Dailyhunt Logo
  • Light mode
    Follow system
    Dark mode
    • Play Story
    • App Story
RCB vs DC: ಭುವನೇಶ್ವರ್‌, ಹೇಝಲ್‌ವುಡ್‌ ಮಾರಕ ದಾಳಿ, ಆರ್‌ಸಿಬಿಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್‌!

RCB vs DC: ಭುವನೇಶ್ವರ್‌, ಹೇಝಲ್‌ವುಡ್‌ ಮಾರಕ ದಾಳಿ, ಆರ್‌ಸಿಬಿಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್‌!

Vishwavani 4 months ago

ವದೆಹಲಿ: ಭುವನೇಶ್ವರ್‌ ಕುಮಾರ್‌ (Bhuvneshwar Kumar) ಹಾಗೂ ಜಾಶ್‌ ಹೇಝಲ್‌ವುಡ್‌ (Josh Hazlewood) ಅವರ ಮಾರಕ ದಾಳಿಯ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 9 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ 6ನೇ ಗೆಲುವು ಪಡೆದ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿ ಉಳಿದರೂ ತನ್ನ ರನ್‌ರೇಟ್‌ (+1.919) ಅನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ. ಆದರೆ, ಪಂಜಾಬ್‌ ಕಿಂಗ್ಸ್‌ ಎದುರು ಕಳೆದ ಪಂದ್ಯದಲ್ಲಿ ರನ್‌ ಹೊಳೆ ಹರಿಸಿದ್ದ ಡಿಸಿ, ಈ ಪಂದ್ಯದಲ್ಲಿ ಅಚ್ಚರಿ ರೀತಿಯಲ್ಲಿ ಬ್ಯಾಟಿಂಗ್‌ ಕುಸಿತ ಅನುಭವಿಸಿ ಹೀನಾಯ ಸೋಲು ಅನುಭವಿಸಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆರ್‌ಸಿಬಿ ಮೊದಲ ಬಾರಿ ಕಾದಾಟದಲ್ಲಿ ಸೋಲು ಅನುಭವಿಸಿತ್ತು. ಹಾಗಾಗಿ ಸೋಮವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿನ ಉಭಯ ತಂಡಗಳ ನಡುವಣ ಪಂದ್ಯ ಹೈವೋಲ್ಟೇಜ್‌ನಿಂದ ಕೂಡಿರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಡೆಲ್ಲಿ ಬ್ಯಾಟಿಂಗ್‌ನಲ್ಲಿ ಕೇವಲ 75 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಸುಲಭ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ಜಾಕೋಬ್‌ ಬೆಥೆಲ್‌ (20 ರನ್‌) ಅಬ್ಬರಿಸಿ ಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಸ್ಪೋಟಕ ಬ್ಯಾಟ್‌ ಮಾಡಿದ ದೇವದತ್‌ ಪಡಿಕ್ಕಲ್‌ ಹಾಗೂ ವಿರಾಟ್‌ ಕೊಹ್ಲಿ 22 ಎಸೆತಗಳಲ್ಲಿ 51 ರನ್‌ ಚಚ್ಚಿದರು. ಆ ಮೂಲಕ ಆರ್‌ಸಿಬಿ ತಂಡವನ್ನು 6.3 ಓವರ್‌ಗಳಲ್ಲಿಯೇ 77 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದರು.

RCB vs DC: 8 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

ಅಬ್ಬರಿಸಿದ ದೇವದತ್‌ ಪಡಿಕ್ಕಲ್‌ ಕೇವಲ 13 ಎಸೆತಗಳಲ್ಲಿ3 ಸಿಕ್ಸರ್‌ ಹಾಗೂ 3 ಸಿಕ್ಸರ್‌ ನೆರವಿನಿಂದ ಅಜೇಯ 34 ರನ್‌ ಸಿಡಿಸಿದರೆ, ವಿರಾಟ್‌ ಕೊಹ್ಲಿ 15 ಎಸೆತಗಳಲ್ಲಿ ಅಜೇಯ 23 ರನ್‌ ಗಳಿಸಿದರು. ಇನ್ನು ಈ ಪಂದ್ಯದಲ್ಲಿ 3.3 ಓವರ್‌ಗಳಿಗೆ 4 ವಿಕೆಟ್‌ ಸಾಧನೆ ಮಾಡಿದ ಜಾಶ್‌ ಹೇಝಲ್‌ವುಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೇವಲ 75 ರನ್‌ಗೆ ಡೆಲ್ಲಿ ಆಲ್‌ಔಟ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಭುವನೇಶ್ವರ್‌ ಕುಮಾರ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿತು. ಆ ಮೂಲಕ 16.3 ಓವರ್‌ಗಳಿಗೆ ಕೇವಲ 75 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 76 ರನ್‌ಗಳ ಸುಲಭ ಗುರಿಯನ್ನು ನೀಡಿತು. ಇದೇ ಅಂಗಣದಲ್ಲಿ ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು 264 ರನ್‌ಗಳನ್ನು ದಾಖಲಿಸಿದ್ದ ಡೆಲ್ಲಿ ತಂಡ, ಇದೀಗ ಅಚ್ಚರಿ ರೀತಿಯಲ್ಲಿ ಸರ್ವಪತನವಾಯಿತು.

ಭುವನೇಶ್ವರ್‌-ಹೇಝಲ್‌ವುಡ್‌ ಮಾರಕ ದಾಳಿ

ಆರ್‌ಸಿಬಿ ಪರ ಮೊದಲನೇ ಓವರ್‌ ಬೌಲ್‌ ಮಾಡಿದ ಭುವನೇಶ್ವರ್‌ ಕುಮಾರ್‌, ಪಂದ್ಯದ ಎರಡನೇ ಎಸೆತದಲ್ಲಿಯೇ ಆರಂಭಿಕ ಸಾಹಲ್‌ ಪಾರಖ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಮೂಲಕ ಆರ್‌ಸಿಬಿಗೆ ಬೌಲಿಂಗ್‌ನಲ್ಲಿ ಭರ್ಜರಿ ಆರಂಭವನ್ನು ತಂದುಕೊಟ್ಟರು. ನಂತರ ಎರಡನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಜಾಶ್‌ ಹೇಝಲ್‌ವುಡ್‌ ಆರಂಭಿಕ ಎರಡು ಎಸೆತಗಳಲ್ಲಿ ಕ್ರಮವಾಗಿ ಇನ್‌ಫಾರ್ಮ್‌ ಬ್ಯಾಟರ್‌ ಕೆಎಲ್‌ ರಾಹುಲ್‌ ಹಾಗೂ ಸಮೀರ್‌ ರಿಝ್ವಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ನಂತರ ಮೂರನೇ ಓವರ್‌ ಬೌಲ್‌ ಮಾಡಲು ಬಂದ ಭುವನೇಶ್ವರ್‌ ಕುಮಾರ್‌, ಮೊದಲನೇ ಎಸೆತದಲ್ಲಿ ಅಪಾಯಕಾರಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ನಾಲ್ಕನೇ ಎಸೆತದಲ್ಲಿ ನಾಯಕ ಅಕ್ಷರ್‌ ಪಟೇಲ್‌ ಅವರನ್ನು ಔಟ್‌ ಮಾಡಿದರು. ಅಲ್ಲಿಗೇ ಆರ್‌ಸಿಬಿ ವಿಕೆಟ್‌ ಬೇಟೆ ನಿಲ್ಲಲಿಲ್ಲ. ನಂತರ ನಾಲ್ಕನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌, ಇನ್‌ಫಾರ್ಮ್‌ ಬ್ಯಾಟರ್‌ ನಿತೀಶ್‌ ರಾಣಾ ಅವರನ್ನು ಔಟ್‌ ಮಾಡಿದರು. ಆ ಮೂಲಕ ಡಿಸಿ 8 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು. ಆ ಮೂಲಕ 10 ರನ್‌ ಒಳಗೆ 6 ವಿಕೆಟ್‌ ಕಳೆದುಕೊಂಡ ಮೊದಲ ತಂಡ ಎಂಬ ಕುಖ್ಯಾತಿಗೆ ಡೆಲ್ಲಿ ಭಾಜನವಾಯಿತು. ಅಂದ ಹಾಗೆ ಪವರ್‌ಪ್ಲೇ ಮುಕ್ತಾಯವಾಗಿ ಡಿಸಿ 13 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು.

ಡೇವಿಡ್‌ ಮಿಲ್ಲರ್‌ ಹಾಗೂ ಇಂಪ್ಯಾಕ್ಟ್‌ ಪ್ಲೇಯರ್‌ ಅಭಿಷೇಕ್‌ ಪೊರೆಲ್‌ 35 ರನ್‌ಗಳ ಜೊತೆಯಾಟವನ್ನು ಆಡಿ ಡೆಲ್ಲಿಗೆ ಭರವಸೆ ಮೂಡಿಸಿದ್ದರು. ಆದರೆ, 9ನೇ ಓವರ್‌ನಲ್ಲಿ ರಸಿಖ್‌ ದಾರ್‌ ಸಲಾಮ್‌, 19 ರನ್‌ ಗಳಿಸಿ ಆಡುತ್ತಿದ್ದ ಡೇವಿಡ್‌ ಮಿಲ್ಲರ್‌ ಅವರನ್ನು ಔಟ್‌ ಮಾಡಿ ಡಿಸಿ ವಿಶ್ವಾಸವನ್ನು ಕುಗ್ಗಿಸಿದರು. ಕೈಲ್‌ ಜೇಮಿಸನ್‌ (12) ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಕ್ರಮವಾಗಿ ಕೃಣಾಲ್‌ ಪಾಂಡ್ಯ ಮತ್ತು ಸುಯಾಶ್‌ ಶರ್ಮ ಔಟ್‌ ಮಾಡಿದರು. ಆದರೆ, ಒಂದು ತುದಿಯಲ್ಲಿ ಕೆಲಕಾಲ ಆರ್‌ಸಿಬಿ ಬೌಲರ್‌ಗಳ ಎದುರು ಪೈಪೋಟಿ ನೀಡಿದ ಅಭಿಷೇಕ್‌ ಪೊರೆಲ್‌ 33 ಎಸೆತಗಳಲ್ಲಿ 30 ರನ್‌ ಗಳಿಸಿದ ಬಳಿಕ 17ನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌ ಅವರ ನಾಲ್ಕನೇ ವಿಕೆಟ್‌ಗೆ ಸಾಕ್ಷಿಯಾದರು.

ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಜಾಶ್‌ ಹೇಝಲ್‌ವುಡ್‌ 12 ರನ್‌ಗೆ 4 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌ ಕೇವಲ 5 ರನ್‌ಗೆ 3 ವಿಕೆಟ್‌ ಕಿತ್ತರು. ಕೃಣಾಲ್‌, ರಸಿಖ್‌ ಸಲಾಮ್‌ ಹಾಗೂ ಸುಯಾಶ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್‌: 16.3 ಓವರ್‌ಗಳಿಗೆ 75-10 (ಅಭಿಷೇಕ್‌ ಪೊರೆಲ್‌ 30, ಡೇವಿಡ್‌ ಮಿಲ್ಲರ್‌ 19, ಕೈಲ್‌ ಜೇಮಿಸನ್‌ 12; ಜಾಶ್‌ ಹೇಝಲ್‌ವುಡ್‌ 12ಕ್ಕೆ 4, ಭುವನೇಶ್ವರ್‌ ಕುಮಾರ್‌ 5ಕ್ಕೆ3)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 6.3 ಓವರ್‌ಗಳಿಗೆ 77-1 (ದೇವದತ್‌ ಪಡಿಕ್ಕಲ್‌ 34*, ವಿರಾಟ್‌ ಕೊಹ್ಲಿ 23*, ಜಾಕೋಬ್‌ ಬೆಥೆಲ್‌ 23 ರನ್‌; ಕೈಲ್‌ ಜೇಮಿಸನ್‌ 42 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಾಶ್‌ ಹೇಝಲ್‌ವುಡ್‌

Dailyhunt
Disclaimer: This content has not been generated, created or edited by Dailyhunt. Publisher: Vishwavani