ಕಾಡುದಾರಿ
ಪತ್ತನಾಜೆ ಎಂಬುದು ತುಳುನಾಡ ಮಂದಿಗೆ ಗೆಜ್ಜೆ ಬಿಚ್ಚಿಟ್ಟು ಮನೆ ಸೇರಿಕೊಳ್ಳುವ ಸಮಯ. ಅಲ್ಲಿಂದಾಚೆ ಮಳೆಗಾಲ. ಅದು ಬಹಿರಂಗದ ಪ್ರದರ್ಶನ ಕೈಬಿಟ್ಟು ಅಂತರಂಗದ ಮಾತು ಕೇಳಿಸಿಕೊಳ್ಳುವ ಕಾಲದ ಮುನ್ನುಡಿ. ಹೊರಕೋಣೆ ಒಳಕೋಣೆಗಳ ಭಿನ್ನತೆಯನ್ನು ಮನಗಾಣುವ ಸಮಯ.
ಯತಿಗಳ ಚಾತುರ್ಮಾಸಕ್ಕೂ ಇದೇ ಹಿನ್ನೆಲೆ.
ಇನ್ನು ನಾಲ್ಕು ದಿನ ಹೋದರೆ ಕರಾವಳಿಯ ಯಕ್ಷಗಾನ ಮೇಳಗಳ ಚೌಕಿಮನೆಗಳು, ವೇದಿಕೆಗಳು ಮೌನವಾಗುತ್ತವೆ. ವರ್ಷವಿಡೀ ವೇದಿಕೆಯ ಮೇಲೆ ದೇವಾಸುರರಾಗಿ ಕುಣಿದು ಅಬ್ಬರಿಸಿ ನಟಿಸಿದ ಕಲಾವಿದರು ಗೆಜ್ಜೆ ಬಿಚ್ಚಿಡುವ ಸಮಯ. ಆ ದಿನದ ಹೆಸರು ಪತ್ತನಾಜೆ. ಅಂದರೆ ತುಳು ಭಾಷೆಯಲ್ಲಿ 'ಬೇಸ' ತಿಂಗಳ ಹತ್ತನೇ ದಿನ.
ಅಂದಿನಿಂದ ಮಳೆ ತನ್ನ ಗೆಜ್ಜೆ ಕಟ್ಟಿಕೊಂಡು ಗುಡುಗು ಸಿಡಿಲುಗಳೊಂದಿಗೆ ಅಬ್ಬರಿಸಲು ಶುರು ಮಾಡುತ್ತದೆ. ಇನ್ನು ನಾಲ್ಕು ತಿಂಗಳ ಕಾಲ ಹೊರಾಂಗಣದಲ್ಲಿ ಆಟವಿಲ್ಲ, ನಾಟಕವಿಲ್ಲ, ಯಕ್ಷಗಾನ ವಿಲ್ಲ. ಜಾತ್ರೆ, ಕೋಲ, ತಂಬಿಲ, ನೇಮ ಮೊದಲಾದ ಆಚರಣೆಗಳಿಗೂ ಬಿಡುವು.
ದೈವಾರಾಧಕರೂ ಗೆಜ್ಜೆ ಬಿಚ್ಚಿ, ಸುರಿಯ, ಮೊಗವಾಡ, ದೀಟಿಗೆ ಇತ್ಯಾದಿಗಳು ಮಣೆಮಂಚ ಸೇರಿ ಕೊಳ್ಳುತ್ತವೆ. ಈಗಾಗಲೇ ಕೇರಳದಲ್ಲಿ ಮುಂಗಾರು ತನ್ನ ಮೊದಲ ಹೆಜ್ಜೆಯ ನರ್ತನ ತೊಡಗಿದೆ. ಇನ್ನು ಆರೆಂಟು ದಿನಗಳಲ್ಲಿ ಅದು ಕರಾವಳಿಯುದ್ದಕ್ಕೂ ತನ್ನ ಆಲಾಪದ ಸೆರಗನ್ನು ಬೀಸುತ್ತದೆ.
ಪಂಜೆಯವರ ಕವನ ಸೂಚಿಸುವಂತೆ ಹೊರಗೆ ತೆಂಕಣ ಗಾಳಿಯಾಟ ನಡೆದಿದ್ದರೆ ಒಳಕೋಣೆಯಲ್ಲಿ ಮೌನದ ಅಂಕಣ ಗಾಳಿಯಾಟ. ಪತ್ತನಾಜೆ, ಅದು ಗೌಜಿ ಗಮ್ಮತ್ತು ನಿಲ್ಲಿಸಿ ಮೌನಕ್ಕೆ, ಸದ್ದಿಲ್ಲದ ದುಡಿಮೆಗೆ ಜಾರುವ ಸಮಯ. ಪತ್ತನಾಜೆಯು ಮಳೆಯ ಆರಂಭದ ಬೀಜ. ಮಳೆ ಬೀಳಲಾರಂಭಿಸಿದ ಒಂದು ವಾರದಲ್ಲಿ ಹೊಲಗದ್ದೆಗಳು ಮೆತ್ತಗಾಗಿ ಉಳುವಾ ಯೋಗಿಯ ಆಹ್ವಾನಿಸಲು ಮುಂದಾಗು ತ್ತವೆ.
Harish Kera Column: ಭಯವಾಗುತ್ತದೆ ಎಂಬ ಬರಹಗಾರರಿಗೆ ಎರಡು ಮಾತು
ಹಿಂದೆಲ್ಲಾ ಯಕ್ಷಗಾನ ಕಲಾವಿದರು ಬೇಸಿಗೆಯಲ್ಲಿ ಕಲೆಯ ಮಡಿಲಿನಲ್ಲಿಯೂ, ಮಳೆಗಾಲದಲ್ಲಿ ಹೊಲದ ಮಡಿಲಲ್ಲಿಯೂ ಇರಬೇಕಿತ್ತು. ಕಲೆ ಹೊಟ್ಟೆ ತುಂಬಿಸುತ್ತಿರಲಿಲ್ಲ. ಇಂದು ತುಸು ಜನಪ್ರಿಯರಾದ ಕಲಾವಿದರಿಗೆ ಮಳೆಗಾಲದಲ್ಲಿಯೂ ಯಕ್ಷಗಾನ ಪ್ರದರ್ಶನಗಳು ಸಿಗುತ್ತವೆ. ನಗರಗಳಲ್ಲಿ ಹಾಲ್‌ಗಳಲ್ಲಿ ಮಳೆಯಿಂದ ರಕ್ಷಣೆ ಪಡೆದು ಆಡುಗರೂ ನೋಡುಗರೂ ಸೇರುತ್ತಾರೆ. ಇಷ್ಟಕ್ಕೇ ಪತ್ತನಾಜೆಗೆ ಇಂದು ಬೆಲೆಯಿಲ್ಲ ಎನ್ನುವಂತಿಲ್ಲ.
ಅದು ಕರಾವಳಿಯ, ಮಲೆನಾಡಿನ ಜನತೆಯ ಬದುಕಿನ ಭಾಗ. ಬಿಸಿಲು ಮಣಿದು ಮಳೆ ದಿಬ್ಬಣ ಹೊರಡುವ ಸಮಯ ಎಂದರೆ ಎಲ್ಲ ಸಮಾರಂಭಗಳೂ ಮುಗಿದು ನೆಲದ ಕಾಯಕಕ್ಕೆ ಇಳಿಯಲೇ ಬೇಕು. ಇಲ್ಲವಾದರೆ ಮುಂದಿನ ಬೇಸಿಗೆ ದುರ್ಭರ. ದೈವಾರಾಧನೆಗೆ ಫುಲ್ ಸ್ಟಾಪ್, ಅದರಲ್ಲಿ ರಾಜಿ ಯಿಲ್ಲ.
ಪತ್ತನಾಜೆ ಎಂಬುದೊಂದು ಸಂಕ್ರಮಣ ಸಮಯ. ಅದು ಹೊರಗಿನ ಮತ್ತು ಒಳಗಿನ ಬದಲಾವಣೆ ಯ ಒಂದು ಸೂಚಿ, ಒಂದು ಮಧ್ಯಬಿಂದು. ಗೆಜ್ಜೆ ಬಿಚ್ಚುವುದಕ್ಕೊಂದು ದಿನ ಎಂಬುದೇ ಎಷ್ಟೊಂದು ಸೊಗಸಾಗಿದೆ ಅಲ್ಲವೇ. ಹಾಗೇ ಗೆಜ್ಜೆ ಕಟ್ಟುವುದಕ್ಕೂ ಒಂದು ದಿನವಿದೆ. ಮಳೆಯೆಲ್ಲಾ ನಿಂತು ಹಗಲು ಗಳು ಹೊಳವಾದ ಕಾರ್ತಿಕ ಮಾಸದ ಒಂದು ದಿನ, ಸಾಮಾನ್ಯವಾಗಿ ದೀಪಾವಳಿ ಹಬ್ಬದ ಬಳಿಕ, ಈ ಗೆಜ್ಜೆ ಕಟ್ಟುವ ದಿನ. ಆದರೆ ಪತ್ತನಾಜೆ ಒಂದು ಭಾವುಕ ದಿನ.
ಅಲ್ಲಿಂದ ನಾಲ್ಕು ತಿಂಗಳು ಗೆಜ್ಜೆಯ ಸಹವಾಸವೇ ಇಲ್ಲವಲ್ಲ. ಗೆಜ್ಜೆ ಎಷ್ಟು ಪವಿತ್ರ, ಪೂಜನೀಯ ಎಂಬುದು ಕಲಾವಿದರಿಗೆ ಗೊತ್ತು. ಅದನ್ನು ಕಟ್ಟದೇ ಮೈಮೇಲೆ ಕಲೆಯ ಆವೇಶವೇ ಬರುವಂತಿಲ್ಲ. ಭರತನಾಟ್ಯದ ಮಧುರ ಘಲ್ ಘಲ್, ಭೂತಕೋಲದ ಗಗ್ಗರದ ಘೋಷ, ಯಕ್ಷಗಾನದ ಚೆಂಡೆ ಮದ್ದಲೆಗಳ ನಿನದದ ನಡುವೆ ತುಸುವೇ ಕೇಳಿದಂತಾಗುವ ಈ ಗೆಜ್ಜೆ ದನಿ ತಾತ್ಕಾಲಿಕವಾಗಿ ಮೌನ ವಾಗುವ ಕ್ಷಣ, ಮನುಷ್ಯ ಒಳಮುಖಿಯಾಗುವ ಸಮಯಕ್ಕೆ ಮುನ್ನುಡಿಯೂ ಹೌದು.
ಕಾಲುಗಳು ಸದಾ ಕುಣಿಯುತ್ತಿರಲು ಸಾಧ್ಯವಿಲ್ಲ. ಮನುಷ್ಯ ಸದಾ ನಟಿಸಲು ಸಾಧ್ಯವಿಲ್ಲ. ದೇಹಕ್ಕೂ ಅಂತರಂಗಕ್ಕೂ ವಿರಾಮ ಬೇಕು. ಮನುಷ್ಯನಿಗೂ ಅಂತಿಮವಾಗಿ ಗೆಜ್ಜೆ ಬಿಚ್ಚುವ ದಿನವೊಂದಿದೆ ಅಲ್ಲವೇ. ಗೆಜ್ಜೆ ಬಿಚ್ಚಿಟ್ಟ ಮಾತ್ರಕ್ಕೆ ಎಲ್ಲ ಕಲೆಗಳೂ ಮೌನವಾಗುತ್ತವೆ ಎಂದೇನಿಲ್ಲ. ಮಳೆಯಲ್ಲಿ ಮುಳುಗಿಹೋಗಿರುವ ಮಲೆನಾಡಿನ ಒಂಟಿ ಮನೆಗಳ ಮುಂದೆ ಆಟಿಕಳೆಂಜ, ಸೋಣದ ಜೋಗಿ, ಸಿದ್ದವೇಷಗಳೆಲ್ಲ ಪ್ರತ್ಯಕ್ಷವಾಗುತ್ತವೆ.
ಇವೆಲ್ಲ ಜನಪದ ಕಲಾಪ್ರಕಾರಗಳು. ಹೆಚ್ಚಾಗಿ, ಒಂದು ಕಾಲದಲ್ಲಿ ದನಿಗಳ ಹೊಲ- ಮನೆಗಳಿಗೆ ಪ್ರವೇಶ ಇದ್ದಿರದ, ಹೀಗಾಗಿ ಉಳುಮೆಯ ಕಾಯಕಕ್ಕೂ ಸಾಧ್ಯತೆ ಇಲ್ಲದ, ಸ್ವಂತ ಜಾಗವನ್ನೂ ಹೊಂದಿರದ ಸಮುದಾಯದವರು ಧರಿಸಿ ಬರುವ ವೇಷಗಳು ಇವು. ಸಣ್ಣ ದುಡಿ, ತೆಂಬರೆಗಳ ನಾದದೊಂದಿಗೆ ಅಂಗಳದ ತುದಿಯಲ್ಲಿ ಕಾಣಿಸಿಕೊಳ್ಳುವ ಇವರಿಗೆ ಮಳೆಗಾಲದ ನಾಲ್ಕು ತಿಂಗಳು ಇದೇ ದುಡಿಮೆಯ ಮೂಲ. ಇವರ ಗೆಜ್ಜೆಗಳು ಎಂದಿಗೂ ಮೌನವಾಗವು.
ಯಾಕೆಂದರೆ ಅದು ಅವರ ತುತ್ತಿನೊಂದಿಗೆ ಜೋಡಿಸಿಕೊಂಡಿದೆ. ಚಿಕ್ಕಮೇಳ ಎಂಬುದೂ ಹೀಗೇ ನಾಲ್ಕಾರು ಯಕ್ಷಗಾನ ಕಲಾವಿದರು ಸೇರಿಕೊಂಡು ಮನೆಮನೆಗೆ ಹೋಗಿ ಹತ್ತಿಪ್ಪತ್ತು ನಿಮಿಷದ ಯಕ್ಷಗಾನ ತುಣುಕುಗಳನ್ನು ಪ್ರದರ್ಶಿಸಿ ಮಾಡುವ ಸಂಪಾದನೆ. ಇವರು ಬೇಸಿಗೆಯಲ್ಲಿ ಮತ್ತೆ ಯಕ್ಷಗಾನ ಮೇಳಗಳಿಗೆ ಸೇರಿಕೊಳ್ಳುತ್ತಾರೆ. ಹೀಗೆ ಕಳಚಿಟ್ಟರೂ ಗೆಜ್ಜೆ ಇವರನ್ನು ಬಿಡದು.
ಗೆಜ್ಜೆ ಬಿಚ್ಚಿಟ್ಟು ಮೌನವಾಗಿ ಕೂತಿರುವ ಸಮಯವನ್ನೇ ಸನ್ಯಾಸಾಶ್ರಮ, ಮಠಗಳಲ್ಲಿ 'ಚಾತುರ್ಮಾಸ' ಎಂದು ಕರೆಯುತ್ತಾರೆ. ಯತಿಗಳು ಮಲೆನಾಡಿನ ನಾಲ್ಕು ತಿಂಗಳು ಎಲ್ಲ ಸುತ್ತಾಟ, ಪ್ರವಚನ ಇತ್ಯಾದಿ ಪಕ್ಕಕ್ಕಿಟ್ಟು ಧ್ಯಾನ, ಅಧ್ಯಯನ, ಮೌನಗಳಲ್ಲಿ ಹೊತ್ತು ಕಳೆಯಬೇಕು ಎಂಬುದಿ ದರ ನಿಯಮ.
ತುಂಬಿಕೊಂಡವರಿಗೂ ಮತ್ತೆ ಬರಿದಾಗುವ, ಮತ್ತೆ ತುಂಬಿಕೊಳ್ಳುವ ಅವಕಾಶ. ಜ್ಞಾನಕ್ಕೆ ಸಾಣೆ ಕೊಡುವ, ಯೋಗಕ್ಕೆ ಹೊಳಪು ನೀಡುವ, ಕರ್ಮಕ್ಕೆ ವಿರಾಮ ನೀಡುವ ಈ ಕಾಲ. ನಡೆದಾಡಿದರೆ ಕ್ರಿಮಿಕೀಟಗಳು ಕಾಲಿಗೆ ಸಿಕ್ಕಿ ಸಾಯಬಹುದು ಎಂಬಂಥ ಜೈನಯತಿಗಳ ಅಹಿಂಸೆಯ ವ್ರತ ಈ ಕಾಲದಲ್ಲಿ ತಾರಕ. ಯಾಕೆಂದರೆ ಮಳೆಗಾಲ ಎಲ್ಲ ಜೀವಜಾಲಕ್ಕೆ ಹುಟ್ಟಿನ, ಮರುಹುಟ್ಟಿನ ಸಮಯ. ಮನಸ್ಸಿಗೂ ಬೇಕಲ್ಲ ಮರುಹುಟ್ಟು.
ವರ್ಷದಲ್ಲಿ ಮೂರು ಕಾಲವಲ್ಲ. ಎರಡೇ ಕಾಲ. ಒಂದು ಬಹಿರಂಗದ, ಇನ್ನೊಂದು ಅಂತರಂಗದ ಕಾಲ. 'ಎರಡು ಕೋಣೆಗಳ ನೀಂ ಮಾಡು ಮನದಾಲಯದಿ, ಹೊರಕೋಣೆಯಲಿ ಲೋಗರಾಟ ಗಳನಾಡು, ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ, ವರಯೋಗ ಸೂತ್ರವಿದು' ಎಂದು ಮಂಕುತಿಮ್ಮನಿಗೆ ಡಿವಿಜಿ ಹೇಳುತ್ತಾರೆ. ಆ ಮಾತೂ ಇದನ್ನೇ ಧ್ವನಿಸೀತು.
ಮನದಲ್ಲಿ ಎರಡು ಕೋಣೆಗಳ ಮಾಡಿದಂತೆ, ನಮ್ಮ ಸಮಯದಲ್ಲೂ ಎರಡು ವಿಭಾಗ ಮಾಡಲೇ ಬೇಕು. ಗೆಜ್ಜೆ ಕಟ್ಟಿಕೊಂಡು ಕುಣಿಯುವ, ಲೋಕದ ಮುಂದಿನ ಪ್ರದರ್ಶನದ, ಕಾಯಕದ, ಡ್ಯೂಟಿ ಯ, ದೇಹದಂಡನೆಯ, ಸೊಗಸಾಗಿ ಕಾಣಿಸುವ, ಪ್ರವಾಸ ಮಾಡುವ, ಮಾಡಿದ್ದನ್ನು ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಿ 'ನಾನು ಎಷ್ಟು ಚೆನ್ನಾಗಿದ್ದೇನೆ ನೋಡು' ಎಂದು ಕಾಣಿಸುವ ಕಾಲವೊಂದು.
ಗೆಜ್ಜೆ ಬಿಚ್ಚಿಡುವ, ಸದ್ದಿಲ್ಲದೆ ನಡೆಯುವ, ಹೆಜ್ಜೆಗೆ ಲಜ್ಜೆಯನ್ನೂ ಸಂಯಮವನ್ನೂ ಕಲಿಸುವ, ಮಾತು ಮಾತು ಮಥಿಸಿ ನಾದದ ನವನೀತ ಮಾತ್ರ ಹೊಮ್ಮುವ, ಅಂಗಳಕ್ಕೆ ಬಂದು ಮಳೆನೀರಿನಲ್ಲಿ ಮೈತೊಳೆಯುವ ಹಕ್ಕಿಗಳ ಪುಕ್ಕದ ಸದ್ದನ್ನು ಆಲಿಸುವ, ದೂರದ ಮಲೆಯ ತುದಿಯಿಂದ ಇದೀಗ ಇಳಿದು ಬರುತ್ತಿರುವ ಕಾಳಮೇಘದ ಸದ್ದನ್ನು ಕೇಳಿಸಿಕೊಳ್ಳುವ, ಮೇಲಿನ ಗುಡ್ಡದಲ್ಲೆಲ್ಲೋ ಬಿದ್ದ ಮಳೆಗೆ ಮನೆ ಪಕ್ಕದ ಹೊಳೆ ಇನ್ನು ಕೆಲವೇ ಹೊತ್ತಿನಲ್ಲಿ ಉಬ್ಬರಿಸಿಕೊಳ್ಳಲಿದೆ ಎಂಬುದನ್ನು ಮನಗಾಣುವ, ಮಳೆ ನಿಂತ ಬಳಿಕ ಎಲೆಗಳು ತಟಪಟನೆ ನೆಲಕ್ಕೆ ಉದುರಿಸುವ ಹನಿಗಳನ್ನು ಕಾಣುವ, ತೇಲಿಬಿಟ್ಟ ಕಾಗದದ ದೋಣಿಯನ್ನು ದೃಷ್ಟಿ ಮರೆಯಾಗುವವರೆಗೆ ಹಿಂಬಾಲಿಸುವ ಕಾಲವಿನ್ನೊಂದು. ಅಲ್ಲಿ ಪ್ರದರ್ಶನವಿಲ್ಲ, ದರ್ಶನವಿದೆ. ಕುಣಿತವಿಲ್ಲ, ಮಣಿತವಿದೆ.
ಮೌನವಾಗಿ ಬದುಕನ್ನು ಸಾಕ್ಷಿಯಂತೆ ನೋಡುವ ಪರಿಪಾಠ ನಮ್ಮಲ್ಲಿರುವಂತೆ ಜಪಾನೀಯರಲ್ಲಿ, ಬೌದ್ಧರಲ್ಲೂ ಇದೆ. 'ಸೈಜಾಕು' ಎಂಬುದೊಂದು ಝೆನ್ ಬೌದ್ಧಧರ್ಮದಲ್ಲಿ ಬೇರೂರಿರುವ ಪರಿಕಲ್ಪನೆ. ಇದರ ಅಕ್ಷರಶಃ ಅರ್ಥ ಆಳವಾದ ನಿಶ್ಚಲತೆ. ಇದು ಮೌನವನ್ನು ಮೀರಿದ್ದು. ಗಾಢ ವಾದ ಆಂತರಿಕ ಏಕಾಂತ ಮತ್ತು ಮಾನಸಿಕ ಸ್ಪಷ್ಟತೆಯ ಸ್ಥಿತಿ. 'ಮೊಕುಸಾಟ್ಸು' ಎಂಬುದು ಧ್ಯಾನ ದಂತಹ ಅಭ್ಯಾಸ.
ಮೌನವಾಗಿ ಕುಳಿತುಕೊಳ್ಳುವುದು, ಆಲೋಚನೆಗಳಿಗೆ ಅಂಟಿಕೊಳ್ಳದೆ ಅವುಗಳನ್ನು ಗಮನಿಸು ವುದು, ನಿಶ್ಶಬ್ದದ ನೆಲೆಯಲ್ಲಿ ಶಾಂತಿಯನ್ನು ಕಂಡುಕೊಳ್ಳುವುದು. ಜಪಾನಿನಲ್ಲಿ ಬಡಬಡನೆ ಮಾತಾಡುವುದು ಅಸಭ್ಯ. ಅದನ್ನು ಅಪಕ್ವತೆ ಎಂದು ಗ್ರಹಿಸಲಾಗುತ್ತದೆ. 'ಚಿನ್ಮೋಕು' ಎಂದರೆ ಸಂಯಮದ ಶಕ್ತಿ. ಮನಸ್ಸಿಗೆ ಬಂದದ್ದನ್ನು ಮಾತಾಡದೆ, ಆಲೋಚನೆಗಳನ್ನು ಎಚ್ಚರಿಕೆಯಿಂದ ನೇರ್ಪುಗೊಳಿಸಿ ನಿಧಾನವಾಗಿ ಉಚ್ಚರಿಸುವುದು ಘನತೆ ಗೌರವದ ನಡೆ.
'ಮಾ' ಎಂಬುದು ಆಡುವ ಮಾತುಗಳಲ್ಲಿ ಪದಗಳ ನಡುವಿನ ಅರ್ಥಪೂರ್ಣ ವಿರಾಮ. ಆಡಿದ ಮಾತುಗಳಂತೆಯೇ ಅವುಗಳ ನಡುವಿನ ಮೌನಕ್ಕೂ ಅರ್ಥವಿದೆ ಎಂಬುದನ್ನು ಹೇಳುವ ಒಂದು ಕಲ್ಪನೆ. ಜಪಾನಿನಲ್ಲಿ ಸಾವಿರಾರು ವರ್ಷಗಳ ಝೆನ್ ಪದ್ಧತಿ ಬೇರೂರಿದ್ದು ಸುಮ್ಮನೇ ಅಲ್ಲ. ಅಲ್ಲಿ ಅದು ಬೆಳೆಯಲು ಬೇಕಾದ ಏಕಾಂತ, ಕಾಡು, ಮೌನ, ವಿರಾಮ, ಮಳೆ ಎಲ್ಲವೂ ಇದ್ದಂತೆ ತೋರು ತ್ತದೆ.
ಕಾಲಿಗೆ ಕಟ್ಟಿದ ಗೆಜ್ಜೆಯನ್ನು ಬಿಚ್ಚಿಡಬಹುದು. ಆದರೆ ಮನಸ್ಸಿಗೆ ಕಟ್ಟಿದ ಗೆಜ್ಜೆಯನ್ನು ಕಳಚಿಡು ವುದು ಹೇಗೆ. ವಯಸ್ಸಾಗುತ್ತಿರುವ ಹೀರೋಯಿನ್ ಮೇಕಪ್ ಇಲ್ಲದೆ ಹೊರಗೆ ಕಾಲಿಡದಂತೆ, ಮನಸ್ಸು ಕೂಡ ಮೇಕಪ್ ಇಲ್ಲದೆ ಹೊರಗೆ ಕಾಣಿಸಿಕೊಳ್ಳಲು ಹಿಂಜರಿಯುವುದು.
ನಗರವಾಸಿಗಂತೂ ಗೆಜ್ಜೆ ಬಿಚ್ಚಿಡುವ ಆ ಭಾಗ್ಯವೇ ಇಲ್ಲ. ಅವನು ಸದಾಕಾಲ ಕಾರಿನ ಬೈಕಿನ ಆಕ್ಸಿಲ ರೇಟರ್ ವೃದ್ಧಿಸುತ್ತಲೇ ಇರಬೇಕು. ದಾರಿಗಿಂತ ಗಮ್ಯ ಮುಖ್ಯವೆಂಬ ಧಾವಂತದಲ್ಲೇ ಇರುವ ಆತನಿಗೆ ಎದುರಿಗೆ ಬರುವ ಎಲ್ಲ ವಾಹನ ಸವಾರರ ಮೇಲೆ ಅಸಹನೆ. ಸಣ್ಣ ಕೈಸನ್ನೆಯೂ ಕೆರಳಿಸಿ ಕೊಲೆಯ ವರೆಗೂ ಕೊಂಡೊಯ್ಯುವ ಕೇಡು. ಒಂದು ಕ್ಷಣ ನಿಧಾನಿಸುತ್ತೇನೆ, ಒಂದೇ ಒಂದು ಹೆಜ್ಜೆ ಹಿಂದಿಡು ತ್ತೇನೆ, ಅದೊಂದು ಶಬ್ದ ಆಡದೆ ಸುಮ್ಮನಿರುತ್ತೇನೆ ಎಂದುಕೊಂಡರೆ ಯಾವ ತಾಪತ್ರಯವೂ ಇರದು.
ಯೋಚಿಸುತ್ತ ಹೋದಂತೆಲ್ಲ ಪತ್ತನಾಜೆಯ ಅಂತರಾರ್ಥಗಳು ಇನ್ನಷ್ಟು ಗಾಢವಾಗುತ್ತಿವೆ. ಮಳೆಯ ಮುಂದೆ ಎಲ್ಲ ಪ್ರದರ್ಶನ ಕಲೆಗಳೂ ಸಪ್ಪೆಯೆಂದೂ ಹೊಳೆಯುತ್ತಿದೆ. ಕತ್ತಲಿನ ರಾತ್ರಿಯಲ್ಲಿ ಸಿಡಿಲು ಮಿಂಚು ಗುಡುಗಿನ ಸಮೇತ ನೆಲಕ್ಕಪ್ಪಳಿಸುವ, ಅದರ ಜೊತೆ ಮರಗಳ ನೆತ್ತಿಯನ್ನು ಹಿಡಿದು ಮನಬಂದಂತೆ ಎಳೆದಾಡುವ ಗಾಳಿಯೂ ಸೇರಿಕೊಂಡ ಮಳೆಯನ್ನು ಗಮನಿಸಿದ್ದರೆ ಮೇಲಿನ ಮಾತು ನಿಮಗರ್ಥವಾಗುತ್ತದೆ.
ಅದು ಕುವೆಂಪು ಹೇಳಿದಂತೆ 'ಕದ್ದಿಂಗಳು, ಕಗ್ಗತ್ತಲು, ಕಾರ್ಗಾಲದ ರಾತ್ರಿ, ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ.' ಅದರ ಮುಂದೆ ಎಲ್ಲ ರಕ್ಕಸರಾರ್ಭಟವೂ ಮಕ್ಕಳಾಟ. ಏಕಕಾಲಕ್ಕೆ ಭೂ ದೇವತೆಗೆ ದೇವತಾಸ್ತನ್ಯವಾಗಿಯೂ ವಜ್ರಘಾತವಾಗಿಯೂ ಕಾಣಿಸಿಕೊಳ್ಳಬಲ್ಲ ಮಳೆಯ ಪ್ರದರ್ಶನ ವೇ ನಿಜದರ್ಶನ. ಅದರ ಮುಂದೆ ನಾವು ಗೆಜ್ಜೆ ಕಟ್ಟಿ ತೋರುವ ನಾಟ್ಯವೆಲ್ಲ ಕ್ಷುಲ್ಲಕ. ಅದಕ್ಕೇ ಬಂದಿರಬೇಕು ಬಿಚ್ಚಿಡುವ ಸಂಪ್ರದಾಯ.
ಪತ್ತನಾಜೆಯ ನಂತರದ ನಾಲ್ಕು ತಿಂಗಳು ಕಾಯುವ ಕಾಲವೂ ಹೌದು. ಕಾಯುವಿಕೆಗಿಂತನ್ಯ ತಪವು ಇಲ್ಲ. ನಾಲ್ಕು ತಿಂಗಳು ಸುಮ್ಮನಿದ್ದರೂ ಬದುಕಿನ ಬಂಡಿ ನಡೆಯಬೇಕಲ್ಲ. ಭೂತನರ್ತಕನಿಗೆ ಅಣಿ ಕಟ್ಟಿದ ದಿನದ ಸಂಭಾವನೆ, ಯಕ್ಷಗಾನ ಕಲಾವಿದನಿಗೆ ವೇಷ ಹಾಕಿದ ರಾತ್ರಿಯ ಗೌರವಧನ. ಅಂತರ್ಮಥನದ ಕಾಲ ಹಸಿವಿನ ಕಾಲವಾಗಿಬಿಟ್ಟರೆ ಕತೆಯೇನು? ಹೀಗಾಗಿ ಎಲ್ಲ ಪಾರಲೌಕಿಕ ವನ್ನೂ ಕೊಂಚ ಬದಿಗಿಟ್ಟು, ಲೌಕಿಕದತ್ತ ಮಾತ್ರ ಗಮನ ಹರಿಸಿದರೆ, ಹತ್ತಾರು ಪರ್ಯಾಯ ದುಡಿಮೆ ಯ ದಾರಿಗಳು ತೆರೆದುಕೊಂಡಿರುವುದು ಕಾಣಿಸುತ್ತದೆ. ಸುಮ್ಮನಿರುವ ಅಧ್ಯಾತ್ಮ ಎಂಬುದು ದುಡ್ಡುಳ್ಳವರ ಸ್ವತ್ತು ಎನ್ನದೇ ನಿರ್ವಾಹವಿಲ್ಲ.
ಕಲೆಗಾರನಿಗೆ ಸುಮ್ಮನಿರುವ ಮನಸ್ಸಿರಬಹುದು, ಸ್ವಾತಂತ್ರ್ಯವಿಲ್ಲ. ಅವನು ಪ್ರದರ್ಶಿಸಿಯೇ ಬದುಕು ಚಂದಗೊಳಿಸಿಕೊಳ್ಳಬೇಕಾದ ಮನುಷ್ಯ. ಹೀಗಾಗಿ ಬಿಚ್ಚಿಟ್ಟ ಗೆಜ್ಜೆಯೂ ಮತ್ತೆ ಅಂಟಿಕೊಳ್ಳುತ್ತದೆ. ಬಿಟ್ಟರೂ ಬಿಡದ ಮಾಯೆಯ ಹಾಗೆ, ಸಂಸಾರದ ಹಾಗೆ.

