Dailyhunt Logo
  • Light mode
    Follow system
    Dark mode
    • Play Story
    • App Story
Keshava Prasad B Column: ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ?

Keshava Prasad B Column: ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ?

Vishwavani 2 hrs ago

ಮನಿ ಮೈಂಡೆಡ್

ಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಕೊನೆಗೊಂಡಿದೆ ಎಂದು ಘೋಷಿಸಿದ್ದಾರೆ. ಇರಾನ್‌ನೊಂದಿಗಿನ ಸಂಘರ್ಷವು ಮತ್ತೆ ಭುಗಿಲೆದ್ದಿದ್ದು, ಇರಾನ್‌ನ ಕಡೆಯಿಂದ ವಾಣಿಜ್ಯ ನೌಕೆಗಳ ಮೇಲೆ ದಾಳಿ ನಡೆದ ನಂತರ ಅಮೆರಿಕ ತೀವ್ರ ಪ್ರತೀಕಾರದ ದಾಳಿಗಳನ್ನು ನಡೆಸಿದೆ.

ಈ ಸಂಘರ್ಷವು ಎಷ್ಟು ದಿನಗಳವರೆಗೆ ನಡೆಯಬಹುದು ಎಂಬ ಬಗ್ಗೆ ಅಮೆರಿಕದ ಅಧಿಕಾರಿಗಳು ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ಕೆಲವು ವರದಿಗಳ ಪ್ರಕಾರ, ಇದು ಕೇವಲ ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ, ಬಹುಶಃ ವಾರಗಳವರೆಗೆ ಅಥವಾ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕವು ಇರಾನ್‌ನ ಕ್ಷಿಪಣಿ ಉತ್ಪಾದನಾ ಕೇಂದ್ರ ಗಳು, ನೌಕಾಪಡೆ ಮತ್ತು ಪ್ರಮುಖ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇರಾನ್ ಅಣ್ವಸ್ತ್ರಗಳನ್ನು ಪಡೆಯದಂತೆ ತಡೆಯುವುದು ಅಮೆರಿಕದ ಪ್ರಮುಖ ಗುರಿಯಾಗಿದೆ ಎಂದು ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ಪರಸ್ಪರ ನಂಬಿಕೆಯು ಸಂಪೂರ್ಣವಾಗಿ ನಶಿಸಿದೆ. ಇರಾನ್ ತನ್ನ ಪರಮಾಧಿಕಾರ ಮತ್ತು ತೈಲ ಮಾರಾಟದ ಮೇಲಿನ ನಿರ್ಬಂಧಗಳ ಬಗ್ಗೆ ಹಠ ಹಿಡಿದಿದೆ. ಅಮೆರಿಕ, ಇರಾನ್‌ನ 'ಪರಮಾಣು ಮಹತ್ವಾಕಾಂಕ್ಷೆ' ಮತ್ತು 'ಹೊರ್ಮುಜ್ ಜಲಸಂಧಿಯ ಮೇಲೆ ಹಿಡಿತ' ಸಾಧಿಸುವ ಪ್ರಯತ್ನವನ್ನು ತನ್ನ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಪರಿಗಣಿಸಿದೆ.

ಎರಡೂ ದೇಶಗಳು ಮಾತುಕತೆ ನಡೆಸುವಾಗಲೂ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವುದು ಎಂಬ ತಂತ್ರವನ್ನು ಅನುಸರಿಸುತ್ತಿವೆ. ಅಂದರೆ, ಮಾತುಕತೆ ಮೇಲ್ನೋಟಕ್ಕೆ ನಡೆಯುತ್ತಿದ್ದರೂ, ನೆಲದ ಮೇಲೆ (ಅಥವಾ ಸಮುದ್ರದಲ್ಲಿ) ಯುದ್ಧದ ತೀವ್ರತೆ ಕಡಿಮೆಯಾಗಿಲ್ಲ. ಇರಾನ್ ತನ್ನ ಬೇಡಿಕೆಗಳನ್ನು ಪೂರೈಸದ ಹೊರತು ಮಾತುಕತೆ ಅಪ್ರಸ್ತುತ ಎನ್ನುತ್ತಿದೆ. ಇತ್ತ ಅಮೆರಿಕ, ಒಪ್ಪಂದ ಮಾಡಿಕೊಳ್ಳಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಎಚ್ಚರಿಸಿದೆ.

Keshava Prasad B Column: ಕೋಟ್ಯಧಿಪತಿಯಾಗುವುದು ತೀರಾ ಅಸಾಧ್ಯ ಮಾತೇನಲ್ಲ!

ಹೀಗಾಗಿ, ರಾಜತಾಂತ್ರಿಕ ಪ್ರಯತ್ನಗಳು ಕೇವಲ 'ತಾತ್ಕಾಲಿಕ ಕದನ ವಿರಾಮ'ಕ್ಕೆ ಸೀಮಿತವಾಗುವ ಸಾಧ್ಯತೆಯೇ ಹೆಚ್ಚು. ಈ ಬೆಳವಣಿಗೆಯಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆ ಗಳು, ಅದರಲ್ಲೂ ವಿಶೇಷವಾಗಿ ಭಾರತೀಯ ಷೇರು ಮಾರುಕಟ್ಟೆಗಳು ಈ ರಾಜಕೀಯ ಅನಿಶ್ಚಿತತೆಯಿಂದಾಗಿ ಒತ್ತಡಕ್ಕೆ ಒಳಗಾಗಿವೆ. ಟ್ರಂಪ್ ಅವರು ಇರಾನ್‌ನೊಂದಿಗಿನ ಹಳೆಯ ಒಪ್ಪಂದವನ್ನು ರದ್ದುಗೊಳಿಸಿzರೆ ಮತ್ತು ಒಂದೋ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ, ಇಲ್ಲವಾದರೆ ಕೆಲಸವನ್ನು ಮುಗಿಸುತ್ತೇವೆ ( finish the job) ಎಂದು ಎಚ್ಚರಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರು ದೀರ್ಘಕಾಲೀನ ಯುದ್ಧವನ್ನು ನಿರೀಕ್ಷಿಸುತ್ತಿಲ್ಲ ಎಂದು ಹೇಳುವ ಮೂಲಕ, ಸದ್ಯಕ್ಕೆ ಇದು ಪೂರ್ಣ ಪ್ರಮಾಣದ ಯುದ್ಧಕ್ಕೆ ಬದಲಾಗುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಹೀಗಿದ್ದರೂ, ಮತ್ತೊಮ್ಮೆ ಇಂತಹ ದಾಳಿಗಳು ಮರುಕಳಿಸಿದರೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತದೆ ಎಂದು ಇರಾನನ್ನು ಎಚ್ಚರಿಸಿದ್ದಾರೆ. ಹಾಗಾದರೆ, ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ? ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮಿತಿ ಮೀರಿದ್ದು, ಇದು ಸದ್ಯಕ್ಕೆ ಮುಗಿಯುವ ಲಕ್ಷಣ ಗಳಿಲ್ಲ.

ಅಮೆರಿಕವು ಮಿಲಿಟರಿ ಬಲದ ಮೂಲಕ ಇರಾನ್ ಮೇಲೆ ಒತ್ತಡ ಹೇರುತ್ತಿದ್ದು, ಇದರಿಂದಾಗಿ ಜಾಗತಿಕವಾಗಿ ತೈಲ ಪೂರೈಕೆ ಮತ್ತು ಭದ್ರತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ತದನಂತರದ ತೈಲ ಬೆಲೆ ಏರಿಕೆಯು, 2027ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ದಲ್ಲಿ ಭಾರತದ ತೈಲ ಮಾರಾಟ ಕಂಪನಿಗಳ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಬಹುದು. ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುವು ದರಿಂದ ಇಂಧನ ಮಾರಾಟದ ಲಾಭಾಂಶ ವು ಕುಗ್ಗುತ್ತಿದ್ದು, 2026ರ ಏಪ್ರಿಲ್- ಜೂನ್ ತ್ರೈಮಾಸಿಕ ದಲ್ಲಿ ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿಎಲ್ ಕಂಪನಿಗಳು ಒಟ್ಟಾರೆಯಾಗಿ 47700 ಕೋಟಿ ರೂಪಾಯಿಗಳವರೆಗಿನ EBITDA ನಷ್ಟವನ್ನು ವರದಿ ಮಾಡುವ ಸಾಧ್ಯತೆ ಇದೆ.

ಅಮೆರಿಕ ಮತ್ತು ಇರಾನ್ ನಡುವಿನ ಈ ಸಂಘರ್ಷದ ನೇರ ಪರಿಣಾಮ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಸಾಮಾನ್ಯ ಜನರ ಮೇಲೆ ಬೀರಿದೆ. ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತು ಇಂದಿನ ಜಾಗತಿಕ ಪರಿಸ್ಥಿತಿಗೆ ನೂರಕ್ಕೆ ನೂರು ಹೊಂದಿಕೆಯಾಗುತ್ತದೆ. ಖಮೇನಿ ಅಂತ್ಯಕ್ರಿಯೆಯನ್ನು ಹಾಸ್ಯ ಮಾಡಿರುವ ಟ್ರಂಪ್, 'ಅಂತ್ಯಕ್ರಿಯೆಗೆ ಇರಾನಿನ ಎಲ್ಲ ನಾಯಕರು ಒಟ್ಟಿಗೆ ಬರುತ್ತಾರೆ. ಆಗ ಅಮೆರಿಕವು ಗುಂಡುಹಾರಿಸಿ ಎಲ್ಲರನ್ನೂ ಕೊಲ್ಲಬಹುದು. ಅದು ಸುಲಭ ಕೂಡಾ. ಆದರೆ ಬಳಿಕ ಮಾತುಕತೆಗೆ ಯಾರಾದರೂ ಉಳಿಯ ಬೇಕಲ್ಲವೇ, ಹೀಗಾಗಿ ಸುಮ್ಮನಿದ್ದೇವೆ' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಏಕೆ ಇಷ್ಟು ಮುಖ್ಯ? ಜಾಗತಿಕ ಆರ್ಥಿಕತೆಯ ಪಾಲಿಗೆ ಇದು ಅತ್ಯಂತ ಸೂಕ್ಷ ವಾದ ಪ್ರದೇಶವಾಗಿದೆ. ಜಗತ್ತಿನ ಸುಮಾರು 20-30 ಪರ್ಸೆಂಟ್ ಕಚ್ಚಾ ತೈಲವು ಈ ಸಣ್ಣ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಇಲ್ಲಿ ಯಾವುದೇ ಅಡಚಣೆಯು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತದೆ. ಭಾರತ ತನ್ನ ತೈಲದ ಬಹುಪಾಲು ಅವಶ್ಯಕತೆಗಾಗಿ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಈ ಜಲಸಂಧಿ ಬಂದ್ ಆದರೆ, ಭಾರತದ ಆಮದು ವೆಚ್ಚ ದುಪ್ಪಟ್ಟಾಗುವುದಲ್ಲದೆ, ದೇಶದ ಒಟ್ಟಾರೆ ಹಣದುಬ್ಬರ ಹೆಚ್ಚಾಗುತ್ತದೆ. ಇರಾನ್ ಜಲಸಂಧಿಯನ್ನು ತನ್ನ ಹಿತ್ತಿಲು ಎಂದು ಭಾವಿಸಿ ವಾಣಿಜ್ಯ ಹಡಗುಗಳಿಗೆ ತೊಂದರೆ ನೀಡುತ್ತಿರುವುದು ಅಮೆರಿಕಕ್ಕೆ ಸವಾಲಾಗಿದೆ.

ಈ ಬಿಕ್ಕಟ್ಟು ಕೇವಲ ಒಂದು ದಿನ ಅಥವಾ ಎರಡು ದಿನಗಳಲ್ಲಿ ಬಗೆಹರಿಯುವಂತಿಲ್ಲ. ಇದು 'ದೀರ್ಘಕಾಲೀನ ಸಂಘರ್ಷ' ಆಗುವ ಲಕ್ಷಣಗಳನ್ನು ಹೊಂದಿದೆ. ನೇರ ಯುದ್ಧಕ್ಕಿಂತ ಹೆಚ್ಚಾಗಿ, ಇರಾನ್‌ನ ತೈಲ ಮಾರಾಟವನ್ನು ಸಂಪೂರ್ಣ ವಾಗಿ ನಿರ್ಬಂಧಿಸುವುದು ಮತ್ತು ಅಮೆರಿಕದ ಮೇಲೆ ತೈಲ ಬೆಲೆ ಏರಿಕೆಯ ಒತ್ತಡ ಹೇರುವುದು ಮುಂದು ವರಿಯುತ್ತದೆ. ಮುಂದಿನ ದಿನಗಳಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಇನ್ನಷ್ಟು ಏರಿಕೆಯಾಗಬಹುದು. ಇದು ಸ್ಟಾಕ್ ಮಾರುಕಟ್ಟೆಯ ಮೇಲೆ ಅಸ್ಥಿರತೆಯನ್ನು ತರುತ್ತದೆ.

ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಎರಡೂ ದೇಶಗಳು ತಮ್ಮ ಅಹಂ ಮತ್ತು ಭೌಗೋಳಿಕ ಪ್ರಾಬಲ್ಯವನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಈ ಬೆಕ್ಕಿನಾಟದಲ್ಲಿ ಜಾಗತಿಕ ಆರ್ಥಿಕತೆ ಯು ಬಲಿಯಾಗು ತ್ತಿದ್ದು, ಅಮೆರಿಕ ಮತ್ತು ಇರಾನ್ ಎರಡೂ ತಮಗೆ ಬೇಕಾದ್ದನ್ನು ಪಡೆಯುವವ ರೆಗೆ ಈ ಕದನ ನಿಲ್ಲುವ ಸಾಧ್ಯತೆ ಕಡಿಮೆ.

ಇರಾನ್ ಮತ್ತು ಅಮೆರಿಕ ನಡುವಿನ ಈ ಸಂಘರ್ಷವು ಜಾಗತಿಕ ಆರ್ಥಿಕತೆಯ ಮೇಲೆ ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ( (IMF) ಮತ್ತು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಇತ್ತೀಚಿನ ವರದಿಗಳು ಈ ಬಗ್ಗೆ ಎಚ್ಚರಿಸಿವೆ. 2026ನೇ ಸಾಲಿನಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ದರವನ್ನು 3.1%ರಿಂದ 3.0%ಕ್ಕೆ ಇಳಿಸಲಾಗಿದೆ.

ಈ ಸಂಘರ್ಷದ ಪರಿಣಾಮವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಇಂಧನ ಆಮದು ಮಾಡಿ ಕೊಳ್ಳುವ ದೇಶಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ಗಲ್ಫ್ ರಾಷ್ಟ್ರಗಳು ತಮ್ಮ ಆಹಾರದ ಅಗತ್ಯಕ್ಕಾಗಿ ಆಮದನ್ನು ಅವಲಂಬಿಸಿವೆ. ಜಲಸಂಧಿ ಅಸ್ತವ್ಯಸ್ತ ಆಗಿರುವುದರಿಂದ ಸರಕು ಸಾಗಣೆ ದುಬಾರಿಯಾಗಿದೆ.

ಇದರಿಂದಾಗಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಬೆಲೆಗಳಲ್ಲಿ 40%ರಿಂದ 120% ವರೆಗೂ ಹೆಚ್ಚಳವಾಗಿದೆ. ಇದು ಜಗತ್ತಿನಾದ್ಯಂತ ಆಹಾರ ಭದ್ರತೆಯ ಮೇಲೆ ಪ್ರಭಾವ ಬೀರಿದೆ. ಈ ಯುದ್ಧ ಕೇವಲ ಮಿಲಿಟರಿ ಸಂಘರ್ಷವಲ್ಲ, ಇದು ಆರ್ಥಿಕ ಯುದ್ಧ. ಇಂಧನ ಪೂರೈಕೆ, ಸಾಗಣೆ ಮತ್ತು ಬೆಲೆ ಗಳ ಮೇಲಿನ ಅಸ್ಥಿರತೆಯು ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯು ಈ ಆರ್ಥಿಕ ಹೊಡೆತದ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತಿದೆಯಾದರೂ, ಯುದ್ಧ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ? ಇರಾನ್ ಮತ್ತು ಅಮೆರಿಕ ನಡುವಿನ ಈ ಸಂಘರ್ಷವು ಜಾಗತಿಕ ಆರ್ಥಿಕತೆಯನ್ನು 'ಹಿಂಜರಿತ' (Recession) ದ ಅಂಚಿಗೆ ತಳ್ಳುತ್ತಿದೆ ಎಂಬುದು ಆರ್ಥಿಕ ತಜ್ಞರ ಪ್ರಮುಖ ಆತಂಕವಾಗಿದೆ. ಇದು ಕೇವಲ ಒಂದು ಪ್ರದೇಶದ ಯುದ್ಧವಲ್ಲ, ಬದಲಾಗಿ ಜಾಗತಿಕ ಪೂರೈಕೆ ಸರಪಳಿಯನ್ನೇ ಅಸ್ತವ್ಯಸ್ತಗೊಳಿಸುತ್ತಿದೆ.

ಆರ್ಥಿಕ ತಜ್ಞರ ಪ್ರಕಾರ, ಇದು ಕೇವಲ 'ಆರ್ಥಿಕ ಮಂದಗತಿ' (Slowdown) ಆಗಿ ಉಳಿಯ ಬಹುದು ಅಥವಾ 'ಪೂರ್ಣ ಪ್ರಮಾಣದ ಹಿಂಜರಿತ' (Recession) ಆಗಬಹುದು. ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಿಲ್ಲದಿದ್ದರೆ, 2026ರ ಕೊನೆಯ ವೇಳೆಗೆ ಜಾಗತಿಕ ಆರ್ಥಿಕತೆಯು ಹಿಂಜರಿತದ ಬಲೆಗೆ ಬೀಳುವುದು ಬಹುತೇಕ ನಿಶ್ಚಿತ ಎಂದು ಅನೇಕ ವಿಶ್ಲೇಷಕರು ಅಂದಾಜಿಸಿದ್ದಾರೆ.

ಅಮೆರಿಕದ ಪ್ರಮುಖ ಹೂಡಿಕೆ ಬ್ಯಾಂಕ್‌ಗಳಾದ ಜೆಪಿ ಮೋರ್ಗಾನ್ ಮತ್ತು ಗೋಲ್ಡ್ಮನ್ ಸ್ಯಾಕ್ಸ್‌ನ ತಜ್ಞರು, ಯುದ್ಧವು ಇನ್ನೂ 3-6 ತಿಂಗಳು ಮುಂದುವರಿದರೆ, ಕಂಪನಿಗಳು ಬಂಡವಾಳ ಹೂಡಿಕೆ ಯನ್ನು ಕಡಿತಗೊಳಿಸುವುದರಿಂದ 2026ರ ಕೊನೆಯಲ್ಲಿ ಹಿಂಜರಿತದ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ ಎಂದಿದ್ದಾರೆ.

ಹಾಗಾದರೆ ಇರಾನ್ ಯುದ್ಧ ನಿಲ್ಲದಿದ್ದರೆ ಜಾಗತಿಕ ಆರ್ಥಿಕ ಹಿಂಜರಿತ ಆಗಲಿದೆ ಎನ್ನಲು ತಜ್ಞರು ನೀಡುವ ಪ್ರಮುಖ ಕಾರಣಗಳು ಯಾವುದು? ಮೊದಲನೆಯದಾಗಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು. ಹಣದುಬ್ಬರದಿಂದಾಗಿ ಕೇಂದ್ರ ಬ್ಯಾಂಕ್‌ಗಳು ಬಡ್ಡಿ ದರ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂಧನ-ಸಾರಿಗೆ ವೆಚ್ಚ ಹೆಚ್ಚಾಗಿರುವುದರಿಂದ ಜಾಗತಿಕ ವ್ಯಾಪಾರ ಮಂದಗತಿ ಯಲ್ಲಿರುವುದು. ಹೀಗಾಗಿ ಈ ಆರ್ಥಿಕ ಯುದ್ಧವನ್ನೂ ನಿಲ್ಲಿಸಬೇಕಾದ ಹೊಣೆಗಾರಿಕೆ ಇದೀಗ ಅಮೆರಿಕ-ಇರಾನ್ ಬಣಕ್ಕಿದೆ.

ಹಿಂದಿನ ಹೆಚ್ಚಿನ ಆರ್ಥಿಕ ಹಿಂಜರಿತಗಳು ಹಣಕಾಸು ಮಾರುಕಟ್ಟೆ ಅಥವಾ ಅತಿಯಾದ ಸಾಲದ ಕಾರಣದಿಂದ ಉಂಟಾಗಿದ್ದವು. ಆದರೆ ಈಗಿನ ಬಿಕ್ಕಟ್ಟು ಮುಖ್ಯವಾಗಿ ಭೌಗೋಳಿಕ-ರಾಜಕೀಯ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಉಂಟಾದ ಇಂಧನ ಪೂರೈಕೆ ಅಡಚಣೆಯಿಂದ ಉಂಟಾಗಿರುವುದು ದುರದೃಷ್ಟಕರ. ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ, ಅವರು ಸದ್ಯಕ್ಕೆ ಯುದ್ಧವನ್ನು ವಿಸ್ತರಿಸುವ ಆಸಕ್ತಿ ಹೊಂದಿಲ್ಲ ಎಂದು ತೋರುತ್ತಿದೆ. ಹೀಗಾಗಿ, ಮುಂದಿನ 6 ತಿಂಗಳು ನಿರ್ಣಾಯಕವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani