Dailyhunt Logo
  • Light mode
    Follow system
    Dark mode
    • Play Story
    • App Story
ಮೂವರು ಸಹೋದರರ ಕೈಗೆ ರಾಖಿ ಕಟ್ಟುವ ಮುನ್ನವೇ ಚಿರನಿದ್ರೆಗೆ ಜಾರಿದ ಸಹೋದರಿ; ರಕ್ಷಾ ಬಂಧನದ ಮುನ್ನಾ ದಿನ ಘೋರ ದುರಂತ

ಮೂವರು ಸಹೋದರರ ಕೈಗೆ ರಾಖಿ ಕಟ್ಟುವ ಮುನ್ನವೇ ಚಿರನಿದ್ರೆಗೆ ಜಾರಿದ ಸಹೋದರಿ; ರಕ್ಷಾ ಬಂಧನದ ಮುನ್ನಾ ದಿನ ಘೋರ ದುರಂತ

Vishwavani 2 weeks ago

ಜೈಪುರ, ಆ. 28: ರಕ್ಷಾಬಂಧನ ಹಬ್ಬಕ್ಕೆ (Raksha Bandhan) ಇನ್ನೇನು ಒಂದು ದಿನ ಬಾಕಿ ಇರುವಾಗಲೇ ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ 28 ವರ್ಷದ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸಹೋದರರಿಗೆ ರಾಖಿ ಕಟ್ಟಬೇಕಿದ್ದ ಸಹೋದರಿ ಶವವಾಗಿ ಪತ್ತೆಯಾಗಿದ್ದು, ಕುಟುಂಬದ ಹಬ್ಬದ ಸಂಭ್ರಮ ಶೋಕದಲ್ಲಿ ಮುಳುಗಿದೆ.

ಆಂಗೈ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಾಚೋಂಡ್ ಗ್ರಾಮದಲ್ಲಿ ಹೊಲವೊಂದರಲ್ಲಿರುವ ಬೇವಿನ ಮರದ ಕೆಳಗೆ ಮಹಿಳೆಯ ಶವ ಪತ್ತೆಯಾಗಿದೆ. ಮೃತರನ್ನು ಜಾಂಕೀ ಬಾಯಿ ಎಂದು ಗುರುತಿಸಲಾಗಿದೆ. ಆಕೆಯ ಕುತ್ತಿಗೆಯಲ್ಲಿ ಹಗ್ಗವಿದ್ದು, ದೇಹ ಹಾಗೂ ಹೊಲದಲ್ಲಿ ರಕ್ತದ ಗುರುತುಗಳು ಕಂಡುಬಂದಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಸರ್ಮಥುರಾ ವೃತ್ತದ ಪೊಲೀಸ್ ಅಧಿಕಾರಿ ದುಲೀಚಂದ್, ಆಂಗೈ ಠಾಣೆಯ ಎಸ್‌ಎಚ್‌ಒ ಹಾಗೂ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ ನಡೆಸಲು ಬರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಆರೋಪ

ಮೃತೆಯ ತಂದೆ ಮಂಗಳ್ ಸಿಂಗ್, ತಮ್ಮ ಮಗಳನ್ನು ಆಕೆಯ ಪತಿ ಹಾಗೂ ಅತ್ತೆ-ಮಾವ ಸೇರಿಕೊಂಡು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಮತ್ತು ಪತಿ ಸುನಿಲ್ ಮೀನಾ ಮತ್ತೊಬ್ಬ ಮಹಿಳಾ ನರ್ಸ್ ಜತೆ ಸಂಬಂಧ ಹೊಂದಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಜಾಂಕೀ ಬಾಯಿಯನ್ನು ಚಿಲಾಚೋಂಡ್ ಗ್ರಾಮದ ನೆಕ್ರಾಮ್ ಮೀನಾ ಅವರ ಪುತ್ರ ಸುನಿಲ್ ಮೀನಾ ಎಂಬಾತನಿಗೆ ವಿವಾಹ ಮಾಡಲಾಗಿತ್ತು. ಸುನಿಲ್ ಧನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುರುಷ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ.

ವಿವಾಹದ ಸಂದರ್ಭದಲ್ಲಿ 12.5 ಲಕ್ಷ ರುಪಾಯಿ ನಗದು ಹಾಗೂ ಸುಮಾರು 3.5 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯಾದ ಒಂದು ವರ್ಷದ ಬಳಿಕ ಜಾಂಕೀ ಬಾಯಿ ತನ್ನ ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ತಂದೆಗೆ ಹೇಳಿದ್ದರು. ಕುಟುಂಬಸ್ಥರು ಆಕೆಗೆ ಸಮಾಧಾನ ಹೇಳಿ ಮತ್ತೆ ಅತ್ತೆ-ಮಾವನ ಮನೆಗೆ ಕಳುಹಿಸಿದ್ದರು. ಆದರೆ ಕಿರುಕುಳ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ.

ಪತಿ 20 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಹಾಗೂ ಮತ್ತೊಬ್ಬ ಮಹಿಳಾ ನರ್ಸ್ ಜತೆ ಸಂಬಂಧ ಹೊಂದಿದ್ದಾನೆ ಎಂದು ಜಾಂಕೀ ತನ್ನ ಕುಟುಂಬಕ್ಕೆ ತಿಳಿಸಿದ್ದಳು ಎಂದು ತಂದೆ ಆರೋಪಿಸಿದ್ದಾರೆ.

ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು

ಕೊನೆಯ ಕರೆ ಬಳಿಕ ಸಾವಿನ ಸುದ್ದಿ

ಬುಧವಾರ (ಆಗಸ್ಟ್‌ 26) ರಾತ್ರಿ ಸುಮಾರು 8 ಗಂಟೆಗೆ ಜಾಂಕೀ ಬಾಯಿ ತನ್ನ ತಂದೆಗೆ ಕರೆ ಮಾಡಿದ್ದಳು. "ಅವರು ಬದಲಾಗಿಲ್ಲ, ನೀವು ಬದಲಾಗುತ್ತಾರೆ ಎಂದು ಹೇಳಿದ್ದೀರಿ. ಆದರೆ ಸುನಿಲ್ ಇನ್ನೂ ಅದೇ ರೀತಿ ಮಾತನಾಡುತ್ತಿದ್ದಾನೆ" ಎಂದು ಆಕೆ ಹೇಳಿದ್ದಳು ಎಂದು ತಂದೆ ತಿಳಿಸಿದ್ದಾರೆ.
ಬಳಿಕ ಮಗಳ ಅಳುವಿನ ಧ್ವನಿ ಕೇಳಿ ಕರೆ ಕಡಿತಗೊಂಡಿತು. ನಂತರ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಗುರುವಾರ ಬೆಳಗ್ಗೆ ಜಾಂಕೀ ಮೃತಪಟ್ಟಿರುವ ಸುದ್ದಿ ಕುಟುಂಬಕ್ಕೆ ತಿಳಿಯಿತು.

ತಂದೆಯ ದೂರಿನ ಆಧಾರದ ಮೇಲೆ ಜಾಂಕೀಯ ಅತ್ತೆ-ಮಾವ ಹಾಗೂ ಪತಿ ಸುನಿಲ್ ಮೀನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಆರಂಭದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಬಂದಿತ್ತು. ಸ್ಥಳದಲ್ಲಿ ಕುತ್ತಿಗೆಗೆ ಹಗ್ಗ ಕಂಡುಬಂದಿದ್ದು, ಹಗ್ಗ ತುಂಡಾದ ಬಳಿಕ ತಲೆಗೆ ಗಾಯವಾಗಿ ಮೃತಪಟ್ಟಿರುವ ಸಾಧ್ಯತೆ ಪ್ರಾಥಮಿಕವಾಗಿ ಕಂಡುಬಂದಿದೆ ಎಂದು ಎಸ್‌ಎಸ್‌ಐ ಚಂದ್ರಭಾನ್ ಸಿಂಗ್ ತಿಳಿಸಿದ್ದಾರೆ. ಆದರೆ ಪ್ರಕರಣದ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯಿಂದ ತಿಳಿದುಬರಬೇಕಿದೆ.

ಪ್ರಕರಣದ ತನಿಖೆಯನ್ನು ಸರ್ಮಥುರಾ ವೃತ್ತದ ಅಧಿಕಾರಿ ದುಲೀಚಂದ್ ನಡೆಸುತ್ತಿದ್ದಾರೆ. ಮೃತ ಜಾಂಕೀ ಬಾಯಿಗೆ ಎರಡು ವರ್ಷದ ಮಗಳಿದ್ದಾಳೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani