Dailyhunt Logo
  • Light mode
    Follow system
    Dark mode
    • Play Story
    • App Story
Mohan Vishwa Column: ಯುದ್ಧದ ಬೆಂಕಿಯಲ್ಲಿ ದುಬೈ ರಿಯಲ್‌ ಎಸ್ಟೇಟ್‌ !

Mohan Vishwa Column: ಯುದ್ಧದ ಬೆಂಕಿಯಲ್ಲಿ ದುಬೈ ರಿಯಲ್‌ ಎಸ್ಟೇಟ್‌ !

Vishwavani 2 months ago

ವೀಕೆಂಡ್‌ ವಿತ್‌ ಮೋಹನ್

ಯುದ್ಧ ತೀವ್ರಗೊಂಡಾಗ ಜಾಗತಿಕ ಹೂಡಿಕೆ ಮಾರುಕಟ್ಟೆಗಳಲ್ಲಿ ಭಯ ವ್ಯಾಪಿಸಿತು. ಗಲ್ಫ್ ನಗರಗಳ ಮೇಲೆ ಕ್ಷಿಪಣಿ ದಾಳಿಯ ಆತಂಕ, ತೈಲ ಸರಬರಾಜು ವ್ಯತ್ಯಯ ಮತ್ತು ಮಧ್ಯ‌ ಪ್ರಾಚ್ಯ‌ ದಲ್ಲಿ ದೊಡ್ಡ ಮಟ್ಟದ ಯುದ್ಧದ ಭೀತಿ ಹೆಚ್ಚಿತು. ಜಗತ್ತಿನ ಸುಮಾರು ಶೇ.20ರಷ್ಟು ತೈಲ ಸರಬರಾಜು ಸಾಗುವ ಹೊರ್ಮುಜ್ ಸಮುದ್ರ ಮಾರ್ಗವೇ ಯುದ್ಧದ ಪ್ರಮುಖ ಕೇಂದ್ರವಾಗಿ ಪರಿಣಮಿಸಿತು.

ಮಧ್ಯಪ್ರಾಚ್ಯದ ಆರ್ಥಿಕ ಮತ್ತು ಐಷಾರಾಮಿ ಕೇಂದ್ರವೆಂದು ಹೆಸರುವಾಸಿಯಾಗಿರುವ ದುಬೈ, ಹಲವು ದಶಕಗಳಿಂದ ಜಗತ್ತಿನ ಹೂಡಿಕೆದಾರರಿಗೆ ಸಂಪತ್ತು, ಭದ್ರತೆ ಮತ್ತು ಅಭಿವೃದ್ಧಿಯ ಪ್ರತೀಕ ವಾಗಿ ಕಾಣಿಸಿಕೊಂಡಿದೆ. ಗಗನಚುಂಬಿ ಕಟ್ಟಡಗಳು, ಅತಿ ಐಷಾರಾಮಿ ವಿಲ್ಲಾಗಳು, ಕೃತಕ ದ್ವೀಪಗಳು ಮತ್ತು ತೆರಿಗೆ ರಹಿತ ವ್ಯವಹಾರ ನೀತಿಗಳು ದುಬೈಯನ್ನು ಜಗತ್ತಿನ ಅತ್ಯಂತ ಆಕರ್ಷಕ ರಿಯಲ್ ಎಸ್ಟೇಟ್ ಕೇಂದ್ರಗಳಲ್ಲಿ ಒಂದಾಗಿ ರೂಪಿಸಿವೆ.

ಭಾರತ, ಯುರೋಪ್, ರಷ್ಯಾ, ಚೀನಾ ಮತ್ತು ಗಲ್ಫ್ ರಾಷ್ಟ್ರಗಳ ಹೂಡಿಕೆದಾರರು ದುಬೈ ಆಸ್ತಿ ಮಾರುಕಟ್ಟೆಯಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿದ್ದಾರೆ. ದುಬೈ ರಿಯಲ್ ಎಸ್ಟೇಟ್ ಹೂಡಿಕೆಯನ್ನು 'ಭದ್ರತೆ ಮತ್ತು ಲಾಭದಾಯಕ' ಹೂಡಿಕೆ ಎಂದು ಜಗತ್ತಿನ ಅನೇಕ ಶ್ರೀಮಂತರು ಪರಿಗಣಿಸಿದ್ದರು.

ಆದರೆ, 2026ರಲ್ಲಿ ಉಲ್ಬಣಗೊಂಡ ಅಮೆರಿಕ ಮತ್ತು ಇರಾನ್ ಯುದ್ಧ ಈ ನಂಬಿಕೆಗೆ ಭಾರೀ ಹೊಡೆತ ನೀಡಿದ್ದು, ದುಬೈ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ದೊಡ್ಡ ಸಂಕಷ್ಟದತ್ತ ತಳ್ಳಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಗಲ್ಫ್ ಪ್ರದೇಶದ ಸ್ಥಿರತೆಯನ್ನು ಕದಡಿತು. ಕ್ಷಿಪಣಿ ದಾಳಿ, ಡ್ರೋನ್ ದಾಳಿ, ಹೊರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆ ಮತ್ತು ತೈಲ ಮೂಲ ಸೌಕರ್ಯಗಳ ಮೇಲೆ ದಾಳಿಗಳ ಭೀತಿ ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿತು.

ಸುರಕ್ಷಿತ ಹೂಡಿಕೆ ತಾಣ ಎಂದು ಪರಿಗಣಿಸಲ್ಪಟ್ಟ ಯುಎಇ, ಯುದ್ಧದ ನಂತರ ಅಪಾಯದ ಪ್ರದೇಶವೆಂದು ಕಾಣಿಸಿಕೊಳ್ಳಲು ಆರಂಭಿಸಿದೆ. ಪಾಮ್ ದ್ವೀಪ ಮತ್ತು ಬುರ್ಜ್ ಖಲೀಫಾ ಸುತ್ತಮುತ್ತ ಲಿನ ಐಷಾರಾಮಿ ಮನೆಗಳನ್ನು ಖರೀದಿಸಲು ಸ್ಪರ್ಧಿಸುತ್ತಿದ್ದ ಹೂಡಿಕೆದಾರರು ಹಿಂಜರಿಯು ತ್ತಿದ್ದಾರೆ. ಯುದ್ಧದ ಮೊದಲು ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆ ಐತಿಹಾಸಿಕ ಏರಿಕೆಯನ್ನು ಕಂಡಿತ್ತು, ಕೋವಿಡ್ ನಂತರದ ಪುನಶ್ಚೇತನದಿಂದ ಆಸ್ತಿ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆ ಯಾಗಿದ್ದವು.

2025ರಲ್ಲಿ ದುಬೈನಲ್ಲಿ ಸುಮಾರು ಅಉಈ 917 ಶತಕೋಟಿ ಮೌಲ್ಯದ ಆಸ್ತಿ ವ್ಯವಹಾರಗಳು ನಡೆದಿತ್ತು. 2021ರಿಂದ 2025ರವರೆಗೆ ವಸತಿ ಆಸ್ತಿಗಳ ಬೆಲೆ ಸುಮಾರು ಶೇ.60 ರಿಂದ 75ರವರೆಗೆ ಏರಿಕೆಯಾಗಿದ್ದವು. ದುಬೈ ಸರಕಾರದ 'ಗೋಲ್ಡನ್ ವೀಸಾ' ಯೋಜನೆಯೂ ಈ ಏರಿಕೆಗೆ ಪ್ರಮುಖ ಕಾರಣವಾಯಿತು. ಆಸ್ತಿ ಖರೀದಿಸುವ ಮೂಲಕ ದೀರ್ಘಕಾಲದ ವಾಸ ಅನುಮತಿ ಪಡೆಯುವ ಅವಕಾಶ ಹೂಡಿಕೆದಾರರನ್ನು ಆಕರ್ಷಿಸಿತು.

ಭಾರತೀಯ ಹೂಡಿಕೆದಾರರು ದುಬೈ ವಿದೇಶಿ ಆಸ್ತಿ ಖರೀದಿಗಳಲ್ಲಿ ಸುಮಾರು ಶೇ.20ರಷ್ಟು ಪಾಲು ಹೊಂದಿದ್ದರು ಎಂದು ಅಂದಾಜಿಸಲಾಗಿದೆ. 'ಎಮ್ಮಾರ್' ಮತ್ತು 'ಡಾಮಾಕ್' ನಿರ್ಮಾಣ ಕಂಪನಿ ಗಳು ಸಾವಿರಾರು ಕೋಟಿ ರುಪಾಯಿ ಮೌಲ್ಯದ ಹೊಸ ಯೋಜನೆಗಳನ್ನು ಘೋಷಿಸುತ್ತಿದ್ದವು. ಆದರೆ ಅಮೆರಿಕ ಮತ್ತು ಇರಾನ್ ಯುದ್ಧ ಈ ಚೇತರಿಕೆಯನ್ನು ಕ್ಷಣಾರ್ಧದಲ್ಲಿ ಕುಸಿತದತ್ತ ತಳ್ಳಿತು.

2026ರ ಆರಂಭದಲ್ಲಿ ಯುದ್ಧ ತೀವ್ರಗೊಂಡಾಗ ಜಾಗತಿಕ ಹೂಡಿಕೆ ಮಾರುಕಟ್ಟೆಗಳಲ್ಲಿ ಭಯ ವ್ಯಾಪಿಸಿತು. ಗಲ್ಫ್ ನಗರಗಳ‌ ಮೇಲೆ ಕ್ಷಿಪಣಿ ದಾಳಿಗಳು ನಡೆಯಬಹುದೇ ಎಂಬ ಆತಂಕ, ತೈಲ ಸರಬರಾಜು ವ್ಯತ್ಯಯ ಮತ್ತು ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧದ ಭೀತಿ ಹೂಡಿಕೆ ದಾರರಲ್ಲಿ ಹೆಚ್ಚಿತು. ಜಗತ್ತಿನ ಸುಮಾರು ಶೇ.20ರಷ್ಟು ತೈಲ ಸರಬರಾಜು ಸಾಗುವ ಹೊರ್ಮುಜ್ ಸಮುದ್ರ ಮಾರ್ಗವೇ ಯುದ್ಧದ ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. ಇದರ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳು ಏರಿಕೆ ಕಂಡವು, ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 106 ಡಾಲರ್ ತಲುಪಿದೆ.

ಈ ಯುದ್ಧದ ತಕ್ಷಣದ ಪರಿಣಾಮ ದುಬೈ ಷೇರು ಮತ್ತು ಆಸ್ತಿ ಮಾರುಕಟ್ಟೆಯಲ್ಲಿ ಗೋಚರಿಸಿತು, ದುಬೈ ಹಣಕಾಸು ಮಾರುಕಟ್ಟೆ ರಿಯಲ್ ಎಸ್ಟೇಟ್ ಸೂಚ್ಯಂಕವು ಕೆಲವೇ ವಾರಗಳಲ್ಲಿ ಸುಮಾರು ಶೇ.20ರಿಂದ 30ರವರೆಗೆ ಕುಸಿತ ಕಂಡಿತು. ಕೆಲವು ವರದಿಗಳ ಪ್ರಕಾರ ಸೂಚ್ಯಂಕವು ಸುಮಾರು 16900 ಅಂಕಗಳಿಂದ 11500 ಅಂಕಗಳವರೆಗೆ ಕುಸಿದಿತ್ತು.

2026ರಲ್ಲಿ ಗಳಿಸಿದ್ದ ಲಾಭಗಳು ಸಂಪೂರ್ಣವಾಗಿ ಅಳಿಸಿಹೋಗುವ ಸ್ಥಿತಿ ನಿರ್ಮಾಣವಾಯಿತು. ಈ ಕುಸಿತ ಹೂಡಿಕೆದಾರರಲ್ಲಿ ಭಾರೀ ಆತಂಕ ಉಂಟುಮಾಡಿತು, ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದವು. ಜಾಗತಿಕ ಹೂಡಿಕೆದಾರರು ಹೊಸ ಹೂಡಿಕೆ ಮಾಡುವ ಬದಲು ಕಾದು ನೋಡುವ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದರು.

ಆಸ್ತಿ ಖರೀದಿ ಮತ್ತು ಮಾರಾಟ ವ್ಯವಹಾರಗಳಲ್ಲಿಯೂ ತೀವ್ರ ಕುಸಿತ ಕಂಡು ಬಂದಿದೆ. ವರದಿಗಳ ಪ್ರಕಾರ 2026ರ ಮಾರ್ಚ್ ಆರಂಭದಲ್ಲಿ ಯುಎಇ ರಿಯಲ್ ಎಸ್ಟೇಟ್ ವ್ಯವಹಾರಗಳು ವರ್ಷದಿಂದ ವರ್ಷಕ್ಕೆ ಸುಮಾರು ಶೇ.37ಕ್ಕೆ ಕುಸಿದಿತ್ತು. ತಿಂಗಳ ಆಧಾರದ ಮೇಲೆ ನೋಡಿದರೆ ವ್ಯವಹಾರ ಪ್ರಮಾಣ ಸುಮಾರು ಶೇ.49ಕ್ಕೆ ಇಳಿಕೆಯಾಯಿತು. ಯುದ್ಧ ಇನ್ನಷ್ಟು ಉಲ್ಬಣವಾಗಬಹುದೆಂಬ ಭೀತಿಯಿಂದ ಅನೇಕ ಹೂಡಿಕೆದಾರರು ತಮ್ಮ ಖರೀದಿ ನಿರ್ಧಾರಗಳನ್ನು ಮುಂದೂಡಿದ್ದಾರೆ.

ಬುರ್ಜ್ ಖಲೀಫಾ, ದುಬೈ ಮರೀನಾ ಮತ್ತು ಪಾಮ್ ಜುಮೇರಾ ಪ್ರದೇಶಗಳ ಐಷಾರಾಮಿ ಆಸ್ತಿಗಳು ಮೊದಲಿಗೆ ಹೊಡೆತ ಅನುಭವಿಸಿದವು. ಕೆಲ ಪ್ರದೇಶಗಳಲ್ಲಿ ಶೇ.12ರಿಂದ 15ರವರೆಗೆ ರಿಯಾಯಿತಿ ಯಲ್ಲಿ ಮನೆಗಳನ್ನು ಮಾರಾಟಕ್ಕೆ ಇಡಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.

ಹೂಡಿಕೆದಾರರು ಇನ್ನಷ್ಟು ನಷ್ಟವಾಗುವ ಭಯದಿಂದ ತ್ವರಿತವಾಗಿ ಆಸ್ತಿಗಳನ್ನು ಮಾರಾಟ ಮಾಡಲು ಯತ್ನಿಸಿದರು, ಈ ಪರಿಸ್ಥಿತಿ 2008ರ ಜಾಗತಿಕ ಆರ್ಥಿಕ ಸಂಕಷ್ಟದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ. ಆ ಸಮಯದಲ್ಲಿ ದುಬೈ ರಿಯಲ್ ಎಸ್ಟೇಟ್ ಬೆಲೆಗಳು ಸುಮಾರು ಶೇ.50ರಿಂದ 60ರವರೆಗೆ ಕುಸಿದಿದ್ದವು.

ಅನೇಕ ನಿರ್ಮಾಣ ಯೋಜನೆಗಳು ಅರ್ಧದ ನಿಂತು ಹೋಗಿದ್ದವು ಮತ್ತು ಸರಕಾರ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಬೇಕಾದ ಪರಿಸ್ಥಿತಿ ಎದುರಿಸಿತ್ತು. ಈಗಿನ ಪರಿಸ್ಥಿತಿ ಅದೇ ಮಟ್ಟದಲ್ಲಿಲ್ಲದಿದ್ದರೂ, ದೀರ್ಘಕಾಲ ಯುದ್ಧ ಮುಂದುವರಿದರೆ ದುಬೈ ಮತ್ತೆ ದೊಡ್ಡ ಆರ್ಥಿಕ ಒತ್ತಡಕ್ಕೆ ಸಿಲುಕಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ದುಬೈ ಮಾರುಕಟ್ಟೆಯ ದೊಡ್ಡ ದುರ್ಬಲತೆ ಎಂದರೆ ವಿದೇಶಿ ಹೂಡಿಕೆಗಳ ಮೇಲಿನ ಅವಲಂಬನೆ, ಅನೇಕ ದೇಶಗಳಲ್ಲಿ ಸ್ಥಳೀಯ ಜನರು ಮನೆ ಖರೀದಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತಾರೆ. ಆದರೆ ದುಬೈನಲ್ಲಿ ವಿದೇಶಿ ಹೂಡಿಕೆದಾರರು ಮುಖ್ಯ ಶಕ್ತಿ, ಆದ್ದರಿಂದ ಗಲ್ಫ್ ಪ್ರದೇಶದಲ್ಲಿ ಯಾವುದೇ ರಾಜಕೀಯ ಅಥವಾ ಸೈನಿಕ ಅಸ್ಥಿರತೆ ಉಂಟಾದರೂ ಅದರ ನೇರ ಪರಿಣಾಮ ದುಬೈ ಆಸ್ತಿ ಮಾರುಕಟ್ಟೆಯ ಮೇಲೆ ಬೀಳುತ್ತದೆ.

ಇದಲ್ಲದೆ ದುಬೈ ಮಾರುಕಟ್ಟೆಯಲ್ಲಿ 'ಆಫ್-ಪ್ಲಾನ್' ಯೋಜನೆಗಳು ಹೆಚ್ಚಾಗಿರುವುದು ಮತ್ತೊಂದು ಸಮಸ್ಯೆಯಾಗಿದೆ, ಅಂದರೆ ಕಟ್ಟಡ ಪೂರ್ಣಗೊಳ್ಳುವ ಮೊದಲೇ ಹೂಡಿಕೆದಾರರು ಮನೆ ಖರೀದಿಸುವ ವ್ಯವಸ್ಥೆ. 2025ರಲ್ಲಿ ನಡೆದ ವ್ಯವಹಾರಗಳಲ್ಲಿ ಸುಮಾರು ಶೇ.63ರಷ್ಟು ಇಂತಹ ಯೋಜನೆಗಳಾಗಿದ್ದವು.

ಭವಿಷ್ಯದ ನಿರೀಕ್ಷೆಗಳ ಮೇಲೆ ನಿರ್ಮಿತವಾಗಿರುವ ಇಂತಹ ಮಾರುಕಟ್ಟೆಗಳು ಯುದ್ಧ ಮತ್ತು ಅನಿಶ್ಚಿತತೆಯಿಂದ ಬೇಗನೆ ಕುಸಿಯುತ್ತವೆ. ದುಬೈ ಆರ್ಥಿಕತೆಯ ಇನ್ನೊಂದು ಪ್ರಮುಖ ಆಧಾರ ವಾದ ಪ್ರವಾಸೋದ್ಯಮವೂ ಯುದ್ಧದಿಂದ ಹೊಡೆತ ಅನುಭವಿಸಿತು.

ಹೋಟೆಲ್ ಬುಕ್ಕಿಂಗ್‌ಗಳು ಕಡಿಮೆಯಾಗಿದ್ದು, ಅನೇಕ ಅಂತಾರಾಷ್ಟ್ರೀಯ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳು ರದ್ದುಗೊಂಡವು. ಇದರಿಂದ ಅಲ್ಪಾವಧಿ ಬಾಡಿಗೆ ಮನೆಗಳ ಬೇಡಿಕೆಯೂ ಕುಸಿಯಿತು. ಆದರೆ ಕೆಲ ತಜ್ಞರು ದುಬೈ ಸಂಪೂರ್ಣವಾಗಿ ಕುಸಿಯುವುದಿಲ್ಲ ಎಂದು ಅಭಿಪ್ರಾಯ‌ ಪಟ್ಟಿದ್ದಾರೆ.

2008ರಿಗಿಂತ ಇಂದು ದುಬೈ ಹೆಚ್ಚು ಬಲವಾದ ಬ್ಯಾಂಕಿಂಗ್ ವ್ಯವಸ್ಥೆ, ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹ ಮತ್ತು ಉತ್ತಮ ಆರ್ಥಿಕ ನಿಯಂತ್ರಣ ಹೊಂದಿದೆ, ಆದ್ದರಿಂದ ಇದು ತಾತ್ಕಾಲಿಕ ಆಘಾತ ವಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಯುದ್ಧದ ನಂತರ ದುಬೈ ಮಾರುಕಟ್ಟೆ ಎರಡು ಭಾಗಗಳಾಗಿ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ, ಅತಿ ಐಷಾರಾಮಿ ಮತ್ತು ಸಮುದ್ರ ತೀರ ಪ್ರದೇಶಗಳ ಆಸ್ತಿಗಳು ಬೇಗನೆ ಚೇತರಿಸಿಕೊಳ್ಳಬಹುದು. ಆದರೆ, ಊಹಾಪೋಹ ಆಧಾರಿತ ಯೋಜನೆಗಳು ಮತ್ತು ಹೊರವ ಲಯದ ಅಭಿವೃದ್ಧಿಗಳು ಹೆಚ್ಚು ಹೊಡೆತ ಅನುಭವಿಸಬಹುದು.

ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾದರೆ ದುಬೈ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳಬಹುದು. ಕೋವಿಡ್ ನಂತರ ದುಬೈ ತೋರಿದ ವೇಗದ ಚೇತರಿಕೆ ಇದಕ್ಕೆ ಉದಾಹರಣೆ. ತೆರಿಗೆ ರಹಿತ ವ್ಯವಸ್ಥೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಜಾಗತಿಕ ಸಂಪರ್ಕಗಳು ಇನ್ನೂ ದುಬೈಗೆ ಬಲ ನೀಡುತ್ತಿವೆ. ಆದರೆ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಮುಂದುವರಿದರೆ ದುಬೈ ಇನ್ನೂ ದೀರ್ಘಕಾಲದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾ ಗಬಹುದು.

2027 ಅಥವಾ 2028ರವರೆಗೆ ಆಸ್ತಿ ಬೆಲೆಗಳು ಕುಸಿಯುವ ಸಾಧ್ಯತೆ ಇದೆ ಎಂದು ಕೆಲ ವಿಶ್ಲೇಷಕರು ಎಚ್ಚರಿಸಿದ್ದಾರೆ. ಅಮೆರಿಕ ಮತ್ತುಇರಾನ್ ಯುದ್ಧದ ಪರಿಣಾಮದಿಂದ ಉಂಟಾದ ದುಬೈ ರಿಯಲ್ ಎಸ್ಟೇಟ್ ಸಂಕಷ್ಟ ಜಾಗತಿಕ ಮಾರುಕಟ್ಟೆಗಳಲ್ಲಿ ಭೂರಾಜಕೀಯದ ಪ್ರಭಾವ ಎಷ್ಟು ದೊಡ್ಡದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜಗತ್ತಿನ ಅತ್ಯಂತ ಐಷಾರಾಮಿ ನಗರಗಳಂದು ಆಗಿದ್ದ ದುಬೈ ಕೂಡ ಯುದ್ಧ ಮತ್ತು ಅಸ್ಥಿರತೆಯ ಹೊಡೆತದಿಂದ ತಪ್ಪಿಸಿಕೊಳ್ಳಲಿಲ್ಲ ಎಂಬುದು ಈ ಘಟನೆ ತೋರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani