Dailyhunt Logo
  • Light mode
    Follow system
    Dark mode
    • Play Story
    • App Story
JSW Indian Open 2026: ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್‌ನಲ್ಲಿ ಭಾರತ ಶುಭಾರಂಭ!

JSW Indian Open 2026: ಜೆಎಸ್‌ಡಬ್ಲ್ಯು ಇಂಡಿಯನ್ ಓಪನ್‌ನಲ್ಲಿ ಭಾರತ ಶುಭಾರಂಭ!

Vishwavani 2 months ago

ಬೆಂಗಳೂರು: ಮುಂಬೈನ ಸಿಸಿಐ ಕ್ರೀಡಾಂಗಣದಲ್ಲಿ ಅತ್ಯಂತ ರೋಚಕವಾಗಿ ಜೆಎಸ್‌ಡಬ್ಲ್ಯೂ ಇಂಡಿಯನ್ ಓಪನ್ 2026 ಟೂರ್ನಿ (JSW Indian Open 2026) ಆರಂಭಗೊಂಡಿತು. ಮೊದಲ ದಿನ ನಡೆದಿದ್ದ ಸರಣಿಯ ಪಂದ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು. ಭಾರತದ ಓಂ ಸೆಮ್ವಾಲ್ (Om Semwal), ಮೆಕ್ಸಿಕೋದ ಸೆಬಾಸ್ಟಿಯನ್ ಸಲಾಜರ್ ವಿರುದ್ಧ ನಡೆದ ಐದು ಗೇಮ್‌ಗಳ ಸುದೀರ್ಘ ಹೋರಾಟದಲ್ಲಿ ದಿನದ ಅತ್ಯುತ್ತಮ ಪ್ರದರ್ಶನ ನೀಡಿದರು.

ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ನಡೆದ ಈ ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಸೆಮ್ವಾಲ್ ತಮ್ಮ ಸಂಯಮ ಕಾಯ್ದುಕೊಂಡು 3-2 ಅಂತರದ ಕಠಿಣ ಜಯ ದಾಖಲಿಸಿದರು.

ಅಷ್ಟೇ ಕುತೂಹಲಕಾರಿಯಾಗಿದ್ದ ಮತ್ತೊಂದು ಪಂದ್ಯದಲ್ಲಿ, ಈಜಿಪ್ಟ್‌ನ ಯಾಸಿನ್ ಶೋಹ್ದಿ ಮೊದಲ ಸೆಟ್ ಅನ್ನು 10-12 ರಿಂದ ಸೋತ ನಂತರವೂ ಅದ್ಭುತವಾಗಿ ಪುಟಿದೇಳುವ ಮೂಲಕ ಎಲ್ಲರ ಗಮನ ಸೆಳೆದರು. ಫ್ರಾನ್ಸ್‌ನ ಮ್ಯಾನುಯೆಲ್ ಪಾಕೆಮಾರ್ ವಿರುದ್ಧದ ಎರಡನೇ ಗೇಮ್ ಅನ್ನು 13-11 ರಿಂದ ಗೆದ್ದ ಶೋಹ್ದಿ, ನಂತರ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ 3-1 ರಿಂದ ಗೆಲುವು ಸಾಧಿಸಿದರು.

JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ಹೈ-ವೋಲ್ಟೇಜ್ ಪಂದ್ಯ!

ಇತರ ಪಂದ್ಯಗಳಲ್ಲಿ ಸ್ವಿಜರ್ಲೆಂಡ್‌ನ ಅಂಬ್ರೆ ಅಲಿಂಕ್ಸ್, ನೆದರ್ಲೆಂಡ್ಸ್‌ ಟೆಸ್ಸಾ ಟೆರ್ ಸ್ಲೂಯಿಸ್ ವಿರುದ್ಧ 3-1 ಅಂತರದಲ್ಲಿ ಜಯಗಳಿಸಿದರೆ, ಈಜಿಪ್ಟ್‌ನ ಇಬ್ರಾಹಿಂ ಎಲ್ಕಬ್ಬಾನಿ ಭಾರತದ ಸೂರಜ್ ಕುಮಾರ್ ಚಾಂದ್ ವಿರುದ್ಧ 3-1 ಅಂತರದ ಭರ್ಜರಿ ಗೆಲುವು ದಾಖಲಿಸಿದರು.

ದಿನದ ಇನ್ನುಳಿದ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಆಟಗಾರರು ತಮ್ಮ ಪ್ರಾಬಲ್ಯ ಮೆರೆದರು. ಹಾಂಗ್ ಕಾಂಗ್‌ನ ಚಿ ಹಿಮ್ ವಾಂಗ್, ಅಯಾನ್ ವಜಿರಳ್ಳಿ ವಿರುದ್ಧ 3-0 ಅಂತರದಲ್ಲಿ ಸುಲಭವಾಗಿ ಗೆದ್ದರೆ, ಸೋಫಿಯಾ ಮಾಡೋಸ್ ಶಮೀನಾ ರಿಯಾಜ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿದರು. ಮ್ಯಾಥ್ಯೂ ಲಾಯ್ ಮತ್ತು ಡ್ಯಾನಿಯೆಲ್ ರೇ ಇಬ್ಬರೂ ತಮ್ಮ ಪಂದ್ಯಗಳನ್ನು 3-0 ಅಂತರದಿಂದ ಗೆಲ್ಲುವ ಮೂಲಕ ಶುಭಾರಂಭ ಮಾಡಿದರು.

ಈಗ ಎಲ್ಲರ ಕಣ್ಣು ಎರಡನೇ ದಿನದ ಮೇಲಿದ್ದು, ಭಾರತದ ತಾರಾ ಆಟಗಾರರಾದ ವೀರ್ ಚೋತ್ರಾನಿ, ಜೋಶ್ನಾ ಚಿನ್ನಪ್ಪ, ಅನಾಹತ್ ಸಿಂಗ್, ಅಭಯ್ ಸಿಂಗ್ ಮತ್ತು ರಮಿತ್ ಟಂಡನ್ ಕಣಕ್ಕಿಳಿಯಲಿದ್ದಾರೆ. ಭಾರತೀಯ ಆಟಗಾರರ ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಮುಂಬೈನ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani