Dailyhunt Logo
  • Light mode
    Follow system
    Dark mode
    • Play Story
    • App Story
Shishir Hegde Column: ಸ್ಪರ್ಧೆ ಮುಗಿದ ಮೇಲೆ ನಮಗೆ ಅಲ್ಲೊಬ್ಬ ಸಿಗುತ್ತಾನೆ

Shishir Hegde Column: ಸ್ಪರ್ಧೆ ಮುಗಿದ ಮೇಲೆ ನಮಗೆ ಅಲ್ಲೊಬ್ಬ ಸಿಗುತ್ತಾನೆ

Vishwavani 1 month ago

ಶಿಶಿರಕಾಲ

ಮೈಕಲ್ ಫೆಲ್ಪ್ಸ್. ನಿಮಗೆ ಇವತ್ತು ಇವನ ಕಥೆಯನ್ನು ಹೇಳಬೇಕು, ಆದಷ್ಟು ಚಿಕ್ಕದಾಗಿ. ಒಲಿಂಪಿಕ್ಸ್‌ʼನಲ್ಲಿ ಈ ವರೆಗೆ ಅತಿಹೆಚ್ಚು ವೈಯಕ್ತಿಕ ಪದಕ ಗೆದ್ದ ಇವನ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಇವನೇನಾದರೂ ದೇಶವಾಗಿದ್ದಿದ್ದರೆ ಒಲಂಪಿಕ್ ಸ್ವಿಮ್ಮಿಂಗ್ (ಈಜು) ಸ್ಪರ್ಧೆಯಲ್ಲಿ ಅತಿ ಹೆಚ್ಚು ಚಿನ್ನ ಗೆದ್ದ ಮೂರನೆಯ ದೇಶವಾಗಿರುತ್ತಿದ್ದನಂತೆ!

ಫೆಲ್ಪ್ಸ್‌ನನ್ನು ಕ್ರೀಡಾ ಜಗತ್ತು ಪರಿಚಯಿಸುವುದು ಹೀಗೆ. ಇವನು ಕೂಡ ಅವಿರತ ಶ್ರಮ ಪಟ್ಟು, ತಾಲೀಮು ನಡೆಸಿ ಪದಕ ಗೆದ್ದ ಸಾಧಕನೇ. ಆದರೆ ಕಥೆ ಕಲಿಸುವ ಪಾಠ ಮಾತ್ರ ವಿಭಿನ್ನ. ಮೈಕಲ್ ಫೆಲ್ಪ್ಸ್. ಒಲಿಂಪಿಕ್ಸ್‌ʼನ ದಂತಕಥೆ. ಹಾಗೆಂದು ಇವನನ್ನು ಕರೆಯುವು ದಕ್ಕಿಂತ ಸುಮಾರು ವರ್ಷದ ಹಿಂದೆ ಶಾಲೆಯಲ್ಲಿ ಇವನೊಬ್ಬ ವಿಚಿತ್ರ ಹುಡುಗನಾಗಿದ್ದ. ಹೈಪರ್ ಆಕ್ಟಿವ್ !

ಇವನಿಗೆ ಕ್ಲಾಸಿನಲ್ಲಿ ಕೂತಲ್ಲಿ ಕೂರಲಿಕ್ಕಾಗುತ್ತಿರಲಿಲ್ಲ. ಯಾವುದೇ ಒಂದು ವಿಷಯದ ಮೇಲೆ ಮನಸ್ಸನ್ನು ಹದಿನೈದು ಸೆಕೆಂಡ್‌ಗಿಂತ ಜಾಸ್ತಿ ಏಕಾಗ್ರಗೊಳಿಸಲಿಕ್ಕಾಗುತ್ತಿರಲಿಲ್ಲ. ಚೇಳು ಕಚ್ಚಿದ ಮಂಗನಂತೆ. ಎಷ್ಟೆಂದರೆ ಡಾಕ್ಟರ್ ಹತ್ತಿರ ತೋರಿಸುವ ಪರಿಸ್ಥಿತಿ ಬಂತು. ಡಾಕ್ಟರ್ ಇವನಿಗೆ * ಅಈಏಈ(ಏಕಾಗ್ರತಾ ಕೊರತೆ ಮತ್ತು ಅತಿಚುರುಕುತನದ ಅವ್ಯವಸ್ಥೆ) ಇದೆ ಎಂದರು.

ಕೆಲವು ಮಕ್ಕಳಿಗೆ ಶಕ್ತಿ ಹೊರ ಹಾಕಲಿಕ್ಕೆ ಸಾಧ್ಯವಾಗದಷ್ಟು ಇರುತ್ತದೆಯಲ್ಲ. ವೈದ್ಯರು ಇವನನ್ನು ಸರಿ ಮಾಡಲಿಕ್ಕೆ ಕಷ್ಟ, ಕ್ರೀಡೆಗಳಲ್ಲಿ ತೊಡಗಿಸಿ, ಸ್ವಿಮ್ಮಿಂಗ್ ಇತ್ಯಾದಿ ಮಾಡಿಸಿ ಎಂದು ಪ್ರಿಸ್ಕ್ಟಿಪ್ಷನ್ ಚೀಟಿ ಬರೆದುಕೊಟ್ಟರು.

Shishir Hegde Column: ಮಕ್ಕಳು ಹೆತ್ತವರ ಮುಂದೆ ಏಕೆ ಸುಳ್ಳು ಹೇಳುತ್ತಾರೆ ?

ಹುಡುಗ ಮೈಕಲ್ ಫೆಲ್ಪ್ಸ್‌ಗೆ ಸ್ವಿಮ್ಮಿಂಗ್ ಪೂಲ್ ಹುಚ್ಚು ಹಿಡಿದುಹೋಯಿತು. ಮಕ್ಕಳಿಗೆ ಸಹಜವಾಗಿ ನೀರಿನ ಆಟ, ಈಜಾಟ ಖುಷಿ. ಇವನೋ ವಿಚಿತ್ರ. ಹುಚ್ಚು ಎಷ್ಟೆಂದರೆ ಇವನ ವಾರಿಗೆಯವರೆಲ್ಲ ಯಾವ ಹವ್ಯಾಸ ಇಷ್ಟವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಮಲಗಿ ದ್ದರೆ, ಫೆಲ್ಪ್ಸ್ ಬೆಳಿಗ್ಗೆ ಐದು ಗಂಟೆಗೆ ಹೋಗಿ ತಣ್ಣನೆಯ ಈಜುಕೊಳದೊಳಗೆ ಹಾರುತ್ತಿದ್ದ. ಅವನ ಕೋಚ್ - ಗುರುವಿಗೆ ಇವನಲ್ಲಿನ ಅಸಾಮಾನ್ಯ ಸಾಮರ್ಥ್ಯ ತಿಳಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಒಳ್ಳೆಯ ಐಬು ಇಲ್ಲದ ಆಳುತನ ಮತ್ತು ನೀರೆಂದರೆ ಹುಚ್ಚು. ಜೊತೆಯಲ್ಲಿ ಹೆದರಿಕೆಯಾಗುವಷ್ಟು ಶಿಸ್ತು.

ಫೆಲ್ಪ್ಸ್ ಉಳಿದೆ ಚಾಂಪಿಯನ್ ಕ್ರೀಡಾಪಟುಗಳಿಗಿಂತ ವಿಶೇಷವೆನಿಸುವುದು, ಪ್ರತ್ಯೇಕ ವೆನಿಸುವುದು ಅವನ ತಯಾರಿಯ ರೀತಿಯಲ್ಲಿ. ಯಾಂತ್ರಿಕ ನಿಖರತೆ. ಏನೆಂದರೆ ಒಂದು ಈಜಿನ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ಅದರ ಉದ್ದ, ಎಷ್ಟು ಲ್ಯಾಪ್ಸ್ (ಸುತ್ತು), ನೀರಿಗೆ ಹಾರುವುದರಿಂದ ಹಿಡಿದು, ಯಾವ ಕೋನದಲ್ಲಿ ದೇಹವನ್ನು ಬಾಗಿಸಿ ತಿರುಗಿ ಈಜಿ ಬರಬೇಕು ಇತ್ಯಾದಿ ಯಥಾವತ್- ಸ್ಪರ್ಧೆ ಹೇಗೆ ನಡೆಯುತ್ತದೆಯೋ ಅದೇ ರೀತಿ ತಯಾರಿ ನಡೆಸುತ್ತಿದ್ದ.

ಎಲ್ಲಾ ಈಜುಪಟುಗಳಿಗೂ ಉಸಿರು ಯಾವಾಗ ತೆಗೆದುಕೊಳ್ಳಬೇಕು ಎನ್ನುವುದು ಅತ್ಯಂತ ಮುಖ್ಯ. ಈಜುವಾಗ ಒಂದೇ ಉಸಿರು ಆಚೀಚೆಯಾದರೆ ವೇಗ ಕುಂಠಿತವಾಗಬಾರದು, ಸ್ಪರ್ಧೆ ಸೋಲಬಹುದು. ಫೆಲ್ಪ್ಸ್ ಪ್ರತಿ ಉಸಿರು ತೆಗೆದುಕೊಳ್ಳುವುದನ್ನೂ ಸೇರಿದಂತೆ ಎಲ್ಲವನ್ನೂ ಅವನ ತಾಲೀಮಿನ ಭಾಗವನ್ನಾಗಿಸಿಕೊಂಡಿದ್ದ.

ಕ್ರೀಡಾಪಟುಗಳು ಒಲಂಪಿಕ್‌ನಂತಹ ಕ್ರೀಡೆಗಳಿಗೆ ತಯಾರಿ ನಡೆಸುವ ರೀತಿ ಯಾವತ್ತೂ ನನ್ನಲ್ಲಿ ಆಶ್ಚರ್ಯ ಹುಟ್ಟಿಸುತ್ತದೆ. ಉದಾಹರಣೆಗೆ ಕೆನ್ಯಾದಂದು ಗ್ರಾಮವಿದೆ- ಇಟನ್. ನಾವು ಯಾವುದೇ ದೇಶದ ಮ್ಯಾರಥಾನ್ ಓಟವನ್ನು ತೆಗೆದುಕೊಳ್ಳಿ. ಅಲ್ಲಿ ಕೋಲು ಕಡ್ಡಿಯಂತಹ ಆಫ್ರಿಕಾ ದೇಶದವರು ಉಳಿದೆಲ್ಲರಿಗಿಂತ ಒಂದೆರಡು ಕಿಲೋಮೀಟರ್ ಮುಂದೆ ಓಡುತ್ತಿರುತ್ತಾರೆ ಗಮನಿಸಿದ್ದೀರಾ? ಅವರೆಲ್ಲರೂ ಮ್ಯಾರಥಾನ್ ತಯಾರಿ ಮಾಡು‌ ವುದು ಈ ಗ್ರಾಮದಲ್ಲಿ.

ಅಲ್ಲಿ ಮ್ಯಾರಥಾನ್ ಕೋಚಿಂಗ್ ಸೆಂಟರ್, ಹಾಸ್ಟೆಲ್ ಎಲ್ಲವೂ ಇದೆ. ಅವರ ತಯಾರಿ ಹೀಗೆ - ಬೆಳಿಗ್ಗೆ ಎದ್ದು ಮೂರು ಗಂಟೆ ಓಡುವುದು. ರೂಮಿಗೆ ಬಂದು ಊಟ, ಮಧ್ಯಾಹ್ನದ ನಿದ್ರೆ. ಮತ್ತೆ ಸಂಜೆ ಮೂರು ತಾಸು ಓಡುವುದು. ಊಟ ಮುಗಿಸಿ- ಮಲಗುವುದು- ಮಾರನೆಯ ದಿನ ಬೆಳಿಗ್ಗೆ ಎದ್ದು ಮತ್ತದೇ ಕಾಯಕ. ಊಟ, ನಿದ್ರೆ, ಓಟ.

ಇದನ್ನು ನಾಲ್ಕೆ ದು ವರ್ಷ ಪ್ರತಿನಿತ್ಯ ಮಾಡುವವರಿದ್ದಾರೆ. ಮೈಕೆಲ್ ಫೆಲ್ಪ್ಸ್ ತಯಾರಿ ಕೂಡ ಹಾಗೆಯೇ ಇತ್ತು. ನಿತ್ಯ ಬೆಳಿಗ್ಗೆ ಐದರಿಂದ ಈಜು - ಮಧ್ಯಾಹ್ನ ಊಟ ಮುಗಿಸಿ ಮತ್ತೆ ಈಜು. ಮಲಗೆದ್ದು ಮತ್ತೆ ಈಜು. ಊಟ, ನಿದ್ರೆ, ಈಜು. ಸಾಮಾನ್ಯವಾಗಿ ಈ ರೀತಿಯ ತಯಾರಿ ಮಾಡುವವರು ವಾರದಲ್ಲಿ ನಾಲ್ಕು ಅಥವಾ ಐದು ದಿನ ಮಾಡುತ್ತಾರೆ.

ಇನ್ನುಳಿದ ಎರಡು ದಿನ ದೇಹಕ್ಕೆ ವಿಶ್ರಾಂತಿ. ಆದರೆ ಮೈಕೆಲ್ ಫೆಲ್ಪ್ಸ್ ಒಂದು ದಿನವೂ ವಿಶ್ರಮಿಸಲಿಲ್ಲ. ಒಂದೇ ಒಂದು ದಿನ ಬಿಡದೆ ಈಜು - ವ್ಯಾಯಾಮ, ನಿದ್ರೆ. ಅವನ ತಯಾರಿ ಹೀಗಿರುತ್ತಿತ್ತು ಎಂದರೆ - ಅವನು ಒಲಂಪಿಕ್ ಸ್ಪರ್ಧಿಸುವಾಗ ಉಳಿದವರ ಜೊತೆ ಸ್ಪರ್ಧಿಸು ತ್ತಿರಲಿಲ್ಲ, ಬದಲಿಗೆ ಮನುಷ್ಯನ ದೇಹದ ಮಿತಿಯ ಜೊತೆಯೇ ಸ್ಪರ್ಧೆಗಿಳಿಯುತ್ತಿದ್ದ !

2008ರ ಬೀಜಿಂಗ್ ಒಲಂಪಿP. ಎಂಟು ಗೋಲ್ಡ ಮೆಡಲ್ ! ಅಲ್ಲಿಯವರೆಗೆ ಒಂದು ಒಲಂಪಿಕ್ ಪಂದ್ಯದಲ್ಲಿ ಇಷ್ಟು ಚಿನ್ನದ ಪದಕ ಗೆದ್ದವರೇ ಇರಲಿಲ್ಲ. ಅಷ್ಟಕ್ಕೇ ನಿಲ್ಲಲಿಲ್ಲ. ಮತ್ತೆ ನಾಲ್ಕು ವರ್ಷದ ಪ್ರತಿನಿತ್ಯದ ತಯಾರಿ, ಇನ್ನೊಂದು ಒಲಂಪಿಕ್, ಅಂದಿಷ್ಟು ಪದಕ. ಅವನು ಒಲಂಪಿಕ್‌ನಲ್ಲಿ ಗೆದ್ದ ಒಟ್ಟೂ ಪದಕ 28!

ಫೆಲ್ಪ್ಸ್ ಕೇಳಿದರೆ 28 ಅಲ್ಲ, 23 ಎಂದು ರಿಮಾಡುತ್ತಾನೆ. ಏಕೆಂದರೆ ಅದರಲ್ಲಿ 23 ಮಾತ್ರ ಚಿನ್ನದ ಪದಕ. ಅವನ ಲೆಕ್ಕದಲ್ಲಿ ಚಿನ್ನ ಗೆಲ್ಲದಿದ್ದರೆ ಅದು ಗೆಲುವೇ ಅಲ್ಲ - ಸೋಲು. ಭಾರತಕ್ಕೆ ಇಲ್ಲಿಯತನಕ ಈಜಿನಲ್ಲಿ ಒಂದೇ ಒಂದು ಕಂಚಿನ ಮೆಡಲ್ ಕೂಡ ಬಂದಿಲ್ಲ ಅನ್ನೋದೂ ತಿಳಿದಿರಲಿ. ಹೀಗೆ ಇಷ್ಟೊಂದು ತಯಾರಿ - ಮೈಕೆಲ್ ಫೆಲ್ಪ್ಸ್ ದಂತಕತೆ ಇತ್ಯಾದಿ ಆದದ್ದು ಆಯ್ತು.

ಒಲಿಂಪಿಕ್ ಮೊದಲಾದ ಕ್ರೀಡೆಗಳನ್ನು ವೃತ್ತಿ, ಬದುಕಿನ ಗುರಿಯಾಗಿಸಿಕೊಂಡು ಬದುಕು ವುದು ಸಾಮಾನ್ಯವಲ್ಲ. ಅಷ್ಟೆ ತಾಲೀಮು, ತಯಾರಿ ಮಾಡಿ, ನಂತರ ಮೆಡಲ್ ಅನಿಶ್ಚಿತ. ಮೈಕ್ರೋ ಸೆಕೆಂಡ್ ಅಂತರದಲ್ಲಿ ನಾಲ್ಕನೇ ಸ್ಥಾನ ಬಂದುಬಿಟ್ಟರೆ ತಯಾರಿ ಮಾಡಿದ್ದೆಲ್ಲ ನೀರಿನಲ್ಲಿ ಹೋಮ.

ಮತ್ತೊಂದು ಅವಕಾಶಕ್ಕೆ ಮತ್ತೆ ನಾಲ್ಕು ವರ್ಷ ಕಾಯಬೇಕು. ಅಷ್ಟು ಕಾಲ ತಾಲೀಮು ಮುಂದುವರಿಯಬೇಕು, ದೇಹವನ್ನು ಸರಿಯಾಗಿಟ್ಟುಕೊಳ್ಳಬೇಕು. ಮುಂದಿನ ಬಾರಿ ಸ್ಪರ್ಧಿಸುವಾಗ ಇನ್ನಷ್ಟು ಕಡಿಮೆ ವಯಸ್ಸಿನ ಕ್ರೀಡಾಪಟುಗಳು, ಸ್ಪರ್ಧೆ ಇನ್ನಷ್ಟು ಕಠಿಣ.

ಇದೊಂದು ಬದುಕಿನ ಜೊತೆಗಿನ ಜೂಜು. ಇದರಲ್ಲಿ ಸೋತವರೆಷ್ಟೋ, ಗೆದ್ದವರೆಷ್ಟೋ. ಗೆದ್ದವರ ಕಥೆಯೂ ಮುನ್ನಡೆದಂತೆ ಭಿನ್ನವಲ್ಲ. ಮೆಡಲ್ ಬರದಿದ್ದರೆ ಒಂದು ರೀತಿ, ಮೆಡಲ್ ಬಾರದಿದ್ದರೆ ಇನ್ನೊಂದು ರೀತಿ. ಇದರ ಬಗ್ಗೆ ಮಾತನಾಡುವವರು ಕಡಿಮೆ. ಇದು ಕೇವಲ ಲೈಮ್ ಲೈಟ್ - ಮುಖ್ಯವಾಹಿನಿಯಿಂದ ದೂರವಾಗುವ ನಟ-ನಟಿಯರ ಕಥೆಯಂತಲ್ಲ !

ಮೈಕೆಲ್ ಫೆಲ್ಪ್ಸ್ ಪ್ರತಿನಿತ್ಯ ಆರು ಗಂಟೆ ಈಜುತ್ತಿದ್ದನಂತೆ. ನಿತ್ಯ ಕನಿಷ್ಠ ಹದಿನೈದು ಕಿಲೋಮೀಟರ್ ಈಜುವುದನ್ನು ಅವನು ಒಂದೆರಡು ದಿನ ಮಾಡಿದ್ದಲ್ಲ. ಅವನ ಬಾಲ್ಯ ದಿಂದ - ಸುಮಾರು ಇಪ್ಪತ್ತು ವರ್ಷಗಳ ಕಾಲ, ವರ್ಷದ ಮುನ್ನೂರ ಅರವತ್ತೈದು ದಿನ ಮಾಡಿಕೊಂಡು ಬಂದಿದ್ದ. ತಮಾಷೆಗಲ್ಲ, ಸುಮಾರು 7 ಸಾವಿರ ದಿನ - ನಿರಂತರ. ನಮ್ಮ ಹತ್ತಿರ ದಿನ ತಪ್ಪಿಸದೆ ಒಂದು ವಾರ ವಾಕಿಂಗ್ ಹೋಗಲಿಕ್ಕಾಗುವುದಿಲ್ಲ.

ಮೈಕೆಲ್ ಫೆಲ್ಪ್ಸ್ ಒಬ್ಬನೇ ಎಂದಲ್ಲ - ಇಂತಹ ಕ್ರೀಡೆಗಳಿಗೆ ತಯಾರಾಗುವ ಲಕ್ಷ ಲಕ್ಷ ಜನರ ಬದುಕು ಹೆಚ್ಚು ಕಡಿಮೆ ಇದೇ ಆಗಿರುತ್ತದೆ. ಅವರಿಗೆ ಸ್ಪರ್ಧೆಯ ದಿನ - ಇನ್ನೊಂದು ದಿನ. ಗೆzನೆಂದು ಹಿಗ್ಗಿ ಕೂರುವಂತಿಲ್ಲ, ಸೋತೆ ಎಂದು ಕುಗ್ಗುವಂತೆಯೂ ಇಲ್ಲ.

ಬದುಕೇ ತಾಲೀಮು, ತಯಾರಿ. ಬದುಕೇ ಕ್ರೀಡೆಯಾಗಿಬಿಟ್ಟಿರುತ್ತದೆ. ಆದರೆ ಒಂದು ದಿನ ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಇದೆಲ್ಲ ಮುಗಿಯಬೇಕಲ್ಲ. ಇವರೆಲ್ಲರ ಸಾಮೂಹಿಕ ಸಮಸ್ಯೆ ಎಂದರೆ ಇಷ್ಟು ಕಾಲ ತಯಾರಿ ಮಾಡುವುದೇ ಬದುಕಾಗಿತ್ತು. ಈಗ ಅದುವೆ ಇಲ್ಲ, ಸ್ಪರ್ಧೆ ಯೇ ಇಲ್ಲ. ಬದುಕಿನ ಉದ್ದೇಶವೇ ಬದಲಾಗಿ ಹೋಗುವುದನ್ನು ಅವರು ಎದುರಿಸಬೇಕಾಗು ತ್ತದೆ.

ಮೈಕೆಲ್ ಫೆಲ್ಪ್ಸ್‌ನಷ್ಟು ಪದಕ ಗೆದ್ದವರಿಗೆ ಹಣಕಾಸಿನ ತೊಂದರೆಯಾಗುವುದಿಲ್ಲ. ಆದರೆ ಅವನಿಗೂ ಈ ತಾಲೀಮಿಲ್ಲದ ಖಾಲಿತನ, ನಿರ್ವಾತ ಸಹಿಸಲಿಕ್ಕಾಗಲಿಲ್ಲ. ಸ್ಪರ್ಧೆಯಿಲ್ಲ, ತಯಾರಿಯಿಲ್ಲ, ಚಪ್ಪಾಳೆಗಳಿಲ್ಲ - ಖಿನ್ನತೆ ಹತ್ತಿಕೊಂಡಿತು. ಅಷ್ಟು ಪದಕ ಗೆದ್ದ, ಹಣ ಗಳಿಸಿದವನಿಗೂ ಬದುಕಿನ ಉದ್ದೇಶವೇ ಮಾಯವಾದಾಗ ಗಲಿಬಿಲಿಯಾಯಿತು. ಅವನೇ ಹೇಳುವಂತೆ ಖಿನ್ನತೆ ಉಲ್ಬಣಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹಲವು ಬಾರಿ ಅನ್ನಿಸಿತಂತೆ ! ನಂತರ ಮಾನಸಿಕ ಶುಶ್ರೂಷೆ ಇತ್ಯಾದಿ ಪಡೆಯಬೇಕಾಯಿತು.

ಹೇಗಿದೆ ನೋಡಿ. ಫೆಲ್ಪ್ಸ್ ಹಣ ಗಳಿಸಿದ್ದ, ಫೇಮಸ್ ಇತ್ಯಾದಿ. ಹಾಗಾಗಿ ಆರೈಕೆ ಪಡೆದು ಇಂಥದ್ದೊಂದು ಖಿನ್ನತೆಯಿಂದ ಹೊರಬರಲಿಕ್ಕಾಯಿತು. ಆದರೆ ಇವತ್ತಿಗೂ ಪದಕ ಕಚ್ಚಿ, ರಾಷ್ಟ್ರಗೀತೆಗೆ ಎದೆಯುಬ್ಬಿಸುವ ಕ್ರೀಡಾಪಟುಗಳಲ್ಲಿ ಬಹುತೇಕರು ಮಾನಸಿಕ ಉದ್ವೇಗಕ್ಕೆ, ಖಿನ್ನತೆಗೆ ಒಳಗಾಗುವುದು ಸಾಮಾನ್ಯವಂತೆ. ಅದಕ್ಕೆ ಕಾರಣ ವೃತ್ತಿಪರ ಕ್ರೀಡಾಪಟುಗಳಿಗೆ ಸ್ಪರ್ಧೆಗಿಂತ ತಯಾರಿಯೇ ಬದುಕಾಗಿರುತ್ತದೆ.

ಸ್ಪರ್ಧೆಯ ಸಮೀಕರಣ ತೆಗೆದರೆ ಅದು ಕೂಡ ತಾಲೀಮಿನ ಇನ್ನೊಂದು ಈಜು/ಓಟ. ಆದರೆ ಸ್ಪರ್ಧೆ ಮುಗಿಯುತ್ತಿದ್ದಂತೆ, ಚಪ್ಪಾಳೆ ನಿಲ್ಲುತ್ತಿದ್ದಂತೆ ಬದುಕೇ ನಿಂತುಹೋದಂತೆನಿಸುತ್ತದೆ ! ಅಸಾಮಾನ್ಯ ಮೈಕೆಲ್ ಫೆಲ್ಪ್ಸ್‌ನ ಕಥೆ ಕೇವಲ ಅವನದಷ್ಟೇ ಅಲ್ಲ, ಇದು ನಮ್ಮಲ್ಲಿ - ಎಷ್ಟೋ ಜನರ ಸಾಮಾನ್ಯ ಕಥೆಯೂ ಹೌದು. ಹೇಗೆಂದು ಕೇಳುತ್ತೀರಾ? ಹುಟ್ಟಿದ ಮಾರನೇ ಕ್ಷಣದಿಂದಲೇ ಗುರಿಗಳು ಶುರುವಾಗಿಬಿಡುತ್ತವೆ.

ಮೊದಲು ನಡೆಯಲು ಕಲಿಯುವುದು, ಮಾತನಾಡಲು, ನಂತರ ಒಳ್ಳೆಯ ಮಾರ್ಕ್ಸ್‌ ಪಡೆಯುವುದು, ಒಳ್ಳೆಯ ಕಾಲೇಜಿಗೆ ಹೋಗುವುದು, ಉದ್ಯೋಗ, ಮದುವೆ, ಮಕ್ಕಳು, ಅವರ ಶಿಕ್ಷಣ, ಅವರ ಉದ್ಯೋಗ, ಉಳಿತಾಯ, ಮನೆ, ನಿವೃತ್ತಿ ಹೀಗೆ. ಒಂದಾದ ಮೇಲೆ ಇನ್ನೊಂದು ಗುರಿ - ಎಲ್ಲವೂ ಸ್ಪರ್ಧೆ. ಶಿಕ್ಷಕ ಎರಡು ಮೂರು ದಶಕಗಳ ನಂತರ ಹೆಡ್ ಮಾಸ್ತರ್ ಆಗುತ್ತಾನೆ, ಒಂದೆರಡು ವರ್ಷ - ಕೊನೆಗೊಂದು ದಿನ ನಿವೃತ್ತನಾಗುತ್ತಾನೆ.

ನಿನ್ನೆಯವರೆಗೆ ಏನೋ ಕೇಳಿಕೊಂಡು ಬರುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಬೆಂಚ್ ರಿಪೇರಿಯವನು - ಎಲ್ಲರೂ ಏನೋ ಒಂದನ್ನು ಕೇಳಿಕೊಂಡು ಬರುವುದು ನಿಂತುಬಿಡುತ್ತದೆ. ಅದರಲ್ಲೂ ಕೆಲವೊಂದು ಉನ್ನತ ಹುದ್ದೆ - ಸಿಇಒ, ಐಎಎಸ್, ಐಪಿಎಸ್ ಹುದ್ದೆಯಲ್ಲಿದ್ದು ನಿವೃತ್ತಿ ಸೃಷ್ಟಿಸುವ ನಿರ್ವಾತ ಇನ್ನಷ್ಟು ದೊಡ್ಡದು.

ಸೋತ ರಾಜಕಾರಣಿ ಖಿನ್ನನಾಗಿಬಿಡುವುದು ಸೋಲಿನಿಂದಲ್ಲ, ಸೋಲು ಅವನಿಂದ ದೂರ ವಾಗುವ ಅವನ ಐಡೆಂಟಿಟಿಯಿಂದ - ಗುರುತಿನಿಂದ. ತಾಯಿ ತನ್ನ ಮಕ್ಕಳು ಕಾಲೇಜಿಗೆಂದು ಪರ ಊರಿಗೆ ಹೋದ ನಂತರ ಖಾಲಿ ಮನೆಯಲ್ಲಿ ಅನುಭವಿಸುವ ನಿರ್ವಾತವೂ ಇದುವೇ.

ಸೈನಿಕ ತನ್ನ ಸಮವಸ ತೆಗೆದಿಟ್ಟಾಗ, ಕ್ರಿಕೆಟರ್‌ಗೆ ಮೈದಾನದ ಶಿಳ್ಳೆ ಕೇಳುವುದು ನಿಂತಾಗ. ಅಷ್ಟೇ ಏಕೆ, ದಶಕಗಳ ಕಾಲ ಅದೇ ಮರದ ಕುರ್ಚಿ, ತುಕ್ಕಾದ ಕನ್ನಡಿಯಿಟ್ಟು ಊರಿನವರ ಕೂದಲನ್ನು ಕತ್ತರಿಸುತ್ತಿದ್ದ ಹಳ್ಳಿಯ ಕ್ಷೌರಿಕ ಕೂಡ ಒಂದು ದಿನ ಮುದುಕನಾಗಿ ತನ್ನ ಮನೆಯ ಮುಂಗಟ್ಟಿನಲ್ಲಿ ಕೂತು ಆಚೀಚೆ ಹೋಗಿಬರುವವರನ್ನು ಅದೇ ಖಾಲಿತನದಲ್ಲಿ ನೋಡುತ್ತಾನೆ.

ಆಧುನಿಕ ಜೀವನ ಮಜವಾಗಿದೆ ನೋಡಿ. ಸಮಾಜಕ್ಕೆ ನಮ್ಮಿಂದೇನು ಉಪಯೋಗ ಎನ್ನುವ ಆಧಾರದ ಮೇಲೆ ನಮ್ಮ ಗುರುತು ನಿರ್ಮಾಣವಾಗಿರುತ್ತದೆ. ಏನು ಉದ್ಯೋಗ? ನೀನೇನು ಮಾಡುತ್ತೀಯಾ? ಇದು ಪ್ರತಿಯೊಬ್ಬರೂ ಎದುರಿಸುವ ಮೊದಲ ಅಸ್ತಿತ್ವದ ಪ್ರಶ್ನೆ. ಹಾಗಾ ಗಿಯೇ ವ್ಯಕ್ತಿ ಸಮಾಜದಲ್ಲಿನ, ಕುಟುಂಬದಲ್ಲಿನ ಪಾತ್ರವೇ ಆಗಿಬಿಡುತ್ತಾನೆ !

ವೈದ್ಯ ಆಸ್ಪತ್ರೆಯಾಚೆಯೂ ವೈದ್ಯನಾಗಿಬಿಡುತ್ತಾನೆ. ವ್ಯಾಪಾರಿ ಲಾಭ ನಷ್ಟವಾಗಿ ಬಿಡುತ್ತಾನೆ. ತಂದೆ ಕರ್ತವ್ಯವೇ ಆಗಿ ಬಿಡುತ್ತಾನೆ. ಕೆಲವೊಮ್ಮೆ ನಮ್ಮ ಹವ್ಯಾಸಗಳೂ ನಮ್ಮ ಗುರುತುಗಳಾಗಿ ಬಿಡುತ್ತವೆ. ನಮ್ಮೂರಲ್ಲಿ ಒಬ್ಬ ಗೃಹಿಣಿ ಅತ್ಯುತ್ತಮ ಸಾಂಬಾರು (ಹುಳಿ) ಮಾಡುತ್ತಾರೆ.

ಯಾರದೇ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಅವರ ಸಾಂಬಾರು ಜನಪ್ರಿಯ. ಎಷ್ಟೆಂದರೆ ಪೆಂಡಾಲು ಹೊಕ್ಕುತ್ತಿದ್ದಂತೆ ಇವತ್ತು ಸಾಂಬಾರು ಮಾಡಿದ್ದು ಅವರೇ ಎಂದು ಜನರಿಗೆ ಘಮದಲ್ಲಿಯೇ ತಿಳಿದು ಬಿಡುತ್ತದೆ! ಈಗ ಹೇಗಾಗಿದೆಯೆಂದರೆ ಅವರು ಮತ್ತು ಅವರು ಮಾಡುವ ಸಾಂಬಾರನ್ನು ಪ್ರತ್ಯೇಕಿಸಲಿಕ್ಕಾಗುವುದೇ ಇಲ್ಲ. ಸಾಂಬಾರೇ ಅವರ ಗುರುತಾಗಿಹೋಗಿದೆ. ಅವರನ್ನು ಸಾಂಬಾರ್ ಸಾವಿತ್ರಕ್ಕ ಎಂದೇ ಕರೆಯುವುದು !

ನಾನೀಗ ಆರು ವರ್ಷದಿಂದ ಪ್ರತೀ ವಾರ ಅಂಕಣ ಬರೆಯುತ್ತಿದ್ದೇನಲ್ಲ. ಇದು ಕೂಡ. ಹೆಚ್ಚಿನ ಕಡೆ, ಸಂದರ್ಭದಲ್ಲಿ ನನ್ನ ಗುರುತಾಗಿ ಹೋಗಿದೆ! ಈ ಗುರುತಿನ ಆರೋಪದಿಂದ ತಪ್ಪಿಸಿಕೊಳ್ಳಲಿಕ್ಕಾಗುವುದಿಲ್ಲ! ತಮಾಷೆಗೆ ಹೇಳುತ್ತಿಲ್ಲ, ನೀವು ಸಮಾಜಕ್ಕೆ ಏನೇ ಒಳ್ಳೆಯದು ಮಾಡಿ, ಆ ಪ್ರಯೋಜನವನ್ನು ಸಮಾಜ ಅಷ್ಟು ಸಂಭ್ರಮಿಸುತ್ತದೆ. ಎಷ್ಟೆಂದರೆ ಅದಕ್ಕಿಂತ ಮೊದಲು ಇದ್ದ ನಮ್ಮ ಅಸ್ತಿತ್ವವೇ ಮಸುಕೆನಿಸಿ ಬಿಡುತ್ತದೆ, ಬಹುತೇಕರಿಗೆ ಮರೆತು ಹೋಗಿ ಬಿಡುತ್ತದೆ. ಕ್ರಮೇಣ ಸಮಾಜ ಆರೋಪಿಸುವ ಗುರುತುಗಳೇ ನಮ್ಮ ನಡವಳಿಕೆ, ಹಾವಭಾವ ಎಲ್ಲವನ್ನೂ ನಿರ್ದೇಶಿಸಲು ಶುರುಮಾಡಿಬಿಡುತ್ತವೆ. ಹಾಗಾಗಿ ಆ ಗುರುತೇ ನಮ್ಮ ಅಸ್ತಿತ್ವ ವೆನಿಸುವುದು ! ಆದರೆ ಯಾವುದೇ ಗುರುತಿನದೊಂದು ಸಮಸ್ಯೆಯಿದೆ.

ಏನೆಂದರೆ ಯಾವುದೇ ಗುರುತು ತಾತ್ಕಾಲಿಕ. ಇದನ್ನು ವೈರಾಗ್ಯವೆಂದು ಭಾವಿಸಬೇಡಿ. ಇರೋದೇ ಹಾಗೆ. ಜೀವನವೇ ಹಾಗೆ. ನಾವು ಒಂದೊಂದೇ ಗುರುತನ್ನು ಚೀಲಕ್ಕೆ ಹಾಕಿಕೊಳ್ಳುತ್ತಾ ಹೋಗುತ್ತೇವೆ - ಕಾಲ ಒಂದೊಂದೇ ಗುರುತನ್ನು ಸದ್ದಿಲ್ಲದೆ ನಮ್ಮಿಂದ ಹಿಂಪಡೆಯುತ್ತ ಹೋಗುತ್ತದೆ.

ಪ್ರತೀ ಗುರುತಿನ ಹಣೆಪಟ್ಟಿ ಕಳಚಿ ಬಿದ್ದಾಗ - ನಾವು ನಮ್ಮನ್ನು ಏನೆಂದು ನಂಬಿದ್ದೇವೋ ಅದುವೇ ನಮ್ಮೆದುರಿಗಿಂದ ಮಾಯವಾದಾಗ. ಅದು ನಮ್ಮ ಅಸ್ತಿತ್ವದ ಪ್ರಶ್ನೆ. ನಾವು ದೈಹಿಕ ಮತ್ತು ಮಾನಸಿಕ ಅಸ್ತಿತ್ವವನ್ನು ಒಂದೇ ರೀತಿಯಲ್ಲಿ ಸ್ವೀಕರಿಸುತ್ತೇವೆ!

ಬದುಕಲ್ಲಿ ಎಲ್ಲರೂ ಪ್ರದರ್ಶನ ಕೊಡಬೇಕು. ತಾಲೀಮು ಮಾಡಬೇಕು. ಸ್ಪರ್ಧೆ ಗಿಳಿಯಲೇ ಬೇಕು. ಆದರೆ ತಯಾರಿ, ಸ್ಪರ್ಧೆ, ಪ್ರದರ್ಶನ ಇವೇ ಅಸ್ತಿತ್ವವೆನ್ನುವ ಭ್ರಮೆಯಲ್ಲಿ ಬಿದ್ದರೆ ಪಡ್ಚ. ಮೆಡಲ, ಚಪ್ಪಾಳೆ, ಸ್ಪರ್ಧೆ ನಿಂತಾಗ, ರಿಟೈರ್ಡ್ ಆದಾಗ, ಅಂಗಡಿ ಮುಚ್ಚಿದಾಗ, ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದಾಗ, ಯೂಟ್ಯೂಬ್ - ರೀಲ್ಸ್ ವೀವ್ಸ್ ಕಡಿಮೆ‌ ಯಾದಾಗ - ಒಂದೊಂದೇ ಗುರುತುಗಳು ಕಳಚಿಕೊಳ್ಳುವುದು ಸ್ವಾಭಾವಿಕ ಸಹಜ. ‌

ಬದುಕಿನ ಗುರಿಯತ್ತ ಸಾಗುವಾಗಲೇ ಇದರ ಅರಿವಿದ್ದರೆ ಒಳ್ಳೆಯದು. ಜಗತ್ತು ಪ್ರಯೋಜನ ನಿಲ್ಲುತ್ತಿದ್ದಂತೆ ನಮ್ಮ ಗುರುತನ್ನು ಸಂಭ್ರಮಿಸುವುದನ್ನು ಕೂಡ ನಿಲ್ಲಿಸುತ್ತದೆ. ಆದರೆ ಬದುಕು ಗುರುತು ಕಳೆಯುತ್ತಿದ್ದಂತೆ ಮುಗಿದುಹೋಗುವುದಿಲ್ಲ. ಚಪ್ಪಾಳೆ, ಶಿಳ್ಳೆ, ಗುರುತು ಗಳು ಆಚೆ ನಮಗೆ ಎದುರಾಗುವ ವ್ಯಕ್ತಿ ನಾವೇ ಎಂದು ತಿಳಿದಿದ್ದರಾಯ್ತು ! ಅಷ್ಟೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani