Dailyhunt Logo
  • Light mode
    Follow system
    Dark mode
    • Play Story
    • App Story
Leena Joshi Column: ಸೈಕ್ಸ್-ಪಿಕೋಟ್‌ ಒಪ್ಪಂದ: ಮಧ್ಯಪ್ರಾಚ್ಯದ ದುರಂತದ ಮೂಲ

Leena Joshi Column: ಸೈಕ್ಸ್-ಪಿಕೋಟ್‌ ಒಪ್ಪಂದ: ಮಧ್ಯಪ್ರಾಚ್ಯದ ದುರಂತದ ಮೂಲ

Vishwavani 4 months ago

ಭೂರಾಜಕೀಯ

ಲೀನಾ ಜೋಶಿ

ಯುರೋಪಿನ ಶಕ್ತಿಗಳು ದೇಶಗಳನ್ನು ಮಾತ್ರ ನಿರ್ಮಿಸಲಿಲ್ಲ, ಜತೆಗೆ ಕೆಲವು ಕಡೆ ಹೊಸ ರಾಜವಂಶಗಳನ್ನೂ ಬೆಳೆಸಿದವು. ಈ ರಾಜವಂಶಗಳು ಕಾಲಕ್ರಮೇಣ ಸ್ವತಂತ್ರ ರಾಷ್ಟ್ರಗಳಾಗಿ ಬೆಳೆದರೂ, ಅವುಗಳ ಪ್ರಾರಂಭಿಕ ರಾಜಕೀಯ ಮಾನ್ಯತೆ ಮತ್ತು ಭದ್ರತೆ ಬಹುತೇಕವಾಗಿ ಯುರೋಪಿನ ಶಕ್ತಿಗಳ ಅನುಕೂಲತೆಯಿಂದ ಬಂದಂಥವು ಎಂಬುದು ಕಹಿಸತ್ಯ.

ಆದರೆ ಈ ಗಡಿಗಳು ಜನರ ಸಹಜ ಗುರುತು ಗಳನ್ನು ಒಡೆಯುವಂತಾಗಿದ್ದವು.

ಮಧ್ಯಪ್ರಾಚ್ಯದ ಪ್ರಸಕ್ತ ಪರಿಸ್ಥಿತಿ ನೋಡಿದಾಗ ಒಂದು ಪ್ರಶ್ನೆ ಪುನಃ ಪುನಃ ಎದುರಾಗುತ್ತದೆ- ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಯಾಕೆ ಅಷ್ಟು ಕಷ್ಟ? ಇದಕ್ಕೆ ಅನೇಕ ಕಾರಣಗಳಿವೆ. ಅವೆಂದರೆ- ಗುಂಪುಗಳ ರಾಜಕೀಯ, ಸಂಪತ್ತಿನ ಮೇಲಿನ ಸ್ಪರ್ಧೆ, ಪ್ರಾದೇಶಿಕ ಶಕ್ತಿಗಳ ಸಂಘರ್ಷ. ಬ್ರಿಟನ್‌ಗೆ ಮಧ್ಯಪ್ರಾಚ್ಯದ ಮಹತ್ವ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು.

ಯುರೋಪಿನಿಂದ ಭಾರತಕ್ಕೆ ಸಾಗುವ ಮಾರ್ಗಗಳನ್ನು ಸುರಕ್ಷಿತವಾಗಿಡಲು ಈ ಪ್ರದೇಶ ದಲ್ಲಿ ಸಾರ್ವಭೌಮತ್ವದ ಅಗತ್ಯವಿತ್ತು. ಮೊದಲ ಮಹಾಯುದ್ಧದ ವೇಳೆ ಬ್ರಿಟನ್ ವಿಭಿನ್ನ ಅರಬ್ ಗುಂಪುಗಳಿಗೆ ವಿಭಿನ್ನ ಭರವಸೆಗಳನ್ನು ನೀಡಿತು. ಅರಬ್ ನಾಯಕರಿಗೆ ಒಟ್ಟೊಮನ್ ರರ ವಿರುದ್ಧ ಹೋರಾಡಿದರೆ ಸ್ವಾತಂತ್ರ್ಯ ನೀಡುವ ಭರವಸೆ ನೀಡಿದರೆ, ಫ್ರಾನ್ಸ್‌ʼ ಜತೆಗೂಡಿ Sykes-Picot Agreement ಮೂಲಕ ಭೂಭಾಗ ಹಂಚಿಕೆ ಮಾಡಿ ವಿಭಿನ್ನ ರಾಜರುಗಳನ್ನು ಸೃಷ್ಟಿಸಿತು.

ಇದಲ್ಲದೆ 1917ರ Balfour Declaration ಮೂಲಕ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಯಹೂದಿ ಗಳಿಗೆ ಪ್ರತ್ಯೇಕ ರಾಷ್ಟ್ರದ ಬೆಂಬಲ ಘೋಷಿಸಲಾಯಿತು. ಈ ದ್ವಂದ್ವ ಭರವಸೆಗಳು ಮುಂದೆ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಕೊನೆಗೊಳ್ಳದ ಸಂಘರ್ಷಕ್ಕೆ ನೆಲೆ ಸಿದ್ಧಪಡಿಸಿದವು.

ಒಂದೇ ಭೂಭಾಗಕ್ಕೆ, ಎರಡು ಸಮುದಾಯಗಳಿಗೆ ಭರವಸೆ ನೀಡಿ ಅನಿಶ್ಚಿತತೆಯ ಬೀಜ ಬಿತ್ತಿದ್ದು ಬ್ರಿಟಿಷರು. ಬ್ರಿಟಿಷ್ ಸಾಮ್ರಾಜ್ಯ ತನ್ನ ಜಾಗತಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯಪ್ರಾಚ್ಯವನ್ನು ಭೂರಾಜಕೀಯ ಚದುರಂಗದ ಬೋರ್ಡ್‌ನಂತೆ ಬಳಸಿತು. ಬ್ರಿಟನ್ ಪ್ರಾದೇಶಿಕ ರಾಜವಂಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿತು.

ಇದರಿಂದ ಸ್ಥಳೀಯ ಆಡಳಿತಗಳು ಹೊರಗಿನ ಶಕ್ತಿಗಳ ಮೇಲೆ ಅವಲಂಬಿತರಾಗುವ ಚಕ್ರ ಆರಂಭವಾಯಿತು. ಈ ತಂತ್ರಗಳು ಅನೇಕ ಸಂದರ್ಭಗಳಲ್ಲಿ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಬದಲು ದೀರ್ಘಗೊಳಿಸಿದವು.

Leena Joshi Column: ನಿಯಮಗಳ ಅಡಿಯಲ್ಲಿ ಮರೆಮಾಚಲಾಗುವ ಪಾಶವೀಯತೆ

1918ರಲ್ಲಿ ಒಟ್ಟೊಮನ್ ಸಾಮ್ರಾಜ್ಯವು ಕೊನೆಗೊಳ್ಳುವುದರ ಮೂಲಕ, ಪ್ರಪಂಚದ ಅತ್ಯಂತ ಸಂಕೀರ್ಣ ಮಧ್ಯಪ್ರಾಚ್ಯದ ನಕ್ಷೆಯು ಬದಲಾಯಿತು. ನಾವು ಈಗ ನೋಡು ತ್ತಿರುವ ಮಧ್ಯಪ್ರಾಚ್ಯ ರಾಷ್ಟ್ರಗಳು ಆಗ ಆಸ್ತಿತ್ವದ ಇರಲಿಲ್ಲ. ಈ ಬದಲಾವಣೆಯ ಹಿಂದಿರು ವುದು, ಯುರೋಪಿನ ಜಾಗತಿಕ ಶಕ್ತಿಗಳಿಂದ ರೂಪಗೊಂಡ ಸೈಕ್ಸ್-ಪಿಕೊಟ್ ಒಪ್ಪಂದ.

1916ರಲ್ಲಿ ರಹಸ್ಯವಾಗಿ ರೂಪುಗೊಂಡ ಸೈಕ್ಸ್-ಪಿಕೊಟ್ ಒಪ್ಪಂದ ಕೇವಲ ಒಂದು ರಾಜತಾಂತ್ರಿಕ ಒಪ್ಪಂದವಲ್ಲ; ಅದು ಒಂದು ಪ್ರದೇಶದ ರಾಜಕೀಯ ಭವಿಷ್ಯವನ್ನು ಹೊರಗಿನ ಶಕ್ತಿಗಳು ತಮ್ಮ ಲಾಭಕ್ಕಾಗಿ ಹೇಗೆ ಮರುಬರೆಯಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಬ್ರಿಟನ್‌ನ ಮಾರ್ಕ್ ಸೈಕ್ಸ್ ಮತ್ತು ಫ್ರಾನ್ಸ್‌ನ ಫ್ರಾಂಕೋಯಿಸ್ ಜಾರ್ಜಸ್-ಪಿಕೋಟ್ ಮೊದಲ ಮಹಾಯುದ್ಧದ ಸಂದರ್ಭದ, ಕುಸಿಯುತ್ತಿದ್ದ ಒಟ್ಟೊಮನ್ (ಈಗಿನ ತುರ್ಕಿ) ಸಾಮ್ರಾಜ್ಯದ ಅರಬ್ ಭೂಭಾಗವನ್ನು ತಮ್ಮ ಮಧ್ಯೆ ಹಂಚಿಕೊಳ್ಳಲು ಯೋಜನೆ ರೂಪಿಸಿ ದರು. ಜನರ ಇಚ್ಛೆ, ಧಾರ್ಮಿಕ-ಜನಾಂಗೀಯ ಸಾಂದರ್ಭಿಕತೆ, ಇತಿಹಾಸ ಈ ಯಾವು ದನ್ನೂ ಲೆಕ್ಕಿಸದೆ ಎಳೆದ ಗಡಿಗಳು ಇಂದಿನ ಮಧ್ಯಪ್ರಾಚ್ಯದ ಅಸ್ಥಿರತೆಯ ಬೀಜಗಳಾದವು.

ಇದು ಕೇವಲ ಭೂಭಾಗ ಹಂಚಿಕೆ ಅಲ್ಲ- ಇದು ಹೊಸ ರಾಷ್ಟ್ರಗಳ ಜನನ ಮತ್ತು ಹಳೆಯ ರಾಜಕೀಯ ವ್ಯವಸ್ಥೆಗಳ ಅಂತ್ಯವೂ ಹೌದು. ಇಂದಿನ ಮಧ್ಯಪ್ರಾಚ್ಯದಲ್ಲಿ ಕಂಡುಬರುವ ಅನೇಕ ರಾಷ್ಟ್ರಗಳು ಮತ್ತು ಕೆಲವು ರಾಜವಂಶಗಳು, ಯುರೋಪಿನ ರಾಜಕೀಯ ದಾಳದ ಫಲವಾಗಿವೆ.

ಹುಟ್ಟಿದವು ಹೊಸ ದೇಶಗಳು

ಒಟ್ಟೊಮನ್ ಸಾಮ್ರಾಜ್ಯದ ಅವಶೇಷಗಳಿಂದ ಯುರೋಪಿನ ಶಕ್ತಿಗಳು ಹೊಸ ರಾಷ್ಟ್ರ ಗಳನ್ನು ರೂಪಿಸಿದವು. ಇವು ಸಹಜ ರಾಷ್ಟ್ರೀಯ ಚಳವಳಿಗಳ ಫಲವಲ್ಲ, ಬದಲಿಗೆ ವಸಾ ಹತು ಶಕ್ತಿಗಳ ಗಡಿನಿರ್ಣಯದ ಫಲ. ಈ ರಾಷ್ಟ್ರಗಳ ಗಡಿಗಳು ಜನಾಂಗೀಯ, ಧಾರ್ಮಿಕ, ಭಾಷಾ

ವಾಸ್ತವಿಕತೆಗಳನ್ನು ಗೌರವಿಸದೆ ಎಳೆಯಲ್ಪಟ್ಟವು. ಇದರಿಂದ ಆಂತರಿಕ ಸಂಘರ್ಷಗಳು ಶಾಶ್ವತ ಸ್ವರೂಪ ಪಡೆದುಕೊಂಡವು. ಇದರ ಪರಿಣಾಮವಾಗಿ ಇಂದಿನ ಇರಾಕ್, ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್ ರಾಷ್ಟ್ರಗಳ ಗಡಿಗಳು ರೂಪುಗೊಂಡವು. ಇರಾನ್ (ಅಂದಿನ ಪರ್ಷಿಯಾ) ನೇರವಾಗಿ ಸೈಕ್ಸ್-ಪಿಕೊಟ್ ಒಪ್ಪಂದದ ಭಾಗವಾಗದಿದ್ದರೂ, 20ನೇ ಶತಮಾನದಲ್ಲಿ ಬ್ರಿಟನ್ ಮತ್ತು ರಷ್ಯಾದ ಪ್ರಭಾವ ವಲಯಗಳಲ್ಲಿ ವಿಭಜಿಸಲ್ಪಟ್ಟಿತ್ತು.

ತೈಲ ಸಂಪತ್ತಿನ ಕಾರಣದಿಂದ ಹೊರಗಿನ ಹಸ್ತಕ್ಷೇಪ ಹೆಚ್ಚಾಯಿತು. ಇದು ಪ್ರಾದೇಶಿಕ ಶಕ್ತಿಯ ರಾಜಕೀಯ ಸ್ವಾಯತ್ತತೆಯ ಮೇಲೆ ಪರಿಣಾಮ ಬೀರಿತು. ಯುರೋಪಿನ ಶಕ್ತಿಗಳಿಗೆ ಮಧ್ಯಪ್ರಾಚ್ಯವು ಕೇವಲ ಒಂದು ಪ್ರದೇಶವಲ್ಲ- ಅದು ತೈಲ ಸಂಪತ್ತು, ವ್ಯಾಪಾರ ಮಾರ್ಗ ಗಳು ಮತ್ತು ಜಾಗತಿಕ ಪ್ರಭಾವದ ಕೀಲಿಕೈ. ಬ್ರಿಟನ್ ಮತ್ತು - ತಮ್ಮ ಆರ್ಥಿಕ ಲಾಭಕ್ಕಾಗಿ ಪ್ರಾಂತ್ಯಗಳನ್ನು ಹಂಚಿಕೊಂಡವು.

ಯುರೋಪಿನ ಶಕ್ತಿಗಳು ದೇಶಗಳನ್ನು ಮಾತ್ರ ನಿರ್ಮಿಸಲಿಲ್ಲ, ಜತೆಗೆ ಕೆಲವು ಕಡೆ ಹೊಸ ರಾಜವಂಶಗಳನ್ನೂ ಬೆಳೆಸಿದವು. ಈ ರಾಜವಂಶಗಳು ಕಾಲಕ್ರಮೇಣ ಸ್ವತಂತ್ರ ರಾಷ್ಟ್ರಗಳಾಗಿ ಬೆಳೆದರೂ, ಅವುಗಳ ಪ್ರಾರಂಭಿಕ ರಾಜಕೀಯ ಮಾನ್ಯತೆ ಮತ್ತು ಭದ್ರತೆ ಬಹುತೇಕವಾಗಿ ಯುರೋಪಿನ ಶಕ್ತಿಗಳ ಅನುಕೂಲತೆಯಿಂದ ಬಂದಂಥವು ಎಂಬುದು ಕಹಿಸತ್ಯ.

ಆದರೆ ಈ ಗಡಿಗಳು ಜನರ ಸಹಜ ಗುರುತುಗಳನ್ನು ಒಡೆಯುವಂತಾಗಿದ್ದವು. ಕುರ್ಡ್ ಜನಾಂಗದವರು ನಾಲ್ಕು ರಾಷ್ಟ್ರಗಳಲ್ಲಿ ವಿಭಜಿಸಲ್ಪಟ್ಟರು; ಪಂಥೀಯ ಸಮತೋಲನ ವನ್ನು ಲೆಕ್ಕಿಸದೆ ಆಡಳಿತ ವ್ಯವಸ್ಥೆಗಳು ನಿರ್ಮಿಸಲ್ಪಟ್ಟವು.

ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುಃಖಭರಿತ ಅಧ್ಯಾಯಗಳಲ್ಲಿ ಒಂದಾಗಿದೆ ಕುರ್ಡ್ ಜನರ ಕಥೆ. ತಮ್ಮದೇ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಶತಮಾನ ಗಳ ನೆಲೆಯುಳ್ಳ ಜನಾಂಗವಾಗಿದ್ದರೂ, ಅವರಿಗೆ ಸ್ವಂತ ರಾಷ್ಟ್ರ ದೊರಕಲಿಲ್ಲ. ಇತಿಹಾಸದ ತಿರುವುಗಳಲ್ಲಿ ನೀಡಿದ ಭರವಸೆಗಳು ಮುರಿಯಲ್ಪಟ್ಟವು.

ಹೀಗಾಗಿ ಮಧ್ಯಪ್ರಾಚ್ಯವು ಸಹಜ ರಾಷ್ಟ್ರ ನಿರ್ಮಾಣದ ಫಲವಲ್ಲ, ಬದಲಿಗೆ ಅದು ಹೊರ ಗಿನ ಹಸ್ತಕ್ಷೇಪದಿಂದ ಜನಿಸಿದ ಶಿಶು. ಇದೇ ಕಾರಣದಿಂದ ಈ ಪ್ರದೇಶವು ಶತಮಾನ ದಿಂದಲೂ ಯುದ್ಧಭೂಮಿಯಂತೆ ಕಾಣುತ್ತಿದೆ.

ಯುರೋಪಿನ ಸ್ವಾರ್ಥ

ಯುರೋಪಿನ ವಸಾಹತು ನೀತಿಯ ಕೇಂದ್ರಬಿಂದು- 'ವಿಭಜಿಸಿ ಆಳುವುದು' ಅಥವಾ 'ಒಡೆದು ಆಳುವುದು'. ಒಗ್ಗಟ್ಟಿಲ್ಲದ ಸಮಾಜವನ್ನು ನಿಯಂತ್ರಿಸುವುದು ಸುಲಭ. ಯುರೋಪಿನ ಶಕ್ತಿಗಳಿಗೆ ಮಧ್ಯಪ್ರಾಚ್ಯವು ಕೇವಲ ಒಂದು ಪ್ರದೇಶವಲ್ಲ, ಅದು ತೈಲ ಸಂಪತ್ತು, ವ್ಯಾಪಾರ ಮಾರ್ಗಗಳು ಮತ್ತು ಜಾಗತಿಕ ಪ್ರಭಾವದ ಕೀಲಿಕೈ. ಬ್ರಿಟನ್ ಮತ್ತು - ತಮ್ಮ ಆರ್ಥಿಕ ಲಾಭಕ್ಕಾಗಿ ಪ್ರಾಂತ್ಯಗಳನ್ನು ಹಂಚಿಕೊಂಡವು.

ಮಧ್ಯಪ್ರಾಚ್ಯದ ಸಂಪತ್ತು, ತೈಲ- ಯುರೋಪಿನ ಕೈಗಾರಿಕಾ ರಾಷ್ಟ್ರಗಳಿಗೆ ಆರ್ಥಿಕ ಬಲ ನೀಡಿದವು. ಈ ಸಂಪತ್ತಿನ ನಿಯಂತ್ರಣ ಮತ್ತು ವ್ಯಾಪಾರ ಒಪ್ಪಂದಗಳು ಯುರೋಪಿನ ಆರ್ಥಿಕ ಸಮೃದ್ಧಿಗೆ ಕಾರಣವಾದರೆ, ಪ್ರಾದೇಶಿಕ ರಾಷ್ಟ್ರಗಳು ರಾಜಕೀಯ ಅಸ್ಥಿರತೆ ಯೊಂದಿಗೆ ಹೋರಾಡಬೇಕಾಯಿತು. ಬ್ರಿಟನ್ ಮತ್ತು ನಂತರ ಅಮೆರಿಕ ಪ್ರಾದೇಶಿಕ ಆಡಳಿತಗಳೊಂದಿಗೆ ರಕ್ಷಣಾ ಮತ್ತು ತೈಲ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಪ್ರಭಾವವನ್ನು ಉಳಿಸಿಕೊಂಡವು.

ಭದ್ರತೆಗಾಗಿ ಶಸ್ತ್ರಾಸ್ತ್ರ ಮಾರಾಟ ಮತ್ತು ಸೇನಾ ಸಹಕಾರ ಮುಂದುವರಿಯಿತು. ಅಸ್ಥಿರತೆ ಯ ಭಯ ಹೆಚ್ಚಾದಷ್ಟೂ ಭದ್ರತಾ ಒಪ್ಪಂದಗಳ ಅವಲಂಬನೆ ಹೆಚ್ಚಾಯಿತು. ಇದರಿಂದ ರಾಜಕೀಯ ಅನಿಶ್ಚಿತತೆ ಸಂಪೂರ್ಣವಾಗಿ ನಿವಾರಣೆಯಾಗಲಿಲ್ಲ; ಬದಲಿಗೆ ನಿಯಂತ್ರಿತ ಅಸ್ಥಿರತೆಯ ಸ್ಥಿತಿ ಮುಂದುವರಿಯಿತು.

ಹೊರಗಿನ ಶಕ್ತಿಗಳಿಗೆ ಅವಕಾಶ

ಇತಿಹಾಸವು ಒಂದು ಕಠೋರ ಸತ್ಯವನ್ನು ಹೇಳುತ್ತದೆ, ಸ್ಥಳೀಯ ನಾಯಕರಲ್ಲಿ ಏಕತೆ ಇಲ್ಲದಿದ್ದರೆ, ಹೊರಗಿನ ಶಕ್ತಿಗಳು ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತವೆ. ಮಧ್ಯ ಪ್ರಾಚ್ಯದಲ್ಲಿ ಹಲವಾರು ವರ್ಷಗಳ ಸಂಘರ್ಷಕ್ಕೆ ಇದೇ ಮೂಲ. ಅರಬ್ ರಾಷ್ಟ್ರಗಳು ಒಂದೇ ಧ್ವನಿಯಲ್ಲಿ ಮಾತಾಡಲಿಲ್ಲ. ಶಿಯಾ ಸುನ್ನಿ ಪ್ರತ್ಯೇಕತೆ, ಪ್ರಾದೇಶಿಕ ಸ್ಪರ್ಧೆಗಳು, ಸ್ವಾರ್ಥ ರಾಜಕಾರಣ, ವೈಯಕ್ತಿಕ ಅಧಿಕಾರದ ಹಂಬಲ- ಇವೆಲ್ಲವೂ ಒಟ್ಟಾಗಿ ಬಲವಾದ ಏಕತೆಯನ್ನು ತಡೆಯಿತು. ಇದರ ಫಲವಾಗಿ, ಹೊರಗಿನ ಶಕ್ತಿಗಳು ಒಂದು ಪಕ್ಷಕ್ಕೆ ಬೆಂಬಲ ನೀಡಿ ಮತ್ತೊಂದು ಪಕ್ಷವನ್ನು ದುರ್ಬಲಗೊಳಿಸುವ ರಾಜಕಾರಣ ನಡೆಸಲು ಸಾಧ್ಯ ವಾಯಿತು.

ಸಿರಿಯಾ ಗೃಹಯುದ್ಧದಲ್ಲಿ ವಿವಿಧ ವಿದೇಶಿ ಹಸ್ತಕ್ಷೇಪಗಳು, ಇರಾಕ್‌ನ ರಾಜಕೀಯ ಅಸ್ಥಿರತೆ, ಲೆಬನಾನ್ʼನ ಆರ್ಥಿಕ-ರಾಜಕೀಯ ಸಂಕಷ್ಟ- ಇವೆಲ್ಲವೂ ಸ್ಥಳೀಯ ಏಕತೆಯ ಕೊರತೆಯನ್ನು ಬಲವಾಗಿ ತೋರಿಸುತ್ತವೆ. ಏಕತೆ ಇಲ್ಲದ ಜಾಗದಲ್ಲಿ ಯಾರೋ ಒಬ್ಬರು ಲಾಭ ಪಡೆಯುತ್ತಾರೆ, ಮಧ್ಯಪ್ರಾಚ್ಯದ ಇತಿಹಾಸವು ಈ ಮಾತಿಗೆ ಸಾಕ್ಷಿ.

ಆದರೆ ಇಂದಿನ ವಾಸ್ತವಿಕತೆ ಹೆಚ್ಚು ಸಂಕೀರ್ಣವಾಗಿದೆ. ಈ ರಾಷ್ಟ್ರಗಳು ತಮ್ಮ ಸ್ವಂತ ವಿದೇಶಾಂಗ ಮತ್ತು ಆರ್ಥಿಕ ನೀತಿಗಳನ್ನು ರೂಪಿಸುತ್ತಿವೆಯಾದರೂ 'ಹೊರಗಿನ ಪ್ರಭಾವ' ಇಂದೂ ಇದೆ. ಸ್ವಾತಂತ್ರ್ಯದ ನಂತರವೂ ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳು ಭದ್ರತೆಗಾಗಿ ಪಶ್ಚಿಮ ರಾಷ್ಟ್ರಗಳ ಮೇಲೆ ಅವಲಂಬಿತವಾಗಿವೆ.

ರಾಜವಂಶಗಳು ಮತ್ತು ಆಡಳಿತಗಳು ಒಳಗಿನ ಹಾಗೂ ಹೊರಗಿನ ಅಪಾಯಗಳಿಂದ ಭಯಪಡುವ ಸಂದರ್ಭಗಳಲ್ಲಿ, ಯುರೋಪ್ ಮತ್ತು ಅಮೆರಿಕ ರಕ್ಷಣಾ ಒಪ್ಪಂದಗಳು ಹಾಗೂ ಶಸ್ತ್ರಾಸ್ತ್ರ ಮಾರಾಟದ ಮೂಲಕ ಭದ್ರತೆ ಒದಗಿಸುತ್ತವೆ.

ಶಾಂತಿ ಯಾಕೆ ಸಿಗುತ್ತಿಲ್ಲ?

ಇದಕ್ಕಿರುವ ಕಾರಣಗಳೆಂದರೆ:

೧) ಕೃತಕ ಗಡಿಗಳು ಮತ್ತು ಗುರುತು ಸಂಘರ್ಷಗಳು

೨) ಬಾಹ್ಯಶಕ್ತಿಗಳ ನಿರಂತರ ಹಸ್ತಕ್ಷೇಪ

೩) ಸಂಪತ್ತಿನ ಮೇಲಿನ ಜಾಗತಿಕ ಸ್ಪರ್ಧೆ

೪) ಸ್ಥಳೀಯ ನಾಯಕರಲ್ಲಿ ಏಕತೆಯ ಕೊರತೆ.

ಇವೆಲ್ಲವೂ ಸೇರಿ ಮಧ್ಯಪ್ರಾಚ್ಯವನ್ನು ಶಾಂತಿಯ ತೀರದಿಂದ ದೂರ ಇಟ್ಟಿವೆ. ನಕ್ಷೆ ಬದಲಾಯಿಸುವುದು ಸುಲಭ, ಆದರೆ ಮನಸ್ಸುಗಳ ಏಕತೆಯನ್ನು ನಿರ್ಮಿಸುವುದು ಕಷ್ಟ. ಸೈಕ್ -ಪಿಕೊಟ್ ಒಪ್ಪಂದವು ಒಂದು ಶತಮಾನದ ಹಿಂದಿನ ಘಟನೆ. ಆದರೆ ಅದರ ಪರಿಣಾಮ ಇಂದಿಗೂ ಜೀವಂತವಾಗಿದೆ. ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ, 1916ರಲ್ಲಿ ಎಳೆದ ರೇಖೆಗಳು ಇಂದಿಗೂ ಗಾಯಗಳಾಗಿ ಉಳಿದಿವೆ. ಸಿರಿಯಾ ಗೃಹಯುದ್ಧ, ಇರಾಕ್‌ನ ರಾಜಕೀಯ ಅಸ್ಥಿರತೆ, ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷ ಇವುಗಳೆಲ್ಲವೂ ಶತಮಾನದ ಹಿಂದಿನ‌ ಆ ಗಡಿರೇಖೆಗಳ ದೀರ್ಘ ನೆರಳನ್ನು ಹೊತ್ತಿವೆ.

ಶತಮಾನ ಕಳೆದರೂ ಸಂಘರ್ಷ ಮುಂದುವರಿಯುತ್ತಿರುವುದು, ಇತಿಹಾಸದ ತಪ್ಪು ವಿನ್ಯಾಸಗಳು ದೀರ್ಘಕಾಲದ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಮಧ್ಯಪ್ರಾಚ್ಯದ ಅನಿಶ್ಚಿತತೆ ಶತಮಾನಗಳ ಜಟಿಲ ಇತಿಹಾಸದ ಫಲ. ಬ್ರಿಟನ್ ತನ್ನ ಜಾಗತಿಕ ಹಿತಾಸಕ್ತಿಗಳನ್ನು ರಕ್ಷಿಸಲು ತೆಗೆದುಕೊಂಡ ನಿರ್ಧಾರಗಳು, ಕೃತಕ ಗಡಿಗಳು ಮತ್ತು ದ್ವಂದ್ವ ಭರವಸೆಗಳು ದೀರ್ಘಕಾಲದ ಪರಿಣಾಮ ಬೀರಿವೆ.

(ಲೇಖಕಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿ)

Dailyhunt
Disclaimer: This content has not been generated, created or edited by Dailyhunt. Publisher: Vishwavani