Dailyhunt Logo
  • Light mode
    Follow system
    Dark mode
    • Play Story
    • App Story
Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು

Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು

Vishwavani 1 month ago

ಅಮೃತಕಾಲ

ಲೀನಾ ಜೋಶಿ

ಹತ್ತು ವರ್ಷಗಳ ಹಿಂದಿನ ಘಟನೆ, ಆ ಘಟನೆಯ ನಂತರ ಪ್ರತಿ ಬಾರಿ15 ಆಗ ಬಂದಾಗ ನನಗೆ ಒಬ್ಬ ಹಿರಿಯ ಸಿಖ್ ಅಧಿಕಾರಿಯ ಜೊತೆಗಿನ ಆ ಮಾತುಕತೆ ನೆನಪಾಗುತ್ತದೆ. ಸಾಮಾನ್ಯ ಕೆಲಸದ ಮಾತುಕತೆಯೊಂದರಲ್ಲಿ ಇಷ್ಟು ಆಳವಾದ ವೈಯಕ್ತಿಕ ನೋವು ಹೊರಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ.

ಸ್ವಾತಂತ್ರ್ಯ, ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದದ್ದು ಹೀಗೆ ಮಾತು ಸಾಗುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಭಾವುಕರಾದರು. ಅವರು ಹೇಳಿದ್ದನ್ನು ಕೇಳಿದ ಮೇಲೆ ಸ್ವಾತಂತ್ರ್ಯೋತ್ಸವ ನನಗೆ ಧ್ವಜ ಹಾರಿಸುವ, ಸಿಹಿ ಹಂಚುವ ದಿನವಾಗಿ ಉಳಿಯಲಿಲ್ಲ. ಅವರ ಪೂರ್ವಜರು ಮೂಲತಃ ಲಾಹೋರ್‌ನವರು.

ಅವಿಭಜಿತ ಭಾರತದ ಲಾಹೋರ್ ನಲ್ಲಿ ಅವರದ್ದು ದೊಡ್ಡ ಅವಿಭಕ್ತ ಕುಟುಂಬ. ಅಜ್ಜನಿಗೆ ನಾಲ್ಕು ಜನ ಅಣ್ಣತಮ್ಮಂದಿರು. ದೊಡ್ಡ ಹವೇಲಿ, ಸುಮಾರು ನಲವತ್ತು ಜನರ ತುಂಬು ಕುಟುಂಬ. ಅಜ್ಜ, ಅಜ್ಜಿ, ಅಮ್ಮ, ಚಿಕ್ಕಮ್ಮಂದಿರು, ಚಿಕ್ಕಪ್ಪಂದಿರು, ಸೋದರತ್ತೆಯರು. ದೊಡ್ಡ ಮಟ್ಟದ ವ್ಯಾಪಾರ, ಕಣ್ಣಿಗೆ ಕಾಣುವಷ್ಟು ದೂರ ಹೊಲಗದ್ದೆಗಳು. ಮನೆಯಲ್ಲೂ, ಹೊಲದಲ್ಲೂ ಕೆಲಸ ಮಾಡುತ್ತಿದ್ದ ವರು ಬಹುತೇಕ ಸ್ಥಳೀಯ ಮುಸ್ಲಿಮರು.

ಹಿಂದೂ, ಸಿಖ್, ಮುಸ್ಲಿಮರು ಶತಮಾನಗಳಿಂದ ಒಟ್ಟಿಗೆ ಬದುಕುತ್ತಿದ್ದರು, ಒಬ್ಬರ ಮನೆಗೆ ಮತ್ತೊಬ್ಬರು ಹೋಗುತ್ತಿದ್ದರು, ಕೆಲಸ ಮಾಡುತ್ತಿದ್ದರು, ಸಂಬಂಧಗಳಿದ್ದವು, ನಂಬಿಕೆಯಿತ್ತು. ಭಾರತ ಸ್ವಾತಂತ್ರ್ಯ ಪಡೆಯಲಿದೆ ಎಂಬ ಸುದ್ದಿ ಎಲ್ಲರಲ್ಲೂ ಸಂಭ್ರಮ ಮೂಡಿಸಿತ್ತು. ಲಾಹೋರ್‌ಗೆ ಬರುತ್ತಿದ್ದ ಹಲವು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಅವರ ಮನೆಯ ಉಳಿದುಕೊಳ್ಳು ತ್ತಿದ್ದರು.

ಸ್ವಾತಂತ್ರ್ಯದ ಕನಸು ಎಲ್ಲರ ಮನಸ್ಸಿನಲ್ಲೂ. ಆದರೆ ಆ ಕನಸಿನ ಜೊತೆಗೆ ದೇಶವೇ ಎರಡು ಭಾಗ ವಾಗಲಿದೆ ಎಂಬ ಕಠೋರ ಸತ್ಯ ಆಗ ಯಾರಿಗೂ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಆಗ 14, ಆಗ 15- ಎರಡು ಕಡೆ ಧ್ವಜಗಳು ಹಾರಿದವು. ಸಂಭ್ರಮ ನಡೆಯಿತು, ಗಡಿ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಆಗ 17ರಂದು ಗಡಿ ರೇಖೆ ಘೋಷಣೆಯಾಯಿತು. ಅವರ ಅಜ್ಜನಿಗೆ ಆಗಲೂ ಒಂದು ನಂಬಿಕೆ ಇತ್ತು. ದೇಶ ವಿಭಜನೆಯಾದರೇನು? ನಾವು ಇಲ್ಲೇ ಹುಟ್ಟಿದವರು.

Leena Joshi Column: ಸದ್ದಾಂ ಹುಸೇನ್ ನೇಣಿನ ಹಿಂದಿನ ದಿನಗಳು

ನಮ್ಮ ಅಪ್ಪ- ಅಜ್ಜ- ಮುತ್ತಜ್ಜಂದಿರು ಶತಮಾನಗಳಿಂದ ಇಲ್ಲೇ ಬದುಕಿದ್ದಾರೆ, ಇನ್ನು ಮುಂದೆಯೂ ಜೀವನ ಇಲ್ಲೇ ಸಾಗುವುದು. ಅದು ತಪ್ಪು ನಂಬಿಕೆ ಎಂದು ಗೊತ್ತಾಗಲು ಹೆಚ್ಚು ಸಮಯ ಬೇಕಾಗ ಲಿಲ್ಲ. ಅಜ್ಜ ಬಹಳ ಸಂತೋಷದಿಂದ ಬೀದಿಯಲ್ಲಿದ್ದವರಿಗೆ ಪೂರಿ, ಪಾಯಸ ಮಾಡಿ ಹಂಚಿದ್ದರು. ಒಂದು ಕಡೆ ದೇಶ ವಿಭಜನೆಯಾಗಿದೆ, ಇನ್ನೊಂದು ಕಡೆ, ನಮ್ಮದೇ ಊರು, ನಮ್ಮದೇ ಮನೆ, ನಾವೇಕೆ ಹೋಗಬೇಕು? ಎನ್ನುವ ಸರಳ ನಂಬಿಕೆ. ಆ ನಂಬಿಕೆ ಮುರಿಯಲು ಕೆಲವೇ ಗಂಟೆಗಳು ಸಾಕಾಯಿತು.

ಮನೆಯ ಸುತ್ತಮುತ್ತಲಿನ ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗುತ್ತಿತ್ತು, ಪರಿಚಿತರೇ ಅಪರಿಚಿತರಾಗ ತೊಡಗಿದ್ದರು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದು ಗೊತ್ತಾಗದ ಸ್ಥಿತಿ. ಆ ಕುಟುಂಬಕ್ಕೆ ಭಾರತಕ್ಕೆ ಹೋಗಬೇಕು ಎನ್ನುವ ಯೋಚನೆಯೇ ಬಂದಿರಲಿಲ್ಲ, ಬಂದಿದ್ದರೆ? ಅವರು ಹೇಳುವಂತೆ, ಆ ಕುಟುಂಬದ ಬಳಿ ಅಪಾರ ಆಸ್ತಿ, ಹಣ, ಚಿನ್ನ ಇತ್ತು. ಬೇಕಾದರೆ ಆಸ್ತಿ ಮಾರಿ ಭಾರತದ ಯಾವುದಾದರೂ ಭಾಗದಲ್ಲಿ ನೆಲೆಸಬಹುದಿತ್ತು. ಆದರೆ ಆ ನಿರ್ಧಾರ ತೆಗೆದುಕೊಳ್ಳಲು ಸಮಯವೇ ಸಿಗಲಿಲ್ಲ. ಮುಂದಿನ ಕೆಲವು ದಿನಗಳಲ್ಲಿ ನಡೆದದ್ದು ಅವರ ಕುಟುಂಬದ ಬದುಕನ್ನು ಸಂಪೂರ್ಣವಾಗಿ ಬದಲಿಸಿತು.

ಒಂದು ರಾತ್ರಿ ದೊಡ್ಡ ಗುಂಪೊಂದು ಮನೆಗೆ ನುಗ್ಗಿತು. ಕೈಯಲ್ಲಿ ದೊಡ್ಡ ಕತ್ತಿ, ಚಾಕು, ಹಗ್ಗ. ಮನೆಯೊಳಗಿನ ಪ್ರತಿಯೊಂದು ದಾರಿ, ಪ್ರತಿಯೊಂದು ಕೋಣೆ ಗೊತ್ತಿದ್ದವರಂತೆ ಅವರು ಒಳನುಗ್ಗಿ ದರು. ಅಪರಿಚಿತರಿಗಿಂತ ಪರಿಚಿತರೇ ಹೆಚ್ಚು ಭಯಾನಕರಾಗಿದ್ದರು. ಮೊದಲ ದಾಳಿಯ ಅವರ ಅಜ್ಜ ಕೊಲೆಯಾದರು. ಮನೆಯ ಎಲ್ಲಾ ಹೆಣ್ಣುಮಕ್ಕಳನ್ನು ಒಂದು ದೊಡ್ಡ ಕೋಣೆಯಲ್ಲಿ ಬಂದಿರಲು ಅಜ್ಜಿ ಕೂಗಿದರು. ಎಲ್ಲರೂ ಒಟ್ಟಿಗೆ ಇದ್ದರೇ, ಪರಿಸ್ಥಿತಿಯನ್ನು ನಿಭಾಯಿಸಬಹುದೆಂಬ ದೂರಾಲೋಚನೆ. ಆದರೆ ಪರಿಸ್ಥಿತಿ ಅವರ ಕೈಯಲ್ಲಿರಲಿಲ್ಲ, ಗರ್ಭಿಣಿ ಚಿಕ್ಕಮ್ಮ ಮಹಡಿಯಿಂದ ಕೆಳಗೆ ಬರುತ್ತಿದ್ದಾಗ, ದೂರದಿಂದಲೇ ಯಾರೋ ಚಾಕು ಎಸೆದರು.

ಮೆಟ್ಟಿಲಿನ ರಕ್ತದ ನಡುವೆ ಬಿದ್ದ ಆ ದೃಶ್ಯವನ್ನು ಒಳ ಕೋಣೆಯಿಂದ ನೋಡುತ್ತಿದ್ದ ಅಜ್ಜಿಯ ಮನಸ್ಸಿನಲ್ಲಿ ಏನಾಗಿರಬಹುದು ಎಂದು ಊಹಿಸುವುದೇ ಕಷ್ಟ. ಅಜ್ಜಿಯ ಮುತ್ತಜ್ಜ, ಪಂಜಾಬಿನ ಮಹಾರಾಜ ರಂಜಿತ್ ಸಿಂಗ್ ಸೇನೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು, ಆ ಕುಟುಂಬದ ಹೆಣ್ಣು ಮಕ್ಕಳು ಧೈರ್ಯ ಶೌರ್ಯದ ಕಥೆಗಳು ಕೇಳುತ್ತಲೇ ಬೆಳೆದಿದ್ದವು. ಆ ದಿನ ಅಜ್ಜಿಯ ಮುಂದೆ ಎರಡು ಆಯ್ಕೆಗಳಿದ್ದವು- ಜೀವಂತವಾಗಿ ಸಿಕ್ಕಿಬಿದ್ದು ಸಾಯುವತನಕ ನರಳುವುದು ಅಥವಾ ಎಲ್ಲರೂ ಒಟ್ಟಿಗೆ ಸಾಯುವುದು.

ಅವರು ತೆಗೆದುಕೊಂಡ ನಿರ್ಧಾರ ಭಯಾನಕವಾಗಿತ್ತು. ಅದರ ವಿವರಗಳನ್ನು ನೆನಪಿಸಿಕೊಳ್ಳುವಾಗ ಆ ಹಿರಿಯ ಅಧಿಕಾರಿಯ ಧ್ವನಿ ನಡುಗುತ್ತಿತ್ತು, ಕೈಗಳು ಕಂಪಿಸುತ್ತಿದ್ದವು, ಮಾತನಾಡಲು ಕಷ್ಟ ವಾಗುತ್ತಿತ್ತು. ಆ ನರಮೇಧದಲ್ಲಿ ಕುಟುಂಬದ ಬಹುತೇಕರು ಪ್ರಾಣ ಕಳೆದುಕೊಂಡರು. ಬದುಕುಳಿ ದದ್ದು ಕೇವಲ ಮೂವರು ಗಂಡುಮಕ್ಕಳು, ಅವರಲ್ಲಿ ಅವರ ತಂದೆಯೂ ಒಬ್ಬರು. ಕೆಲ ದಿನಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ 'ಮೈ ವಾಪಸ್ ಆವೂಂಗಾ' ಎಂಬ ದೇಶದ ವಿಭಜನೆಯ ಹಿನ್ನೆಲೆಯ ಸಿನಿಮಾವೊಂದನ್ನು ನೋಡಿದೆ.

ಆಗ ಆ ಅಧಿಕಾರಿ ಹೇಳಿದ್ದ ಮಾತುಗಳು ಮತ್ತೆ ನೆನಪಾದವು. 95 ವರ್ಷದ ವೃದ್ಧನ ಕೊನೆಗಾಲದ ಕಥೆಯ ಹಂದರವುಳ್ಳ ಈ ಸಿನಿಮಾ, ನಮ್ಮನ್ನು ತೇವಗೊಳಿಸುತ್ತದೆ. ನಾಸಿರುದ್ದೀನ್ ಶಾ ಅಭಿನಯ ಮನೋಜ್ಞ ವಾಗಿದೆ. ಪುಸ್ತಕದಲ್ಲಿ ಓದಿದ 'ವಿಭಜನೆ', 'ವಲಸೆ', 'ಗಲಭೆ', 'ಸಾವಿರಾರು ಸಾವುಗಳು' ಎಂಬುದು ಕೇವಲ ಓದಿಸಿಕೊಂಡು ಹೋಗುವ ಭಾಷೆ. ಆದರೆ ಪರದೆಯ ಮೇಲೆ ಅದೇ ಕಾಲವನ್ನು ನೋಡಿದಾಗ, ಒಬ್ಬ ಕುಟುಂಬದ ಕಣ್ಣಿನಿಂದ ಕೇಳಿದ ಆ ಸಿಖ್ ಅಧಿಕಾರಿಯ ಕಥೆಯ ಭೀಕರತೆ ಇನ್ನಷ್ಟು ಅರ್ಥವಾಯಿತು, ಮನಸ್ಸು ಆರ್ದ್ರವಾಯಿತು. 1947ರ ದೇಶ ವಿಭಜನೆಯಾಗುವಾಗ ಪಂಜಾಬಿನ ಪರಿಸ್ಥಿತಿ ಅತ್ಯಂತ ಭೀಕರವಾಗಿತ್ತು. ಸಿಖ್ಖರು, ಹಿಂದೂಗಳು, ಮುಸ್ಲಿಮರು- ಶತಮಾನ ಗಳಿಂದ ಜೊತೆಯಾಗಿ ಬದುಕಿದ್ದ ಜನರ ನಡುವೆ ಗಡಿ ಎಳೆಯಲಾಯಿತು. ಗಡಿ ನಕಾಶೆಯ ಮೇಲೆ ಎಳೆಯಲಾಯಿತು.

ಮನೆ, ಆಸ್ತಿ, ಜಮೀನು, ಜಾನುವಾರುಗಳನ್ನು ಇದ್ದ ಬಿಟ್ಟು, ಜೀವ ಉಳಿಸಿಕೊಳ್ಳಲು ಕಾಲ್ನಡಿಗೆ ಯಲ್ಲಿ, ಎತ್ತಿನ ಬಂಡಿಯಲ್ಲಿ, ಉಟ್ಟ ಬಟ್ಟೆಯಲ್ಲಿ ಹೊರಟವರಲ್ಲಿ ಜೀವಂತ ಉಳಿದವರು ಕೆಲವ ರಷ್ಟೇ. ಅಮೃತಸರದ ಕಡೆಗೆ ಬಂದ ರೈಲುಗಳ ಕಥೆಗಳು ಇಂದಿಗೂ ವಿಭಜನೆಯ ಕರಾಳ ನೆನಪಿನ ಭಾಗ. ಆ ರೈಲುಗಳಲ್ಲಿ ಎಷ್ಟು ಜನ ಸತ್ತರು ಎಂಬುದಕ್ಕೂ ನಿಖರವಾದ ಲೆಕ್ಕವಿಲ್ಲ. ವಿಭಜನೆಯ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಬೇರೆ ಬೇರೆ ಅಂದಾಜುಗಳಿವೆ.

ಕೆಲವರು ಲಕ್ಷಾಂತರ ಜನರನ್ನು ಉಲ್ಲೇಖಿಸುತ್ತಾರೆ. ಒಟ್ಟಾರೆ ಸ್ಥಳಾಂತರಗೊಂಡವರ ಸಂಖ್ಯೆಯೂ ಕೋಟಿ ಗಳಲ್ಲಿತ್ತು. ಆ ಸಂಖ್ಯೆಗಳ ಹಿಂದೆ ಪ್ರತಿಯೊಬ್ಬರದ್ದೂ ಕರುಣಾಜನಕ ಕಥೆ. ನರಮೇಧ 79 ವರ್ಷಗಳ ಹಿಂದೆ ನಡೆದದ್ದು. ಅಂದು ಲಾಹೋರ್, ರಾವಲ್ಪಿಂಡಿ, ಪೇಶಾವರ್, ಕರಾಚಿಯಿಂದ ಭಾರತಕ್ಕೆ ಬಂದ ಕುಟುಂಬ ಗಳ ಹಲವು ಪೀಳಿಗೆಗಳು ಈಗ ಇಲ್ಲಿಯೇ ನೆಲೆಸಿವೆ, ಬ್ರಿಟನ್, ಕೆನಡಾ, ಅಮೆರಿಕಾಗಳಲ್ಲಿ ಕೂಡ ಲಕ್ಷಾಂತರ ಸಿಖ್ ಕುಟುಂಬಗಳು ವಲಸೆ ಹೋಗಿವೆ.

ದೆಹಲಿಯಲ್ಲಿ ಹುಟ್ಟಿದವರು ದೆಹಲಿಯವರೇ, ಅಮೃತಸರದಲ್ಲಿ ಹುಟ್ಟಿದವರು ಅಮೃತಸರದವರೇ. ಅವರ ಮಕ್ಕಳಿಗೆ ಪಾಕಿಸ್ತಾನ ಪಕ್ಕದ ದೇಶ. ಲಾಹೋರ್ ಎಂದರೆ ನಕ್ಷೆಯಲ್ಲಿರುವ ಒಂದು ನಗರ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ನಮ್ಮದೇ ಬದುಕಿನ ಉದಾಹರಣೆ ತೆಗೆದುಕೊಳ್ಳಬಹುದು. ನಮ್ಮ ಹಿಂದಿನ ತಲೆಮಾರು ಊರನ್ನು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದೆ, ಇಂದಿನ ತಲೆಮಾರು ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗಿ ಬದುಕು ಕಟ್ಟಿಕೊಂಡಿದೆ. ಮನಸ್ಸಿನ ಮೂಲೆಯಲ್ಲಿ ಹುಟ್ಟಿ ಬೆಳೆದೂರು ಉಳಿಯುತ್ತದೆ.

ಹಿರಿಯರಿಗೆ ತಮ್ಮ ಊರಿಗೆ ಹೋಗಬೇಕು ಎನ್ನುವ ಆಸೆ ಇರುತ್ತದೆ. ಬೆಂಗಳೂರಿನಲ್ಲಿ ಹುಟ್ಟಿದ ಮಕ್ಕಳಿಗೆ ಪೂರ್ವಜರ ಊರು ತಮ್ಮದೆಂದು ಅನಿಸುವುದಿಲ್ಲ. ಅಮೆರಿಕದಲ್ಲಿ ಹುಟ್ಟಿದ ಮಗುವಿಗೆ ತನ್ನ ತಂದೆಯ ಊರು ಭೂಪಟದಲ್ಲಿರುವ ಒಂದು ಬಿಂದು! ಮೊದಲ ಪೀಳಿಗೆ ಲಾಹೋರ್‌ನಿಂದ ಹೊರಟಿತು, ಎರಡನೇ ಪೀಳಿಗೆ ಭಾರತದಲ್ಲಿ ಬೆಳೆಯಿತು, ಮೂರನೇ ಪೀಳಿಗೆಗೆ ಭಾರತವೇ ಮನೆ. ವ್ಯತ್ಯಾಸವೆಂದರೆ ಬೆಂಗಳೂರಿ ನಿಂದ, ಅಮೆರಿಕದಿಂದ ಊರಿಗೆ ಮರಳಬಹುದು, ಪಾಕಿಸ್ತಾನಕ್ಕೆ ಹೋಗಲಾಗುವುದಿಲ್ಲ, ಅಲ್ಲಿ ನಮ್ಮವರೆನ್ನುವವರು ಯಾರೂ ಇಲ್ಲ. ನಾವು ಇಂದು ಆಗ 15ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತೇವೆ. ಅದು ನಮ್ಮ ಹಕ್ಕು, ನಮ್ಮ ಹೆಮ್ಮೆ.

ಇದರ ಜೊತೆಗೆ ಸ್ವಾತಂತ್ರ್ಯದ ಇನ್ನೊಂದು ಮುಖವನ್ನೂ ನೆನಪಿಸಿಕೊಳ್ಳಬೇಕು. ಗಾಂಧೀಜಿ ಕನಸು ಕಂಡ ಸ್ವಾತಂತ್ರ್ಯ ಅಹಿಂಸೆಯ ಮೂಲಕ ಬಂದದ್ದಲ್ಲ. ಸ್ವಾತಂತ್ರ್ಯ ಬಂದ ತಿಂಗಳ ದೇಶದ ಹಲವು ಭಾಗಗಳಲ್ಲಿ ಭೀಕರ ಹಿಂಸಾಚಾರ ನಡೆಯಿತು. ಪಂಜಾಬ್ ಮತ್ತು ಬಂಗಾಳ ಅದರ ದೊಡ್ಡ ಬೆಲೆ ತೆತ್ತವು. ದಕ್ಷಿಣ ಭಾರತದ ಬಹುತೇಕ ಜನರಿಗೆ (ಕಲ್ಯಾಣ ಕರ್ನಾಟಕ ಬಿಟ್ಟು) ಆ ಹಿಂಸೆಯ ನೇರ ಅನುಭವವಾಗಲಿಲ್ಲ. ಹಾಗಾಗಿ ನಮ್ಮ ಪಾಲಿಗೆ ವಿಭಜನೆ ಎಂದರೆ ಇತಿಹಾಸದ ಒಂದು ಅಧ್ಯಾಯ. ಆದರೆ ಅದನ್ನು ಅನುಭವಿಸಿ ದವರಿಗೆ? ವಿಭಜನೆಯ ಸಾವಿನ ಸಂಖ್ಯೆಯನ್ನು ಹೇಳುವುದು ತುಂಬಾ ಸುಲಭ.

ಇಷ್ಟು ಲಕ್ಷ ಜನ ಸತ್ತರು. ಇಷ್ಟು ಕೋಟಿ ಜನ ವಲಸೆ ಹೋದರು. ಆ ಸಂಖ್ಯೆಗಳ ಹಿಂದೆ ಇದ್ದ ನೋವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಒಬ್ಬ ಮನುಷ್ಯ ತನ್ನ ಮನೆಯನ್ನು ಕಳೆದುಕೊಂಡಾಗ ಕೇವಲ ನಾಲ್ಕು ಗೋಡೆಗಳನ್ನು ಕಳೆದುಕೊಳ್ಳುವುದಿಲ್ಲ. ಅವನು ತನ್ನ ನೆನಪು ಗಳ ಜಾಗವನ್ನು ಕಳೆದುಕೊಳ್ಳುತ್ತಾನೆ. ಅದಕ್ಕೇ ಆ ಹಿರಿಯ ಅಧಿಕಾರಿಯ ಕಥೆ ಇಂದಿಗೂ ನನ್ನ ಮನಸ್ಸಿನಲ್ಲಿ ಉಳಿದಿದೆ. ಅವರ ಕುಟುಂಬ ಭಾರತಕ್ಕೆ ಬಂತು. ಅವರ ಮಕ್ಕಳು ಭಾರತದ ಬೆಳೆದರು, ಅವರ ಮೊಮ್ಮಕ್ಕಳಿಗೆ ಭಾರತವೇ ದೇಶ. ಆದರೆ ಎಲ್ಲಾ ಒಂದು ಕಡೆ, ಒಂದು ಹಳೆಯ ಪೀಳಿಗೆಯ ಮನಸ್ಸಿನಲ್ಲಿ ಮಾತ್ರ ಲಾಹೋರ್ ಇನ್ನೂ ಹಾಗೆಯೇ ನಿಂತಿದೆ. ಅವರು ಹೊರಟು ಬಂದ ದಿನದಂತೆ, ಮನೆ ಬಾಗಿಲು ತೆರೆದಿರುವಂತೆ, ಹೊಲಗಳು ಹಾಗೆಯೇ ಹಸಿರಾಗಿರುವಂತೆ, ಮನಸ್ಸಿನೊಳಗೆ ಇನ್ನೂ ಒಂದು ಮಾತು ಕೇಳಿಸುತ್ತಿರುವಂತೆ- ನಾವು ವಾಪಸ್ ಹೋಗ್ತೀವಿ ಅನ್ನುತ್ತದೆ. ಆದರೆ ಅವರು ಮರಳಿ ಹೋಗಲಾಗುವುದಿಲ್ಲ. ಈ ಆಗ 15ರಂದು ಧ್ವಜ ಹಾರಿಸುವಾಗ, ಸ್ವಾತಂತ್ರ್ಯವನ್ನು ಸಂಭ್ರಮಿಸುವುದರ ಜೊತೆಗೆ ಅದರ ಬೆಲೆಯನ್ನೂ ನೆನಪಿಸಿಕೊಳ್ಳೋಣ. ಗಡಿಯನ್ನು ನಕ್ಷೆಯ ಮೇಲೆ ಒಂದು ರೇಖೆಯಿಂದ ಎಳೆಯಬಹುದು. ಆದರೆ ಮನುಷ್ಯನ ಮನಸ್ಸಿನಲ್ಲಿ ಎಳೆದ ಗಡಿಯನ್ನು ಅಳಿಸುವುದು ಅಷ್ಟು ಸುಲಭವಲ್ಲ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಜೈ ಹಿಂದ್!

Dailyhunt
Disclaimer: This content has not been generated, created or edited by Dailyhunt. Publisher: Vishwavani