Dailyhunt
ಸಭಾಧ್ಯಕ್ಷರು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ: ವಿಜಯೇಂದ್ರ

ಸಭಾಧ್ಯಕ್ಷರು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ: ವಿಜಯೇಂದ್ರ

Vishwavani 1 month ago

ಬೆಂಗಳೂರು, ಮಾ.16: ಸ್ವತಃ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಧಾನಸಭೆಯ ಸಭಾಧ್ಯಕ್ಷರು ಈ ಕಾಂಗ್ರೆಸ್ ಸರ್ಕಾರದ (State Congress Government) ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ರಾಜ್ಯದಲ್ಲಿ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದಷ್ಟು ಅಸಮರ್ಥವಾಗಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರವು ಶಾಸನಸಭೆಗೆ ಕನಿಷ್ಠ ಗೌರವವನ್ನೂ ನೀಡದೆ ತನ್ನದೇ ರಾಜಕೀಯದಲ್ಲಿ ಮುಳುಗಿದೆ ಎಂದಿರುವ ಅವರು, ಸಭಾಧ್ಯಕ್ಷರು ಈಗಾಗಲೇ ನಾಲ್ಕು ಬಾರಿ ಎಚ್ಚರಿಕೆ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಸದನದಲ್ಲಿ ಸಭಾಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೂಡ ನೀಡುತ್ತಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಸರ್ಕಾರದ ಅಧಿಕಾರಿಗಳು ಕೂಡ ಅಸಡ್ಡೆ ತೋರುತ್ತಿದ್ದಾರೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಸಂವಿಧಾನದ ಆಶಯಗಳು ಜೀವಂತವಾಗಿವೆಯೇ ಎಂದು ಶಾಸಕರು ಮಾತ್ರವಲ್ಲ, ಜನರು ಕೂಡ ಕೇಳುವಂತಾಗಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ ನಿಷ್ಕ್ರಿಯತೆಯಿಂದ ಕೇವಲ ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡುತ್ತಿಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ದೇಗುಲಕ್ಕೆ ಮತ್ತು ರಾಜ್ಯದ 7 ಕೋಟಿ ಜನತೆಗೆ ಮಾಡಿದ ದ್ರೋಹ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ

ಜನರ ಸಮಸ್ಯೆಗಳಿಗೆ ಉತ್ತರಿಸಲಾಗದ ಈ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಸಚಿವರು ಸದನಕ್ಕೆ ಬರುವುದಿಲ್ಲ, ಬಂದರೂ ಉತ್ತರ ತರುವುದಿಲ್ಲ. ಈ 'ಅಹಂಕಾರದ ಆಡಳಿತ' ನೋಡಿ ಶಾಸಕರಿರಲಿ, ಸಭಾಧ್ಯಕ್ಷರೇ ಬೇಸತ್ತಿದ್ದಾರೆ. ಈಗ ಮುಖ್ಯಮಂತ್ರಿಗಳು ಕೇವಲ ಸಂಧಾನ ಸಭೆ ನಡೆಸಿದರೆ ಸಾಲದು, ತಮ್ಮ ಸಚಿವರ ಅಶಿಸ್ತಿಗೆ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

BY Vijayendra: ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿ.ವೈ. ವಿಜಯೇಂದ್ರ

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ಸರ್ವೋಚ್ಚ, ಆದರೆ ಇಲ್ಲಿ ಕಾರ್ಯಾಂಗವು ಶಾಸಕಾಂಗಕ್ಕೆ ನೀಡುತ್ತಿರುವ ಅಗೌರವಕ್ಕೆ ಈ ಕಾಂಗ್ರೆಸ್ ಸರ್ಕಾರವೇ ಹೊಣೆ. ಈ ರಾಜ್ಯ ಸರ್ಕಾರವು ಈಗಲಾದರೂ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು ಲಿಖಿತ ಉತ್ತರಗಳನ್ನು ನೀಡಲಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಪೀಠದ ಘನತೆಯನ್ನು ಎತ್ತಿ ಹಿಡಿಯಲಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡದೆ ಸದನಕ್ಕೆ ಅಗೌರವ ತಂದಿರುವಂತಹ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ, ಇವರ ಕೆಟ್ಟ ಆಡಳಿತದ ವಿರುದ್ಧ ನಮ್ಮ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani