Dailyhunt Logo
  • Light mode
    Follow system
    Dark mode
    • Play Story
    • App Story
Roopa Gururaj Column: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ

Roopa Gururaj Column: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ

Vishwavani 1 week ago

ಒಂದೊಳ್ಳೆ ಮಾತು

ಮ್ಮ ಹೆತ್ತ ತಾಯಿಯ ಕಣ್ಣಲ್ಲಿ ಒಂದು ಪುಟ್ಟ ಸಂತೋಷವನ್ನು ನೋಡಲು ನಾವು ಏನೆಲ್ಲ ಮಾಡಬಲ್ಲೆವು? ಅವಳ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಲು ನಮ್ಮ ಶಕ್ತಿಯನ್ನೆಲ್ಲ ಧಾರೆ ಎರೆಯಲು ಸಾಧ್ಯವೇ? ಇಂಥದ್ದೇ ಒಂದು ಘಟನೆಯನ್ನು ನಿಮಗೆ ಹೇಳಬೇಕಿದೆ. ಇದು 2022ರ ಮಾತು.

ಕೇರಳದ ಕೊಟ್ಟಾಯಂ ಮೂಲದ 87 ವರ್ಷದ ವೃದ್ಧೆ, ಎಲಿಕ್ಕುಟ್ಟಿ ಪೌಲ್ ಅವರ ಕಣ್ಣುಗಳಲ್ಲಿ ಒಂದು ಅಪರೂಪದ ಕನಸಿತ್ತು.

ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಪ್ರತಿ 12 ವರ್ಷಗಳಿಗೊಮ್ಮೆ ಮಾತ್ರ ಭೂಮಿಗೆ ನಡುಹಗಲಿನ ನಕ್ಷತ್ರಗಳಂತೆ ಅರಳುವ 'ನೀಲಕುರುಂಜಿ' ಹೂವುಗಳ ನೇರಳೆ ಸಾಗರವನ್ನು ಒಮ್ಮೆಯಾದರೂ ಕಣ್ಣುಂಬಿಕೊಳ್ಳಬೇಕು ಎನ್ನುವುದು ಆಕೆಯ ಆಸೆಯಾಗಿತ್ತು. ಆದರೆ, ಸಂಸಾರದ ಜಂಜಾಟ ಅದೆಲ್ಲ ಮುಗಿಯುವ ಹೊತ್ತಿಗೆ ಮುಪ್ಪು ಆವರಿಸಿಯಾಗಿತ್ತು. ಈಗಂತೂ ಆಕೆ ಸಂಪೂರ್ಣ ಮೆತ್ತಗಾಗಿದ್ದಳು.

ಮುಪ್ಪಿನ ಕಾಯ, ಜಿಟಿಜಿಟಿ ಜೀವ, ನಡೆಯಲಾಗದ ಅಸಹಾಯ ಕತೆ... ಇನ್ನೊಂದು ಜನ್ಮವಿದ್ದರೆ ನೋಡಿದರಾಯಿತು ಎಂದುಕೊಂಡು ಆ ಮುಗ್ಧ ಜೀವ ಸುಮ್ಮನಾಗಿತ್ತು.

Roopa Gururaj Column: ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಆದರೆ, ತಾಯಿಯ ಮನಸಿನ ಮೂಕ ಆಸೆಯನ್ನು ಆಕೆಯ ಇಬ್ಬರು ಮಕ್ಕಳಾದ ರೋಜನ್ ಮತ್ತು ಸತ್ಯನ್ ಅರಿತಿದ್ದರು. ಹೆತ್ತ ಕರುಳಿನ ಹಂಬಲವನ್ನು ಹಾಗೇ ಬಿಡಲು ಆ ಮಕ್ಕಳಿಗೆ ಮನಸ್ಸಾಗಲಿಲ್ಲ. ತಾಯಿಯ ಕೊನೆಯ ದಿನಗಳ ಆಸೆಯನ್ನು ನನಸಾಗಿಸಲೇಬೇಕೆಂದು ಪಣತೊಟ್ಟ ಅವರು, ಅವಳನ್ನು ಕರೆದುಕೊಂಡು ಇಡುಕ್ಕಿಯ ಕಲ್ಲಿಪ್ಪಾರ ಬೆಟ್ಟಗಳ ಕಡೆಗೆ ಸುಮಾರು 100 ಕಿಲೋ ಮೀಟರ್ ದೂರ ಪ್ರಯಾಣ ಬೆಳೆಸಿದರು.

ಆದರೆ, ಬೆಟ್ಟದ ತಪ್ಪಲು ತಲುಪಿದಾಗ ವಿಧಿಯ ಆಟ ಬೇರೆಯೇ ಇತ್ತು. ಹೂವುಗಳು ಅರಳಿದ ಸ್ವರ್ಗವನ್ನು ತಲುಪಲು ಅಲ್ಲಿ ಯಾವುದೇ ರಸ್ತೆ ಇರಲಿಲ್ಲ. ಯಾರಾದರೂ ಆಗಿದ್ದರೆ ಅಲ್ಲಿಗೇ ಭರವಸೆ ಕಳೆದುಕೊಂಡು ಮರಳಿ ಹೋಗುತ್ತಿದ್ದರೇನೋ. ಆದರೆ ಆ ಮಕ್ಕಳಿಗೆ ತಾಯಿಯನ್ನು ಅಲ್ಲಿಯವರೆಗೆ ಕರೆತಂದು, ಆಕೆಯ ಕಣ್ಣಲ್ಲಿ ನಿರಾಶೆ ನೋಡಲು ಸಾಧ್ಯವಿರಲಿಲ್ಲ.

ಅಮ್ಮನನ್ನು ಮಗುವಿನಂತೆ ತಮ್ಮ ಕೈಗಳಲ್ಲಿ ಎತ್ತಿಕೊಂಡರು. ಒಬ್ಬರಾದ ನಂತರ ಮತ್ತೊಬ್ಬರು ಆ 87 ವರ್ಷದ ಹೆತ್ತಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದೇ ಬಿಟ್ಟರು. ಕಡಿದಾದ, ಕಲ್ಲು-ಮುಳ್ಳುಗಳಿಂದ ತುಂಬಿದ್ದ ಆ ಗುಡ್ಡಗಾಡು ಹಾದಿಯಲ್ಲಿ, ಒಣಗುತ್ತಿದ್ದ ಗಂಟಲು, ಸುರಿಯುತ್ತಿದ್ದ ಬೆವರಿನ ನಡುವೆಯೂ ಸುಮಾರು 1.5 ಕಿಲೋಮೀಟರ್ ಬೆಟ್ಟವನ್ನು ಜೀವ ಪಣಕ್ಕಿಟ್ಟು ಹತ್ತಿದರು. ಪ್ರೀತಿಯ ಶಕ್ತಿ ಅದೆಷ್ಟು ದೊಡ್ಡದೆಂದರೆ, ಆ ಕಲ್ಲುಗಳೂ ಅವರ ಪಾದಗಳಿಗೆ ನೋವುಂಟು ಮಾಡಲಿಲ್ಲ. ಕೊನೆಗೂ ಬೆಟ್ಟದ ತುತ್ತತುದಿ ತಲುಪಿದಾಗ... ಅಲ್ಲಿ ಸೃಷ್ಟಿಯ ಪವಾಡವೇ ಕಾಯು ತ್ತಿತ್ತು!

ಎಲಿಕ್ಕುಟ್ಟಿ ಅವರ ಕಣ್ಣೆದುರು ಕೋಟಿ ಕೋಟಿ ನೇರಳೆ ಹೂವುಗಳ ಸಾಗರವೇ ಅನಾವರಣ ಗೊಂಡಿತ್ತು. ಆ ಹೂವುಗಳ ಸೌಂದರ್ಯವನ್ನು ನೋಡಿದ ಆ ವೃದ್ಧ ತಾಯಿಯ ಕಣ್ಣುಗಳಿಂದ ಆನಂದಭಾಷ್ಪ ಧಾರೆಧಾರೆಯಾಗಿ ಹರಿಯಿತು. ತನ್ನ ಎರಡು ಮಕ್ಕಳ ಹೆಗಲ ಮೇಲೆ ಕುಳಿತು ಆ ಸ್ವರ್ಗವನ್ನು ನೋಡಿದಾಗ, ಆಕೆಯ ಮುಖದಲ್ಲಿದ್ದ ನೆಮ್ಮದಿ ಮತ್ತು ಧನ್ಯತೆಯ ಭಾವ ಜಗತ್ತಿನ ಯಾವುದೇ ಸಂಪತ್ತಿಗೂ ಸಾಟಿಯಿರಲಿಲ್ಲ. ಈ ಭಾವುಕ ಕ್ಷಣದ ಚಿತ್ರಗಳು ಇಡೀ ದೇಶದ ಕಣ್ಣಾಲಿ ಗಳನ್ನು ಒದ್ದೆ ಮಾಡಿದವು. ಪ್ರೀತಿ ಎಂದರೆ ಕೇವಲ ಒಣ ಮಾತುಗಳಲ್ಲ, ಅದು ಹೆತ್ತವರಿಗಾಗಿ ಕರಗುವ ಕರುಳು ಮತ್ತು ಅವರಿಗಾಗಿ ಮಿಡಿಯುವ ಹೃದಯ ಎಂಬುದನ್ನು ಈ ಇಬ್ಬರು ಶ್ರವಣ ಕುಮಾರರು ಜಗತ್ತಿಗೆ ತೋರಿಸಿಕೊಟ್ಟರು.

ವಯಸ್ಸಾದ ಹಾಗೆ ತಂದೆ ತಾಯಿಗಳಿಂದ ನಾವು ದೈಹಿಕವಾಗಿ ಮಾತ್ರ ಅಲ್ಲ ಮಾನಸಿಕವಾಗಿ ಕೂಡ ದೂರವಾಗುತ್ತಾ ಹೋಗುತ್ತೇವೆ. ನಮಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಬೆಳೆಸಿದ ತಂದೆ ತಾಯಿ ಗಳಿಗೆ ಕನಿಷ್ಠ ಸಮಯ ಕೊಡುವ ವಿವೇಚನೆ ಕೂಡ ನಮಗಿರುವುದಿಲ್ಲ. ಅವರಿಗೊಂದು ಕರೆ ಮಾಡಿ ಮಾತನಾಡುವ ವ್ಯವಧಾನವನ್ನೂ ಕಳೆದುಕೊಂಡು ಬಿಟ್ಟಿರುತ್ತೇವೆ.

ನಮ್ಮನ್ನೇ ಪ್ರಪಂಚ ಎಂದು ಭಾವಿಸಿ ಬದುಕಿದ ಆ ಜೀವಗಳಿಗೆ ನೋವುಂಟು ಮಾಡುವ ಮುನ್ನ ನಾವು ಕೂಡ ಅವರಂತೆ ಮುಂದೆ ಇಂಥದ್ದೇ ದಿನಗಳನ್ನು ನೋಡಬೇಕಾಗಬಹುದು ಎನ್ನುವ ಕಾಳಜಿ ಇದ್ದರೆ ಸಾಕು. ತಂದೆ ತಾಯಿಗಳ ಜೊತೆ ಸಮಯ ಕಳೆಯುವುದು ಪ್ರೀತಿ ತೋರುವುದು ಜವಾಬ್ದಾರಿ ಯಲ್ಲ, ಅದು ಬದುಕುವ ರೀತಿ ಅದನ್ನು ಕಳೆದುಕೊಂಡವರು ಏನನ್ನು ಗಳಿಸಿದರೂ ನಿರರ್ಥಕ.

Dailyhunt
Disclaimer: This content has not been generated, created or edited by Dailyhunt. Publisher: Vishwavani