Dailyhunt Logo
  • Light mode
    Follow system
    Dark mode
    • Play Story
    • App Story
Shishir Hegde Column: ಅಡುಗೆ ಮನೆ ಇನ್ನೊಂದ್‌ ಚೂರು ದೊಡ್ಡದಿದ್ದಿದ್ದರೆ..!

Shishir Hegde Column: ಅಡುಗೆ ಮನೆ ಇನ್ನೊಂದ್‌ ಚೂರು ದೊಡ್ಡದಿದ್ದಿದ್ದರೆ..!

Vishwavani 1 month ago

ಶಿಶಿರಕಾಲ

ಡುಗೆ ಮನೆ ಇನ್ನೊಂದ್ ಚೂರು ದೊಡ್ಡದಿದ್ದಿದ್ದರೆ..! ಎಲ್ಲಾ ಗೃಹಿಣಿಯರ ಏಕೈಕ, ಸಾಮಾನ್ಯ ಕಂಪ್ಲೆಂಟ್ ಇದು.

ಆ ದಿನ ಬಾಡಿಗೆ ಮನೆ ತೋರಿಸುವ ಏಜೆಂಟ್ ನಮ್ಮನ್ನು ಈ ಜಾಗಕ್ಕೆ ಬನ್ನಿ ಎಂದು ಅಡ್ರೆಸ್ ಕೊಟ್ಟಿದ್ದ. ಅವನು ಕೊಟ್ಟ ಅಡ್ರೆಸ್ ನ್ಯೂಯಾರ್ಕ್‌ನ ಮ್ಯಾನ್ ಹಟ್ಟನ್‌ನ ನನ್ನ ಆಫೀಸಿನಿಂದ ಎರಡೇ ಮೈಲಿ ದೂರದಲ್ಲಿತ್ತು.

ನಾನು ಮತ್ತು ನನ್ನ ಹೆಂಡತಿ ಹೇಳಿದ ಸಮಯಕ್ಕೆ ಟ್ಯಾಕ್ಸಿ ಹಿಡಿದು ಅಲ್ಲಿಗೆ ತಲುಪಿದೆವು. ಇಳಿದು ನೋಡಿದರೆ ತುದಿ ಕಾಣದಷ್ಟು ಎತ್ತರದ ಬಿಲ್ಡಿಂಗ್.

ಏಜೆಂಟ್ ನಮ್ಮನ್ನು ಉದ್ದದ ಕಾರಿಡಾರು ದಾಟಿ ಬಿಲ್ಡಿಂಗಿನ ಅಂತರ್ಯದೊಳಕ್ಕೆ ಕರೆದುಕೊಂಡು ಹೋದ. ಅಲ್ಲಿದ್ದ ಲಿಫ್ಟಿನೊಳಗೆ ಹೊಕ್ಕಿ ನೋಡಿದಾಗಲೇ ಆ ಕಟ್ಟಡದಲ್ಲಿ ಎಂಬತ್ತು ಮಹಡಿಗಳಿವೆ ಎಂದು ನಮಗೆ ಗೊತ್ತಾಗಿದ್ದು. ನಲವತ್ತೆರಡನೇ ಮಹಡಿಯಲ್ಲಿ ಲಿಫ್ಟ್ ಬಾಗಿಲು ತೆರೆದುಕೊಂಡಿತು.

ಅಲ್ಲಿ ಇಪ್ಪತ್ತೈದು ಒಂದೇ ಬಣ್ಣದ, ಕಟ್ಟಿನ ಬಾಗಿಲುಗಳು, ಒಂದರ ಪಕ್ಕ ಇನ್ನೊಂದು. ಮನೆಗಳನ್ನು ಪ್ರತ್ಯೇಕಿಸುತ್ತಿದ್ದುದು ಆ ಬಾಗಿಲುಗಳ ಮೇಲಿದ್ದ ಸಂಖ್ಯೆಗಳು. ಏಜೆಂಟ್ ಈ ಕಟ್ಟಡವಿರುವ ಜಾಗ ಈ ಕಾರಣಕ್ಕೆ ಬಹಳ ವಿಶೇಷ, ಇಲ್ಲಿ ಇಂತಿಂತಹ ಸೌಲಭ್ಯ ಇದೆ ಎಂದು ಹೇಳುತ್ತಿದ್ದರೂ ನಮ್ಮಿಬ್ಬರಿಗೂ ಮನೆ ಹೇಗಿರಬಹುದೆಂಬ ಬಗ್ಗೆಯೇ ಯೋಚನೆ.

ಬಾಗಿಲು ತೆರೆದು ಒಳಕ್ಕೆ ಹೋಗುತ್ತಿದ್ದಂತೆ, ಅದು ನಾವಂದುಕೊಂಡ ರೀತಿಯ ಮನೆಯಾಗಿರಲಿಲ್ಲ. ಇಪ್ಪತ್ತು- ಇಪ್ಪತ್ತು ವಿಸ್ತೀರ್ಣದ ಒಂದು ದೊಡ್ಡ ಕೋಲಿ. ಒಳಹೊಕ್ಕು ಚಪ್ಪಲಿ ತೆಗೆಯಲು ಮುಂದಾದರೆ ಬೇಡವೆಂದು ಏಜೆಂಟ್ ಸನ್ನೆ ಮಾಡಿದ. ಸರಿ ಎಂದು ಒಳಗೆ ಹತ್ತು ಹೆಜ್ಜೆ ಇಟ್ಟಿಲ್ಲ - ಮನೆಯೇ ಮುಗಿದುಹೋಯಿತು.

Shishir Hegde Column: ಅಪಸ್ವರವನ್ನೇ ಮೆಲೋಡಿಯನ್ನಾಗಿಸುವ ʼಮೋದಿʼ ಮೋಡಿ

ಒಂದು ದೊಡ್ಡ ಕೋಣೆ, ಅಲ್ಲಿಯೇ ಒಂದು ಮೂಲೆಯಲ್ಲಿ kitchenette- ಅಡುಗೆ ಬಿಸಿ ಮಾಡಿ ಕೊಳ್ಳಲು ಒಂದು ಚಿಕ್ಕ ಒಂದು ಇಂಡಕ್ಷನ್ ಒಲೆ, ಅಲ್ಲಿಯೇ ಮೇಲ್ಗಡೆ ಒಂದು ಮೈಕ್ರೋ ವೇವ್, ಕೈ ಅಗಲದ ವಾಶ್ ಬೇಸಿನ್, ಚಿಕ್ಕ ಫ್ರಿಡ್ಜ್. ಎಲ್ಲವೂ ಚಿಕ್ಕದು- ಆದರೆ ಅತ್ಯಾಧುನಿಕ ಸಲಕರಣೆ ಗಳು. ಆ ಒಂಟಿ ಕೋಲಿಯ ಸ್ಟುಡಿಯೋ ಅಪಾರ್ಟ್ಮೆಂಟ್‌ನ ಒಳಗಿದ್ದದ್ದು ಒಂದೇ ಬಾಗಿಲು- ಅದನ್ನು ತೆರೆದರೆ ಕೈ ಅಗಲಿಸಲಿಕ್ಕಾಗದ ಅಗಲದ ಬಚ್ಚಲುಮನೆ. ಅಷ್ಟೆ. ಏಜೆಂಟ್ ಪ್ರಕಾರ ಇದನ್ನು ಮನೆ, ರೂಮು, ಅಪಾರ್ಟ್ಮೆಂಟು, ಹೋಮು, ವಿ‌ಲ್ಲಾ ಏನೆಂದು ಕರೆದರೂ ಈ ಕೋಣೆ ಅದಾಗಬಹುದಿತ್ತು.

ಇದು ನ್ಯೂಯಾರ್ಕ್ ನಗರದ ಐಷಾರಾಮಿ ವ್ಯವಸ್ಥೆ, ಇದು ನಮಗೆ ಸಿಗುತ್ತಿರುವುದೇ ಜನ್ಮಜನ್ಮಾಂತರ ದ ಪುಣ್ಯದ ಫಲ ಎಂದು ಏಜೆಂಟ್ ಎಲ್ಲವನ್ನೂ ವಿವರಿಸುತ್ತಿದ್ದ. ಅಷ್ಟೇ ಅಗಲದ ಕೋಣೆಗೆ ಅವನು ಹೇಳಿದ ಬಾಡಿಗೆ ಕೇಳಿ ಹೊಟ್ಟೆ ತೊಳೆಸಿ ಹೋಯಿತು. ತಿಂಗಳಿಗೆ ಎರಡೂವರೆ ಸಾವಿರ ಡಾಲರ್ !

ನಾವಿಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ನಾಲ್ಕು ತಿಂಗಳ ಬಾಡಿಗೆಯಲ್ಲಿ ಊರಿನಲ್ಲಿ ಒಂದು ಚಿಕ್ಕ ಅರಮನೆಯನ್ನೇ ಕಟ್ಟಿಬಿಡಬಹುದು ! ಆದರೆ ಅಲ್ಲಿಯೇ ಬಾಡಿಗೆಗೆ ಒಪ್ಪುವ ಅನಿವಾರ್ಯತೆ ಮೌನದಲ್ಲಿಯೇ ಇಬ್ಬರಿಗೂ ಅರ್ಥವಾಗಿತ್ತು. ಸದ್ಯ ಇಲ್ಲಿಯೇ ಇರೋಣ, ಚಳಿಗಾಲ ಮುಗಿದ ಮೇಲೆ ಬೇರೆ ವ್ಯವಸ್ಥೆ ಮಾಡಿಕೊಂಡರಾಯ್ತು ಎಂದುಆರು ತಿಂಗಳಿಗೆ ಲೀಸ್ ಸಹಿ ಮಾಡಿದೆವು.

ಸ್ಟುಡಿಯೋ ಅಪಾರ್ಟ್ಮೆಂಟ್‌ನಿಂದ ಕೆಳಕ್ಕಿಳಿದು ಹೊರ ಬಂದರೆ ಮನುಷ್ಯನ ಮಹತ್ವಾಕಾಂಕ್ಷೆ ಯನ್ನೇ ಒಂದರ ಮೇಲೆ ಇನ್ನೊಂದು ಇಟ್ಟಂತೆ ಕಟ್ಟಿದ ಕಟ್ಟಡಗಳು. ಅದರ ಅಸಂಖ್ಯ ಗಾಜಿನ ಒಂದೊಂದು ಕಿಟಕಿಯೊಳಗೆ ಒಂದೊಂದು ಕುಟುಂಬಗಳು. ನ್ಯೂಯಾರ್ಕ್‌ನ ಬೀದಿಯಲ್ಲಿ ಎರಡು ನಿಮಿಷ ನಿಂತರೆ ಜಗತ್ತಿನ ಎಲ್ಲಾ ದೇಶಗಳವರೂ ನಮ್ಮನ್ನು ಹಾದು ಹೋಗಿರುತ್ತಾರಂತೆ !

ಬಾರು, ಪಬ್ಬು, ಆಫೀಸ್ ಕಟ್ಟಡಗಳು, ಕಾಫಿ ಶಾಪ್, ಪಾರ್ಕುಗಳು- ಆಧುನಿಕತೆ ಮೈತಳೆದ ಊರು ನ್ಯೂಯಾರ್ಕ್. ಆದರೆ ಮನೆಯೆಂಬುದರೊಳಗೆ ಬಂದರೆ ನಾಲ್ಕು ಗೋಡೆ, ಮತ್ತು ತಾನೇ ಅಡುಗೆ ಮನೆ ಎನ್ನುವ ಕೋಣೆಯ ಒಂದು ಮೂಲೆ !

ನಾನು ಮತ್ತು ನನ್ನ ಹೆಂಡತಿ ಒಂದೇ ಊರು ಮತ್ತು ಹಿನ್ನೆಲೆಯವರು. ಹಳ್ಳಿಯಲ್ಲಿ ಬೆಳೆದವರು. ಊರಲ್ಲಿ ಅಮ್ಮನ, ಅತ್ತೆಯ ಅಡುಗೆ ಮನೆ ನಮ್ಮಿಡೀ ಮ್ಯಾನ್ ಹಟ್ಟನ್ ಅಪಾರ್ಟ್ಮೆಂಟಿನ ಮನೆಗಿಂತ ದೊಡ್ಡದಿತ್ತು. ಆದರೆ ಇಲ್ಲಿ ವಿಸ್ತೀರ್ಣ ಮಾತ್ರ ಕೊರತೆಯಾಗಿರಲಿಲ್ಲ. ಅದರಾಚೆ ನಮಗಿಬ್ಬರಿಗೂ ಇದ್ದ ಅಡುಗೆ ಮನೆಯೆಂಬ ಕಲ್ಪನೆಗೂ ಈ ಕೋಣೆಯ ಮೂಲೆಯಲ್ಲಿ ಇದ್ದ ಅಡುಗೆಮನೆಗೂ ಅಜ- ಗಜಾಂತರವಿತ್ತು. ಅಡುಗೆಮನೆಯೇ ಇಲ್ಲದ ಮನೆಯನ್ನು ಮನೆಯೆಂದು ಹೇಗೆ ಕರೆಯೋದು? ಊರಿನ ಮನೆಯಲ್ಲಿ ಅಡುಗೆಮನೆ ಎನ್ನುವುದು ಕೇವಲ ಅಡುಗೆ ಮಾಡುವ ಒಂದು ಕೋಣೆ ಮಾತ್ರ ಆಗಿರಲಿಲ್ಲ. ದಿನಕ್ಕೆ ಮೂರು ಬಾರಿ ಮನೆಯವರೆಲ್ಲ ಸೇರುವ ಜಾಗವಾಗಿತ್ತು. ಈಗ ಯೋಚಿಸಿದರೆ ಹೆಚ್ಚು ಕಡಿಮೆ ಬದುಕು ಸಂಭವಸಿದ್ದೇ ಅಡುಗೆ ಮನೆಯಲ್ಲಿ.

ಬದುಕಿನ ಅಷ್ಟೂ ಪ್ರೀತಿ, ವಾದ, ಕೋಪ, ಸಂಧಾನ, ಮಾತುಕತೆ ಎಲ್ಲವೂ ನಡೆದದ್ದು ಅಡುಗೆಮನೆ ಯಲ್ಲಿಯೇ. ಅಮ್ಮ ಸದಾ ಅಲ್ಲಿ ಇದ್ದೇ ಇರುತ್ತಿದ್ದರು. ಸುಮ್ಮನೆ ನೀರು ಕುಡಿಯಲು ಹೋದರೂ ಅಮ್ಮ, ಅಜ್ಜಿಯ ಜೊತೆ ಅಂದಿಷ್ಟು ಮಾತುಕತೆ ನಡೆಯುತ್ತಿತ್ತು. ನಡುವೆ ಅಜ್ಜ ಅಡುಗೆಮನೆಗೆ ಬಂದರೆ ಆ ಮಾತುಕತೆ ಅಲ್ಲಿಯೇ ಆಕಾರಣ ನಿಂತುಬಿಡುತ್ತಿತ್ತು! ವಿಷಯಾಂತರವಾಗುತ್ತಿತ್ತು.

ಅಮ್ಮ ಮತ್ತು ಅತ್ತೆ ಇಬ್ಬರಿಗೂ ಗ್ಯಾಸ್ ಸಿಲೆಂಡರ್‌ನಲ್ಲಿ ಅಡುಗೆ ಮಾಡಲು ಅದೇಕೋ ಮನಸ್ಸು ಒಪ್ಪುತ್ತಿರಲಿಲ್ಲ. ಹಾಗಾಗಿ ಅಡುಗೆಮನೆಯ ಆಚೆ ಹಿತ್ತಲಲ್ಲಿ ಎರಡು ಮಣ್ಣಿನ ಒಲೆ ಮಾಡಿಕೊಂಡಿ ದ್ದರು. ಹೆಚ್ಚಿನ ಶಾಖ ಬೇಡುವ ಕೊಚ್ಚಲಕ್ಕಿ ಇತ್ಯಾದಿ ಅಲ್ಲಿಯೇ ಬೆಂದು ಮೆತ್ತಗಾಗ ಬೇಕು. ಒಂದಿಷ್ಟು ಪಾತ್ರೆಗಳು, ಹಾಲು ತಂದು ತೊಳೆದಿಟ್ಟ ಸೆವೆನ್ ಅಪ್ ಬಾಟಲಿ, ಗ್ರೈಂಡರ್, ಮಿಕ್ಸರ್ ಸದ್ದು, ಒಗ್ಗರಣೆಯ ಘಮ, ಗಾಳಿ ಬೀಸಿದಾಗ ಒಳ ಸೇರುವ ಹಿತ್ತಲ ಒಲೆಯ ಕಟ್ಟಿಗೆಯ ಹೊಗೆ.

ಹಬ್ಬಗಳು, ತಿಥಿ ಇತ್ಯಾದಿ ಬಂದರಂತೂ ಮನೆಯವರ ಧ್ವನಿ ಮೀರಿಸುವಷ್ಟು ಅಡುಗೆಮನೆಯದೇ ಸದ್ದು. ಸಾಮಾನ್ಯ ದಿನಗಳಲ್ಲಿ ಸಂಬಂಧಿಕರು, ಸ್ನೇಹಿತರು, ಪರಿಚಯದವರು, ಪರಿಚಯವಿಲ್ಲ ದವರು ಹೀಗೆ ಯಾರುಯಾರೋ ಮನೆಗೆ ಬರುತ್ತಿದ್ದರು. ಬಂದವರಿಗೆಲ್ಲ ಅಮ್ಮ, ಅಜ್ಜಿ ಚಹಾ ತಿಂಡಿ ಮಾಡಿಕೊಡುತ್ತಿದ್ದರು. ಸುಡುಬಿಸಿಲಲ್ಲಿ ಬಂದವರಿಗೆ ತಣ್ಣನೆಯ ಮಜ್ಜಿಗೆ. ಅನುಮಾನವೇ ಬೇಡ- ಬದುಕು ಸಂಭವವಿಸುತ್ತಿದ್ದುದೇ ಅಡುಗೆಮನೆಯಲ್ಲಿ.

ನಮ್ಮ ಮನೆ ಎಂದಲ್ಲ, ಎಲ್ಲರ ಮನೆಯ ಬದುಕು ಆವಿರ್ಭವಿಸುವುದು ಅಲ್ಲಿಯೇ. ನಮ್ಮೂರ ಅಡುಗೆಮನೆಯಲ್ಲಿ ಯಾವತ್ತೂ ಏಕಾಂತವಿರಲಿಲ್ಲ. ಆದರೆ ಜಗತ್ತಿನ ಅತ್ಯಾಧುನಿಕ ಕಟ್ಟಡದ ಅತ್ಯಾಧುನಿಕ ಅಡುಗೆಮನೆಯಲ್ಲಿ ಒಂದೂವರೆ ಜನರಿಗಿಂತ ಹೆಚ್ಚಿಗೆ ನಿಲ್ಲಲಿಕ್ಕಾಗುತ್ತಿರಲಿಲ್ಲ. ಆ ನ್ಯೂಯಾರ್ಕ್‌ನ ಅಡುಗೆಮನೆ ಆ ದಿನ ಚಿಕ್ಕದೆಂದು ಕಾಣಿಸಿದ್ದರ ಹಿನ್ನೆಲೆ ವಿಸ್ತೀರ್ಣದಾಚೆಯ ಅದರ ವಿಸ್ತಾರದ್ದಾಗಿತ್ತು.

ಅತ್ಯಾಧುನಿಕ ಎಲೆಕ್ಟ್ರಿಕ್ ಕುಕರ್, ಬೆಂಕಿಯೇ ಇಲ್ಲದ ಇಂಡಕ್ಷನ್ ಒಲೆ, ಹೊಗೆ ಬರುವುದಕ್ಕಿಂತ ಮೊದಲೇ ಹಬೆಯನ್ನೂ ಒಳಗೆಳೆದುಕೊಳ್ಳುವ ನಿಷ್ವಾಸ- ಎಕ್ಸಾ ಫೋನ್, ಪೋರ್ಸಲಿನ್ ಪಾತ್ರೆ ಪಗಡೆ, ಇಂಚಿಂಚೂ ಲೆಕ್ಕಾಚಾರದ ಅಡುಗೆ ಕಟ್ಟೆ. ಎಲ್ಲವೂ ಇದ್ದರೂ ಅದನ್ನು ಅಡುಗೆಮನೆ ಯೆಂದು ಒಪ್ಪಲಿಕ್ಕೆ ನಮಗೆ ಅಲ್ಲಿರುವವರೆಗೂ ಸಾಧ್ಯವೇ ಆಗಲಿಲ್ಲ !

ಮಾನವಶಾಸ್ತ್ರಜ್ಞರು ಹೇಳುವಂತೆ ಬೆಂಕಿಯ ನಿಯಂತ್ರಣ ತಿಳಿದ ನಂತರ, 'ಅಡುಗೆ ಮಾಡುವುದು' ಎಂಬ ಕ್ರಿಯೆ ಮನುಷ್ಯನ ಮುಂದಿನ ವಿಕಸನವನ್ನು ನಿರ್ದೇಶಿಸಿತಂತೆ. ಆದರೆ ಒಂದಂತೂ ಸತ್ಯ- ಮನುಷ್ಯ ನಾಗರೀಕತೆ ಬೆಳೆಯುವಾಗ ಮನೆಗಿಂತ ಮೊದಲು ಅಡುಗೆಮನೆ ರೂಪಗೊಂಡಿತ್ತು.

ಎಲ್ಲ ಶುರುವಾಗಿದ್ದು ಮೊದಲು ಬೆಂಕಿಯಿಂದ. ಗುಡಿಸಲು, ಗುಹೆಯಾಚೆ- ಮನುಷ್ಯ ಪಂಗಡಗಳು ಮುಸ್ಸಂಜೆ ಈ ಬೆಂಕಿಯ ಎದುರು ಬಯಲಿನಲ್ಲಿ ಜೊತೆ ಸೇರುತ್ತಿದ್ದರು. ಇವತ್ತಿಗೂ ಇದೇ ಗುಣವನ್ನು ಅಮೆಜಾನ್, ಅಂಡಮಾನ್ ಬುಡಕಟ್ಟು ಜನಾಂಗಗಳಲ್ಲಿ ನೋಡಬಹುದು. ಆ ಬೆಂಕಿಯ ಎದುರೇ ಮನುಷ್ಯನ ಮೊದಲ ಕೆಲವು ಗುಣವಿಶೇಷಗಳು ಹುಟ್ಟಿಕೊಂಡದ್ದು.

ಒಟ್ಟಾಗಿ ಕಾಯುವುದು, ಹಂಚಿಕೊಳ್ಳುವುದು, ಉದ್ದೇಶವೇ ಇಲ್ಲದೆ ಒಂದಿಷ್ಟು ಹೊತ್ತು ಜೊತೆಯಲ್ಲಿ ಕಳೆಯುವುದು, ಸುರಕ್ಷೆಯ ಭಾವ ಇದೆಲ್ಲ. ಅಡುಗೆಮನೆಯ ಮೂಲ ರೂಪ ಜನರು- ಹತ್ತಿರದವರು ಒಟ್ಟುಗೂಡುವ ಜಾಗವಾಗಿತ್ತು. ಆ ಜಾಗವೇ ಮುಂದೊಂದು ದಿನ ಬಯಲಿನ ಅಡುಗೆಮನೆ ಯಾದದ್ದು. ಅಲ್ಲಿಯೇ ಅಂದೊಂದು ದಿನ ಮೊದಲ ಅಡುಗೆ ತಯಾರಾದದ್ದು. ಅಲ್ಲಿ ಗೋಡೆ ಗಳಿರಲಿಲ್ಲ.

ಅಲ್ಲಿದ್ದದ್ದು ಬೆಂಕಿ, ಹೊಗೆ, ಹಸಿವು ಮತ್ತು ಮನುಷ್ಯ ಸಂಬಂಧಗಳು. ಆ ಬಯಲು ಅಡುಗೆಮನೆಯ ಅಗ್ನಿಯ ಸುತ್ತ ಮೊದಲ ತೊದಲ ಭಾಷೆ, ಒಡನಾಟ, ಪರಸ್ಪರ ಒಪ್ಪಂದ, ಸಹಕಾರ, ನಂಬಿಕೆ, ಮೋಸ, ಕ್ರಮೇಣ ಸ್ವಾರ್ಥ, ಪರ ಭಾವ, ಅಹಂ ಎಲ್ಲವೂ ಹುಟ್ಟಿದ್ದು. ಆಹಾರ ಮತ್ತು ಮನುಷ್ಯ ಮೆತ್ತಗಾಗಿದ್ದು. ಚಾಪಲ್ಯ ಬೆಳೆದದ್ದು. ಅದೇ ಅಗ್ನಿ ಇದೆಲ್ಲದಕ್ಕೂ ಸಾಕ್ಷಿ.

'ಅಗ್ನಿಸಾಕ್ಷಿ'ಯ ಮಹತ್ವದ ಮೂಲ ಅಲ್ಲಿಂದಲೇ ಬೆಳೆದು ಬಂದದ್ದೇ? ಇರಬಹುದು. ಒಟ್ಟಾರೆ ಜಗತ್ತಿನ ಪ್ರತಿಯೊಂದು ಸಂಸ್ಕೃತಿಗೂ ಈ ಅಗ್ನಿ ಅಲ್ಲಿಂದಿಲ್ಲಿಯವರೆಗೂ ಉರಿಯುತ್ತಲೇ ಸಾಕ್ಷಿ ಯಾಯಿತು ಎನ್ನುವುದಂತೂ ಸತ್ಯ. ಇವತ್ತಿಗೂ- ಒಟ್ಟಾಗಿ ಅಡುಗೆಮನೆಯಲ್ಲಿ ಸೇರಿದಾಗ, ಊಟ ಮಾಡುವಾಗ ಅದೇನೋ ಒಂದು ಬೆಚ್ಚನೆಯ, ಸುರಕ್ಷಿತ ಭಾವ ಎಲ್ಲರಲ್ಲೂ ಹುಟ್ಟುತ್ತದೆ.

ಅದೇ ಮೂಲ ಗುಣಗಳು ಮತ್ತೆ ಮೂರ್ತ ರೂಪ ಪಡೆಯುತ್ತವೆ. ಇವತ್ತಿಗೂ ಅಡುಗೆ ಮನೆ, ಮನೆಯ ಭಾವ ಕೇಂದ್ರ. ಇವತ್ತಿಗೂ ಯಾವುದೇ ಮನೆಯ ಅಸಲಿ ಶ್ರೀಮಂತಿಕೆ ವ್ಯಕ್ತವಾಗುವುದು ಚಾವಡಿಯ ಪೀಠೋಪಕರಣಗಳಲ್ಲಲ್ಲ, ಅಡುಗೆಮನೆಯಲ್ಲಿ ತಯಾರಾಗುವ ಪ್ರೀತಿಯಲ್ಲಿ.

ಅಡುಗೆ ಮನೆಯೆಂದರೆ ಮನೆಯೊಳಗಿನ ಇನ್ನೊಂದು ಜಗತ್ತು ! ಅಮೆರಿಕಾದ ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಅಡುಗೆ ಮನೆ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಅಲ್ಲಿ ತಯಾರಾಗುವ ಅಡುಗೆ ಪಿಜ್ಜಾ, ಬರ್ಗರ್ ಇತ್ಯಾದಿ ಕೂಡ ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತದೆ. ಆದರೆ ಭಾರತದಲ್ಲಿ ಹಾಗಲ್ಲ. ಮಲೆನಾಡಿನ ಅಡುಗೆಮನೆಯೇ ಬೇರೆ ಬಂಗಾಳದ ಅಡುಗೆಮನೆಯೇ ಬೇರೆ. ಬಯಲು ಸೀಮೆಯ ಅಡುಗೆ ಮನೆಗೂ ರಾಜಸ್ಥಾನದ ಅಡುಗೆಮನೆಗೂ ಎಲ್ಲಾ ಸಾಮ್ಯತೆ.

ಕರಾವಳಿಯ ಅಡುಗೆಮನೆಯಲ್ಲಿ ತೆಂಗಿನ ಎಣ್ಣೆಯ ಒಗ್ಗರಣೆ ಘಮಘಮಿಸಿದರೆ ಪಂಜಾಬಿನ ಅಡುಗೆಮನೆಯಲ್ಲಿ ಗೋಧಿ, ಬೆಣ್ಣೆ ಮತ್ತು ಸಾಸಿವೆ ಎಣ್ಣೆಯ ಘಮ. ಎಷ್ಟೊಂದು ವೈವಿಧ್ಯ. ಹಳ್ಳಿ ಗಳಲ್ಲಿ ಹೊಗೆ ಹಿಡಿದ ಗೋಡೆ, ಪಾತ್ರೆಗಳು, ಅವುಗಳ ಮೇಲೆ ಕೆತ್ತಿದ ಹೆಸರುಗಳು, ಎಲ್ಲವೂ ತಲಗಳಿ ನೆನಪುಗಳಾಗಿ ಕುಟುಂಬದಲ್ಲಿ ಪ್ರವಹಿಸುತ್ತವೆ.

ನಮ್ಮ ದೇಶದಲ್ಲಿ ಅಡುಗೆಮನೆ ಅಡುಗೆಯಾಚೆ, ಸಾಂಸ್ಕೃತಿಕ ಹೆಗ್ಗುರುತು. ನಮ್ಮಲ್ಲಿ ಆಹಾರವೇ ಪ್ರತ್ಯೇಕ ಸಂಸ್ಕೃತಿ. ಇದೆಲ್ಲ ಅತಿವಿಶೇಷವೆನಿಸುವುದು ಬೇರೆ ಹೊರದೇಶಗಳನ್ನು ಕಂಡಾಗ ಮಾತ್ರ. ವಿಕಸನದ ದಾರಿಯಲ್ಲಿ- ಸೂಕ್ಷ ತೆ ಮತ್ತು ಕೌಶಲ್ಯದ ಕಾರಣಕ್ಕೆ ಅಡುಗೆಯೆಂಬ ಮಹತ್ವದ ಜವಾಬ್ದಾರಿಯನ್ನು ಸಮಾಜ ಸಕಾರಣ ಹೆಣ್ಣಿಗೆ ವಹಿಸಿದ್ದಿರಬಹುದು.

ಮುಂದೆ ಹೋದಂತೆ ಹೆಣ್ಣಿನ ಬದುಕಿನ ಮುಖ್ಯ ಭಾಗವೇ ಆಯಿತು ಎನ್ನುವುದು ಸುಳ್ಳಲ್ಲ. ಶತಮಾನಗಳ ಕಾಲ ಅಡುಗೆಮನೆ ಮಹಿಳೆಯರ ಜೀವನದ ಜೊತೆ ಆಳವಾಗಿ ಬೆಸೆದುಕೊಂಡಿತು. ಲಕ್ಷಾಂತರ ತಾಯಂದಿರು ಮತ್ತು ಅಜ್ಜಿಯರು ತಮ್ಮ ಪ್ರೀತಿಯನ್ನು ಅವಿರತ ಶ್ರಮದ ಮೂಲಕ ಇಲ್ಲಿಯೇ ವ್ಯಕ್ತಪಡಿಸಿದರು- ಬೆಳಗಿನ ಜಾವ ಎದ್ದು ಮನೆಯವರೆಲ್ಲರಿಗೂ ಅಡುಗೆ ಮಾಡುವುದು, ರಾತ್ರಿ ಕೊನೆಯಲ್ಲಿ ತಾವು ಊಟ ಮಾಡಿ ಕೊನೆಯಲ್ಲಿ ಮಲಗುವುದು.

ಕ್ರಮೇಣ ಮಹಿಳೆಯರಿಗೆ ಅಡುಗೆಮನೆ ಒಂದು ಬಂಧನದ ಸಂಕೇತವೆಂಬ ಭಾವವೂ ಹುಟ್ಟಿದ್ದು ಕೂಡ ಸರಿ. ಏಕೆಂದರೆ ಮಹಿಳೆಯರ ಕನಸುಗಳು ಮನೆಯ ಗೋಡೆಗಳ ಒಳಗೆ ಮಾತ್ರ ಸೀಮಿತವಾಗಿ ಬಿಟ್ಟವು. ಹೀಗಾಗಿ ಅಡುಗೆಮನೆ ಒಂದು ಕಡೆ ಕಾಳಜಿ ಮತ್ತು ಮಮತೆಯ ಸ್ಥಳವಾಗಿದ್ದರೆ, ಮತ್ತೊಂದು ಕಡೆ ತ್ಯಾಗದ ಪ್ರತೀಕವೂ ಆಯಿತು.

ಆದರೆ ಆಧುನಿಕ ಜೀವನ ಅಡುಗೆಮನೆಗಳನ್ನು ಸಂಪೂರ್ಣವಾಗಿ ಬದಲಿಸಿದೆ. ಇಂದು ಅಡುಗೆ ಮನೆಗಳು ಒಂದು ಪ್ರತಿಷ್ಠೆಯ ಸಂಕೇತ ವಾಗಿವೆ. ಮಾರ್ಬಲ್ ಕೌಂಟರ್‌ಗಳು, ಡಿಸೈನರ್ ಲೈಟಿಂಗ್, ವಿದೇಶಿ ಉಪಕರಣಗಳು, ಓಪನ್ ಲೇಔಟ್‌ಗಳು- ಇವೆಲ್ಲವೂ ಆಧುನಿಕ ಮನೆಯ ಗುರುತುಗಳಾಗಿ ಪರಿಣಮಿಸಿವೆ. ಇವುಗಳಿಗೆ ಹೆಸರಿಡುವಷ್ಟು ಕನ್ನಡವೇ ಬೆಳೆದಿಲ್ಲ.

ಸಾಮಾಜಿಕ ಜಾಲತಾಣಗಳು ಅಡುಗೆಮನೆಗಳನ್ನು ಬದುಕಿನ ಭಾಗಕ್ಕಿಂತ ಪ್ರದರ್ಶನದ ವಸ್ತುವಾಗಿ ಮಾಡಿಬಿಟ್ಟಿವೆ. ಅಪಾರ್ಟ್ಮೆಂಟ್ ಬ್ರೋಷರ್‌ಗಳಲ್ಲಿ ಅಡುಗೆಮನೆಗೆ ಎಲ್ಲಿಲ್ಲದ ಆಡಂಬರ, ಮಹತ್ವ. ವಿಚಿತ್ರವೆಂದರೆ, ಈಗೀಗ ಹಲವರು ಅಡುಗ ಮಾಡುವುದಕ್ಕಿಂತ ಅಡುಗೆಮನೆ ಅಲಂಕರಿಸಲು ಹೆಚ್ಚು ಹಣ ಖರ್ಚು ಮಾಡುತ್ತಾರೆ.

ಅಷ್ಟು ಮಾಡಿ ಆಮೇಲೆ ಫುಡ್ ಡೆಲಿವರಿ ಆಪ್‌ಗಳಲ್ಲಿ ಆಹಾರವನ್ನು ತರಿಸಿಕೊಳ್ಳುತ್ತಾರೆ. ಈಗ ಬೆಂಗಳೂರಿನಂತಹ ಊರುಗಳಲ್ಲಿ ಅಡುಗೆಮನೆ ಮೈಕ್ರೋವೇವ್ ಓವನ್‌ಗಳು ಬಿಸಿ ಮಾಡಿ ಕೊಳ್ಳಲಿಕ್ಕಷ್ಟೆ ಸೀಮಿತವಾಗುತ್ತಿವೆ. ಆದರೂ ಅಡುಗೆ ಮನೆಯೆಂಬ ಭಾವ ಮಾತ್ರ ನಮ್ಮೆಲ್ಲರಲ್ಲೂ ಇವತ್ತಿಗೂ ಹಾಗೆಯೇ ಉಳಿದುಕೊಂಡಿದೆ.

ಇವತ್ತಿಗೂ ನೋಡಿ, ಒಂದು ಕುಟುಂಬ ಯಾವುದೇ ಸಂಕಷ್ಟ ಎದುರಿಸುವಾಗ ಒಂದಾಗುವುದು, ಮಾತುಕತೆ ಎಲ್ಲವೂ ನಡೆಯುವುದು ಮತ್ತದೇ ಅಡುಗೆಮನೆಯಲ್ಲಿ. ಇವತ್ತಿಗೂ ಕುಟುಂಬವನ್ನು ಸಮಾಧಾನ ಮಾಡುವುದು ಮತ್ತದೇ ಅಡುಗೆಮನೆ. ಕೊರೊನಾ ಮಹಾಮಾರಿಯ ಸಮಯದಲ್ಲಿ ಏನಾಯಿತೆಂದು ನಮಗೆಲ್ಲ ನೆನಪಿರಬಹುದು. ಕೋವಿಡ್ ಹರಡುತ್ತಿದ್ದಂತೆ ಎಲ್ಲರೂ ಮನೆಯಲ್ಲಿ ಜೊತೆಯಾಗಿದ್ದು ಎಲ್ಲಿ? ನೆನಪಿಸಿಕೊಳ್ಳಿ.

ಚಾವಡಿಯಲ್ಲಲ್ಲ, ಅಡುಗೆಮನೆಯಲ್ಲಿ. ಲಕ್ಷಾಂತರ ಜನರು ಅಡುಗೆ ಮಾಡುವುದನ್ನು ಒಂದು ಥೆರಪಿ ಎಂದರು. ಕುಟುಂಬಗಳು ಮತ್ತೆ ಊಟದ ಮೇಜಿನ ಸುತ್ತ ಕೂತವು. ಹಳೆಯ ರೆಸಿಪಿಗಳು ನೆನಪಾದವು, ಅವುಗಳೇ ರೀಲ್ಸ್‌ʼಗಳಾದವು. ಆಗ ಆಧುನಿಕ ಜೀವನದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಅಡುಗೆಮನೆ ಎಂಬ ನೆಲೆಯ ಭಾವ ಮತ್ತೆ ಅವಶ್ಯಕತೆಯೆನಿಸಿತು.

ಅಡುಗೆ ಮನೆಯಲ್ಲಿಯೇ ಕೂತು ಸಾಂಕ್ರಾಮಿಕವನ್ನು ಜಗತ್ತು ಎದುರಿಸಿತು. ಅಮ್ಮ ಇವತ್ತಿಗೂ ಫೋನ್ ಮಾಡಿದಾಗ 'ಐ ಲವ್ ಯು' ಎಂದು ಹೇಳುವುದಿಲ್ಲ. ಅದನ್ನೇ 'ಊಟ ಆಯ್ತಾ, ತಿಂಡಿ ಆಯ್ತಾ?' ಎಂದು ಪರೋಕ್ಷವಾಗಿ ಕೇಳುತ್ತಾರೆ. ಅಮ್ಮ ಹೋಂ ವರ್ಕ್ ಮಾಡುವಾಗ ಹಣ್ಣು ಕತ್ತರಿಸಿ ತಂದಿಟ್ಟು ಹೋಗುವುದು.

ತಡ ರಾತ್ರಿ ಕಂಪ್ಯೂಟರಿನಲ್ಲಿ ಕೆಲಸ ಮಾಡುವಾಗ ಅಪ್ಪ ಚಹಾ ಮಾಡಿ ತಂದು ಕೊಡುವುದು, ಸಂಗಾತಿ ಇಷ್ಟದ ಅಡುಗೆ ಮಾಡಿ ಬಡಿಸುವುದು. ನಮ್ಮ ಸುತ್ತಲಿನ ಬಹುತೇಕ ಪ್ರೀತಿ ವ್ಯಕ್ತವಾಗು ವುದು ಆಹಾರದಿಂದ. ಆ ಪ್ರೀತಿ ತಯಾರಾಗಿ ಬರುವುದು ಅದೇ ಅಡುಗೆಮನೆಯಿಂದ.

ಭವಿಷ್ಯದಲ್ಲಿ ತಂತ್ರಜ್ಞಾನ ಅಡುಗೆಮನೆಗಳನ್ನು ಸಂಪೂರ್ಣವಾಗಿ ಬದಲಾಯಿಸಬಹುದು- ರೋಬೋಟ್ʼಗಳು, ಕೃತಕ ಬುದ್ಧಿಮತ್ತೆ, ಸ್ಮಾರ್ಟ್ ಉಪಕರಣಗಳು ಎಲ್ಲವೂ ಬರಬಹುದು. ಈಗಾಗಲೇ ಅಂತಹ ವ್ಯವಸ್ಥೆ ಕೆಲವು ದೇಶಗಳಲ್ಲಿ ಬಂದಾಗಿದೆ. ಆದರೆ ಒಂದು ಮಜವೆಂದರೆ ಅಮೆರಿಕಾದಂತಹ ದೇಶಗಳ ಅಡುಗೆಮನೆಗಳಲ್ಲಿ ಅಡುಗೆ ತಯಾರಾಗುವುದು ಈಗ ಹೆಚ್ಚು ಕಡಿಮೆ- ಸಂಪೂರ್ಣ ನಿಂತುಬಿಟ್ಟಿದೆ.

ಅಲ್ಲಿ ಏನಿದ್ದರೂ ಫ್ರೋಜನ್ ಸಿದ್ಧ ಅಡುಗೆಗಳು. ಅಮೆರಿಕನ್ನರು ಸೇವಿಸುವ ಶೇ.55ರಷ್ಟು ಆಹಾರ ಗಳು ಫ್ಯಾಕ್ಟರಿಯಲ್ಲಿ ತಯಾರಾಗಿ ಬರುತ್ತವೆ. ಬಿಸಿ ಮಾಡಿದರಾಯ್ತು- ತಿಂದರಾಯ್ತು. ಅದು ಬೇಸರ ವಾದರೆ ಫುಡ್ ಡೆಲಿವರಿ ಮಾಡಿಸಿಕೊಂಡರಾಯ್ತು ! ಇಂತಹ ಎಡವಟ್ಟುಗಳು ಪಾಶ್ಚಾತ್ಯದಲ್ಲಿ ಮಾತ್ರ ಉಳಿದಿಲ್ಲ. ಅವು ಕ್ರಮೇಣ ಬೆಂಗಳೂರಿನ ಅಪಾರ್ಟ್ಮೆಂಟುಗಳನ್ನೂ ಸದ್ದಿಲ್ಲದೆ ಪ್ರವೇಶಿಸಿವೆ.

ಆದರೂ ಅಡುಗೆಮನೆಯೆಂಬ ಭಾವ ಮಾತ್ರ ಸಾರ್ವತ್ರಿಕ, ಇಂದಿಗೂ ಎಡೆಯೂ ಜಾಗೃತವಾಗಿದೆ. ಏಕೆಂದರೆ ಅದು ಅಡುಗೆಯಾಚೆಯ ನಮ್ಮ ಸಂಬಂಧದ ಹಸಿವಿನ ಅವಶ್ಯಕತೆ. ಅಡುಗೆ ಮನೆ- ಕೇವಲ ಅಡುಗೆ ತಯಾರಾಗುವ ಜಾಗವಷ್ಟೇ ಅಲ್ಲ.

ಮನುಷ್ಯ ಬಾಕಿ ಪ್ರಾಣಿಗಳಿಂದ ಪ್ರತ್ಯೇಕವಾಗಿದ್ದು, ಮನುಷ್ಯನಾಗಿದ್ದು ಅಡುಗೆ ಮನೆಯಲ್ಲಿ. ಇವತ್ತಿಗೂ ಮನುಷ್ಯ ಮನುಷ್ಯನಾಗುವುದು ಅದೇ ಅಡುಗೆಮನೆಯಲ್ಲಿ. ಅಮ್ಮ ಯಾವತ್ತೂ ಅಪ್ಪನಲ್ಲಿ ಅಡುಗೆ ಮನೆ ಸ್ವಲ್ಪ ಚಿಕ್ಕದು, ದೊಡ್ಡದಿರಬೇಕಿತ್ತು ಎನ್ನುತ್ತಿದ್ದಳು. ಆದರೆ ಈಗ ಅಮ್ಮ ಹಾಗನ್ನುವುದಿಲ್ಲ.

ಇರೋದು ನಾವಿಬ್ಬರು, ಅಡುಗೆ ಮನೆ ದೊಡ್ಡದಾಯಿತು, ಚಿಕ್ಕದಿರಬೇಕಿತ್ತು ಎನ್ನುತ್ತಾಳೆ. ಸ್ವಲ್ಪ ಹೊತ್ತ ಸುಮ್ಮನಿದ್ದು- ಇಲ್ಲ, ಮೊದಲೇ ಅಡುಗೆ ಮನೆ ದೊಡ್ಡದಿತ್ತು, ಈಗ ನೀವ್ಯಾರೂ ಇಲ್ಲದೆ ಅಡುಗೆ ಮನೆ ಚಿಕ್ಕದೆನಿಸುತ್ತದೆ ಎನ್ನುತ್ತಾಳೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani