Dailyhunt Logo
  • Light mode
    Follow system
    Dark mode
    • Play Story
    • App Story
ಇಂದು ಅರಮನೆಗೆ ಗಜಪಡೆ ಪ್ರವೇಶ

ಇಂದು ಅರಮನೆಗೆ ಗಜಪಡೆ ಪ್ರವೇಶ

Vishwavani 2 weeks ago

ಕೆ.ಜೆ.ಲೋಕೇಶ್ ಬಾಬು

ನೆಗಳ ಆಗಮನದಿಂದ ಮೈಸೂರು ನಗರದಾದ್ಯಂತ ಹಬ್ಬದ ಕಳೆ, ಶುಕ್ರವಾರ ಶುಭ

ತುಲಾ ಲಗ್ನದಲ್ಲಿ ಅರಮನೆಯ ಜಯಮಾತಾಂಡ ದ್ವಾರದಲ್ಲಿ ಗಜಪಡೆಗೆ ಪೂಜೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಗೆ ಸಜ್ಜಾಗುತ್ತಿರುವ ಮೈಸೂರಿನಲ್ಲಿ ಗಜಪಡೆಯ ಆಗಮನವೇ ಹಬ್ಬದ ಕಳೆ ಹೆಚ್ಚಿಸಿದೆ.

ಗಜಪಯಣದ ಬಳಿಕ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಮೊದಲ ತಂಡದ ಒಂಬತ್ತು ಆನೆಗಳು ಗುರುವಾರ ಇಡೀ ದಿನ ವಿಶ್ರಾಂತಿ ಪಡೆದು, ಶುಕ್ರವಾರ ಅರಮನೆ ಅಂಗಳ ಪ್ರವೇಶಿಸಲು ಸಜ್ಜಾಗಿವೆ.

ಬುಧವಾರ ಗಜಪಯಣ ಕಾರ್ಯಕ್ರಮ ಮುಗಿಸಿ ಲಾರಿಗಳ ಮೂಲಕ ಮೈಸೂರಿಗೆ ಆಗಮಿಸಿದ ಆನೆಗಳು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ. ಪ್ರಯಾಣದ ಆಯಾಸದಿಂದ ಬಳಲಿದ್ದ ಆನೆಗಳು ಗುರುವಾರ ಯಾವುದೇ ಗೊಂದಲವಿಲ್ಲದೆ ವಿಶ್ರಾಂತಿ ಪಡೆದವು. ಮುಂಜಾನೆಯೇ ಮಾವುತರು ಹಾಗೂ ಕಾವಾಡಿಗಳು ಆನೆಗಳಿಗೆ ಮಜ್ಜನ ಮಾಡಿಸಿ, ಹಸಿ ಹುಲ್ಲು, ಒಣ ಹುಲ್ಲು, ಕಬ್ಬು, ಆಲದ ಎಲೆ, ಸೊಪ್ಪು, ಭತ್ತ ಹಾಗೂ ಬೆಲ್ಲ ನೀಡಿ ಆರೈಕೆ ಮಾಡಿದರು. ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆದಿರುವ ಗಜಪಡೆ ಶುಕ್ರವಾರ ಅರಮನೆ ಅಂಗಳ ಪ್ರವೇಶಿಸಲಿವೆ. ಬೆಳಗ್ಗೆ 9.52ರಿಂದ 10.19ರವರೆಗೆ ಇರುವ ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯಮಾತಾಂಡ ದ್ವಾರದಲ್ಲಿ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ ಗಜಪಡೆಯನ್ನು ಸ್ವಾಗತಿಸಲಾಗುತ್ತದೆ.

ದುಬಾರೆಯ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ ಮತ್ತು ಲಕ್ಷ್ಮೀ, ಭೀಮನಕಟ್ಟೆಯ ಏಕಲವ್ಯ ಹಾಗೂ ಮತ್ತಿಗೋಡು ಶಿಬಿರದ ಶ್ರೀಕಂಠ ಸೇರಿದಂತೆ ಒಂಬತ್ತು ಆನೆಗಳು ಅರಮನೆ ಅಂಗಳ ಪ್ರವೇಶಿಸಲಿವೆ. ನಂತರ ಅರಮನೆ ಮುಂಭಾಗ ಪೂಜೆ ನೆರವೇರಿಸಿ, ಮಾವುತರು ಮತ್ತು ಕಾವಾಡಿಗಳಿಗೆ ಅಗತ್ಯ ದಿನಸಿ ಹಾಗೂ ಇತರ ವಸ್ತುಗಳಿರುವ ಕಿಟ್‌ಗಳನ್ನು ವಿತರಿಸಲಾಗುತ್ತದೆ.

Mysore News: ನಂಜನಗೂಡಿನಲ್ಲಿ ಆರ್‌ವಿ ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್‌ಗೆ ಚಾಲನೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅರಣ್ಯ ಭವನದಿಂದ ಅರಮನೆವರೆಗೆ: ಅರಮನೆಗೆ ತೆರಳುವ ಮುನ್ನ ಅರಣ್ಯ ಇಲಾಖೆಯ ವತಿಯಿಂದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ. ಬಳಿಕ ಆನೆಗಳನ್ನು ಕಾಲ್ನಡಿಗೆಯಲ್ಲಿ ಅರಮನೆಗೆ ಕರೆದೊಯ್ಯಲಾಗುತ್ತದೆ.

ಅರಣ್ಯ ಭವನದಿಂದ ಹೊರಡುವ ಗಜಪಡೆ ಅಶೋಕಪುರಂ ರಸ್ತೆ, ಬಳ್ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ಹಾಗೂ ಬಿಎನ್ ರಸ್ತೆ ಮೂಲಕ ಸಾಗಲಿದೆ. ಗಜಪಡೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ.

ಕಾಡಿನಿಂದ ನಾಡಿಗೆ ಬಂದ ಗಜಪಡೆ ಈಗ ಅರಮನೆಯ ಅಂಗಳ ಸೇರಲಿದ್ದು, ದಸರಾ ಜಂಬೂ ಸವಾರಿಯ ಸಿದ್ಧತೆಗೆ ಮೈಸೂರಿನ ರಾಜಬೀದಿಗಳು ಮತ್ತಷ್ಟು ಕಳೆಗಟ್ಟಲಿವೆ. ಅಭಿಮನ್ಯು ಜಾಗದಲ್ಲಿ ಮಹೇಂದ್ರ: ಅರಣ್ಯ ಭವನದ ಆನೆ ಬೀಡಿನಲ್ಲಿ ಗಜಪಡೆಯನ್ನು ಪ್ರತ್ಯೇಕ ಸ್ಥಳಗಳಲ್ಲಿ ಕಟ್ಟಿ ಹಾಕಲಾಗಿತ್ತು. ಈ ಹಿಂದೆ ಮಾಜಿ ಕ್ಯಾಪ್ಟನ್ ಅಭಿಮನ್ಯು ಕಟ್ಟುತ್ತಿದ್ದ ಸ್ಥಳದಲ್ಲಿ ಈ ಬಾರಿ ಮಹೇಂದ್ರನಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಪಕ್ಕದಲ್ಲೇ ಹೆಣ್ಣಾನೆಗಳಾದ ಲಕ್ಷ್ಮೀ ಹಾಗೂ ಕಾವೇರಿಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ.

ಕಾಂಪೌಂಡ್ ಬಳಿಯ ಮತ್ತೊಂದು ಭಾಗದಲ್ಲಿ ಶ್ರೀರಾಮ ವಿಶ್ರಾಂತಿ ಪಡೆದರೆ, ಧನಂಜಯ ಹಾಗೂ ಪ್ರಶಾಂತ ಒಂದು ಕಡೆ, ಏಕಲವ್ಯ ಮತ್ತು ಶ್ರೀಕಂಠ ಮತ್ತೊಂದು ಕಡೆ ವಿಶ್ರಾಂತಿ ಪಡೆದವು. ಸ್ಥಳಾವಕಾಶದ ಕೊರತೆಯಿಂದ ಗೋಪಿ ಆನೆಯನ್ನು ಮಾತ್ರ ಪ್ರತ್ಯೇಕವಾಗಿ ಕಟ್ಟಲಾಗಿತ್ತು. ಗಜಪಡೆಯ ಆರೈಕೆಯಲ್ಲಿ ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರು ತಲ್ಲೀನ ರಾಗಿದ್ದರು.

ತಮ್ಮ ಕುಟುಂಬದವ ರೊಂದಿಗೆ ಆಗಮಿಸಿದ್ದ ಕಾವಾಡಿ ಮತ್ತು ಮಾವುತರ ಮಕ್ಕಳು ಸ್ನೇಹಿತ ರೊಂದಿಗೆ ಆಟವಾಡಿ ಸಂಭ್ರಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಆರೋಗ್ಯ, ಚಲನವಲನ ಹಾಗೂ ವರ್ತನೆಯ ಮೇಲೆ ನಿರಂತರ ನಿಗಾ ವಹಿಸಿದರು. ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ಎರಡು ಆನೆಗಳ ಕಾದಾಟದಲ್ಲಿ ಪ್ರವಾಸಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಭವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿಬಂಧ ಹೇರಲಾಗಿತ್ತು.

ಗೇಟ್‌ನಲ್ಲಿ ಸಾರ್ವಜನಿಕರನ್ನು ತಡೆಯುತ್ತಿದ್ದರೂ ಗಜಪಡೆಯನ್ನು ಕಣ್ತುಂಬಿಕೊಳ್ಳುವ ಕುತೂಹಲ ಕ್ಕೆ ಮಾತ್ರ ಕಡಿವಾಣ ಬೀಳಲಿಲ್ಲ. ಅನ್ಯ ಮಾರ್ಗಗಳಿಂದ ಒಳನುಗ್ಗಿದ ಹಲವರು ದೂರದಿಂದಲೇ ಆನೆಗಳನ್ನು ವೀಕ್ಷಿಸಿ, ಮೊಬೈಲ್‌ಗಳಲ್ಲಿ ಚಿತ್ರಗಳನ್ನು ಸೆರೆಹಿಡಿದರು. ಶಾಲಾ ಮಕ್ಕಳು ಕೂಡ ಗಜಪಡೆಯನ್ನು ನೋಡಿ ಸಂಭ್ರಮಿಸಿದರು.

ರೈಲಿನ ಶಬ್ದಕ್ಕೂ ಬೆದರದ ಗಜಪಡೆ ಅರಣ್ಯ ಭವನದ ಕಾಂಪೌಂಡ್‌ಗೆ ಹೊಂದಿಕೊಂಡಂತೆಯೇ ರೈಲು ಹಳಿ ಇರುವುದರಿಂದ ಮೈಸೂರು ನಂಜನಗೂಡು ಚಾಮರಾಜ ನಗರ ಮಾರ್ಗದಲ್ಲಿ ರೈಲು ಗಳು ಸಂಚರಿಸುವಾಗ ಭಾರಿ ಶಬ್ದ ಕೇಳಿ ಬರುತ್ತಿತ್ತು. ಆದರೆ ರೈಲಿನ ಶಬ್ದಕ್ಕೂ ಗಜಪಡೆಯ ಯಾವುದೇ ಆನೆ ಬೆಚ್ಚಲಿಲ್ಲ. ಧೈರ್ಯದಿಂದಲೇ ನಿಂತಿದ್ದ ಆನೆಗಳ ದೃಶ್ಯ ಗಮನ ಸೆಳೆಯಿತು. ಅನ್ಯ ಮಾರ್ಗಗಳಿಂದ ಒಳನುಗ್ಗಿದ ಹಲವರು ದೂರದಿಂದಲೇ ಆನೆಗಳನ್ನು ವೀಕ್ಷಿಸಿ, ಮೊಬೈಲ್‌ಗಳಲ್ಲಿ ಚಿತ್ರ ಗಳನ್ನು ಸೆರೆಹಿಡಿದರು. ಶಾಲಾ ಮಕ್ಕಳು ಕೂಡ ಗಜಪಡೆಯನ್ನು ನೋಡಿ ಸಂಭ್ರಮಿಸಿದರು

Dailyhunt
Disclaimer: This content has not been generated, created or edited by Dailyhunt. Publisher: Vishwavani