Dailyhunt Logo
  • Light mode
    Follow system
    Dark mode
    • Play Story
    • App Story
ಕೊಡಗಿನಲ್ಲಿ ಹೊರಗಿನ ಉದ್ಯಮಿಗಳ ಕಾರುಬಾರು

ಕೊಡಗಿನಲ್ಲಿ ಹೊರಗಿನ ಉದ್ಯಮಿಗಳ ಕಾರುಬಾರು

Vishwavani 3 weeks ago

ಅನಿಲ್ ಹೆಚ್.ಟಿ. ಮಡಿಕೇರಿ

ಹಣದ ಥೈಲಿ ಉದ್ಯಮಿಗಳ ದರ್ಬಾರು

ಪವಿತ್ರಭೂಮಿ ಪರರಾಜ್ಯದವರಿಗೆ ಮಾರಬೇಡಿ: ಸ್ಥಳೀಯರ ಕೂಗು

ಮುಂಗಾರು ಪ್ರವೇಶಿಸಿ ಚಳಿ, ಗಾಳಿಯ ವಾತಾವರಣಕ್ಕೆ ಕಾರಣವಾಗುತ್ತಿರುವಂತೆಯೇ ಕೊಡಗಿನಲ್ಲಿ ಮತ್ತೊಮ್ಮೆ ಪರಿಸರ ನಾಶಕ್ಕೆ ವಿರೋಧದ ಪ್ರಬಲ ಕೂಗಿನ ಬಿಸಿಗಾಳಿ ಬೀಸತೊಡಗಿದೆ.

ಕೊಡಗಿನ ಭೂಮಿಯನ್ನು ಖರೀದಿಸಿ ವಾಣಿಜ್ಯ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಬಳಸಿಕೊಳ್ಳುವ ಮೂಲಕ ಕೊಡಗಿನ ನಿಸರ್ಗವನ್ನು ನಾಶ ಮಾಡಲು ಅನೇಕರು ಮುಂದಾಗಿದ್ದಾರೆ. ಅದರಲ್ಲಿಯೂ ವಾಣಿಜ್ಯ ಉದ್ದೇಶಕ್ಕೆ ಕೊಡಗಿನ ಭೂಪ್ರದೇಶವನ್ನು ಬಳಸಿಕೊಳ್ಳುವಲ್ಲಿ ಹೊರರಾಜ್ಯದ ಉದ್ಯಮಿಗಳು ಮುಂದಾಗುತ್ತಿರುವುದು ಆತಂತಕಾರಿ ಎಂಬ ಕಳವಳಕಾರಿ ಧ್ವನಿ ವ್ಯಾಪಕವಾಗುತ್ತಿದೆ.

ಇಂತಹ ಒಂದು ಕೂಗಿಗೆ ಈ ವರ್ಷ ಕಾರಣವಾಗಿರುವುದು ಕೊಡಗಿನ ಮಳೆದೈವ, ಕುಲದೈವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಬಳಿಯಲ್ಲಿನ ಮಲ್ಮ ಎಂಬ ಕೊಡವರ ಪವಿತ್ರ ಬೆಟ್ಟದ ಬಳಿಯಲ್ಲಿಯೇ ಧಾರ್ಮಿಕ ಮುಖಂಡರೋರ್ವರು ಭೂಮಿ ಖರೀದಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ಮುಂದಾ ಗಿರುವುದು ವಿವಾದವಾಗತೊಡಗಿದೆ.

ಭಾರತ ಮಾತ್ರವಲ್ಲ, ವಿಶ್ವವ್ಯಾಪಿ ಖ್ಯಾತಿ ಪಡೆದಿರುವ ಶ್ರೀ.ಎಂ ಎಂದೇ ಹೆಸರಾದ ಮಮ್ತಾಜ್ ಅಲಿ ಅವರು ಮಲ್ಮ ಬೆಟ್ಟದ ತಪ್ಪಲಿನಲ್ಲಿ ಸುಮಾರು 72 ಎಕರೆ ಜಾಗ ಖರೀದಿಸಿದ್ದರು. ಧಾರ್ಮಿಕ ಕೇಂದ್ರ ಮತ್ತು ಗೋಶಾಲೆ ಸ್ಥಾಪನೆಯ ಉದ್ದೇಶವಿತ್ತು ಎಂದು ಮಮ್ತೂಜ್ ಆಲಿ ಹೇಳಿಕೊಂಡಿದ್ದರು.

Kodagu Elephant Attack: ಕೊಡಗಿನಲ್ಲಿ ಕಾಡಾನೆ ದಾಳಿಯಿಂದ RAW ಐಜಿ ಸುನಿಲ್ ಅಚ್ಚಯ್ಯ ಪತ್ನಿ ಸಾವು

ಸ್ಥಳೀಯರು ಇದನ್ನು ನಂಬಲಿಲ್ಲ, ಬದಲಿಗೆ ರೆಸಾರ್ಟ್ ನಿರ್ಮಾಣ ಮಾಡಲಾಗುತ್ತದೆ. ಸ್ಥಳೀಯ ಸಂಸ್ಕೃತಿಗೆ ವಿರುದ್ದವಾಗಿ ಇಲ್ಲಿ ಕೊಳ, ಕಾಟೇಜ್‌ಗಳು ತಲೆಎತ್ತುತ್ತವೆ. ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಪ್ರತಿರೋಧವೊಡ್ಡಿದ್ದರು. ಅದಾಗಲೇ ಕೋಟಿಗಟ್ಟಲೆ ಹಣ ನೀಡಿ ಜಾಗ ಖರೀದಿಸಿದ್ದ ಶ್ರೀ.ಎಂ. ಈ ವಿರೋಧಕ್ಕೆ ಬೆಚ್ಚಿ ಬಿದ್ದರು. ಕೊನೆಗೆ ತಾನು ಖರೀದಿಸಿದ ಜಮೀನನ್ನು ವಾಪಾಸು ಮರಳಿಸುತ್ತೇನೆ.

ಕೊಡಗಿನಲ್ಲಿ ಯಾವುದೇ ಯೋಜನೆ ಹಮ್ಮಿಕೊಳ್ಳಲಾರೆ. ಸ್ಥಳೀಯ ಭೂಮಾಲೀಕರು ತನ್ನನ್ನು ದಾರಿ ತಪ್ಪಿಸಿ ಜಾಗ ಮಾರಾಟ ಮಾಡಿದ್ದರು ಎಂದು ಶ್ರೀ.ಎಂ ನೊಂದು ನುಡಿದಿದ್ದರು. ಈ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.10ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯು ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ನೆಲಜಿ ಗ್ರಾಮದ ಮಲ್ಮ ಬೆಟ್ಟ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಯನ್ನು ತೀವ್ರವಾಗಿ ವಿರೋಧಿಸಿ ರುವ ನಾಚಪ್ಪ, ಮದ್ರಾಸ್ ಹೈಕೋರ್ಟ್ ಆದೇಶಗಳನ್ನು ಪಾಲಿಸಿ, 2024-25ರಲ್ಲಿ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ನೂರಾರು ರೆಸಾರ್ಟ್‌ಗಳನ್ನು ಒಂದೇ ಹಂತದಲ್ಲಿ ತೆರವು ಗೊಳಿಸಿದ ಮಾದರಿಯಲ್ಲಿಯೇ, ಕರ್ನಾಟಕ ಸರಕಾರದಿಂದಲೂ ಕಠಿಣ ಕ್ರಮ ಜಾರಿಯಾಗ ಬೇಕೆಂದು ಸಾರ್ವತ್ರಿಕ ಒತ್ತಾಯವಾಗಿದೆ.

ಸರಕಾರ ಮತ್ತು ಹೊರಗಿನ ಹಣದ ಚೀಲದ ಉದ್ಯಮಿಗಳು ಕೊಡವರ ಭಾವನೆಗಳೊಂದಿಗೆ ಚೆಲ್ಲಾಟ ವಾಡಬಾರದು. ಮಲ್ಮ ಬೆಟ್ಟ ಸಮಸ್ಯೆಗೆ ಸಂಬಂಧಿಸಿದಂತೆ ನೆಲಜಿನಾಡಿನಲ್ಲಿ ಸಾಂಸ್ಕೃತಿಕ-ಸಾಮಾಜಿಕ ಅಶಾಂತಿಗೆ ದಾರಿ ಮಾಡಿ ಕೊಡುವ ಲಕ್ಷಣಗಳು ಕಂಡುಬರುತ್ತಿದೆ. ಕೊಡವರು ಪರ್ವತ ದೇವರ ವಾಸಸ್ಥಾನವಾದ ಮಲ್ಮ ಬೆಟ್ಟದ ಮೇಲೆ ಅತ್ಯುನ್ನತ ಭಕ್ತಿಯನ್ನು ಇಟ್ಟಿದ್ದಾರೆ. ಇಲ್ಲಿನ ಜಾಗ ಖರೀದಿದಾರರು ಪರಿಚಿತ ಹೊರಗಿನ ಆಧ್ಯಾತ್ಮಿಕ ಉದ್ಯಮಿಯಾಗಿದ್ದಾರೆ.

ಸರಕಾರ ಇದಕ್ಕೆ ತಡೆ ಒಡ್ಡಬೇಕು ಮತ್ತು ಸದರಿ ಆಸ್ತಿಯನ್ನು ಸ್ಥಳೀಯ ಕೊಡವರಿಗೆ ರಿಯಾಯಿತಿ ದರದಲ್ಲಿ ಸುಲಭವಾಗಿ ವರ್ಗಾಯಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಅದನ್ನು ಶಾಶ್ವತವಾಗಿ ಒಂದು ಪವಿತ್ರ ಸ್ಥಳವಾಗಿ ಉಳಿಸಿಕೊಳ್ಳಬೇಕು ಎಂದೂ ನಾಚಪ್ಪ ಆಗ್ರಹಿಸಿದ್ದಾರೆ.

ಹೊಸ ಕಾನೂನು ರೂಪಿಸಿ: ಕನ್ನಿ ಕಾವೇರಿ ಸೇವಾ ಟ್ರಸ್ಟ್ʼನ ಕಾರ್ಯದರ್ಶಿ ಮಲ್ಚೀರ ಶಾನ್ ಬೋಪಯ್ಯ ಪ್ರತಿಕ್ರಿಯಿಸಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಪರಿಸ್ಥಿತಿ ಹದಗೆಟ್ಟಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡು ರಾಜ್ಯಗಳು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯ ಸರಕಾರ ಕೊಡಗಿನಲ್ಲಿ ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಭೌಗೋಳಿಕ ಚಿತ್ರಣ ಬದಲು ಕೊಡಗು ಜಿಲ್ಲೆಯ ಭೂಮಿಯನ್ನು ಹೊರಗಿನವರು ಹೆಚ್ಚಿನ ಸಂಖ್ಯೆ ಯಲ್ಲಿ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಕೊಡಗಿನ ಭೌಗೋಳಿಕ ಚಿತ್ರಣವೇ ಬದಲಾಗಬಹುದು ಮತ್ತು ಮೂಲ ಸಂಸ್ಕೃತಿಯ ಮೇಲೆ ಪರಿಣಾಮ ಬೀರಬಹುದು ಎಂದು ಕೊಡಗು ಹಾಗೂ ಕಾವೇರಿ ಸಂರಕ್ಷಣಾ ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ 'ವಿಶ್ವವಾಣಿ' ಜತೆಗೆ ಮಾತನಾಡಿದ್ದಾರೆ.

ಕೊಡವರ ಭವಿಷ್ಯಕ್ಕೆ ಮಾರಕವಾಗಿರುವ ಹೊರಗಿನ ಉದ್ಯಮ ಸಂಸ್ಥೆಗಳು ಕೊಡಗಿನಲ್ಲಿ ನಿರ್ಮಿಸಿರುವ ಟೌನ್‌ಶಿಪ್ ಮತ್ತು ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.10ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯು ಸತ್ಯಾಗ್ರಹ ನಡೆಯಲಿದೆ.

-ಎನ್.ಯು.ನಾಚಪ್ಪ, ಸಿಎನ್‌ಸಿ ಅಧ್ಯಕ್ಷ
Dailyhunt
Disclaimer: This content has not been generated, created or edited by Dailyhunt. Publisher: Vishwavani