Dailyhunt
ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯೋ ಥ್ರಿಲ್ಲರ್ ಕಥೆಗೆ ರಾಜೇಶ್‌ ಧ್ರುವ ಹೀರೋ; ಏಪ್ರಿಲ್‌ 10ಕ್ಕೆ ಬರ್ತಿದೆ ʻಪೀಟರ್ʼ

ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯೋ ಥ್ರಿಲ್ಲರ್ ಕಥೆಗೆ ರಾಜೇಶ್‌ ಧ್ರುವ ಹೀರೋ; ಏಪ್ರಿಲ್‌ 10ಕ್ಕೆ ಬರ್ತಿದೆ ʻಪೀಟರ್ʼ

Vishwavani 2 weeks ago

ಹಿಂದೆ ʻದೂರದರ್ಶನʼ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಸುಕೇಶ್‌ ಶೆಟ್ಟಿ ಅವರು ಈಗ ʻಪೀಟರ್‌ʼ ಎಂಬ ಹೊಸ ಸಿನಿಮಾದ ಜೊತೆಗೆ ಬಂದಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಈ ಸಿನಿಮಾದ ಹಾಡುಗಳು ಈಗಾಗಲೇ ದೊಡ್ಡ ಹಿಟ್‌ ಆಗಿವೆ. ರಾಜೇಶ್‌ ಧ್ರುವ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಟೀಸರ್‌ ಕೂಡ ಗಮನಸೆಳೆದಿದೆ.

ಸದ್ಯ ಏಪ್ರಿಲ್‌ 10ರಂದು ಗ್ರ್ಯಾಂಡ್‌ ಆಗಿ ರಿಲೀಸ್ ಮಾಡಲು ‌ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ನಿರ್ದೇಶಕ ಸುಕೇಶ್ ಶೆಟ್ಟಿ ಹೇಳಿದ್ದೇನು?

"ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿಯೂ ನಾವು ಹೊಸತನ ಇರುವ ಕಂಟೆಂಟ್‌ ನೀಡಿದ್ದೇವೆ. ಮಡಿಕೇರಿಯ ಭಾಗಮಂಡಲದಲ್ಲಿ ನಡೆಯುವ ಈ ರೋಚಕ ಕಥೆಯನ್ನು ಪ್ರೇಕ್ಷಕರು ಖುಷಿಯಿಂದ ಅನುಭವಿಸಲಿದ್ದಾರೆ. ನಾಲ್ಕು ಜಾನರ್‌ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಪ್ರೇಕ್ಷಕರಿಗೆ ಹತ್ತಿರವಾಗಲೂ ಇದೇ ಕಾರಣ. ನಾವು ಭಿನ್ನವಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಾ ಬಂದಿದ್ದೇವೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದರಾಬಾದ್‌ನಲ್ಲಿಯೂ ನಮ್ಮ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ 10ಕ್ಕೆ ಬಿಡುಗಡೆಯಾದರೇ, ಎರಡು ವಾರದ ಬಳಿಕ ಅಕ್ಕಪಕ್ಕದ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ಸುಕೇಶ್ ಶೆಟ್ಟಿ.

ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸನಾಗುವ ಹೀರೋ

"ಇದು ನನ್ನ ಎರಡನೇ ಸಿನಿಮಾ. ಉತ್ತಮ ಕಲಾವಿದರು ಹಾಗೂ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಸುಕೇಶ್ ಶೆಟ್ಟಿ ಅವರು ಮುಂದೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಿರ್ದೇಶಕರಾಗುತ್ತಾರೆ. ಮೂರು ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಸಿನಿಮಾವನ್ನು ಮುಗಿಸಿದ್ದಾರೆ. ನಿರ್ಮಾಪಕರಾದ ರವಿ ಹೀರೇಮಠ್ ಮತ್ತು ರಾಕೇಶ್ ಹೆಗ್ಗಡೆ ಚಿತ್ರಕ್ಕೆ ಯಾವುದೇ ಕೊರತೆ ಮಾಡದೇ ಎಲ್ಲವನ್ನೂ ನೀಡಿದ್ದಾರೆ. ಪೀಟರ್ ರಾಕ್ಷಸನೋ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ಅದರ ರಕ್ಷಣೆಗೆ ಹೇಗೆ ಮುಂದಾಗುತ್ತಾನೆ? ಅವನ ವೈಯಕ್ತಿಕ ಜೀವನದ ರಕ್ಷಣೆಗೆ ಹೇಗೆ ರಾಕ್ಷಸ ಆಗುತ್ತಾನೆ ಅನ್ನೋದನ್ನು ನೀವು ಥಿಯೇಟರ್‌ನಲ್ಲಿ ನೋಡಿ ಅನುಭವಿಸಬೇಕು" ಎನ್ನುತ್ತಾರೆ ನಟ ರಾಜೇಶ್‌ ಧ್ರುವ

ʻಪೀಟರ್ʼ ಚಿತ್ರದಲ್ಲಿ ರಾಜೇಶ್ ಧ್ರುವಗೆ ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಇನ್ನುಳಿದಂತೆ ರವೀಕ್ಷಾ ಶೆಟ್ಟಿ, ರಘು ಪಾಂಡೇಶ್ವರ್, ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್, ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

ರಿತ್ವಿಕ್ ಮುರಳಿಧರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ದೊಡ್ಡ ಹಿಟ್‌ ಆಗಿವೆ. ʻಸೈರಾಠ್‌ʼ ಖ್ಯಾತಿಯ ಅಜಯ್ ಗೊಗಾವಲೆ ಹಾಡಿರೋ ʻಜೋಷ್ ಕಿ ಜವಾನಿ ಫ್ರೆಂಡ್ ಶಿಪ್ʼ ಹಾಡು ಗಮನ ಸೆಳೆಯುತ್ತಿದೆ. ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ ಮಾಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ಏಪ್ರಿಲ್‌ 10ರಂದು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani