Dailyhunt Logo
  • Light mode
    Follow system
    Dark mode
    • Play Story
    • App Story
IND vs SL ಟೆಸ್ಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‌ ಮಾಡಿಲ್ಲ: ಆರ್‌ ಅಶ್ವಿನ್‌ ಬೇಸರ!

IND vs SL ಟೆಸ್ಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‌ ಮಾಡಿಲ್ಲ: ಆರ್‌ ಅಶ್ವಿನ್‌ ಬೇಸರ!

Vishwavani 1 week ago

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ (IND vs SL) ಟೆಸ್ಟ್‌ ಸರಣಿಯಲ್ಲಿ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಪಡೆದಿದ್ದ ರಿಷಭ್‌ ಪಂತ್‌ (Rishabh Pant), ಎರಡು ಅರ್ಧಶತಕ ಸೇರಿದಂತೆ ಒಟ್ಟು 168 ರನ್‌ಗಳನ್ನು ಕಲೆ ಹಾಕಿದ್ದರು. ಅಂಕಿಅಂಶಗಳ ಪ್ರಕಾರ ಪಂತ್ ಅವರ ಪ್ರದರ್ಶನ ಉತ್ತಮವಾಗಿತ್ತು ಎಂದು ಹೇಳಬಹುದಾದರೂ, ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದಕ್ಕೆ ವಿರುದ್ಧವಾಗಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನ 'ಆಶ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನ್, ಶ್ರೀಲಂಕಾ ಪ್ರವಾಸದಲ್ಲಿ ಪಂತ್ ನೀಡಿದ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಪಂತ್ ಅವರಿಂದ ತಾವು ಇಟ್ಟುಕೊಂಡಿದ್ದ ನಿರೀಕ್ಷೆಗಳು ಇನ್ನೂ ಈಡೇರಿಲ್ಲ ಎಂದು ಅವರು ಹೇಳಿದ್ದಾರೆ.

"ರಿಷಭ್ ಪಂತ್ ಅವರಿಂದ ನಾನು ಇಟ್ಟುಕೊಂಡಿರುವ ನಿರೀಕ್ಷೆ ಇದುವರೆಗೂ ಈಡೇರಿಲ್ಲ. ಇದನ್ನು ಹೇಳಲು ನನಗೆ ತುಂಬಾ ವಿಷಾದವಿದೆ. ಸೋನಲ್ ದಿನುಷಾ ಅವರ ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿತ್ತು. ಆದರೆ ಇಲ್ಲಿ ವ್ಯತ್ಯಾಸವೆಂದರೆ ಹೆಚ್ಚಿನ ಅಪಾಯದ ಆಯ್ಕೆಗಳನ್ನು ಮಾಡುವುದು. ಪಂದ್ಯ ನಮ್ಮ ನಿಯಂತ್ರಣದಲ್ಲಿರುವಾಗ, 'ರಿಷಭ್ ಹೀಗೆಯೇ ಆಡುತ್ತಾರೆ' ಎಂದು ಹೇಳುವುದು ಸರಿಯಲ್ಲ. ತಂಡಕ್ಕೆ ಆ ಸಂದರ್ಭದಲ್ಲಿ ಏನು ಬೇಕು ಎಂಬುದೇ ಮುಖ್ಯ," ಎಂದು ಅಶ್ವಿನ್ ತಿಳಿಸಿದ್ದಾರೆ.

ರಿಷಭ್‌ ಪಂತ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಆಸ್ಟ್ರೇಲಿಯಾದಲ್ಲಿ ನೀಡಿದ ಪ್ರದರ್ಶನ ಪ್ರಮುಖವಾಗಿದೆ. ಸಿಡ್ನಿ ಮತ್ತು ಬ್ರಿಸ್ಬೇನ್ ಟೆಸ್ಟ್‌ ಪಂದ್ಯಗಳಲ್ಲಿ ಪಂತ್ ಅದ್ಭುತ ಇನಿಂಗ್ಸ್ ಆಡಿದ್ದನ್ನು ಅಶ್ವಿನ್ ಒಪ್ಪಿಕೊಂಡಿದ್ದಾರೆ. ಆದರೆ, ಭಾರತದ ಗೆಲುವಿನಲ್ಲಿ ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಕೊಡುಗೆಯನ್ನೂ ಮರೆಯಬಾರದು ಎಂದು ಅವರು ಒತ್ತಿ ಹೇಳಿದ್ದಾರೆ.

ʻಕೇವಲ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲʼ: ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

"ರಿಷಭ್ ಪಂತ್‌ ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ್ದರು. ಆದರೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಅವರ ಕೊಡುಗೆ ಇಲ್ಲದೆ ಆ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಟೆಸ್ಟ್ ಪಂದ್ಯವನ್ನು ಕಟ್ಟಲು ಮತ್ತು ಕೊನೆಯ ಸೆಷನ್‌ನಲ್ಲಿ ಗೆಲ್ಲಲು 11 ಕ್ರಿಕೆಟಿಗರ ಅಗತ್ಯವಿದೆ. ಆದರೆ ಒಂದು ಟೆಸ್ಟ್ ಪಂದ್ಯವನ್ನು ಸೋಲಲು ಒಂದೇ ಒಂದು ಕ್ಷಣದ ತಪ್ಪು ನಿರ್ಧಾರ ಸಾಕು," ಎಂದು ಅಶ್ವಿನ್ ತಿಳಿಸಿದ್ದಾರೆ.

ಪಂತ್ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದರೂ, ತಂಡದ ಮ್ಯಾನೇಜ್‌ಮೆಂಟ್ ಅವರ ಮೇಲೆ ಇಡುತ್ತಿರುವ ವಿಶೇಷ ನಂಬಿಕೆಯ ಬಗ್ಗೆಯೂ ಅಶ್ವಿನ್ ಪ್ರಶ್ನೆ ಎತ್ತಿದ್ದಾರೆ.

"ಪಂದ್ಯದ ಫಲಿತಾಂಶ ನಿರ್ಧರಿಸುವಂತಹ ಸಂದರ್ಭದಲ್ಲಿ ತೆಗೆದುಕೊಳ್ಳಲಾಗುತ್ತಿರುವ ಇಂತಹ ಅಪಾಯಕಾರಿ ಅವಕಾಶಗಳ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಆಟಗಾರನಾಗಿ ರಿಷಭ್ ಅವರನ್ನು ನಾನು ತುಂಬಾ ಇಷ್ಟಪಡುತ್ತೇನೆ. ಆದರೆ ಈ ಮಾದರಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡುವುದು ಮುಖ್ಯ. ವೀರೇಂದ್ರ ಸೆಹ್ವಾಗ್ ಮತ್ತು ಆಡಂ ಗಿಲ್‌ಕ್ರಿಸ್ಟ್ ಕೂಡ ಆಕ್ರಮಣಕಾರಿ ಹಾಗೂ ವಿಭಿನ್ನ ಶೈಲಿಯ ಕ್ರಿಕೆಟ್ ಆಡುತ್ತಿದ್ದರು. ಆದರೆ ನಿಮ್ಮ ತಂಡ 500 ರನ್‌ಗಳಿಂದ ಹಿನ್ನಡೆಯಲ್ಲಿರುವಾಗ ಮಾರ್ಕೊ ಯೆನ್ಸನ್ ಅವರ ಎಸೆತಕ್ಕೆ ಮುಂದಕ್ಕೆ ಬಂದು ಆಡಿ ಕ್ಯಾಚ್ ನೀಡಿ ಔಟಾಗುವ ರೀತಿಯ ತಪ್ಪುಗಳನ್ನು ಅವರು ಮಾಡುತ್ತಿರಲಿಲ್ಲ. ಇಂತಹ 'ಮಾರ್ಕೆಟಿಂಗ್' ಮಾತುಗಳನ್ನು ಮತ್ತೆ ನನ್ನ ಮುಂದೆ ಹೇಳಬೇಡಿ," ಎಂದು ಅವರು ಹೇಳಿದ್ದಾರೆ.

'ಟೆಸ್ಟ್ ಕ್ರಿಕೆಟ್ ಗೆದ್ದಿದೆ': ಕೊಲಂಬೊ ಟೆಸ್ಟ್‌ ಡ್ರಾ ಬಳಿಕ ಶುಭಮನ್ ಗಿಲ್ ಹೇಳಿಕೆ

ಒಬ್ಬ ಆಟಗಾರನಿಗೆ ಮಾತ್ರ ವಿಶೇಷ ಬೇಡ

ತಂಡದ ಮ್ಯಾನೇಜ್‌ಮೆಂಟ್ ಒಬ್ಬರು ಅಥವಾ ಇಬ್ಬರು ಆಟಗಾರರಿಗೆ ಮಾತ್ರ ವಿಶೇಷತೆ ನೀಡುವುದನ್ನು ಅಶ್ವಿನ್ ವಿರೋಧಿಸಿದ್ದಾರೆ. ಪಂತ್ ಅವರನ್ನು "ತಲೆಮಾರಿಗೊಮ್ಮೆ ಸಿಗುವ ಆಟಗಾರ" ಎಂದು ಬಣ್ಣಿಸಿ ಬೆಂಬಲಿಸುವುದೂ ಅವರಿಗೆ ಇಷ್ಟವಾಗಿಲ್ಲ.

"ಒಬ್ಬ ಆಟಗಾರನಿಗೆ ಮಾತ್ರ ವಿಶೇಷತೆ ನೀಡಬೇಡಿ. 'ತಲೆಮಾರಿಗೊಮ್ಮೆ ಸಿಗುವ ಆಟಗಾರ' ಎಂಬ ಬೆಂಬಲ ನೀಡುವುದಾದರೆ, ಅದನ್ನು ಎಲ್ಲರಿಗೂ ನೀಡಿ. ಯಶಸ್ವಿ ಜೈಸ್ವಾಲ್ ಕೂಡ ಅಂತಹ ಆಟಗಾರ. ನಾನು ಹೇಳುತ್ತಿರುವುದೇನೆಂದರೆ, ರಿಷಭ್ ಈಗ ಅನುಭವಿ ಆಟಗಾರ. ಅವರು 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು," ಎಂದು ಅಶ್ವಿನ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani