Dailyhunt Logo
  • Light mode
    Follow system
    Dark mode
    • Play Story
    • App Story
ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್‌ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ

ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್‌ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ

Vishwavani 1 month ago

ಭೋಪಾಲ್, ಜು. 30: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ರೈತರ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಬಸ್‌ ಮುಂದೆ ನಿಂತು ಹೋರಾಟಗಾರರನ್ನು ತಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆಗಿದೆ. ಈ ಸಾಹಸದಿಂದ ಭೋಪಾಲ್‌ನ ಲೇಡಿ ಸಿಂಘಂ (Lady Singham) ಎಂದೇ ಖ್ಯಾತಿಯಾಗಿರುವ ಸಹಾಯಕ ಪೊಲೀಸ್ ಆಯುಕ್ತೆ (ACP) ಮೋನಿಕಾ ಶುಕ್ಲಾ ದೇಶಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ನಿವಾಸದತ್ತ ಮೆರವಣಿಗೆ ನಡೆಸಲು ಮುಂದಾದಾಗ, ಪೊಲೀಸರು ನಗರ ಪ್ರವೇಶವನ್ನು ತಡೆಯಲು ಶಾಲಾ ಬಸ್‌ಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಬಸ್‌ಗಳನ್ನು ತಳ್ಳಿಕೊಂಡು ಬ್ಯಾರಿಕೇಡ್‌ ತೆರವುಗೊಳಿಸಲು ಪ್ರಯತ್ನಿಸಿದರು.

ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ಎಸಿಪಿ ಮೋನಿಕಾ ಶುಕ್ಲಾ ಯಾವುದೇ ಹಿಂಜರಿಕೆಯಿಲ್ಲದೆ ಚಲಿಸುತ್ತಿದ್ದ ಬಸ್‌ ಮುಂದೆ ನಿಂತು ಅದನ್ನು ತಡೆಯಲು ಮುಂದಾದರು. ಅವರ ಧೈರ್ಯದ ನಡೆ ಕಂಡ ಪ್ರತಿಭಟನಾಕಾರರು ಬಸ್‌ ತಳ್ಳುವುದನ್ನು ನಿಲ್ಲಿಸಿದರು. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ವ್ಯಾಪಕವಾಗಿ ವೈರಲ್ ಆಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:

ಈ ಕುರಿತು ಪ್ರತಿಕ್ರಿಯಿಸಿದ ಮೋನಿಕಾ ಶುಕ್ಲಾ, "ನಾನು ಅಸಾಧಾರಣ ಕೆಲಸ ಮಾಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನನ್ನ ಕರ್ತವ್ಯ. ಬಸ್‌ ಮುಂದೆ ಸಾಗುತ್ತಿರುವುದನ್ನು ಕಂಡ ತಕ್ಷಣ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಂಡೆ. ನನಗೆ ಯಾವುದೇ ಭಯವಾಗಲಿಲ್ಲ. ನನ್ನ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿದೆ" ಎಂದು ಹೇಳಿದರು.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಪ್ರತಿಭಟನಾಕಾರರು ಅಪರಾಧಿಗಳಲ್ಲ; ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸುತ್ತಿರುವ ನಾಗರಿಕರು. ಆದ್ದರಿಂದ ಪೊಲೀಸರು ಪ್ರತಿಭಟನೆಗಳನ್ನು ಅತ್ಯಂತ ಸಂಯಮದಿಂದ ನಿಭಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಕೆಲ ಸಮಾಜಘಾತುಕ ಶಕ್ತಿಗಳು ಪ್ರತಿಭಟನೆಯಲ್ಲಿ ನುಸುಳಿ ಅಶಾಂತಿ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಅದು ಕಾನೂನಿನ ಚೌಕಟ್ಟಿನೊಳಗೆ, ಶಾಂತಿಯುತವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡದ ರೀತಿಯಲ್ಲಿ ನಡೆಯಬೇಕು" ಎಂದು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತೋರಿದ ಧೈರ್ಯ ಹಾಗೂ ಸಂಯಮದಿಂದ ಎಸಿಪಿ ಮೋನಿಕಾ ಶುಕ್ಲಾ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದು, ಅನೇಕರು ಅವರನ್ನು ʼನಿಜವಾದ ಲೇಡಿ ಸಿಂಘಂʼ ಎಂದು ಕೊಂಡಾಡುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani