ ಬಂದು ಎಲ್ಲರೆದುರು ಜಂಭ ಕೊಚ್ಚಿ ಕೊಳ್ಳುತ್ತಿದ್ದ. ಅದಲ್ಲದೆ ಅವನಿಗಿದ್ದ ಇನ್ನೊಂದು ರೋಗ ಎಂದರೆ ಯಾರು ಏನೇ ಹೇಳೋಕೆ ಬಂದರೂ "ನೀವೆ ದಡ್ಡ ಶಿಖಾಮಣಿಗಳು, ಮೈ ಫುಟ್" ಎನ್ನುತ್ತಾ ಉಡಾಫೆಯಿಂದ ರಿಯಾಕ್ಟ್ ಮಾಡ್ತಿದ್ದ. ‌

ಏನಾದರೂ ಮಾಡಿ ಇವನಿಗೆ ಬುದ್ಧಿ ಕಲಿಸಬೇಕು ಎಂದು ಹುಡುಗರು ಮಾತಾಡಿಕೊಳ್ಳು ತ್ತಿದ್ದರೂ ಏನೂ ಆಗಿರಲಿಲ್ಲ. ಸರಿ, ಒಂದು ದಿನ ಮತ್ತೆ ರನ್ನಿಂಗ್ ರೇಸ್ ಇತ್ತು. ಅವತ್ತು ಬೆಳಗ್ಗೆ ಹಾಸ್ಟೆಲಿನ ವಾಚ್‌ಮನ್ ಒಂದು ಗಿಣಿಯನ್ನು ತಂದ. ಅದರ ಕೊಕ್ಕು ತುಂಬಾ ಉದ್ದ ಮತ್ತು ಚೂಪಾಗಿತ್ತು. ಅದನ್ನು ಕೆಲವು ಹುಡುಗರಿಗೆ ತೋರಿಸಿ, "ಇದು ಸಾಮಾನ್ಯ ಗಿಣಿ ಅಲ್ಲ, ಇದರ ಹೆಸರು 'ಡೆಡ್ಲಿ ಗಿಣಿ', ಬೇಕಿದ್ರೆ ನೋಡಿ" ಎನ್ನುತ್ತಾ ವಾಚ್‌ ಮನ್ ಗಿಣಿ ಕಡೆಗೆ ತಿರುಗಿ, "ಡೆಡ್ಲಿ ಗಿಣಿ, ಟೇಬಲ" ಎಂದ.

ಇದ್ದಕ್ಕಿದ್ದಂತೆ ಗಿಣಿ, ಟೇಬಲ್ ಮೇಲೆ ಹಾರಿ ಎರಡೇ ಕ್ಷಣದಲ್ಲಿ ಇಡೀ ಟೇಬಲ್ ಅನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಪುಡಿ ಪುಡಿ ಮಾಡಿಬಿಟ್ಟಿತು. ಅದನ್ನು ನೋಡಿ ಗಾಬರಿಯಾದರೂ, ಇನ್ನೊಬ್ಬ ಹುಡುಗ ಮೆಲ್ಲನೆ "ಡೆಡ್ಲಿ ಗಿಣಿ, ವಿಂಡೋ" ಎಂದ. ಗಿಣಿ ಕಿಟಕಿಯ ಕಡೆಗೆ ಹಾರಿ, ಕಿಟಕಿಯ ಗ್ಲಾಸನ್ನು ಕುಕ್ಕಿ ಅದರ ಲವಲೇಶವೂ ಇಲ್ಲದಂತೆ ಮಾಡಿಬಿಟ್ಟಿತು.

ಸ್ತಂಭೀಭೂತರಾಗಿ ಎಲ್ಲರೂ ಬಾಯಿತೆರೆದುಕೊಂಡು ಮಾತನಾಡದೆ ನಿಂತಿzಗ ಖೇಮು ಅಲ್ಲಿಗೆ ಬಂದ. ಎಲ್ಲರೂ ಸುಮ್ಮನೆ ನಿಂತಿದ್ದು ನೋಡಿದ, ಪಕ್ಕದಲ್ಲಿ ಗಿಣಿ ಕೂತಿತ್ತು. "ಏನಿದು?" ಅಂದ ಖೇಮು. ಅದಕ್ಕೆ ಹುಡುಗನೊಬ್ಬ ಹೇಳಿದ "ಇದು ಡೆಡ್ಲಿ ಗಿಣಿ". ಎಂದಿ ನಂತೆ ಖೇಮು ತಕ್ಷಣ ರಿಯಾಕ್ಟ್ ಮಾಡಿದ "ಡೆಡ್ಲಿ ಗಿಣಿ? ಮೈ ಫುಟ್"

ಲೈನ್ ಮ್ಯಾನ್

5 ಬಾಲ್ ಬೋಲ್ ಮಾಡಿ, 6 ‌ಬಾಲ್ ಆಯ್ತು ಅಂತ ವಾದ ಮಾಡೋದು

- 'ಓವರ್' ಕಾನಿಡೆನ್ಸ್

ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?

- ಇಯರ್ ರಿಂಗ್ ಏಯ್ಡ್

ಡಿಕ್ಷನರಿಗೆ ಇನ್ನೊಂದು ಹೆಸರು

- 'ಅರ್ಥ' ಶಾಸ್ತ್ರ

ಅಮೆರಿಕಕ್ಕೆ ಸಂಬಂಧಪಟ್ಟ ಸುದ್ದಿ

- 'ಸ್ಟೇಟ್ಸ್' ಲೆವೆಲ್ ಸುದ್ದಿ

ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದು ಟೆಸ್ಟ್ ಮ್ಯಾಚಲ್ಲಿ ಸೊನ್ನೆಗೆ ಔಟಾಗೋ ಬ್ಯಾಟ್ಸ್‌ʼಮನ್ ನೋಡಿ ಹೇಳೋ ಮಾತು

- ಎವ್ವೆರಿ ಡೇ ಈಸ್ ನಾಟ್ ಒನ್ ಡೇ

'ಸಿನಿಮಾರಂಗ'ದಲ್ಲಿ ಒಂದು ಸೂಪರ್ ಹಿಟ್ ಕೊಟ್ಟು ನಂತರದ ಸಿನಿಮಾ ಫ್ಲಾಪ್ ಆದ್ರೆ ಜನ ಏನಂತಾರೆ?

- ಎವ್ವೆರಿ ಡೇ ಈಸ್ ನಾಟ್ 'ಫೈಡೇ'

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡೆಸ್ಕ್ ಅಥವಾ ಬೆಂಚ್ ಮೇಲೆ ಬರೆಯುವ ಕವಿತೆಗಳು

- ಬೆಂಚ್ ಮಾರ್ಕ್ ಸಾಹಿತ್ಯ

ಅಂಥ ಸಾಹಿತ್ಯ ಬರೆಯುವ ವಿದ್ಯಾರ್ಥಿಯನ್ನ ಏನಂತಾರೆ?

- ಡೆಸ್ಕ್ ಟಾಪ್ ಐಕಾನ್

ಹಾಸಿಗೆಯಲ್ಲಿ ಕಕ್ಕ ಮಾಡಿಕೊಳ್ಳೋ ಪುಟ್ಟ ಮಗನನ್ನು ಏನಂತಾರೆ?

- 'ಮಲ' ಮಗ

Dailyhunt
Disclaimer: This content has not been generated, created or edited by Dailyhunt. Publisher: Vishwavani