Dailyhunt Logo
  • Light mode
    Follow system
    Dark mode
    • Play Story
    • App Story
ಶಿಶಿಲ-ಭೈರಾಪುರ ರಸ್ತೆ ಕಾಮಗಾರಿ: ಜಂಟಿ ಸ್ಥಳ ಪರಿಶೀಲನೆಗೆ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸೂಚನೆ

ಶಿಶಿಲ-ಭೈರಾಪುರ ರಸ್ತೆ ಕಾಮಗಾರಿ: ಜಂಟಿ ಸ್ಥಳ ಪರಿಶೀಲನೆಗೆ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸೂಚನೆ

Vishwavani 4 days ago

ವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ನಡುವೆ ರಸ್ತೆ ಕಾಮಗಾರಿ ನಡೆಸಬೇಕೆಂಬ ಬೇಡಿಕೆಗೆ ಸಂಬಂಧಿಸಿ ಚಿಕ್ಕಮಗಳೂರು ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಜಂಟಿ ಪರಿಶೀಲನೆ ನಡೆಸಿ, ವಿವರವಾದ ವರದಿಯನ್ನು ತಕ್ಷಣವೇ ಸಲ್ಲಿಸಬೇಕು ಎಂದು ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ನಿರ್ದೇಶನ ನೀಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಲ್ಲಿ ರಸ್ತೆ ನಿರ್ಮಾಣ ಮಾಡುವ ಅಗತ್ಯದ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮೇ.18ರಂದು‌ ಪತ್ರ ಬರೆದಿದ್ದರು. ಪಿಎಂಜಿಎಸ್‌ವೈ-III/ಪಿಎಂ ಜನ್‌ಮನ್‌ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಅವರು ಕೋರಿದ್ದರು.

ಈ ರಸ್ತೆ ನಿರ್ಮಾಣದಿಂದ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಂಪರ್ಕ ಸುಧಾರಿಸಲಿದ್ದು, ಎರಡೂ ಜಿಲ್ಲೆಗಳ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆಗೊಳಿಸಲಿದೆ. ಶಿಶಿಲ ಮಾರ್ಗವಾಗಿ ದಕ್ಷಿಣ ಕನ್ನಡದ ಧಾರ್ಮಿಕ ತಾಣಗಳಿಗೆ ಅತಿಶೀಘ್ರದಲ್ಲಿ ತಲುಪಬಹುದಾಗಿದ್ದು, ಲಕ್ಷಾಂತರ ಮಂದಿಗೆ ಇದರಿಂದ ಅನುಕೂಲವಾಗಲಿದೆ ಎಂದು ವಿವರಿಸಿದ್ದರು.

ಈ ಪತ್ರಕ್ಕೆ ಉತ್ತರವಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಜೇಕಬ್‌ ಎಲ್.‌ ಅವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಪಿಎಂಜಿಎಸ್‌ವೈ-III ಯೋಜನೆಯಡಿ ನೂತನ ಯೋಜನೆಗಳಿಗೆ ಅನುಮೋದನೆ ನೀಡಲು ಅವಕಾಶವಿಲ್ಲದೇ ಮಾರ್ಚ್ 2028ರವರೆಗೆ ಅವಧಿ ವಿಸ್ತರಿಸಲಾಗಿದೆ. ಪಿಎಂ-ಜನ್‌ಮನ್‌ ಯೋಜನೆಯಡಿ ಈಗಾಗಲೇ 7,984 ಕಿ.ಮೀ ರಸ್ತೆ ಮಂಜೂರಾಗಿದ್ದು, ಯಾವುದೇ ಹೊಸ ಪ್ರಸ್ತಾವನೆಯಿದ್ದರೆ ಆದಿವಾಸಿ ಕಲ್ಯಾಣ ಸಚಿವಾಲಯದ ಮೂಲಕವೇ ಸಲ್ಲಿಸಬೇಕಾಗುತ್ತದೆ. ಆದ್ದರಿಂದ, ಈ ಯೋಜನೆಯನ್ನು ಪಿಎಂಜಿಎಸ್‌ವೈ-IV ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಯಾವುದಾದರೂ ಯೋಜನೆಯಡಿ ಅನುಷ್ಠಾನಗೊಳಿಸಲು ಪರಿಶೀಲಿಸುವಂತೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಪತ್ರದ ಬೆನ್ನಲ್ಲೇ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು ಚಿಕ್ಕಮಗಳೂರಿನ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಸಂಸದರ ಪತ್ರದಲ್ಲೇನಿತ್ತು?

ಧರ್ಮಸ್ಥಳ ಲಕ್ಷದೀಪೋತ್ಸವ ಮತ್ತು ಪ್ರಮುಖ ಹಬ್ಬಗಳ ಸಮಯದಲ್ಲಿ ಲಕ್ಷಾಂತರ ಭಕ್ತರು ಬರಿಗಾಲಿನಲ್ಲಿ ದ.ಕ. ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಪಾದಯಾತ್ರೆ ಮಾಡುತ್ತಾರೆ. ಪ್ರಸ್ತುತ ಇರುವ ಕಚ್ಚಾ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಅಸುರಕ್ಷಿತವಾಗುವುದರಿಂದ ಇಲ್ಲಿ ಸರ್ವಋತು ರಸ್ತೆ ನಿರ್ಮಾಣ ಅಗತ್ಯವಾಗಿದೆ. ಈ ಪ್ರದೇಶದಲ್ಲಿ ವಿಶೇಷ ಹಿಂದುಳಿದ ಬುಡಕಟ್ಟು ಸಮುದಾಯವಾದ ಮಲೆಕುಡಿಯ ಜನವಸತಿಗಳಿದ್ದು, ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಪಿಎಂ-ಜನ್‌ಮನ್‌ ಯೋಜನೆಯಡಿ ಇದಕ್ಕೆ 100% ಕೇಂದ್ರ ಸರ್ಕಾರದ ನೆರವು ದೊರೆಯುತ್ತದೆ. ಈ ರಸ್ತೆಯ ಸಾಧ್ಯತಾ ವರದಿ (Feasibility Study) ಮುಂಚೆಯೇ ತಯಾರಾಗಿದ್ದು, ಬಜೆಟ್ ಕೊರತೆಯಿಂದ ಬಾಕಿಯಿತ್ತು. ಅದನ್ನು ತಕ್ಷಣ ನವೀಕರಿಸಿ ಡಿಪಿಆರ್‌ ಸಿದ್ಧಪಡಿಸಬಹುದು. ಚಿಕ್ಕಮಗಳೂರಿನ ತೋಟಗಾರಿಕಾ ಬೆಳೆಗಳನ್ನು ದಕ್ಷಿಣ ಕನ್ನಡದ ಮಾರುಕಟ್ಟೆಗೆ ಸಾಗಿಸಲು ಹಾಗೂ ಗಡಿ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆಗಳಿಗೆ ಈ ರಸ್ತೆ ನೆರವಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮೇ.೧೮ರಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ದಕ್ಷಿಣ ಕನ್ನಡ ಸಂಸದರೂ ಪತ್ರ ಬರೆದಿದ್ದರು

ಇದೇ ವಿಷಯಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಕೂಡ ಮೇ ತಿಂಗಳಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ (PMGSY) ಅಡಿಯಲ್ಲಿ ಸರ್ವಋತು ರಸ್ತೆಯನ್ನು ನಿರ್ಮಿಸುವುದು ದೀರ್ಘಕಾಲದ ಬೇಡಿಕೆಯಾಗಿದ್ದು, ಈ ಪ್ರದೇಶದ ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಅತ್ಯಗತ್ಯ. ಈ ಮಾರ್ಗ ಪ್ರತಿದಿನ ಸರಾಸರಿ 10,000 ಭಕ್ತರು ಬರುವ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರಮುಖ ದ್ವಾರದಂತಿದೆ. ಸದ್ಯಕ್ಕೆ ನೇರ ರಸ್ತೆ ಸಂಪರ್ಕ ಇಲ್ಲದಿರುವುದರಿಂದ, ಸಮೀಪದಲ್ಲೇ ಇದ್ದರೂ ಶ್ರೀ ಶಿಶಿಲೇಶ್ವರ ಮತ್ತು ಬೈರೇಶ್ವರ ದೇವಾಲಯಗಳಿಗೆ ಭೇಟಿ ನೀಡಲು ಭಕ್ತರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸಿದ್ದರು.

ಎರಡು ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಯೋಜನೆಯ ರಸ್ತೆ ಜೋಡಣೆ ಕುರಿತು ಅಧ್ಯಯನ ಮಾಡಲು ಹಿಂದೆ ಅನುಮೋದನೆ ನೀಡಲಾಗಿತ್ತು. ಆದರೆ ಹಣಕಾಸಿನ ಕೊರತೆಯಿಂದಾಗಿ ಆ ಯೋಜನೆಯನ್ನು ಕೈಬಿಡಲಾಗಿತ್ತು. ಈಗ ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ ಈ ಯೋಜನೆಯನ್ನು ಪುನರಾರಂಭಿಸಿದರೆ, ಹಳೆಯ ಅಧ್ಯಯನವನ್ನು ಬಳಸಿಕೊಂಡು ಶಾಶ್ವತ ರಸ್ತೆ ಪರಿಹಾರ ಕಂಡುಕೊಳ್ಳಬಹುದು. ರಸ್ತೆ ಪೂರ್ಣಗೊಂಡರೆ ಉತ್ತರ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಬರುವ ಭಕ್ತಾದಿಗಳಿಗೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದಲ್ಲದೆ, ಸ್ಥಳೀಯ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಸಂಸದ ಕ್ಯಾ. ಚೌಟ ವಿವರಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani