Dailyhunt Logo
  • Light mode
    Follow system
    Dark mode
    • Play Story
    • App Story
Shishir Hegde Column: ನ್ಯೂಯಾರ್ಕ್‌ನ ನಾಯಿ ಮರಿಗೂ ನಮಗೂ ಜಾಸ್ತಿ ವ್ಯತ್ಯಾಸವಿಲ್ಲ!

Shishir Hegde Column: ನ್ಯೂಯಾರ್ಕ್‌ನ ನಾಯಿ ಮರಿಗೂ ನಮಗೂ ಜಾಸ್ತಿ ವ್ಯತ್ಯಾಸವಿಲ್ಲ!

Vishwavani 2 hrs ago

ಶಿಶಿರಕಾಲ

(ತಲೆಹರಟೆ- 5)

ನ್ಯೂಯಾರ್ಕ್ ಎಂದರೆ ಗೊತ್ತಲ್ಲ, ಬಲು ತುಟ್ಟಿಯ ನಗರ. ಅಲ್ಲಿನ ಮನೆಗಳೆಂದರೆ ಚಿಕ್ಕ ಬೆಂಕಿ ಪೊಟ್ಟಣದಂತಹ ಅಪಾರ್ಟ್‌ಮೆಂಟುಗಳು. ಆದರೆ ನ್ಯೂಯಾರ್ಕಿಗರಿಗೆ ಎಲ್ಲಿಲ್ಲದಷ್ಟು ನಾಯಿ ಪ್ರೀತಿ. ನಾಯಿ ಕಟ್ಟುವುದೆಲ್ಲಿ? ಸಾಕುವವರು ನಾಯಿಯನ್ನು ಮನೆಯೊಳಗೆ, ಜೊತೆಯಲ್ಲಿಯೇ ಇಟ್ಟು ಕೊಳ್ಳಬೇಕು.

ಹಾಗಾಗಿ ನಾಯಿ ಮರಿ ಮನೆಗೆ ತಂದಾಗ, ಮೊದಲು ಅದಕ್ಕೆ ಬಹಿರ್ದೆಸೆಯನ್ನು ಅಭ್ಯಾಸ ಮಾಡಿಸುವುದು ಅತ್ಯಂತ ಮಹತ್ವದ್ದು. Potty Training. ಹಾಗಾಗಿ ಅಲ್ಲಿ Potty Trainer& - ನಾಯಿಯ ಶೌಚ ತರಬೇತುದಾರರಿಗೆ ಎಲ್ಲಿಲ್ಲದ ಬೇಡಿಕೆ. ಅವರ ಕೆಲಸ ನಾಯಿ ಮಲಮೂತ್ರಕ್ಕೆ ಹೋಗಬೇಕೆಂದರೆ ಯಜಮಾನನಿಗೆ ಸನ್ನೆ ಮಾಡಿ ತಿಳಿಸುವಂತೆ ಮತ್ತು ಮನೆಯಾಚೆ ಕರೆದು ಕೊಂಡಡು ಹೋದಾಗ- ಹೊರಗೆ ಮಾತ್ರ ವಿಸರ್ಜಿಸುವಂತೆ ನಾಯಿಯನ್ನು ತರಬೇತು ಮಾಡುವುದು.

ನಾಯಿಯನ್ನು ಪಳಗಿಸುವ ಒಬ್ಬೊಬ್ಬರದು ಒಂದೊಂದು ರೀತಿಯ ಕ್ರಮ. ನ್ಯೂಯಾರ್ಕ್ ನಗರ ದಲ್ಲಿ ಅವನೊಬ್ಬ ಫೇಮಸ್ ನಾಯಿ ಕಕ್ಕಸ್ ಟ್ರೈನರ್ ಇದ್ದ. ಯಾವುದೇ ನಾಯಿ ಮರಿ ಅವನಿಂದ ಎರಡೇ ದಿನದಲ್ಲಿ ಶೌಚಾಭ್ಯಾಸ ಕಲಿತು ಬಿಡುತ್ತಿತ್ತು. ಅವನು ಇದಕ್ಕೊಂದು ಜಾಣ್ಮೆಯ ತಂತ್ರವನ್ನು ಮಾಡಿಕೊಂಡಿದ್ದ. ನಾಯಿಯನ್ನು ಹೊರಗಡೆ ಹಗ್ಗ ಕಟ್ಟಿ ಕರೆದುಕೊಂಡು ಹೋಗುತ್ತಿದ್ದ. ಮತ್ತು ಫುಟ್‌ಪಾತ್‌ನಲ್ಲಿ ಒಂದು ಕಡೆ ನಿಂತುಬಿಡುತ್ತಿದ್ದ.

ಮಾತಿಲ್ಲ- ಕಥೆಯಿಲ್ಲ. ಸುಮ್ಮನೆ ನಾಯಿಯ ಪಕ್ಕದಲ್ಲಿ ನಿಲ್ಲುವುದು. ನಾಯಿ ಸುಮಾರು ಹೊತ್ತು ಅಲ್ಲಿಯೇ ನಿಂತು, ಕೊನೆಗೊಮ್ಮೆ ಒಂದು- ಎರಡು ಮಾಡುತ್ತಿತ್ತು. ಅದು ಮಾಡುತ್ತಿದ್ದಂತೆ ಅವನು ನಾಯಿಯೆದುರು ಖುಷಿಯಿಂದ ಜಿಗಿದಾಡುತ್ತಿದ್ದ. ಅದನ್ನು ಮಾತಿನಲ್ಲಿ ಕೊಂಡಾಡುತ್ತಿದ್ದ. ಅದನ್ನು ಮುದ್ದು ಮಾಡುತ್ತಿದ್ದ. ಅದರೆದುರು ಒಂದೆರಡು ಡ್ಯಾನ್ಸ್ ಸ್ಟೆಪ್ ಹಾಕುತ್ತಿದ್ದ. ನಾಯಿ ಮರಿಗೆ 'Positive reinforcement'- ಧನಾತ್ಮಕ ಪ್ರೋತ್ಸಾಹ ಬೇಗ ಅರ್ಥವಾಗುತ್ತಿತ್ತು. ಒಳ್ಳೆಯ ವರ್ತನೆಗೆ ಸಿಕ್ಕ ಪ್ರೋತ್ಸಾಹದಿಂದ ನಾಯಿ ಪಳಗಿಬಿಡುತ್ತಿತ್ತು.

Shishir Hegde Column: ಧ್ಯಾನವೆಂದರೆ ರುಚಿಗೆ ತಕ್ಕಷ್ಟು ಉಪ್ಪು!

ಒಮ್ಮೆ ಅಬ್ಬರ ಮನೆಯಲ್ಲಿ ಹೊಸತಾಗಿ ನಾಯಿ ಮರಿ ತಂದಿದ್ದರು. ಅದೇ ತರಬೇತುದಾರ ಆ ನಾಯಿ ಮರಿಯನ್ನು ಕೂಡ ಇದೇ ರೀತಿ ಪಳಗಿಸಿದ್ದ. ಅದೊಂದು ದಿನ ಫುಟ್‌ಬಾಲ್ ವಿಶ್ವಕಪ್ ಪಂದ್ಯವಿತ್ತು. ಮನೆಯಲ್ಲಿ ಸ್ನೇಹಿತರೆಲ್ಲ ಸೇರಿ ಫುಟ್ಬಾಲ್ ನೋಡುತ್ತಿದ್ದರು. ಮೆಸ್ಸಿ ಮೊದಲ ಗೋಲ್ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲ ಕೇಕೆ ಹಾಕಿದರು. ಕುಣಿದು ಜಿಗಿದಾಡಿದರು. ನಾಯಿ ಅಲ್ಲಿಯೇ ಸೋಫಾ ಮೇಲೆ ಮಲಗಿತ್ತು. ಮುಂದೇನಾಯ್ತು ಎಂದು ವಿವರಿಸಬೇಕಿಲ್ಲ ತಾನೇ?

ನಾವು ಕೂಡ ಬಹುತೇಕ ವಿಚಾರಗಳಲ್ಲಿ, ಸಂದರ್ಭಗಳಲ್ಲಿ ಇದೇ ರೀತಿ ವ್ಯವಹರಿಸುತ್ತಿರುತ್ತೇವೆ. ಇಂತಿಂತಹ ಸನ್ನಿವೇಶಕ್ಕೆ ನಮ್ಮ ಪ್ರತಿಕ್ರಿಯೆ ಇಂತಿಂತದ್ದು ಎಂಬ ಪೂರ್ವ ನಿರ್ಧರಿತ ರೀತಿ ವ್ಯವಹರಿಸುತ್ತೇವೆ. ಕೆಲವೊಮ್ಮೆ ಇನ್ನೊಬ್ಬರ ಮಾತಿನದ ಚಿಕ್ಕ ಏರಿಳಿತವನ್ನು ಬೇರಿನ್ನೇನೋ ಕಲ್ಪಿಸಿಕೊಂಡುಬಿಡುತ್ತೇವೆ. ಒಮ್ಮೆ ಕಿರಿದಾದ ಕಣಿವೆಯ ರಸ್ತೆಯಲ್ಲಿ ಒಬ್ಬ ಜೋರಾಗಿ ಕಾರು ಓಡಿಸಿ ಕೊಂಡು ಹೋಗುತ್ತಿದ್ದ. ಆಗ ತಿರುವಿನಲ್ಲಿ ಎದುರಿನಿಂದ ಕಾರಿನಲ್ಲಿ ಬರುವವನು ಅವನತ್ತ ಕೈ ಮಾಡಿ, 'ಏ ಹಂದಿ' ಎಂದ. ಇವನಿಗೆ ಸಿಟ್ಟು ನೆತ್ತಿಗೇರಿ ಬಿಟ್ಟಿತು!

'ನಿನ್ನಪ್ಪ ಹಂದಿ' ಎಂದು ಇವನೂ ಕೈ ಹೊರಗೆ ಹಾಕಿ ಕೂಗಿದ. ಸ್ವಲ್ಪ ದೂರ ಹೋಗುವಾಗ ಅಲ್ಲಿ ತಿರುವಿನಲ್ಲಿ ದೊಡ್ಡ ಹಂದಿ ಇತ್ತು. ಆದರೆ ಅರ್ಥವಾಗುವುದರೊಳಗೆ ತಡವಾಗಿಹೋಗಿತ್ತು. ಇಂತಹ ಅನುಭವಗಳು ನಮಗೆಲ್ಲರಿಗೂ ಆಗಿಯೇ ಇರುತ್ತವೆ. ಅದೆಷ್ಟೋ ಬಾರಿ- ಪ್ರತಿನಿತ್ಯ ಭಾವನೆಗಳ ಏರಿಳಿತದಲ್ಲಿ ಸೋಫಾ ಎಂದು ಕೂಡ ನೋಡದೆ ಏನೋ ಪ್ರತಿಕ್ರಿಯಿಸಿ ಎಡವಟ್ಟು ಮಾಡಿಕೊಂಡು ಬಿಡುತ್ತೇವೆ. ಆಮೇಲೆ ಪರಿತಪಿಸುತ್ತೇವೆ. ಮನಃಕ್ಲೇಶ, ಬೇಸರ, ಅಸೂಯೆ ಇತ್ಯಾದಿಯ ಜಾಲದಲ್ಲಿ ಬಿದ್ದು ನಾವೇ ಒzಡಿ ಸೋತುಹೋಗುತ್ತೇವೆ. ಮಾನಸಿಕ ಸುಸ್ತೆಂದರೆ ಹಾಗೆಯೇ. ಸುಸ್ತಾಗುತ್ತದೆ ಆದರೆ ಸುಸ್ತಿನ ಕಾರಣ ಮಾತ್ರ ಎಂದಿಗೂ ತಿಳಿಯುವುದೇ ಇಲ್ಲ.

ಮೆದುಳು ಅತ್ಯಂತ ಹೆಚ್ಚಿಗೆ ಶಕ್ತಿ ಬಯಸುವ ದೇಹದ ಭಾಗ. ಎರಡು ಪ್ರತಿಶತ ದೇಹದ ಗಾತ್ರ ಆದರೆ ಇಪ್ಪತ್ತು ಪ್ರತಿಶತ ಶಕ್ತಿ ಮೆದುಳಿಗೆ ಬೇಕು. ಹೀಗಿರುವಾಗ ಮೆದುಳಿನ ಕಾರ್ಯಕ್ಷಮತೆ ಬಹಳ ಮುಖ್ಯ. ಹಾಗಾಗಿ ಮೆದುಳಿನ ಕೆಲವೊಂದಿಷ್ಟು ನ್ಯೂರಾನ್ ಸಂಪರ್ಕಗಳು ಪೂರ್ವಸಿದ್ಧವಾಗಿರುತ್ತವೆ. ಹೇಗೆಂದರೆ ಇಂತಹ ಸನ್ನಿವೇಶಕ್ಕೆ ಇಂತಹ ಭಾವ ಎಂದು ನಾವು ಯೋಚಿಸಲೇಬೇಕಿಲ್ಲ. ಸನ್ನಿವೇಶ ಎದುರಾದಾಗ ಅಯಾಚಿತ ಆ ಭಾವವನ್ನು ಪ್ರದರ್ಶಿಸುತ್ತೇವೆ. ಪೂರ್ವನಿರ್ಧರಿತ ರೀತಿ ವ್ಯವಹರಿಸು ತ್ತೇವೆ. ಹೀಗೆ ಆದರೆ ಸಿಟ್ಟಾಗಬೇಕು, ಹೀಗೆ ನಡೆದರೆ ಹೆದರಬೇಕು ಇತ್ಯಾದಿ. ಒಂದು ಪ್ರಮಾಣದಲ್ಲಿ ಈ Default mode network (ಮೆದುಳು ವಿಶ್ರಾಂತ ಸ್ಥಿತಿಯಲ್ಲಿದ್ದಾಗಲೂ ಸಕ್ರಿಯವಾಗಿರುವ ನರಜಾಲ) ಬಹಳ ಉಪಕಾರಿ. ಆದರೆ ಇದರಲ್ಲಿ ಹೆಚ್ಚಿನದು ಹಿಂದಿನ ಕಾಡಿನೊಳಗಿನ ಬದುಕಿಗೇ ವಿನಾ ಇಂದಿನ- ಕಳೆದೈನೂರು ವರ್ಷದಿಂದೀಚೆ ಬದಲಾದ ಆಧುನಿಕ ನಿತ್ಯಬದುಕಿನಲ್ಲಿ ಅಲ್ಲ.

ಹಾಗಾದರೆ ಈ ಎಲ್ಲಾ ವಿಷಯಕ್ಕೂ, ಧ್ಯಾನಕ್ಕೂ ಏನು ಸಂಬಂಧ ಎಂದು ಕೇಳಿದಿರಾ? ಅಲ್ಲಿಯೇ ಧ್ಯಾನ ವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಉತ್ತರವಿರುವುದು. ಅಮೆರಿಕಾದ ಯೇಲ್ ವಿಶ್ವವಿದ್ಯಾಲಯದ Judson Brewer ನಡೆಸಿದ FMRI ಪ್ರಯೋಗ ಇಲ್ಲಿ ಇನ್ನೊಮ್ಮೆ ಪ್ರಸ್ತಾಪಿಸಬೇಕು.

FMRI ಎಂದರೆ ಮೆದುಳಿನ ಯಾವ ಭಾಗಗಳು ಯಾವ ಸಮಯದಲ್ಲಿ ಸಕ್ರಿಯವಾಗುತ್ತಿವೆ ಎಂಬು ದನ್ನು ತೋರಿಸುವ ಆಧುನಿಕ ಸ್ಕ್ಯಾನ್ ವಿಧಾನ. ಜಡ್ಸನ್ ಕೆಲ ಡಜನ್ ಸನ್ಯಾಸಿಗಳನ್ನು ತನ್ನ ಪ್ರಯೋಗಶಾಲೆಗೆ ಕರೆಸಿ ಮೆದುಳಿನ ಸ್ಕ್ಯಾನಿಂಗ್ ಪ್ರಯೋಗಗಳನ್ನು ಮಾಡಿದ. ಅದರಲ್ಲಿ ಗಮನಿಸಿದ್ದೇನೆಂದರೆ ಈ ಮೆದುಳಿನ ಸ್ವಯಂ-ಚಿಂತನಾ ಜಾಲದ ಸಕ್ರಿಯತೆ ಧ್ಯಾನ ಮಾಡುವವರಲ್ಲಿ ಮಾಯವಾಗುತ್ತಿರಲಿಲ್ಲ. ಬದಲಿಗೆ ಆ ಜಾಲವನ್ನು ಗಮನಿಸಿ ನಿಯಂತ್ರಿಸುವ ಮೆದುಳಿನ ಭಾಗಗಳು ಹೆಚ್ಚು ಜಾಗೃತಗೊಳ್ಳುತ್ತಿದ್ದವು. ಮತ್ತು ಈ ಸ್ಥಿತಿ ಧ್ಯಾನ ಮಾಡಿ ಮುಗಿಸಿದ ನಂತರವೂ, ಒಂದೆರಡು ದಿನ ಈ ಭಾಗ ಜಾಗೃತಾವಸ್ಥೆಯಲ್ಲಿಯೇ ಇದ್ದುವು. ಯೋಚನೆಗಳ ರೀತಿ ಮತ್ತು ಹರಿವನ್ನು ನಿಯಂತ್ರಿ ಸುವ ಜಾಲದ ನಡುವೆ ಹೆಚ್ಚು ಬಿಗಿಯಾದ ಸಂಪರ್ಕವೇರ್ಪಡುವುದು ಸ್ಪಷ್ಟವಾಗಿ ಕಾಣಿಸಿತು.

ಏನಿದರ ಅರ್ಥ? ಈ ಮೆದುಳಿನ ಸ್ವಯಂ-ಚಿಂತನಾ ಜಾಲ ಎಂದರೆ ಅಷ್ಟಕ್ಕೂ ಏನು? ಹೊರ ನೋಟಕ್ಕೆ ಇದುವೇ ಒಬ್ಬ ವ್ಯಕ್ತಿಯ ಗುಣ. ಇದುವೇ ಒಬ್ಬ ವ್ಯಕ್ತಿ ಸನ್ನಿವೇಶವನ್ನು, ಪರಿಸ್ಥಿತಿಯನ್ನು ಎದುರಿಸುವ, ಸ್ವೀಕರಿಸುವ ರೀತಿ. ಜಡ್ಸನ್ ಬ್ರೂವರ್ ತಮಾಷೆಯಾಗಿ ಇದನ್ನು 'ಮಾನಸಿಕ ಕರ್ಮ' ಎಂದು ಕರೆದಿದ್ದಾನೆ. ಇದೆಲ್ಲ ಏಕೆ ಹೇಳಿದೆ ಎಂದರೆ, ಸಾಮಾನ್ಯವಾಗಿ ಧ್ಯಾನ ಮಾಡುವವರು ಸ್ಮೃತಿ ಪೂರ್ಣ, ಸಮಚಿತ್ತವನ್ನು ಹೊಂದುತ್ತಾರೆ ಎನ್ನುವುದು ಪ್ಲೇಸಿಬೋ- ಭ್ರಮೆ, ನಂಬಿಕೆ, ಮೂಢ ನಂಬಿಕೆ, ಎಂದೆನ್ನಲಾಗುತ್ತಿತ್ತು.

ಏಕೆಂದರೆ ಇಷ್ಟು ಕಾಲ ವಿಜ್ಞಾನಕ್ಕೆ ಅದನ್ನು ಭೌತಿಕವಾಗಿ ಗುರುತಿಸುವ ಸಾಮರ್ಥ್ಯವಿರಲಿಲ್ಲ. ಈಗ ನಾವೇ ನಿರ್ಮಿಸಿದ ಅತ್ಯಾಧುನಿಕ ಉಪಕರಣಗಳು ಅದನ್ನು ಗುರುತಿಸಿ ಹೌದೆನ್ನುತ್ತಿವೆ. Mindfulness - ನಿರಂತರ ಜಾಗೃತ- ಸ್ಮೃತಿಪೂರ್ಣ ಸ್ಥಿತಿ- ಇದು ಧ್ಯಾನದ ಮೊದಲ ನೇರ ಉಪಯೋಗ. ಅದೀಗ ಕೇವಲ ಅನುಭವವಷ್ಟೇ ಅಲ್ಲ, ಬದಲಿಗೆ ಸಿದ್ಧವಾದ ವಿಷಯ. ಧ್ಯಾನದಿಂದ ಬದುಕು ಬದಲಾಗುವು ದಿಲ್ಲ.

ಎಲ್ಲವೂ ಹಾಗೆಯೇ ಇರುತ್ತದೆ, ಆದರೆ ನಾವು ಬದುಕನ್ನು ಸ್ವೀಕರಿಸುವ, ನೋಡುವ ರೀತಿ ಬದಲಾ ಗುತ್ತದೆ. ಇದು ಈಗ ನಂಬಿಕೆಯಲ್ಲ- ವಿಜ್ಞಾನ. ಇದರಿಂದಾಗಿ ಬದುಕನ್ನು, ಭಾವಗಳ ಏರಿಳಿತವನ್ನು ಎದುರಿಸುವ ಸಾಮರ್ಥ್ಯ ಹೆಚ್ಚುತ್ತದೆ. ಆ ಕಾರಣಕ್ಕೆ ಧ್ಯಾನವನ್ನು ಮಾನಸಿಕ ಜಿಮ್‌ಗೆ ಹೋಲಿಸಿದ್ದು. ಹಾಗಾದರೆ ಧ್ಯಾನ ಮಾಡುವವರಿಗೆ ದುಃಖವಾಗುವುದಿಲ್ಲವೇ? ಸಿಟ್ಟೇ ಬರುವುದಿಲ್ಲವೇ? ಬೇಸರವೇ ಆಗುವುದಿಲ್ಲವೇ? ಆಗುತ್ತದೆ. ಆದರೆ ಧ್ಯಾನದಿಂದ ಅದನ್ನು ನಿಭಾಯಿಸುವ ಸಾಮರ್ಥ್ಯ ಬದಲಾಗು ತ್ತದೆ.

ನೀವು ಯಾರೇ ಧ್ಯಾನಿಗಳನ್ನು ಕೇಳಿದರೂ ಅವರು ಇದೊಂದನ್ನು ಹೇಳುತ್ತಾರೆ, 'ಧ್ಯಾನವೆಂದರೆ ಆನಂದದ ಅನುಭವವಾಗುತ್ತದೆ' ಎಂದು. ಧ್ಯಾನದಿಂದ ಪರಮಾನಂದ ಸಾಧ್ಯ ಎಂದು. ಇದು ಧ್ಯಾನಕ್ಕೆ ಕುಳಿತಾಗ ಆಗುವ bliss ಎಂದು. ಅಸಲಿಗೆ ಏನಿದರ ಹಕೀಕತ್ತು? ವಿಜ್ಞಾನಿಗಳ ಪ್ರಯೋಗ ಗಳ ಪ್ರಕಾರ ಧ್ಯಾನಕ್ಕೆ ಕೂತಾಗ, ಯೋಚನೆಗಳು ಕ್ರಮೇಣ ಕ್ಷೀಣಿಸಿದಾಗ ಉಳಿಯುವುದು ಬಹುತೇಕ ಸ್ತಬ್ಧ ಮೆದುಳು. ಅದು ಸ್ವಯಂ-ಚಿಂತನಾ ಜಾಲ ಪೂರ್ಣ ನಿಯಂತ್ರಣದಲ್ಲಿರುವ ಸ್ಥತಿ. ಆಗ ಉಳಿಯುವುದು ಮೆದುಳಿನ ಮೂಲ ಸ್ಥಿತಿ- ಬೇಸ್ ಸ್ಥಿತಿ. ಯೋಚನೆಗಳೇ ಮನಸ್ಸಿನಲ್ಲಿ ಕಿರಿಕಿರಿಗೆ ಕಾರಣವಲ್ಲವೇ? ಮನಸ್ಸು ತನ್ನ ಯೋಚನೆಯನ್ನೇ ಗ್ರಹಿಸುತ್ತಾ ಹೋದಂತೆ ಕ್ರಮೇಣ ಯೋಚನೆ ಗಳು ಕ್ಷೀಣಿಸುತ್ತವೆ. ಆಗ ಮನಸ್ಸಿನ ಮೂಲ ಸ್ವರೂಪದ ಅನುಭವವಾಗುತ್ತದೆ. ಯಾವುದೇ ಯೋಚನೆ ಗಳಿಲ್ಲದಾಗ ಮನಸ್ಸು ತನ್ನನ್ನೇ ತಾನು ನೋಡುವಾಗ- ಖುಷಿಯನ್ನು- ಆನಂದವನ್ನು ಅನುಭವಿಸು ತ್ತದೆ. ಹೇಗೆ ನಶೆಯ ವಸ್ತು ಒಳಬಿಟ್ಟುಕೊಂಡಾಗ ಸಂತೋಷವಾಗುತ್ತದೆಯೋ ಅಂತಹ ಅನುಭವ ಅದು.

ಇದೆಲ್ಲ ವೈಜ್ಞಾನಿಕವಾಗಿ ಸಿದ್ಧವಾದದ್ದೇ ಆದರೂ ಅನುಭವಕ್ಕೆ ಬರಬೇಕೆಂದರೆ ಧ್ಯಾನವನ್ನು ಕಲಿಯಬೇಕು ಮತ್ತು ಕಲಿತು ನಿತ್ಯ ಜಿಮ್ ನಂತೆ ತಾಲೀಮು ನಡೆಸಬೇಕು. ಧ್ಯಾನ ಹೇಗೆ ಮಾಡಬೇಕು ಎನ್ನುವುದು ಈ ಲೇಖನದ ಉದ್ದೇಶವೇ ಅಲ್ಲ. ಅದಕ್ಕೆ ಬೇಕಾದಷ್ಟು ಮಾರ್ಗವಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ 'ಶಾಂಭವಿ ಮಹಾ ಮುದ್ರಾ' ಅಥವಾ ಶ್ರೀ ಶ್ರೀ ಅವರ ಧ್ಯಾನದ ಕೋರ್ಸ್ ಇತ್ಯಾದಿ ಸೇರುವುದು ಸುಲಭ ಮಾರ್ಗ. ಈಗ ಇದೆಲ್ಲ ಆನ್‌ಲೈನ್‌ನಲ್ಲಿಯೇ ಲಭ್ಯವಿದೆ. ಧ್ಯಾನ ಸಹಜ, ಆದರೆ ಅದಕ್ಕೊಂದಿಷ್ಟು ರೀತಿ ನೀತಿಗಳಿವೆ, ಮಾನಸಿಕ ಪೂರ್ವತಯಾರಿಯೂ ಬೇಕಿರುತ್ತದೆ.

ಅದಿಲ್ಲದೆ ಸುಮ್ಮನೆ ಕೂತರೆ ಯೋಚನೆಗಳು ದುರ್ಗಾ ಸಪ್ತಶತಿಯ ರಕ್ತಬೀಜಾಸುರನಂತೆ ಬಿದ್ದಲ್ಲಿ ಸಾವಿರವಾಗುತ್ತವೆ! ಧ್ಯಾನ ಎಂದರೆ ಸೈಕಲ್ ಕಲಿತಂತೆ. ಸ್ವಲ್ಪ ಕಾಲ ಕ್ಯಾರಿಯರ್ ಅನ್ನು ಇನ್ನೊಬ್ಬರು ಹಿಡಿದರೆ ಸೈಕಲ್ ಹೇಗೆ ಬೇಗ ಕಲಿಯಬಹುದೋ ಹಾಗೆ ಇಂತಹ ಕೋರ್ಸ್‌ಗಳು. ಧ್ಯಾನದ ಮೊದಲ ಹಂತವನ್ನು ಸರಿಯಾಗಿ ಕಲಿಯುವುದು, ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಅದಿಲ್ಲದೆ ಸುಮ್ಮನೆ ಕೂತು ಧ್ಯಾನ ಕಲಿತು ಮಾಡಿಬಿಡುತ್ತೇನೆ ಎಂದರೆ ಅದು ಸಾಧ್ಯ, ಆದರೆ ಸುಲಭವಲ್ಲ. ಹಾಗಾಗಿಯೇ ಧ್ಯಾನ ಗುರುವಿಲ್ಲದೆ ಸಾಧ್ಯವಿಲ್ಲ ಎನ್ನುವ ಮಾತಿದೆ.

ಇಂದು ಸ್ಪಷ್ಟಪಡಿಸಬೇಕು. ನಾನಿಲ್ಲಿ ನೀವು ಯಾವುದೇ ಸನ್ಯಾಸಿಯನ್ನು ಶಿಷ್ಯರಾಗಿ ಹಿಂಬಾಲಿಸ ಬೇಕು ಎಂದು ಹೇಳುವುದಿಲ್ಲ. ಯೋಗ್ಯ ಧ್ಯಾನ ಕಲಿಯುವ ಯಾವುದೇ ಮಾರ್ಗವೂ ಸರಿಯೇ. ಹಿಂದಿನ ಲೇಖನದಲ್ಲಿ 112 ರೀತಿಯ ಧ್ಯಾನವಿದೆ- ಅದು ವಿಜ್ಞಾನ ಭೈರವ ತಂತ್ರದಲ್ಲಿ ದಾಖಲಾಗಿದೆ ಎಂದು ಹೇಳಿದ್ದೇನಲ್ಲ. ಈ ಎಲ್ಲಾ ಕೋರ್ಸುಗಳು ಅದರಲ್ಲಿ ಒಂದನ್ನು ತೆಗೆದುಕೊಂಡು ಅದನ್ನು ಇಂದಿನ ದಿನಮಾನಕ್ಕೆ ಹೊಂದುವಂತೆ ಮರುರೂಪಿಸಲಾಗಿರುತ್ತದೆ. ಉದಾಹರಣೆಗೆ ಶಾಂಭವಿ ಮಹಾಮುದ್ರಾ ಎನ್ನುವುದು ವಿeನ ಭೈರವ ತಂತ್ರದ ಒಂದು ವಿಧಾನ. ಬುದ್ಧ ಹೇಳುವ ಆನಪಾನಸತಿ ಕೂಡ ಅದೇ ತಂತ್ರ ಪುಸ್ತಕದಲ್ಲಿ ಒಂದು. ಬಹುತೇಕ ಇಂತಹ ಎಲ್ಲಾ ಕೋರ್ಸುಗಳು, ವಿಧಾನಗಳು ಒಂದಿಂದು ರೀತಿಯಲ್ಲಿ ಈ 112 ವಿಧಾನಗಳಲ್ಲಿ ಒಂದರ ರೂಪಾಂತರವೇ ಆಗಿರುತ್ತದೆ.

ಧ್ಯಾನ ಕಲಿಯುವುದು ಸೈಕಲ್ ಕಲಿತಂತೆ ಎಂದೆನಲ್ಲ. ಧ್ಯಾನಿಸುವುದು ಎಂದರೆ ಸೈಕಲ್ ಓಡಿಸಿ ದಂತೆ. ಹೇಗೆ ಸೈಕಲ್ ಓಡಿಸುವಾಗ ಸರಿಯಾದ ಪ್ರಮಾಣದಲ್ಲಿ ಪೆಡಲ್ ಒತ್ತಬೇಕು, ಬ್ರೇಕ್ ಒತ್ತಬೇಕು, ಸಮತೋಲನ ಕಾಪಾಡಿಕೊಳ್ಳಬೇಕು- ಇತ್ಯಾದಿಯೋ ಧ್ಯಾನವೂ ಹಾಗೆಯೇ. ಅದಕ್ಕೊಂದಿಷ್ಟು ಪಾಲಿಸಲೇಬೇಕಾದ ಶಾಸ್ತ್ರೀಯ ವಿಧಿವಿಧಾನಗಳಿವೆ. ಅಂತೆಯೇ ಒಮ್ಮೆ ಒಂದು ರೀತಿಯ ಸೈಕಲ್ ಓಡಿಸುವುದನ್ನು ಕಲಿತರೆ ಮುಂದೆ ಯಾವುದೇ ಸೈಕಲ್ ಓಡಿಸಬಹುದಲ್ಲ. ಧ್ಯಾನವೂ ಹಾಗೆಯೇ. ಒಮ್ಮೆ ಒಂದು ರೀತಿಯ ಧ್ಯಾನ ಕಲಿತರೆ ಅನ್ಯ ರೀತಿಯ ಧ್ಯಾನಗಳನ್ನು ನಾವೇ ಪ್ರಯೋಗಿಸಿ ನೋಡಬಹುದು. 112 ರೀತಿಯ ಸೈಕಲ್ಲುಗಳು.

ಒಮ್ಮೆ ಯಾವುದೇ ನಮೂನೆಯ ಧ್ಯಾನವನ್ನು ಕಲಿತ ನಂತರ ಉಪಯೋಗಕ್ಕೆ ಬರುವ ಒಂದೆರಡು ಪರಾಮರ್ಶ ಕೃತಿಗಳನ್ನು ನಾನಿಲ್ಲಿ ಪ್ರಸ್ತಾಪಿಸಬೇಕಿದೆ. ವಿಜ್ಞಾನ ಭೈರವ ತಂತ್ರದ ಸವಿಸ್ತಾರ ವಿವರಣೆ ಬೇಕೆಂದರೆ ಓಶೋ ಬರೆದಿರುವ The Book Of Secrets ಸುಮಾರು 1300 ಪೇಜಿನ ಅತ್ಯುನ್ನತ ಕೃತಿ. ಇದೇ ವಿವರ ಚಿಕ್ಕದಾಗಿ ಬಯಸಿದಲ್ಲಿ ರಂಜಿತ್ ಚೌಧ್ರಿ ಬರೆದಿರುವ 112 Meditations for Self- realization ಪುಸ್ತಕವನ್ನು ಓದಬಹುದು. ಇನ್ನು ಬುದ್ಧ ಕಲಿಸಿದ ಧ್ಯಾನವನ್ನು ಕಲಿಯಬೇಕೆಂದರೆ * Ajahn Brahm ಅವರ Mindfulness, Bliss and Beyond ಪುಸ್ತಕ. ಯಾವುದೂ ಬೇಡವೆಂದರೆ ಸುಮ್ಮನೆ ಯೂಟ್ಯೂಬ್‌ನಲ್ಲಿ Ajahn Brahm ಎಂದು ಹುಡುಕಿದರೆ ಅಲ್ಲಿ ಧ್ಯಾನ ಮಾಡಿಸುವ ನೂರಾರು ವೀಡಿಯೊಗಳು ಸಿಗುತ್ತವೆ. ಯಾವುದನ್ನೇ ಹಿಂಬಾಲಿಸಿ ಧ್ಯಾನ ಕಲಿಯಬಹುದು. ಓಂ ಸ್ವಾಮಿ ಬರೆದಿರುವ A Million Thoughts ಪುಸ್ತಕ ಪ್ರಸ್ತುತ ಅತ್ಯುತ್ತಮ ಧ್ಯಾನ ಕೈಪಿಡಿಗಳಂದು.

ಈ ಸರಣಿಯಲ್ಲಿ ಧ್ಯಾನದ ಬಗ್ಗೆ ಇದು ಐದನೇ ಲೇಖನ. ಧ್ಯಾನ ಎಂದರೇನು, ತಲೆಯೊಳಗೆ ಅದು ಏನು ಮಾಡುತ್ತದೆ ಎನ್ನುವುದನ್ನು ವಿವರಿಸುವುದಷ್ಟೇ ಈ ಲೇಖನ ಸರಣಿಯ ಉದ್ದೇಶವಾಗಿತ್ತು. ಇದೆಲ್ಲ ಈಜಿನ ಬಗ್ಗೆ ಬರೆದಂತೆ. ಎಷ್ಟೇ ಓದಿ ತಿಳಿದರೂ ಈಜು ಬರುವುದಿಲ್ಲ. ಈಜು ಕಲಿಯ ಬೇಕೆಂದರೆ ನೀರಿಗಿಳಿಯಬೇಕು. ನಾನಿಲ್ಲಿ ಮಾಡುತ್ತಿರುವುದು ದಡದಲ್ಲಿ ನಿಂತು, 'ನೀರು ಅಷ್ಟೇನೂ ತಣ್ಣಗಿಲ್ಲ' ಎಂದು ಹೇಳುವ ಕೆಲಸವನ್ನಷ್ಟೇ.

ಗೋಲು ಹೊಡೆದಾಗ, ಮನೆಯವರೆಲ್ಲ ಜಿಗಿದಾಡಿದಾಗ ನಾಯಿಗೆ ಯೋಚಿಸಲು ಒಂದು ಕ್ಷಣವೂ ಸಿಕ್ಕಿರಲೇ ಇಲ್ಲ. ಜಿಗಿದಾಟ ಕಂಡದ್ದೇ ತಡ, ಸೋಫಾ ಮೇಲೆಯೇ! ಪಾಪ, ಆ ನಾಯಿಗೆ ಬೇರೆ ದಾರಿಯೇ ಇರಲಿಲ್ಲ. ಅದಕ್ಕೆ ಹಾಗೆಯೇ ಕಲಿಸಲಾಗಿತ್ತು. ನಮಗೂ ಅದೆಷ್ಟೋ ವಿಷಯಗಳನ್ನು ಹಾಗೇ ಕಲಿಸ ಲಾಗಿದೆ. ಯಾರೋ ಒಂದು ಮಾತು ಆಡಿದಾಗ, ಯಾರೋ ಮೆಸೇಜ್ ಕಳುಹಿಸಿದಾಗ, ಯಾರೋ ಎದುರಿಗೆ ಬಂದು ಕೈತೋರಿಸಿದಾಗ, ಮೂಗು ತೋರಿಸಿದಾಗ, ಹಂದಿ ಕಾಣಿಸುವುದು ಯಾವತ್ತೂ ತಿರುವು ದಾಟಿದ ಮೇಲೆ. ಆದರೆ ಆ ಗೋಲಿಗೂ ಆ ಸೋಫಾಗೂ ನಡುವೆ ಒಂದು ತೆಳುವಾದ ಸಂದು ಇದೆ. ಅದು ಯಾವತ್ತೂ ಅಲ್ಲಿ ಇತ್ತು. ನಾವು ಅದನ್ನು ಎಂದೂ ನೋಡಿರಲಿಲ್ಲ, ಅಷ್ಟೆ. ಧ್ಯಾನ ಆ ಸಂದನ್ನು ಸೃಷ್ಟಿಸುವುದಿಲ್ಲ. ಧ್ಯಾನದಿಂದ ಆ ಸಂದು ಸ್ಪಷ್ಟವಾಗಿ ಕಾಣಿಸುತ್ತದೆ. ಧ್ಯಾನದಿಂದ ಎಂದಿಗೂ ಗೋಲು ಬೀಳುವುದು ನಿಲ್ಲುವುದಿಲ್ಲ. ಆದರೆ ಸೋಫಾ ಹೇಸಿಗೆಯಾಗುವು ದಿಲ್ಲ, ಚಂದವಾಗಿಯೇ ಉಳಿಯುತ್ತದೆ. ಚಿಯರ್ಸ್.

(ಮುಗಿಯಿತು)

Dailyhunt
Disclaimer: This content has not been generated, created or edited by Dailyhunt. Publisher: Vishwavani