Dailyhunt Logo
  • Light mode
    Follow system
    Dark mode
    • Play Story
    • App Story
IND vs ENG: ಎರಡನೇ ಟಿ20ಐ ಪಂದ್ಯದಿಂದ ಸಂಜು ಸ್ಯಾಮ್ಸನ್‌ರನ್ನು ಕೈ ಬಿಡಲು ಕಾರಣವೇನು?

IND vs ENG: ಎರಡನೇ ಟಿ20ಐ ಪಂದ್ಯದಿಂದ ಸಂಜು ಸ್ಯಾಮ್ಸನ್‌ರನ್ನು ಕೈ ಬಿಡಲು ಕಾರಣವೇನು?

Vishwavani 2 weeks ago

ಮ್ಯಾಂಚೆಸ್ಟರ್‌: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ಎರಡನೇ ಟಿ20ಐ ಪಂದ್ಯ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಿತು. ಸಂಜು ಸ್ಯಾಮ್ಸನ್‌ (Sanju Samson) ಅವರ ಬದಲು 15ರ ವಯಸ್ಸಿನ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಭಾರತದ ಪ್ಲೇಯಿಂಗ್‌ xiನಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಯಿತು.

ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆಯುವ ವೈಭವ್‌, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದರು.

ಸಂಜು ಸ್ಯಾಮ್ಸನ್‌ ಅವರು ಐರ್ಲೆಂಡ್‌ ಎದುರು ಎರಡು ಹಾಗೂ ಇಂಗ್ಲೆಂಡ್‌ ವಿರುದ್ಧ ಮೊದಲನೇ ಪಂದ್ಯ ಸೇರಿ ಮೂರು ಪಂದ್ಯಗಳಲ್ಲಿ ಸತತವಾಗಿ ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದ್ದರು. ಆದರೆ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲುವಿನಲ್ಲಿ ಸಂಜು ಮಹತ್ತರ ಪಾತ್ರವನ್ನು ವಹಿಸಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಅವರು ಕಳೆದ ಮೂರು ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿ ಕ್ರಮವಾಗಿ 5,1, ಮತ್ತು 0ಗೆ ವಿಕೆಟ್‌ ಒಪ್ಪಿಸಿದ್ದರು.

IND vs ENG: ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಭಾರತ, ವೈಭವ್‌ ಸೂರ್ಯವಂಶಿಗೆ ಚೊಚ್ಚಲ ಅವಕಾಶ!

ಮತ್ತೊಂದು ಕಡೆ 2026ರ ಐಪಿಎಲ್‌ ಟೂರ್ನಿಯಲ್ಲಿ 776 ರನ್‌ಗಳ ಮೂಲಕ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ವೈಭವ್‌ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಬೇಕೆಂದು ಕೂಗು ಬಲವಾಗಿ ಕೇಳಿ ಬರುತ್ತಿತ್ತು. ಹಾಗಾಗಿ ಮ್ಯಾಂಚೆಸ್ಟರ್‌ನಲ್ಲಿ ಸಂಜುಗೆ ವಿಶ್ರಾಂತಿ ನೀಡಿ, 15ರ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶವನ್ನು ನೀಡಲಾಗಿದೆ. ಆದರೆ, ಸಂಜು ಅವರನ್ನು ಕೈ ಬಿಡಲು ಕಾರಣವೇನೆಂದು ಬಿಸಿಸಿಐ ಬಹಿರಂಗಪಡಿಸಿಲ್ಲ. ಅಂದ ಹಾಗಿ ಪಂದ್ಯದ ಆರಂಭಕ್ಕೂ ಮುನ್ನ ಸಂಜು ಸ್ಯಾಮ್ಸನ್‌ ಬಳಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಚರ್ಚೆ ನಡೆಸುತ್ತಿದ್ದರು.

ಸಂಜು ಸ್ಯಾಮ್ಸನ್‌ ಬಗ್ಗೆ ಶ್ರೇಯಸ್‌ ಅಯ್ಯರ್‌ ಪ್ರತಿಕ್ರಿಯೆ

ಪಂದ್ಯದ ಟಾಸ್‌ ವೇಳೆ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌, ಪ್ಲೇಯಿಂಗ್‌ Xiನಲ್ಲಿ ಒಂದು ಬದಲಾವಣೆ ತರಲಾಗಿದೆ ಎಂದು ಹೇಳಿದರು. ಸಂಜು ಸ್ಯಾಮ್ಸನ್‌ ಅವರ ಸ್ಥಾನಕ್ಕೆ ವೈಭವ್‌ ಸೂರ್ಯವಂಶಿಗೆ ಚೊಚ್ಚಲ ಅವಕಾಶ ನೀಡಲಾಗಿದ್ದು, ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಇದರ ಜತೆಗೆ ಭಾರತ ತಂಡದಲ್ಲಿನ ಸ್ಪರ್ಧೆಯ ಬಗ್ಗೆ ಬೆಳಕು ಚೆಲ್ಲಿದರು.

"ಖಂಡಿತವಾಗಿಯೂ. ತಂಡದಲ್ಲಿ ಸ್ಪರ್ಧೆಯ ಮಟ್ಟವನ್ನು ನೀವು ನೋಡುತ್ತಿದ್ದೀರಿ. ಕಳೆದ ಕೆಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ಭಾರತ, ಅಪಾರ ಪ್ರತಿಭಾವಂತ ಆಟಗಾರರನ್ನು ನಿರಂತರವಾಗಿ ನೀಡುತ್ತಿದೆ. ಅದನ್ನು ನೋಡುವುದೇ ಸಂತೋಷದ ಸಂಗತಿ. ಅದೇ ವೇಳೆ, ಇಂತಹ ಸ್ಪರ್ಧಾತ್ಮಕ ವಾತಾವರಣವು ಸರಣಿಯುದ್ದಕ್ಕೂ ನಮ್ಮನ್ನು ಎಚ್ಚರಿಕೆಯಿಂದ ಇರಿಸುತ್ತದೆ. ನನ್ನ ದೃಷ್ಟಿಯಲ್ಲಿ ಒತ್ತಡ ಎಂಬುದು ಒಂದು ವಿಶೇಷ ಅವಕಾಶ. ಆ ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ ನೀಡಿದರೆ ಅದರ ಪ್ರತಿಫಲವೂ ಸಿಗುತ್ತದೆ," ಎಂದು ಶ್ರೇಯಸ್ ಅಯ್ಯರ್‌ ತಿಳಿಸಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ವೈಭವ್‌ ಸೂರ್ಯವಂಶಿ, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ಶಿವಂ ದುಬೇ, ಹರ್ಷಿತ್‌ ರಾಣಾ, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯ್‌, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ

ಇಂಗ್ಲೆಂಡ್‌: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್( ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜಾಶ್ ಟಂಗ್

Dailyhunt
Disclaimer: This content has not been generated, created or edited by Dailyhunt. Publisher: Vishwavani