Dailyhunt Logo
  • Light mode
    Follow system
    Dark mode
    • Play Story
    • App Story
Shashidhara Halady Column: ಸರಸರ ಹರಿಯುವ ಇದರ ಕುರಿತು ಇರಲಿ ಕಾಳಜಿ !

Shashidhara Halady Column: ಸರಸರ ಹರಿಯುವ ಇದರ ಕುರಿತು ಇರಲಿ ಕಾಳಜಿ !

Vishwavani 1 month ago

ಶಶಾಂಕಣ

ಮ್ಮ ಪರಿಸರದ ಎಲ್ಲಾ ಜೀವಿಗಳೂ ಪ್ರಮುಖ; ಭೂಮಿಯ ಪರಿಸರ ಸ್ವಸ್ಥವಾಗಿರಲು, ಇಲ್ಲಿನ ಇಕಾಲಜಿಯ ಸರಪಣಿಯನ್ನು ಗೌರವಿಸಬೇಕು, ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಗುರುತಿಸಬೇಕು ಎನ್ನುತ್ತಾರೆ, ತಜ್ಞರು. ಇದನ್ನು, ವಿನಾಕಾರಣ ವನ್ಯಜೀವಿಗಳನ್ನು ಸಾಯಿಸಬಾರದು, ಬೇಟೆಯಾಡಬಾರದು ಎಂದೂ ಅರ್ಥೈಸಬಹುದು.

ಕಾಡಿನಲ್ಲಿ ವಾಸಿಸುವ ಹುಲಿ, ಆನೆ ಮೊದಲಾದ ನಾನಾ ರೀತಯ ಪ್ರಾಣಿಗಳು ನೆಮ್ಮದಿಯಿಂದ ಜೀವಿಸುವಂತಾಗಲು, ನಮ್ಮ ದೇಶದಲ್ಲಿ ಕಾನೂನು ಇದೆ. 1972ರಲ್ಲಿ ಜಾರಿಗೆ ಬಂದ ವನ್ಯಜೀವಿ ರಕ್ಷಣಾ ಕಾಯಿದೆಯ ನಂತರ, ಅವೆಷ್ಟೋ ಜೀವಿಗಳ ಬೇಟೆಯು ಅಧಿಕೃತವಾಗಿ ನಿಂತುಹೋಯಿತು.

ಇದರಿಂದಾಗಿ, ಕೆಲವು ಕಡೆ ಆನೆ, ಹುಲಿ, ಚಿರತೆ ಮೊದಲಾದ ಪ್ರಾಣಿಗಳ ಸಂಖ್ಯೆ ಅಭಿವೃದ್ಧಿ ಹೊಂದಿದೆ. ಈ ರೀತಿಯ ದೊಡ್ಡ ಪ್ರಾಣಿಗಳ ಜತೆಯಲ್ಲೇ, ನೀರು ನಾಯಿ, ಹಾವು, ನರಿ, ತೋಳ ಮೊದಲಾದ ಪ್ರಾಣಿಗಳಿಗೂ ಇಂದು ಕಾನೂನಿನ ರಕ್ಷಣೆ ಇದೆ. ಆದ್ದರಿಂದ, ಎಲ್ಲಾ ಜೀವಿಗಳೊಂದಿಗೆ ನಾವು ಸಹಬಾಳ್ವೆ ಮಾಡಬೇಕಾದ ಸನ್ನಿವೇಶದಲ್ಲಿದ್ದೇವೆ. ವನ್ಯಜೀವಿಗಳು ಅಲ್ಲಲ್ಲಿ ಓಡಾಡು ತ್ತಿದ್ದರೂ, ಅವುಗಳ ಜೀವನಕ್ಕೆ ಹಾನಿ ಮಾಡದೇ ವಾಸಿಸುವುದು ಕೆಲವು ಕಡೆ ಅನಿವಾರ್ಯವೂ ಹೌದು.

ಆದರೆ, ಮನೆಯ ಸುತ್ತಮುತ್ತಲೂ ಸುಳಿದಾಡುವ ಹಾವುಗಳ ಕುರಿತು, ಇಂತಹದೊಂದು ಸಾರ್ವತ್ರಿಕ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಹಲವರಿಗೆ ಕಷ್ಟವಾಗುತ್ತದೆ ಎಂಬುದಂತೂ ನಿಜ. ಮೊನ್ನೆ ಹೀಗಾಯಿತು; ನಾವು ವಾಸಿಸುವ ಅಪಾರ್ಟ್‌ಮೆಂಟ್ ನ ಒಳಗಿರುವ ನಡುಗೆಯ ಪಥದ ಮೇಲೆ ಒಂದು ಹಾವು ಕಾಣಿಸಿಕೊಂಡಿತು; ಅದೂ ಸಂಜೆಯ ಹೊತ್ತಿನಲ್ಲಿ, ಗಿಡಗಳ ಅಡಿಯ ಮಸುಕು ಬೆಳಕಿನಲ್ಲಿ.

Shashidhara Halady Column: ಈ ಮರಗಳು ನಮ್ಮೂರಿನ ಮಕ್ಕಳ ಸ್ನೇಹಿತರು !

'ಹಾವು ಹಾವು' ಎಂಬ ಗದ್ದಲವೆದ್ದಿತು; ಕಾವಲುಗಾರ ಸಿಬ್ಬಂದಿಯಲ್ಲಿ ಒಬ್ಬರು, ಬಹುಶಃ ಹಾವು ಹಿಡಿದು ಗೊತ್ತಿದ್ದವರೇ ಇರಬೇಕು, ತಕ್ಷಣ ಒಂದು ಉದ್ದನೆಯ ಕೋಲು ಮತ್ತು ಒಂದು ಪ್ಲಾಸ್ಟಿಕ್ ಚೀಲದೊಂದಿಗೆ ಬಂದು, ಆ ಹಾವನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕುವಲ್ಲಿ ಯಶಸ್ವಿಯಾದರು; ಹಾವು ಹಿಡಿಯುವ ಅವರ ಕೌಶಲವನ್ನೇ ನೋಡುತ್ತಾ, ಆ ವಿದ್ಯಮಾನವನ್ನು ಹಲವರು ಮೊಬೈಲ್‌ನಲ್ಲಿ ಸೆರೆಹಿಡಿದಾಗಿತ್ತು!

ಸಿಕ್ಕಿದ್ದು ಯಾವ ಹಾವು ಎಂಬ ಚರ್ಚೆ; ಆದರೆ, ಹೆಚ್ಚಿನವರ ದೃಷ್ಟಿಯಲ್ಲಿ ಹಾವು ಎಂದಾಕ್ಷಣ, ಅಪಾಯಕಾರಿ ಎಂಬುದು ಸಹಜ. ಕಾವಲುಗಾರ ಸಿಬ್ಬಂದಿ ಹಿಡಿದ ಹಾವು ಪುಟ್ಟದು; ಆದರೆ, ಗೂಗಲ್‌ ನಲ್ಲಿ ಅದರ ಗುರುತನ್ನು ಪತ್ತೆ ಹಚ್ಚಿದಾಗ, ಎಲ್ಲರೂ ಸಣ್ಣಗೆ ಬೆವರಿದರು; ಏಕೆಂದರೆ, ಅದು 'ಕೊಳಕು ಮಂಡಲ' (ರಸೆಲ್ಸ್ ವೈಪರ್) ಹಾವಿನ ಮರಿ! ಆ ಕಾವಲುಗಾರ ಸಿಬ್ಬಂದಿಯು, ಆ ಸಂಜೆ, ಬರಿಗೈಯಲ್ಲಿ ಒಂದು ಕೋಲಿನ ಸಹಾಯದಿಂದ ಅದನ್ನು ಹಿಡಿದಿದ್ದ; ಚುರುಕಾಗಿ ತಲೆ ಅಲ್ಲಾಡಿ ಸುತ್ತಾ, ಕಚ್ಚುವಂತೆ ಆಗಾಗ ತಲೆಯನ್ನು ಕ್ಷಿಪ್ರವಾಗಿ ಆಕ್ರಮಣದ ರೀತಿಯಲ್ಲಿ ಬಡಿಯುತ್ತಿದ್ದ ಆ ಹಾವು, ಅಕಸ್ಮಾತ್ ಆತನ ಇನ್ನೊಂದು ಕೈಗೆ ಕಚ್ಚಿದ್ದರೆ, ಅಪಾಯ ಸಾಧ್ಯತೆ ಇತ್ತು!

ನಂತರ, ಆ ಹಾವನ್ನು ಕುರುಚಲು ಕಾಡಿದ್ದ ಪ್ರದೇಶಕ್ಕೆ ಬಿಡಲಾಯಿತು. ಅಂದು ಸೆರೆ ಸಿಕ್ಕ ಹಾವು, ಮರಿ ನಿಜ, ಆದರೆ, ಮರಿ ಹಾವಿನಲ್ಲೂ ವಿಷ ಇರಬಹುದು! ನಮ್ಮ ದೇಶದ ಅತಿ ವಿಷಕಾರಿ ಹಾವು ಗಳಲ್ಲಿ ಕೊಳಕು ಮಂಡಲವೂ ಸೇರಿದೆ. ಇಂತಹ ಹಾವುಗಳು ಮನೆಯ ಸುತ್ತಮುತ್ತ ಬಂದಾಗ, ವನ್ಯಜೀವಿ ಎಂಬ ಅವುಗಳ ಮೇಲಿನ ಸಹಾನುಭೂತಿಗಿಂತಲೂ, ನಮ್ಮ ಮತ್ತು ನಮ್ಮ ಮಕ್ಕಳ ಕ್ಷೇಮವೇ ಮುಖ್ಯವಾಗುತ್ತದೆ; ಜತೆಗೆ, ಹಾವು ಎಂಬ ಶಬ್ದ ಕೇಳಿದ ತಕ್ಷಣ, ನೆಲದ ಮೇಲೆ ಸರಿದಾಡುವ ಅದನ್ನು ನೋಡಿದ ತಕ್ಷಣ ಮನದಲ್ಲಿ ಮೂಡುವ ಭಯ, ಆತಂಕ, ತಲ್ಲಣ ಮೊದಲಾದವೇ ಮುನ್ನೆಲೆಗೆ ಬರುತ್ತವೆ.

ಆದ್ದರಿಂದ, ಹಾವನ್ನು ಯಾರೇ ಕಂಡರೂ, ತಕ್ಷಣ ದೂರ ಮಾಡಲು ಪ್ರಯತ್ನಿಸುತ್ತಾರೆ; ಬೆಂಗಳೂರು, ಮೈಸೂರು ಮೊದಲಾದ ನಗರಗಳಲ್ಲಿ ಈಗ ಆದ್ಯತೆಯ ಮೇರೆಗೆ ಹಾವುಗಳನ್ನು ಹಿಡಿದು, ದೂರದ ಕಾಡುಪ್ರದೇಶಕ್ಕೆ ಬಿಡುವ ಪದ್ಧತಿ ಬಳಕೆಗೆ ಬಂದಿದೆ; ಆದರೆ, ಹಳ್ಳಿಗಳಲ್ಲಿ ಹಾವುಗಳನ್ನು ಹಿಡಿದು ದೂರ ಬಿಡಲು ಇಷ್ಟೇ ಕಾಳಜಿ ವಹಿಸುತ್ತಾರೆಂಬುದು ಎಲ್ಲಾ ಸಂದರ್ಭಗಳಲ್ಲೂ ಖಚಿತವಿಲ್ಲ. ಕೆಲವು ಪ್ರದೇಶಗಳಲ್ಲಿ ಹಾವುಗಳನ್ನು ಹಿಡಿದು, ದೂರಕ್ಕೆ ಕೊಂಡೊಯ್ದು ಬಿಡುವವರ ಕೊರತೆಯೂ ಇರಬಹುದು. ಆಗ, ಅಕಸ್ಮಾತ್ ಮನುಷ್ಯನ ಕಣ್ಣಿಗೆ ಬಿದ್ದ ಹಾವುಗಳ ಜೀವವೇ ತೀರಾ ಅಪಾಯ ದಲ್ಲಿರುತ್ತದೆ!

ಆದರೆ, ಕೆಲವು ವಿಷಕಾರಿ ಹಾವುಗಳು ಮನುಷ್ಯರಿಗೆ ಅಪಾಯವಂತೂ ನಿಜ. ನಮ್ಮ ದೇಶದಲ್ಲಿ ಮುಖ್ಯವಾಗಿ ನಾಲ್ಕು ಪ್ರಭೇದದ ಹಾವುಗಳು ಬಹಳ ವಿಷಕಾರಿ ಎಂದು ಗುರುತಿಸಲಾಗಿದೆ. (ಸಮುದ್ರ ದ ಹಾವುಗಳೂ ಸೇರಿದಂತೆ, ನಮ್ಮ ದೇಶದಲ್ಲಿ ಒಟ್ಟು 60 ಪ್ರಭೇದದ ಹಾವುಗಳು ವಿಷಕಾರಿ ಎನಿಸಿವೆ. ಕೆಲವು ಹಾವುಗಳ ವಿಷವು ಬಹಳ ಸೌಮ್ಯ ಸ್ವಭಾವದವು). ಕೆಲವು ಪ್ರಭೇದದ ಹಾವುಗಳು ಅಕಸ್ಮಾತ್ ಕಚ್ಚಿದರೆ, ಜೀವಕ್ಕೆ ಅಪಾಯವಾಗುದು ಸಹ ಸತ್ಯ. ಇಂತಹ ವಿದ್ಯಮಾನಗಳನ್ನು ನಮ್ಮ ಹಳ್ಳಿಯಲ್ಲಿ ನಾನು ಕಂಡಿದ್ದುಂಟು, ಕೇಳಿದ್ದುಂಟು. ಕೆಲವು ದಶಕಗಳ ಹಿಂದೆ ಹೆಚ್ಚಿನ ಜನರು ಒಂದು ಪ್ರದೇಶ ದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ನಡಿಗೆಯೇ ಪ್ರಧಾನವಾಗಿದ್ದ ದಿನಗಳಲ್ಲಿ, ದಾರಿಯ ಮೇಲೆ ಹರಿದು ಬರುವ ವಿಷದ ಹಾವುಗಳಿಂದಾಗಿ ಅಪಾಯಕಾರಿ ಸನ್ನಿವೇಶಗಳೂ ಎದುರಾಗುತ್ತಿದ್ದು ದುಂಟು.

ಪಾಪ, ಆ ಹಾವುಗಳಿಗೆ ತಾವು ಸಂಚರಿಸುವ ದಾರಿಯು ಮನುಷ್ಯನ ದಾರಿ ಎಂದು ಹೇಗಾದರೂ ಗೊತ್ತಾಗಬೇಕು? ತಮ್ಮ ಪಾಡಿಗೆ ತೆವಳಿಕೊಂಡು ಹೋಗುತ್ತಿರುವಾಗ, ಅವನ್ನು ನೋಡದ ಮನುಷ್ಯ ನು ಅವುಗಳ ಮೇಲೆ ಕಾಲಿಟ್ಟರೆ, ಅವು ಕಚ್ಚುತ್ತಿದ್ದುದ್ದುಂಟು. ಆ ದಾರಿಯಲ್ಲಿ ನಡೆಯುತ್ತಿದ್ದವನ ಗ್ರಹಚಾರ ನೆಟ್ಟಗಿದ್ದರೆ, ಆ ಹಾವು ವಿಷರಹಿತ ಹಾವು ಆಗಿರಬಹುದು; ಆದರೆ, ವಿಷಕಾರಿ ಹಾವು ಕಚ್ಚಿದರೆ, ಪ್ರಾಣಾಪಾಯದ ಸಂದರ್ಭ ಇದ್ದದ್ದೇ. ಕೆಲವು ದಶಕಗಳ ಆ ದಿನಗಳಲ್ಲಿ ಸನಿಹದಲ್ಲಿ ಆಸ್ಪತ್ರೆಗಳೂ ಇರಲಿಲ್ಲ, ಅಲ್ಲಿ ಆಂಟಿ ವೆನಮ್ ಇಂಜಕ್ಷನ್ ಸಹ ತಕ್ಷಣ ಸಿಗುವಂತೆ ಇರಲಿಲ್ಲವಲ್ಲ.

ಇಂತಹದೊಂದು ದುರಂತಕ್ಕೆ ಒಮ್ಮೆ ಸಾಕ್ಷಿಯಾಗಿದ್ದೆ. ನಾವು ಆರೆಂಟು ಮಕ್ಕಳು, ಶಾಲೆ ಮುಗಿಸಿ ಕೊಂಡು ಬಂದು, ಸಂಜೆಯ ಹೊತ್ತಿನಲ್ಲಿ ಮನೆಯ ಮುಂದಿನ ಅಗೇಡಿಯಲ್ಲಿ ಚಿನ್ನಿದಾಂಡು ಆಡುತ್ತಿದ್ದೆವು. ಇನ್ನೇನು ಕತ್ತಲಾಗುವ ಸಮಯ; ಯಾರೋ ಹೊಡೆದ ಚಿನ್ನಿಯು, ಅಗೇಡಿಯ ಅಂಚಿನ ಸಣ್ಣತೋಡಿನತ್ತ ಹೋಗಿ ಬಿತ್ತು. ಅದು ಬೇಸಗೆಯ ಸಮಯ; ಅಗೇಡಿಯಲ್ಲಾಗಲೀ, ತೋಡಿನಲ್ಲಾಗಿಲೀ ನೀರಿರಲಿಲ್ಲ. ಆದರೂ, ತೋಡಿನ ಉದ್ದಕ್ಕೂ ಹಳು, ಮುಂಡುಕನ ಗಿಡ, ಕುಸುಬನ ಗಿಡ ಎಲ್ಲವೂ ಬೆಳೆದಿದ್ದವು.

ನಮ್ಮ ಜತೆಯಲ್ಲಿ ಆಡುತ್ತಿದ್ದ, ಪಕ್ಕದ ಮನೆಯ ಸುಬ್ಬಣ್ಣ ಆ ಚಿನ್ನಿಯನ್ನು ಹುಡುಕುತ್ತಾ ಆ ತೋಡಿನಂಚಿಗೆ ಹೋದ. 'ಹಾವು ಕಚ್ಚಿತೋ' ಎಂದು ಕೂಗುತ್ತಾ ಅವನು ವಾಪಸು ಬಂದಿದ್ದಷ್ಟೇ ಗೊತ್ತು; ನಾವೆಲ್ಲರೂ ಮಕ್ಕಳು ಮನೆಗೆ ಓಡಿದೆವು. ಪಂಡಿತರನ್ನು ಕರೆಸಿದರು. ಸುಬ್ಬಣ್ಣನನ್ನು ಕಾಲಿನ ಮೇಲೆ ಮಲಗಿಸಿಕೊಂಡು, ನಾರು ಬೇರಿನ ರಸವನ್ನು ಅವರು ಕುಡಿಸುತ್ತಿದ್ದ ದೃಶ್ಯ ನೆನಪಿದೆ; ಆಗಿನ್ನೂ ವಿದ್ಯುತ್ ಸಂಪರ್ಕ ಇರಲಿಲ್ಲ; ಚಿಮಿಣಿ ಬೆಳಕಿನಲ್ಲೇ ಸುಬ್ಬಣ್ಣ ಮಲಗಿದ್ದು, ಆ ನಂತರ ಆತ ನಮ್ಮನ್ನು ಅಗಲಿದ್ದು ಎಲ್ಲವೂ ಮಸುಕಾಗಿ ನೆನಪಿದೆ.

ಹಳ್ಳಿಯ ಜೀವನವು ಬಹು ಸುಂದರ ಎಂಬುದರಲ್ಲಿ ಅನುಮಾನವಿಲ್ಲ ವಾದರೂ, ದೂರದ (ಅಂದರೆ ನಾಗರಿಕ ಸೌಲಭ್ಯಗಳಿಂದ ಬಹುದೂರದಲ್ಲಿದ್ದ) ಗ್ರಾಮೀಣ ಪ್ರದೇಶದ ಜನರು ಇಂತಹ ಹಲವು ರಿಸ್ಕ್‌ಗಳನ್ನು ಎದುರಿಸುತ್ತಲೇ ತಮ್ಮ ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆ ಇತ್ತು; ಈಚಿನ ದಶಕಗಳಲ್ಲಿ ನಮ್ಮೂರಿನಲ್ಲಿ ಆಸ್ಪತ್ರೆಯಾಗಿರುವುದರಿಂದ, ಅಷ್ಟರ ಮಟ್ಟಿಗೆ ಪರವಾಗಿಲ್ಲ.

ಆದರೂ, ನಮ್ಮ ರಾಜ್ಯದಲ್ಲಿ, ನಮ್ಮ ದೇಶದಲ್ಲಿ ಹಾವು ಕಡಿತದಿಂದ ಹಲವರು ಸಾವಿಗೀಡಾಗು ತ್ತಿರುವ ವರದಿಗಳು, ಆಗಾಗ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ, ಹಳ್ಳಿಗಳಲ್ಲಿ, ಕೃಷಿ ಪ್ರಧಾನವಾಗಿರುವ ಕುಟುಂಬಗಳಲ್ಲಿ, ಇಂತಹ ಅಪಾಯದ ಸಂಭಾವ್ಯತೆ ಇದ್ದದ್ದೇ.

ನಮ್ಮ ಹಳ್ಳಿಯಲ್ಲಿ ಕೃಷಿಯೇ ಪ್ರಧಾನವಾಗಿದ್ದು, ಮನೆಯ ಸುತ್ತಲೂ ಗಿಡಮರಗಳು, ಪೊದೆಗಳು, ಗದ್ದೆಗಳು ಇದ್ದುದರಿಂದ, ನಾನಾ ರೀತಿಯ ಹಾವುಗಳು ವಾಸಿಸುತ್ತಿದ್ದವು. ಮನುಷ್ಯನು ಇಂತಹ ಜಾಗಗಳಲ್ಲಿ ವಸತಿ ಸ್ಥಾಪಿಸುವ ಮೊದಲು, ಅದು ಅವುಗಳ ವಾಸಸ್ಥಾನ ತಾನೆ? ಒಂದು ರೀತಿಯಲ್ಲಿ ನೋಡಿದರೆ, ನಮ್ಮ ಮನೆ ಅಂಗಳವು ಹಾವು ಮತ್ತು ಕಪ್ಪೆಗಳ ಪ್ಲೇಗ್ರೌಂಡ್ ಆಗಿತ್ತು ಎನ್ನಬಹುದು!

ಇಲ್ಲಿ 'ಪ್ಲೇ' ಎಂದರೆ, ಕಪ್ಪೆಯು ಹಾವಿನೊಂದಿಗೆ ಆಡಲೇಬೇಕಾದ ಜೀವನ್ಮರಣದ ಆಟ. ನಮ್ಮ ಮನೆ ಎದುರಿನ ಅಂಗಳವನ್ನು ಮಣ್ಣುಹಾಕಿ ಚೆನ್ನಾಗಿ ಒರೆದಿರುತ್ತಿದ್ದರು; ಅದರ ಒಂದು ತುದಿಯಲ್ಲಿ ಬಗ್ಗುಬಾವಿ; ಒರಟು ಕಲ್ಲುಗಳನ್ನೇ ಜೋಡಿಸಿ ಅದಕ್ಕೆ ಕಟ್ಟಣೆ ಮಾಡಲಾಗಿದ್ದರಿಂದ, ಆ ಕಲ್ಲುಗಳ ಸಂದಿಯಲ್ಲಿ ಹತ್ತಿಪ್ಪತ್ತು ಒಳ್ಳೆ ಹಾವುಗಳು ವಾಸಿಸುತ್ತಿದ್ದವು!

ಅದೇ ಬಾವಿಯಿಂದ ನಾವು ಕುಡಿಯುವ ನೀರನ್ನು ತರುತ್ತಿದ್ದುದು ನಿಜವಾದರೂ, ಒಳ್ಳೆ ಹಾವುಗಳು ನೀರು ಎತ್ತಲು ಬಂದವರಿಗೆ ಏನೂ ಮಾಡುತ್ತಿರಲಿಲ್ಲ. ಆದರೆ, ಬಡಪಾಯಿ ಕಪ್ಪೆಗಳು ಅಲ್ಲೆಲ್ಲಾ ದರೂ ಸುಳಿದರೆ, ಅವುಗಳನ್ನು ಹಿಡಿದು ತಿನ್ನಲು ಸದಾ ಕಾಯುತ್ತಿದ್ದವು. ಅಂಗಳದ ಒಂದು ತುದಿಯಿಂದ ಕುಪ್ಪಳಿಸುತ್ತಾ ಬರುವ ಕಪ್ಪೆಯು, ಇನ್ನೊಂದು ತುದಿಗೆ, ಅಂದರೆ ನಮ್ಮ ಮನೆಯತ್ತ ಬರುವುದು ರೂಢಿ; ಅದನ್ನು ಅಟ್ಟಿಸಿಕೊಂಡು ಬರುವ ಹಾವು, ಮನೆಯ ಬಾಗಿಲಿನ ತನಕವೂ ಬರುತ್ತಿತ್ತು!

ಕಪ್ಪೆಯು ಬೇಗ ಬೇಗನೆ ಕುಪ್ಪಳಿಸುತ್ತಾ, ನಮ್ಮ ಮನೆಯ ಅಡುಗೆಮನೆಯ ಬಾಗಿಲಿನತ್ತ ಧಾವಿಸು ತ್ತಿತ್ತು. ನಾವು ಕೋಲು ಹಿಡಿದು, ಅದನ್ನು ಹಚಾ ಹಚಾ ಎಂದು ಓಡಿಸುತ್ತಿದ್ದೆವು! ಅಡುಗೆ ಮನೆಯೊಳಗೆ ಸೇರಿಕೊಂಡರೆ, ಆ ಹಾವುಗಳಿಂದ ತನಗೆ ರಕ್ಷಣೆ ಎಂದು ಅದರ ಭಾವನೆ ಇರಬಹುದು. ಒಮ್ಮೊಮ್ಮೆ ಅದರ ಉಪಾಯ -ಲಿಸುವುದಿಲ್ಲ; ಸರಸರನೆ ಹರಿದುಬರುವ ಹಾವು, ಕಪ್ಪೆಯನ್ನು ಗಬಕ್ಕನೆ ಕಚ್ಚಿಕೊಂಡು, ವಾಪಸು ತನ್ನ ಠಾವಾದ ಬಗ್ಗು ಬಾವಿಯ ಕಲ್ಲುಗಳ ಸಂದಿಗೆ ಓಡುವು ದುಂಟು. ಆಗ, ಅದರ ಬಾಯಲ್ಲಿ ಸಿಕ್ಕಿಕೊಂಡ ಕಪ್ಪೆಯ ಓಂಕ್ ವಾಂಕ್ ಎಂದು ಆರ್ತನಾದ ಮಾಡುವಾಗ ಅದನ್ನು ನೋಡಿದವರಿಗೆ ಕನಿಕರ ಮೂಡುವುದುಂಟು.

ಅಂತಹ ಕನಿಕರದ ಅವಶ್ಯಕತೆ ಇಲ್ಲ, ಸುಮ್ಮನೆ ಇರಿ, ಅದು ಹಾವಿನ ಆಹಾರ ಎಂದು ಹಿರಿಯರು ಹೇಳಿ, ಇವೆಲ್ಲಾ ಈ ಗ್ರಾಮೀಣ ಪ್ರಪಂಚದ ವಿದ್ಯಮಾನಗಳು ಎಂದು ಸುಮ್ಮನಾಗಿಸುತ್ತಿದ್ದರು. ಹಾವು ಅಟ್ಟಿಸಿಕೊಂಡು ಬಂದಾಗ, ಕಪ್ಪೆಯು ನಮ್ಮ ಅಡುಗೆ ಮನೆಯತ್ತ ಧಾವಿಸಿ ಬರುತ್ತಿದ್ದವು ಎಂದೆನಲ್ಲ, ಅದು ಇಂದಿಗೂ ನನಗೆ ಒಂದು ಪುಟ್ಟ ವಿಸ್ಮಯವಾಗಿಯೇ ಕಾಣಿಸುತ್ತದೆ. ಬಾಗಿಲಿನ ರೂಪವನ್ನು, ಮನೆಯೊಳಗಿನ ನಸುಕು ಬೆಳಕನ್ನು ಗುರುತಿಸಿ ಅವು ಬರುತ್ತಿದ್ದವೋ ಏನೋ.

ನಮ್ಮ ಹಳ್ಳಿಯಲ್ಲಿ, ಹಾವುಗಳು ನಮ್ಮ ಹಳ್ಳಿಮನೆಯೊಳಗೂ ಬರುತ್ತಿದ್ದುದು ಮಾಮೂಲು. ಕೇರೆ ಹಾವು, ಒಳ್ಳೆ ಹಾವು, ನಾಗರಹಾವುಗಳು ವರ್ಷಕ್ಕೆ ಒಂದೆರಡು ಬಾರಿಯಾದರೂ ನಮ್ಮ ಮನೆಯ ಛಾವಣಿಯಲ್ಲಿ ಓಡಾಡುತ್ತಿದ್ದುದುಂಟು. ಹಳೆಯ ಕಾಲದ ಹೆಂಚಿನ ಮನೆಯ ಛಾವಣಿಯಲ್ಲಿ ಇಲಿಗಳು ವಾಸಿಸುತ್ತಿದ್ದು ದರಿಂದ, ಆ ಇಲಿಗಳನ್ನು ಹಿಡಿಯಲೆಂದು ಹಾವುಗಳು ಛಾವಣಿಯುದ್ದಕ್ಕೂ ಓಡಾಡುತ್ತಿದ್ದವು!

ಅವು ತಮ್ಮ ಆಹಾರವನ್ನು ಸ್ವೀಕರಿಸಿ, ವಾಪಸಾಗುವ ತನಕ ಮನೆಯೊಳಗಿರುವವರಿಗೆ ಸಣ್ಣಗೆ ಭಯ. ನಮ್ಮ ಹಳ್ಳಿಗಳಲ್ಲಿ ಕೆಲವು ದಶಕಗಳ ಹಿಂದೆ, ಕೆಲವೇ ಕೆಲವು ಪ್ರಭೇದದ ಹಾವುಗಳನ್ನು ಹೊಡೆಯು ತ್ತಿದ್ದರು: ಕೊಳಕು ಮಂಡಲ, ಕಟ್ಟು ಹಾವುಗಳು ಇಂತಹ ಶಿಕ್ಷೆಗೆ ಒಳಗಾಗುತ್ತಿದ್ದವು. ಆದರೆ, ನಮ್ಮೂರಿನವರು ಯಾವುದೇ ಕಾರಣಕ್ಕೂ ನಾಗರ ಹಾವನ್ನು ಹೊಡೆಯುತ್ತಿರಲಿಲ್ಲ. ಆದ್ದರಿಂದ, ನಮ್ಮ ಹಳ್ಳಿಯು ಮತ್ತು ಆ ಸುತ್ತಮುತ್ತಲಿನ ವಿಶಾಲ ಪ್ರದೇಶವು ಅವುಗಳ ಸಾಮ್ರಾಜ್ಯ ಎನ್ನಬಹುದು.

ಆ ಹಾವುಗಳನ್ನು ಪೂಜಿಸುತ್ತಿದ್ದ ನಮ್ಮ ಹಳ್ಳಿಯವರು, ಅವುಗಳಿಗೆ ರಾಜಮರ್ಯಾದೆಯನ್ನು ನೀಡುತ್ತಿದ್ದುದಂತೂ ನಿಜ. ಜತೆಗೆ, ನಾಗರ ಹಾವಿಗೆ, ಕಾಳಿಂಗ ಸರ್ಪಕ್ಕೆ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ದೇವರ ಸ್ಥಾನವೂ ಇದೆ. ನಾಗರ ಹಾವನ್ನು ದೇವರ ಹಾವು ಎಂದೇ ಕರೆಯುವ ಪದ್ಧತಿ ಇದೆ. ನಾಗಾರಾಧನೆಯು ಬಹು ಭಕ್ತಿಯಿಂದ ಆಚರಿಸಲ್ಪಡುತ್ತಿರುವ ಒಂದು ಆರಾಧನೆ; ಕರಾವಳಿಯ ನಾಗಾರಾಧನೆಯ ಶ್ರದ್ಧೆ, ಭಕ್ತಿ, ವಿಜೃಂಭಣೆ, ಅದನ್ನು ನೋಡಲು ಬರುವ ಜನ ಸಾಗರ ಎಲ್ಲವೂ ಒಂದು ವಿಸ್ಮಯ.

ವಿಶೇಷವೆಂದರೆ, ನಮ್ಮ ರಾಜ್ಯದ ಬಯಲು ಸೀಮೆಯವರಿಗೆ, ಇಂತಹ ಭಕ್ತಿಪೂರ್ವಕ 'ನಾಗಾರಾಧನೆ' ಮತ್ತು 'ನಾಗಮಂಡಲ' ಎಂಬ ವಿಶೇಷ ಪೂಜೆಯ ಪರಿಚಯವೇ ಇಲ್ಲ ಎನ್ನಬಹುದು. ಇಲ್ಲಿ ನಾಗರ ಕಲ್ಲಿಗೆ ಪೂಜೆ ನಡೆಯುತ್ತದೆ. ಕರಾವಳಿಯ ಜನರು ನಾಗರ ಹಾವನ್ನು ಯಾವ ಕಾರಣಕ್ಕೂ ಹೊಡೆಯುತ್ತಿರಲಿಲ್ಲ, ಆದರೆ, ನಮ್ಮ ರಾಜ್ಯದ ಬೇರೆ ಕಡೆಗಳಲ್ಲಿ ಹೀಗೆಯೇ ಎಂದು ಹೇಳುವಂತಿಲ್ಲ. ಅದೇನೇ ಇದ್ದರೂ, ನಾಗರ ಪಂಚಮಿಯ ಆಚರಣೆ ಎಲ್ಲಾ ಕಡೆಯೂ ಇದೆ; ಹಾವನ್ನು ಪೂಜಿಸುವ ದೇಶ ನಮ್ಮದು ಎಂಬ ವಿಶೇಷಣವೂ ಇಲ್ಲಿ ಗಮನ ಸೆಳೆಯುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani