Dailyhunt Logo
  • Light mode
    Follow system
    Dark mode
    • Play Story
    • App Story
ರಾಮ ಮಂದಿರ ದೇಣಿಗೆ ಹಗರಣ: ವಿವಾದದ ಬಳಿಕ ಚಂಪತ್ ರಾಯ್ ಫಸ್ಟ್‌ ರಿಯಾಕ್ಷನ್‌, ಬಹಿರಂಗ ಪತ್ರ; ಮೌನ ವ್ರತ ಘೋಷಣೆ

ರಾಮ ಮಂದಿರ ದೇಣಿಗೆ ಹಗರಣ: ವಿವಾದದ ಬಳಿಕ ಚಂಪತ್ ರಾಯ್ ಫಸ್ಟ್‌ ರಿಯಾಕ್ಷನ್‌, ಬಹಿರಂಗ ಪತ್ರ; ಮೌನ ವ್ರತ ಘೋಷಣೆ

Vishwavani 1 week ago

ಖನೌ, ಜು. 7: ಅಯೋಧ್ಯೆ ರಾಮ ಮಂದಿರದ ಹುಂಡಿ ಕಳ್ಳವು ವಿವಾದದ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Teerth Kshetra Trust) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಂಪತ್ ರಾಯ್ (Champat Rai), ಮಂಗಳವಾರ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ತಮ್ಮ ಮೇಲಿನ ಎಲ್ಲ ಆರೋಪಗಳು ಆಧಾರರಹಿತ ಎಂದು ಹೇಳಿರುವ ಅವರು, ಸದ್ಯ ಮೌನ ವ್ರತ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ವಿಶೇಷ ತನಿಖಾ ತಂಡದ (SIT) ಅಂತಿಮ ವರದಿ ಬಂದ ನಂತರವೇ ತಾವು ಮೌನ ಮುರಿಯುವುದಾಗಿ ರಾಮಭಕ್ತರನ್ನುದ್ದೇಶಿಸಿ ಬರೆದ ಕೈಬರಹದ ಪತ್ರದಲ್ಲಿ ರಾಯ್ ಉಲ್ಲೇಖಿಸಿದ್ದಾರೆ.

​ದೇವಸ್ಥಾನದ ನಿರ್ಮಾಣ ಕಾರ್ಯದ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ರಾಯ್, ಈ ಹಗರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಇತ್ತೀಚೆಗಷ್ಟೇ ತನಿಖಾ ತಂಡದ ವಿಚಾರಣೆಗೂ ಒಳಗಾಗಿದ್ದರು.

​"ಜೂನ್ 7ರಿಂದ ಶ್ರೀ ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ದೇಣಿಗೆ ಪೆಟ್ಟಿಗೆ ಎಣಿಕೆ ವೇಳೆ ನಡೆದ ಕಳ್ಳತನದ ಬಗ್ಗೆ ಹಲವು ವದಂತಿ ಹರಡುತ್ತಿವೆ. ನನ್ನ ವಿರುದ್ಧ ವೈಯಕ್ತಿಕವಾಗಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ನಾನು ಮೌನ ವ್ರತ ಪಾಲಿಸುತ್ತಿದ್ದೇನೆ" ಎಂದು ಅವರು ಹಿಂದಿ ಪತ್ರದಲ್ಲಿ ಬರೆದಿದ್ದಾರೆ.

​ದೇಣಿಗೆ ಎಣಿಕೆ ಸಿಬ್ಬಂದಿ ಕೋಟ್ಯಂತರ ರುಪಾಯಿ ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾದ ಬೆನ್ನಲ್ಲೇ ಈ ವಿವಾದ ತಲೆದೋರಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುಮಾರು 70 ಬಾರಿ ಹಣದ ಕಂತೆಗಳನ್ನು ಮತ್ತು ಚಿಲ್ಲರೆ ಹಣವನ್ನು ಬಚ್ಚಿಡುತ್ತಿರುವುದು ಪತ್ತೆಯಾಗಿದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ಅಪರಾಧ ನಡೆದಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಅವರ ಐಷಾರಾಮಿ ಜೀವನ ಶೈಲಿಯು ತನಿಖಾಧಿಕಾರಿಗಳಲ್ಲಿ ಸಂಶಯ ಮೂಡಿಸಿತ್ತು. ನೈತಿಕ ಹೊಣೆ ಹೊತ್ತು ರಾಯ್ ನೀಡಿದ್ದ ರಾಜೀನಾಮೆಯನ್ನು ಸೋಮವಾರವಷ್ಟೇ ಅಂಗೀಕರಿಸಲಾಗಿತ್ತು.

ರಾಮ ಮಂದಿರ ಹುಂಡಿಯ ಹಣ ಕದ್ದು ಗೆಳತಿಗೆ ಐಫೋನ್ ಉಡುಗೊರೆ ಕೊಟ್ಟ ಆರೋಪಿ

​ವಿರೋಧ ಪಕ್ಷಗಳು ಈ ಹಗರಣದಲ್ಲಿ ರಾಯ್ ಅವರ ಪಾತ್ರದ ಬಗ್ಗೆ ತನಿಖೆಗೆ ತೀವ್ರ ಒತ್ತಾಯಿಸುತ್ತಿರುವ ಬೆನ್ನಲ್ಲೇ, "ಜುಲೈ 6ರ ಟ್ರಸ್ಟ್ ಸಭೆಯಲ್ಲಿ ಎಸ್‌ಐಟಿಯ ಪ್ರಾಥಮಿಕ ವರದಿ ಮಂಡನೆಯಾಗಿದೆ. ಇದು ಅತ್ಯಂತ ರಹಸ್ಯವಾಗಿರಬೇಕಿತ್ತು, ಆದರೆ ಸಭೆಯಲ್ಲಿ ಸೋರಿಕೆಯಾಗಿದೆ. ಆದರೂ ಅಂತಿಮ ವರದಿ ಬಂದ ನಂತರ ನಾನು ಎಲ್ಲ ಅಂಶಗಳಿಗೆ ಕಾಲಾನುಕ್ರಮವಾಗಿ ಉತ್ತರಿಸುತ್ತೇನೆ. ಸತ್ಯ ಹೊರಬರಲಿದೆ, 45 ವರ್ಷಗಳ ನನ್ನ ಪ್ರಚಾರಕ ಜೀವನ ಮುಕ್ತ ಪುಸ್ತಕದಂತಿದೆ" ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ.

​ಸದ್ಯ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಟ್ರಸ್ಟಿ ಕೃಷ್ಣ ಮೋಹನ್ ಅವರನ್ನು ನೇಮಕ ಮಾಡಲಾಗಿದ್ದು, ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಯ್ಕೆಗಾಗಿ ಮೂರು ಸದಸ್ಯರ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಶ್ವಕಾಂತ್ ಚತುರ್ವೇದಿ ಮತ್ತು ಟ್ರಸ್ಟಿ ಸುರೇಶ್ ಹಾವರೆ ಇದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani