Dailyhunt Logo
  • Light mode
    Follow system
    Dark mode
    • Play Story
    • App Story
Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು

Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು

Vishwavani 0 months ago

ಶಶಾಂಕಣ

ಮ್ಮ ರಾಜ್ಯದ ಮಲೆನಾಡು ಮತ್ತು ಕರಾವಳಿಗೆ ತಾಗಿಕೊಂಡ ಬೆಟ್ಟಗುಡ್ಡಗಳಲ್ಲಿ, ಪುರಾತನ ಕಾಲದಿಂದಲೂ ನಾಗರಿಕತೆ ಅರಳಿದೆ; ದಟ್ಟಕಾಡಿನ ನಡುವೆ, ಕಡಿದಾದ ಪರ್ವತಗಳ ಮಗ್ಗುಲಿನಲ್ಲಿ, ಕೃಷಿ ಮಾಡುತ್ತಾ, ತಮ್ಮದೇ ಸಂಸ್ಕೃತಿಯನ್ನು ಕಟ್ಟಿಕೊಂಡ ಹಲವು ಪ್ರದೇಶ ಗಳಿವೆ.

ಅಂತಹ ಒಂದು ಆಪ್ತ ಎನಿಸುವ ಊರು ಎಂದರೆ, ಕಬ್ಬಿನಾಲೆ ಎಂಬ ಗ್ರಾಮದ ತುತ್ತತುದಿಯಲ್ಲಿರುವ ಕುಚ್ಚೂರು. ಈಗ ಅಲ್ಲಿ ಬಿರುಸಾದ ಮಳೆಗಾಲವಾಗಿದೆ; ಮಳೆ ಸುರಿವಾಗ ಅಂತಹ ಜಾಗಗಳ ನೆನಪುಗಳು ಇನ್ನಷ್ಟು ಕಾಡುತ್ತವೆ.

ನಾನು ಕುಚ್ಚೂರಿಗೆ ಮೊದಲ ಬಾರಿ ಹೋಗಿದ್ದು, ನಾಲ್ಕನೆಯ ತರಗತಿಯಲ್ಲಿದ್ದಾಗ. ನನ್ನನ್ನು ಕರೆದೊಯ್ದವರು ನಮ್ಮ ಅಮ್ಮಮ್ಮ. ಕರ್ನಾಟಕದ ಅತಿ ಸುಂದರ ಗ್ರಾಮಗಳಲ್ಲಿ ಒಂದು ಎನ್ನಬಹುದಾದ ಕಬ್ಬಿನಾಲೆಯ ತುತ್ತ ತುದಿಯಲ್ಲಿರುವ ಕುಚ್ಚೂರು ಪ್ರದೇಶಕ್ಕೆ ಅಂದು ಹೋಗುವುದೆಂದರೆ ಒಂದು ಸಾಹಸ. ಸುತ್ತಲೂ ಕಾಡು, ಅಲ್ಲಲ್ಲಿ ಅಡಿಕೆ ತೋಟ; ಸಮುದ್ರ ಮಟ್ಟದಿಂದ ಸುಮಾರು 2000 ಅಡಿ ಎತ್ತರದ ಕುಚ್ಚೂರು, ಪ್ರಕೃತಿ ಮಾತೆಯ ಪುಟ್ಟ ಕೂಸು ಎನ್ನಬಹುದಾದ ಸುಂದರ ತಾಣ. ಅಲ್ಲಿ ನಮ್ಮ ಬಂಧುಗಳ ಮನೆಯಿದೆ.

ಕುಚ್ಚೂರಿನ ಆ ಮನೆಯ ಎದುರಿನಲ್ಲೇ ಒಂದು ಗದ್ದೆಯಿದೆ. ಗದ್ದೆಯ ತುದಿಯಲ್ಲಿ ನಿಂತರೆ, ಕೆಳಗೆ ಪ್ರಪಾತ, ಅದರಾಚೆ ದಟ್ಟ ಕಾಡು ತುಂಬಿದ ಕಣಿವೆ; ಎಡಭಾಗದಲ್ಲಿ ಮೇಲೇರಿ ನಿಂತ ಸುಳಿಗಲ್ ಬರೆ ಎಂಬ ಮಲೆ. ಪ್ರಪಾತದ ಕೆಳಭಾಗದಲ್ಲಿ ಪುಟ್ಟ ನದಿಯ ನೀರಿನ ಮೊರೆತ ಸಣ್ಣಗೆ ಕೇಳುತ್ತದೆ; ಗದ್ದೆಯ ತುದಿಯಲ್ಲಿ ನಿಂತು ಸೂರ್ಯಾಸ್ತ ನೋಡುವ ಅನುಭವವೇ ಒಂದು ದೃಶ್ಯಕಾವ್ಯ. ಸುತ್ತಲೂ ಹರಡಿರುವ ಹಸಿರು ತುಂಬಿದ ಪರ್ವತಗಳು ಕಣಿವೆಗಳು, ಅಡಿಕೆ ತೋಟಗಳು; ಅವುಗಳ ನಡುವಿನಿಂದ ಕಾಣುವ ಸೂರ್ಯಾಸ್ತದ ಸೊಬಗನ್ನು ಅಕ್ಷರಗಳಲ್ಲಿ ಬಣ್ಣಿಸುವುದು ಅಸಾಧ್ಯ; ಕೆಂಬಣ್ಣದ ಸೂರ್ಯನು ದೂರದ ಸಮುದ್ರದಲ್ಲಿ ಮುಳುಗುವಾಗ, ಇಡೀ ಜಗತ್ತನ್ನೇ ಕೆಂಬಣ್ಣದಲ್ಲಿ ಮುಳುಗಿಸಿ ಬಿಡುತ್ತಾನೆ.

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

ಹಸಿರನ್ನೇ ಒಡಲಲ್ಲಿ ತುಂಬಿಕೊಂಡಿರುವ ಕುಚ್ಚೂರು, ಸಂಜೆ ಹೊತ್ತಿನ ಕೆಂಬಣ್ಣದ ಲೋಕ ದಲ್ಲಿ, ಬೇರೊಂದೇ ವರ್ಣಛಾಯೆಯಲ್ಲಿ ಮಿಂದೇಳುತ್ತದೆ; ಮನದಲ್ಲಿ ಕಾವ್ಯಾನು ಭವವನ್ನೇ ಮೂಡಿಸುತ್ತದೆ. ಕೊನೆಯಲ್ಲಿ ಸೂರ್ಯ ಮರೆಯಾದಾಗ, ಆ ಸುತ್ತಲಿನ ಹಸಿರು ಲೋಕವು ಕತ್ತಲಿನಲ್ಲಿ ನಿಧಾನ ಅದೃಶ್ಯವಾಗುವಾಗ, ನೋಡುವವರ ಮನಸ್ಸಿನಲ್ಲಿ ಒಂದು ರೀತಿಯ ವಿಷಾದ ತುಂಬಿದ ಅನುಭವ, ಆ ವಿಷಾದದಲ್ಲೂ ಸೂರ್ಯಾಸ್ತದ ಅದ್ಭುತ ನೋಟ ಕಣ್ತುಂಬಿಕೊಂಡ ತೃಪ್ತಭಾವ.

ಕುಚ್ಚೂರು ಮನೆಗೆ ನಾನು ಹಲವು ಬಾರಿ ಹೋಗಿದ್ದರೂ, ನಾಲ್ಕನೆಯ ತರಗತಿಯಲ್ಲಿದ್ದಾಗ ಕಂಡ ದೃಶ್ಯ ನಿಜಕ್ಕೂ ವಿಶೇಷ. ಹಲವು ಕೊಠಡಿಗಳಿದ್ದ ಕುಚ್ಚೂರು ಮನೆಯಲ್ಲಿ 1970ರ ದಶಕದ ತನಕ 100 ರಿಂದ 150 ಜನ ವಾಸಿಸುತ್ತಿದ್ದರು! ಅಲ್ಲೊಂದು ಅವಿಭಕ್ತ ಕುಟುಂಬ ಹಲವು ತಲೆಮಾರುಗಳಿಂದ ಬದುಕನ್ನು ಕಟ್ಟಿಕೊಂಡಿತ್ತು.

ಮನೆಯಲ್ಲಿದ್ದ ಮಕ್ಕಳ ಸಂಖ್ಯೆಯೇ ಸುಮಾರು 30. ಕುಚ್ಚೂರು ಮನೆಯವರ ಒಡೆತನದ ಜಾಗದಲ್ಲೇ, ಮನೆಯಿಂದ ಅನತಿ ದೂರದಲ್ಲಿ, ಶಾಲಾ ಕಟ್ಟಡವಿತ್ತು. ಆ ಮನೆಯವರಿ ಗಾಗಿಯೇ ಆ ಶಾಲೆಯನ್ನು ತೆರೆದಿದ್ದಾರೆ ಅನಿಸುವ ಸನ್ನಿವೇಶ. ಏಕೆಂದರೆ, ಆ ಶಾಲೆಯ ಉಪಾಧ್ಯಾಯರಿಗೆಂದೇ, ಕುಚ್ಚೂರು ಮನೆಯಲ್ಲಿ ಒಂದು ಕೊಠಡಿ ಮೀಸಲಾಗಿತ್ತು.

ಅದೊಂದು ಏಕೋಪಾಧ್ಯಾಯ, ಸರಕಾರಿ ಶಾಲೆ; ಶಾಲೆಯ ಮೇಷ್ಟ್ರು ಮನೆಯ ಸದಸ್ಯರಾಗಿ ಯೂ ಪರಿವರ್ತನೆಯಾಗಬೇಕಾದ ಅನಿವಾರ್ಯ ಸನ್ನಿವೇಶ ಅದು! ಆ ಉಪಾಧ್ಯಾಯರಿಗೆ ಊಟ, ತಿಂಡಿ ಎಲ್ಲವೂ ಅದೇ ಮನೆಯಲ್ಲಿ!

ಏಕೆಂದರೆ, ಆ ದಿನಗಳಲ್ಲಿ ಹೆಬ್ರಿಯಿಂದ 8 ಕಿ.ಮೀ. ನಡೆದುಕೊಂಡೇ ಬರಬೇಕಾಗಿದ್ದ ಊರು ಕುಚ್ಚೂರು. ಕಾಡಿನ ನಡುವೆ ಸಾಗುವ, ಮರಕಡಿದು ಸಾಗಿಸಲು ಮಾಡಿದ್ದ ಕಚ್ಚಾ ರಸ್ತೆಯಲ್ಲಿ ನಡಿಗೆ. ಆ ಮಹಾ ಕುಟುಂಬದಲ್ಲಿ ನಡೆದ ಒಂದು ಮದುವೆಗೆ, ನಮ್ಮ ಅಮ್ಮಮ್ಮ ನನ್ನನ್ನು ಕರೆದುಕೊಂಡು ಹೊರಟಿದ್ದರು.

ಹೆಬ್ರಿ ಸನಿಹದ ಬಚ್ಚಪ್ಪು ಎಂಬ ಕುಗ್ರಾಮದಲ್ಲಿ ಬಸ್ ಇಳಿದು, ಕಾಡಿನ ನಡುವೆ ರಸ್ತೆಯಲ್ಲಿ ನಡೆಯತೊಡಗಿದೆವು. ಎದುರಿಗೆ ಸಿಕ್ಕವರೆಲ್ಲರೂ, ಪರಿಚಯ ಇರಲಿ ಬಿಡಲಿ, 'ದೂರ ಹೊರ ಟದ್ದು?' ಎಂದು ನಸುನಗುತ್ತಾ ವಿಚಾರಿಸುತ್ತಿದ್ದರು. ನಾವು ಕುಚ್ಚೂರು ಮನೆಗೆ ಹೊರಟದ್ದು ಎಂದು ಗೊತ್ತಾದಾಕ್ಷಣ, ಯಾರ ಕಡೆಯ ಬಂಧುಗಳು ಎಂದು ಗುರುತಿಸಿ, ಮಾತನಾಡಿಸಿ ಮುಂದೆ ಹೋಗುತ್ತಿದ್ದರು.

ಎಲ್ಲರಿಗೂ ಎಲ್ಲರೂ ಪರಿಚಯವಿರುವ ಗ್ರಾಮೀಣ ಪ್ರದೇಶ ಕುಚ್ಚೂರು. ನಡುದಾರಿಯಲ್ಲಿ ನನಗೆ ಸುಸ್ತು; ಅಲ್ಲೊಂದು ಪುಟ್ಟ ಹೊಟೇಲ್. ಅಲ್ಲಿ ಕಾರದ ಕಡ್ಡಿ ಕೊಡಿಸಿ, ಪುಸಲಾಯಿಸಿ, ಇನ್ನಷ್ಟು ದೂರ ನನ್ನನ್ನು ನಡೆಸಿಕೊಂಡೇ ಹೊರಟರು ನಮ್ಮ ಅಮ್ಮಮ್ಮ. ಆ ಹೊಟೇಲ್‌ ನಲ್ಲಿ ಪುಟ್ಟದೊಂದು ಪಂಜರ; ಅಲ್ಲೊಂದು ಗಿಣಿ ಸಾಕಿದ್ದರು! ಅದು ಚಿಲಿಪಿಲಿ ಎನ್ನುತ್ತಿತ್ತು!

ದಟ್ಟವಾಗಿ ಬೆಳೆದಿದ್ದ ಮರಗಳ ನೆರಳಿನಲ್ಲಿ ಸಾಗಿತ್ತು ನಮ್ಮ ನಡಿಗೆ. ಆ ಆರೆಂಟು ಕಿ.ಮೀ. ದೂರದ ದಾರಿಯುದ್ದಕ್ಕೂ ಅಲ್ಲಲ್ಲಿ ಸಾಕಷ್ಟು ಮನೆಗಳಿದ್ದವು; ಪ್ರತಿ ಮನೆಗೆ ಒಂದೊಂದು ಹೆಸರು- ಪೆರ್ಲ, ಗುಬ್ಬಿಮಾರು, ಕೊಂಕಣರ ಬೆಟ್ಟು, ಬಾಯರಬೆಟ್ಟು, ಜಾರನ ಬೆಟ್ಟು, ಸಂಪಿಗೆ, ಖಜನೆ, ಕೊರ್ತಬೈಲು, ಕೆಪ್ಪನಮಕ್ಕಿ, ಕೆಳಮಠ, ಕಾಜಗಲ್ಲು- ಪ್ರತಿ ಮನೆಗೆ ಒಂದು ಹೆಸರಿತ್ತು ಎಂಬಷ್ಟು ಸ್ಥಳನಾಮ ವೈವಿಧ್ಯ!

ನಮ್ಮ ದಾರಿಗಡ್ಡಲಾಗಿ ಒಂದು ಹೊಳೆ ಬಂತು; ಕಲ್ಲುಗಳ ನಡುವೆ ರಭಸದಿಂದ ಹರಿವ ನೊರೆಯುಕ್ಕುವ ನೀರು. ಹೊಳೆಯನ್ನು ದಾಟಲು, ಸುಮಾರು 80 ಅಡಿ ಉದ್ದದ ಸೇತುವೆ; ವಿಶೇಷವೆಂದರೆ ಅದು ಬೆತ್ತ ಮತ್ತು ಬಿಳಲುಗಳಿಂದ ತಯಾರಿಸಿದ ಸೇತುವೆ! ಅದರ ಮೇಲೆ ನಡೆಯುತ್ತಾ ಹೋದರೆ, ಮಧ್ಯ ಭಾಗಕ್ಕೆ ಬಂದಾಗ ಇಡೀ ಸೇತುವೆ ಜೋಲಾಡುತ್ತದೆ.

ಮೇಘಾಲಯದಲ್ಲಿ ಅಲ್ಲೆಲ್ಲೋ ಕೆಲವು ಕಡೆ, ತೂಗಾಡುವ ಬೀಳಲು ಸೇತುವೆಗಳು ಇನ್ನೂ ಇವೆಯಂತೆ. ಅಂಥದ್ದೇ ಬಿಳಲು ಸೇತುವೆಯನ್ನು ದಾಟುವಾಗ, ಅಮ್ಮಮ್ಮ ನನ್ನ ಕೈ ಹಿಡಿದಿದ್ದರೂ, ನಡುಮಧ್ಯ ಭಾಗಕ್ಕೆ ಬಂದಾಗ, ಆ ಬಿಳಲಿನ ಸೇತುವೆ ಓಲಾಟಕ್ಕೆ ನನಗೆ ಭಯವಾಯಿತು! ಕೆಳಗೆ ರಭಸವಾಗಿ ಹರಿಯುವ ನೀರು ಬೇರೆ!

ಬಂಧುಗಳ ಮದುವೆಗೆಂದು ಹೋಗಿದ್ದ ನಾವು, ಮೂರು ದಿನ ಅಲ್ಲೇ ಠಿಕಾಣಿ ಹೂಡಿ, ಮಲೆನಾಡಿನ ಬದುಕಿನ ಒಂದು ಝಲಕನ್ನು ಅನುಭವಿಸಿದೆವು. ಜಿಗಣೆ, ಇಂಬಳ, ಉಂಬುಳು ಎಂದೆಲ್ಲಾ ಕರೆಸಿಕೊಳ್ಳುವ, ಲೋಳೆ ದೇಹದ, ಕಪ್ಪನೆಯ ಪುಟ್ಟ ಜೀವಿಯನ್ನು ನಾನು ಮೊದಲು ನೋಡಿದ್ದು ಇಲ್ಲೇ!

ಕುಚ್ಚೂರು ಮನೆಯ ಎದುರಿನಲ್ಲೇ, ತಗ್ಗಿನ ಜಾಗದಲ್ಲಿ ಅಡಕೆ ತೋಟವಿದೆ; ಅಲ್ಲೊಂದು ಪುಟ್ಟ ತೋಡು - ಆ ತೋಡಿನಲ್ಲಿ ಜುಳು ಜುಳು ಹರಿವ ನೀರು; ಅಲ್ಲೆಲ್ಲಾ ಏಲಕ್ಕಿ ಗಿಡಗಳಿ ದ್ದವು. ಜತೆಗೆ, ಆ ತಂಪು ಜಾಗದಲ್ಲಿ ಸುರುಳಿ ಹೂವಿನ ಗಿಡಗಳಿದ್ದವು. ತೀಕ್ಷ್ಣ ಸುಗಂಧದ ಬಿಳಿ ಬಣ್ಣದ ಸುರುಳಿ ಹೂವನ್ನು ಕೊಯ್ಯಲೆಂದು, ಆ ಮನೆಯ ಮಕ್ಕಳ ಜತೆ ನಾನೂ ಹೊರಟೆ. ಸದಾ ತೇವ ಇರುವ ತೋಡಿನ ಬಳಿ ಇಂಬಳ ನನಗೆ ಕಚ್ಚಿತು!

'ಅಯ್ಯೋ ಉಂಬುಳ ಕಿತ್ತು ಬಿಸಾಕೂ' ಎಂದು ಆ ಮನೆಯ ಹುಡುಗನೊಬ್ಬ ಹೇಳಿದ; ಬೆರಳಿನಲ್ಲಿ ಹಿಡಿದರೆ ಜಾರಿ ಹೋಗುವ ಇಂಬಳವನ್ನು ಕೀಳಲು, ನನ್ನಿಂದ ಹೇಗೆ ತಾನೆ ಸಾಧ್ಯ? ಪ್ರತಿ ದಿನ ಎಂಬಂತೆ ಇಂಬಳವನ್ನು ನೋಡಿದ್ದ, ಅದರೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ ಆ ಮನೆಯ ಹುಡುಗನೇ ಇಂಬಳವನ್ನು ನಾಜೂಕಿನಿಂದ ಕಿತ್ತೆಸೆದ. ದೂರಕ್ಕೆ ಹಾರಿ ಬಿದ್ದ ಆ ಇಂಬಳವನ್ನು ಕಂಡು, ಜತೆಗೆ ನನ್ನ ಪೇಚಾಟವನ್ನು ಕಂಡು, ಎಲ್ಲಾ ಮಕ್ಕಳೂ ನಕ್ಕದ್ದೇ ನಕ್ಕದ್ದು. ಸಣ್ಣ ಸಣ್ಣ ವಿಷಯಕ್ಕೂ ನಕ್ಕು, ಸಂತಸದಿಂದಿರುತ್ತಿದ್ದರು, ಕುಚ್ಚೂರು ಮನೆಯ ಮಕ್ಕಳು!

100ರಿಂದ 150 ಜನ ವಾಸವಿದ್ದ ಆ ಮನೆಯ ದಿನಚರಿ ಹೇಗಿತ್ತು? ಅದೊಂದು ಪ್ರತ್ಯೇಕ ಗ್ರಾಮವಿದ್ದಂತೆ. ಬೆಳಗಿನ ತಿಂಡಿ ದೋಸೆ ಎಂದಾದರೆ, ಸೌದೆ ಒಲೆಯ ಮುಂದೆ ಎರಡು ದೋಸೆಕಲ್ಲುಗಳನ್ನಿಟ್ಟುಕೊಂಡು ಇಬ್ಬರು ಮಹಿಳೆಯರು ದೋಸೆ ಹೊಯ್ಯಲು ಆರಂಭಿಸು ತ್ತಿದ್ದರು. ಎಲ್ಲರಿಗೂ ದೋಸೆ ಮಾಡಿ ಕೊಡುವುದೇ ಆ ಮಹಿಳೆಯರ ಬೆಳಗಿನ ಕೆಲಸ.

ಮೊದಲಿಗೆ ಮಕ್ಕಳ ಸಾಲು; ಅವರದ್ದು ಮುಗಿದ ನಂತರ ದೊಡ್ಡವರಿಗೆ. ಸಾಲಾಗಿ ಎಲ್ಲರೂ ಊಟಕ್ಕೆ ಕುಳಿತಾಗ, ಬಡಿಸಲು ಇಬ್ಬರು ಬೇಕು! ಆ ಮನೆಯಲ್ಲೇ ಒಂದು ಪುಟ್ಟ ದೇಗುಲವಿದೆ; ಪ್ರತಿ ವರ್ಷ ನವರಾತ್ರಿಯಲ್ಲಿ ಸಂಭ್ರಮದ ಆಚರಣೆ ನಡೆಯುತ್ತಿದೆ. ಇಂದಿಗೂ ಕುಚ್ಚೂರು ಮನೆಯಲ್ಲಿನ ಆ ದೇಗುಲದಲ್ಲಿ, ನವರಾತ್ರಿ ಆಚರಣೆ ಎಂದರೆ ವಿಶೇಷ ಸಂಭ್ರಮ.

ಕುಚ್ಚೂರು ಮನೆಯ ಅನತಿ ದೂರದಲ್ಲಿ ಒಂದು 'ದೊಂಬೆ' ಇತ್ತು. ದಪ್ಪನೆಯ ಅಡಿಕೆ ಮರದ ಕಾಂಡವನ್ನು ಸೀಳಿ, ನೀರು ಹರಿದು ಹೋಗಲು ಅನುಕೂಲವಾಗುವಂತೆ ಚೊಕ್ಕಟ ಮಾಡಿದ ಕಾಂಡವೇ ದೊಂಬೆ. ಅದನ್ನು ಎತ್ತರದ ಒಂದು ಒರತೆಯ ಭಾಗಕ್ಕೆ ಜೋಡಿಸಿ, 30 ಅಡಿ ಕೆಳಗೆ ನೀರು ಬೀಳುವಂತೆ ಮನೆಯವರೇ ಮಾಡಿದ್ದರು.

ನೀರು ಬೀಳುವ ಜಾಗದಲ್ಲಿ ಕಲ್ಲಿನ ಚಪ್ಪಡಿ ಮತ್ತು ವಿಶಾಲವಾದ ಜಾಗ. ಸದಾ ನೀರು ಬೀಳುತ್ತಿದ್ದ ಆ ದೊಂಬೆಯ ಅಡಿ ನಿಂತರೆ, ದಬದಬನೆ ತಲೆಯ ಮೇಲೆ ಸುರಿವ ಜಲಧಾರೆ ಯ ಸ್ನಾನ. ಪ್ರತಿದಿನ ಜಲಪಾತಕ್ಕೆ ತಲೆಯೊಡ್ಡುವ ಅದೃಷ್ಟ ಆ ಮನೆಯವರಿಗೆ. ಆ ಪ್ರದೇಶದ ಸುತ್ತಲೂ ಹಲವು ಮೈಲುಗಳ ತನಕ ಕಾಡು, ಮಲೆಗಳೇ ಇದ್ದುದರಿಂದ, ಆ ನೀರಿನ ಧಾರೆ ಬೇಸಗೆಯಲ್ಲೂ ಬತ್ತುವುದಿಲ್ಲ! , ಅಲ್ಲಿನ ಅಡುಗೆಮನೆ, ಬಚ್ಚಲು ಮನೆಗಳಲ್ಲಿ ಇಂತಹುದೇ ದೊಂಬೆಗಳಿಂದ ಸದಾ ಕಾಲ ಸುರಿವ ನೀರು! ದಿನ ಇಪ್ಪತ್ತನಾಲ್ಕು ಗಂಟೆಯೂ ನಿಸರ್ಗವೇ ನೀಡಿದ ನಿರಂತರ ನಲ್ಲಿ ನೀರು!

ಆಧುನಿಕತೆ ಕುಚ್ಚೂರಿಗೂ ಬಂದ ನಂತರ, ಅಡಿಕೆ ಮರದ ಕಾಂಡ ಸೀಳಿ ಮಾಡಿದ ದೊಂಬೆಯ ಬದಲು, ಪ್ಲಾಸ್ಟಿಕ್ ಪೈಪುಗಳ ಮೂಲಕ ಈಗಲೂ ನೀರು ಬಂದು ಮನೆಯೊಳಗೇ ಸುರಿಯುತ್ತದೆ, ದಿನದ ಇಪ್ಪತ್ತನಾಲ್ಕು ಗಂಟೆಯೂ! ನಂತರವೂ ಹಲವು ಬಾರಿ ಕಬ್ಬಿನಾಲೆ ಮತ್ತು ಕುಚ್ಚೂರಿಗೆ ಹೋಗಿದ್ದುಂಟು. ಆದರೆ ಮೊದಲ ಭೇಟಿಯ ಬೆರಗು ಇನ್ನೂ ಮಾಸಿಲ್ಲ.

ಮೊದಲ ಬಾರಿ ಹೋದಾಗ ಕಂಡ ಮದುವೆಯ ಸಂಭ್ರಮ ನೆನಪಿದೆ. ಮನೆಯ ಅಂಗಳದಲ್ಲೇ ಚಪ್ಪರ ಹಾಕಿ, ಧಾರೆ ಮಂಟಪವನ್ನು ನಿರ್ಮಿಸಿದ್ದರು. ಕನಿಷ್ಟ ಆರು ಕಿ.ಮೀ. ನಡೆದು ಬರಬೇಕಾದ ಆ ಮದುವೆಗೆ, ನೂರಾರು ಜನ ಅತಿಥಿಗಳು ಸೇರಿದ್ದರು. ಕುಚ್ಚೂರು ಮನೆಯ ಅವಿಭಕ್ತ ಕುಟುಂಬವು, ನಂತರದ ದಶಕಗಳಲ್ಲಿ ಭಾಗವಾಯಿತು; ಜಮೀನು, ತೋಟ ಎಲ್ಲವೂ ಭಾಗವಾಗಿ, ಸುತ್ತು ಮುತ್ತಲಿನ ಜಾಗಗಳಲ್ಲಿ ಎಲ್ಲರೂ ಪ್ರತ್ಯೇಕ ಮನೆ ಕಟ್ಟಿಕೊಂಡರು.

ಎಲ್ಲಾ ಮನೆಗಳ ಸುತ್ತಲೂ ಮರಗಿಡಗಳು; ಒಂದು ಮನೆಯವರು ಹರಿಯುವ ತೊರೆಯ ಮೇಲೆಯೇ ಅಟ್ಟಣಿಗೆ ಕಟ್ಟಿಕೊಂಡು, ಮನೆಯ ಒಂದು ಕೊಠಡಿಯನ್ನು ನಿರ್ಮಿಸಿಕೊಂಡಿ ದ್ದರು. ಕಾಡಿನ ನಡುವಿನ ಬದುಕು ಕಷ್ಟ; ಶಾಲೆಗಾಗಿ ಮಕ್ಕಳು ಮೈಲಿಗಟ್ಟಲೆ ನಡೆಯಬೇಕು; ಆದ್ದರಿಂದ ಹಲವರು, ಪಟ್ಟಣಗಳತ್ತ ಸಾಗಿದರು. ಕ್ರಮೇಣ ಅಲ್ಲಿದ್ದ ಏಕೋಪಾಧ್ಯಾಯ ಸರಕಾರಿ ಶಾಲೆ ಮುಚ್ಚಿಹೋಯಿತು!

ಕುಚ್ಚೂರಿನಿಂದ ಕಾಣಿಸುವ ಸೂರ್ಯಾಸ್ತ ನೋಡಲೆಂದೇ ಹಲವು ಬಾರಿ ನಾನು ಅಲ್ಲಿಗೆ ಹೋಗಿದ್ದುಂಟು. ಕಾಡಿನ ನಡುವೆ, 2000 ಅಡಿ ಎತ್ತರದ ಕುಚ್ಚೂರಿನಲ್ಲಿ ತಂಗುವುದೆಂದರೆ, ಪ್ರಕೃತಿ ನಡುವೆ ಕಾಲ ಕಳೆಯುವ ಅಪೂರ್ವ ಅವಕಾಶ. ಆ ಮನೆಯಿಂದ ಇನ್ನೂ ಮುಂದೆ ಸಾಗಿದರೆ, ದಟ್ಟ ಕಾಡು ಮತ್ತು ಮಲೆಗಳ ನಡುವೆ ಸಾಗುವ ಮಣ್ಣು ರಸ್ತೆ, ತಿಂಗಳ ಮಕ್ಕಿ, ತೆಂಕಮಾರು ಮೊದಲಾದ ಇನ್ನೂ ಏಕಾಂಗಿ ಹಳ್ಳಿಗಳಿಗೆ ಕರೆದೊಯ್ಯುತ್ತದೆ.

ಅದೇ ಕಾಡು ದಾರಿಯಲ್ಲಿ ಸಾಗಿದರೆ ಕೂಡ್ಲುತೀರ್ಥ ಜಲಪಾತಕ್ಕೂ ಹೋಗಬಹುದು. ನಾನೊಮ್ಮೆ ಅದೇ ದಾರಿಯಾಗಿ ಕೂಡ್ಲುತೀರ್ಥಕ್ಕೆ ಚಾರಣ ಮಾಡಿದ್ದೆ. ಅಲ್ಲಿಂದ ಮುಂದೆ ಸಾಗಿದರೆ, ಕಿಗ್ಗ, ಶೃಂಗೇರಿಗೂ ದಾರಿಯಿದೆ!

ಅವೆಲ್ಲಾ ದಟ್ಟ ಕಾಡಿನ ನಡುವೆ ಸಾಗುವ ನಿಗೂಢ ಅನುಭವ ನೀಡುವ ಕಾಡುದಾರಿಗಳು. ಆ ಮನೆಯ ಹಿಂಭಾಗದಲ್ಲಿ ಏರಿ ಹೋಗಿದ್ದ ಒಂದು ಬೆಟ್ಟದ ಮಗ್ಗುಲಿನ ತುದಿಗೆ ನಾಯಿಬೆರಿ ಬೆಟ್ಟ ಎಂಬ ಹೆಸರು. ಅಲ್ಲಿಗೂ ಚಾರಣ ಮಾಡಿದ್ದೆ. ದಟ್ಟ ಕಾಡಿನ ನಡುವೆ ಸಾಗುವ ದಾರಿಯು, ತುದಿಯಲ್ಲಿ ಹುಲ್ಲುಗಾವಲಿಗೆ ತೆರೆದುಕೊಳ್ಳುತ್ತದೆ.

ಇಪ್ಪತ್ತೊಂದನೆಯ ಶತಮಾನವು ಎಲ್ಲೆಡೆ ಬದಲಾವಣೆ ತಂದಿರುವಂತೆ, ಕಬ್ಬಿನಾಲೆ-ಕುಚ್ಚೂರಿನಲ್ಲೂ ಬದಲಾವಣೆಗಳನ್ನು ತಂದಿದೆ. ಈಗ ಅರ್ಧ ದೂರದ ತನಕ ಬಸ್ ರಸ್ತೆಯಿದೆ; ಕಾರುಗಳು ಸಂಚರಿಸಬಹುದಾದ ಟಾರು ರಸ್ತೆಯಿದೆ. ವಿದ್ಯೆ ಕಲಿತ ಹಲವರು ಕೆಲಸದ ನಿಮಿತ್ತ ನಗರಗಳನ್ನೂ ಸೇರಿದ್ದಾರೆ; ಹಲವರು ಅಲ್ಲೇ ಉಳಿದಿದ್ದಾರೆ. ಆ ದಟ್ಟಕಾಡಿನ ನಡುವೆ, ಅಡಿಕೆ ತೋಟಗಳ ಮಡಿಲಲ್ಲಿ ಹೋಂಸ್ಟೇಗಳೂ ಆರಂಭವಾಗಿವೆ. ಪ್ರಕೃತಿಯ ಮಡಿಲಲ್ಲಿರುವ ಸುಂದರ ಗ್ರಾಮ ಕಬ್ಬಿನಾಲೆ ಮತ್ತು ಕುಚ್ಚೂರುಗಳು ಇಂದಿಗೂ ಸುಂದರ ತಾಣಗಳಾಗಿ ಉಳದುಕೊಂಡಿವೆ; ಮತ್ತೊಮ್ಮೆ ಅಲ್ಲಿಗೆ ಹೋಗಿ, ಮಳೆಗಾಲದಲ್ಲಿ ನಾಲ್ಕಾರು ದಿನ ತಂಗಬೇಕು ಎಂಬ ಆಸೆ ಮೂಡಿಸುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani