Dailyhunt Logo
  • Light mode
    Follow system
    Dark mode
    • Play Story
    • App Story
Shishir Hegde Column: ತಲೆಯೊಳಗೊಬ್ಬ ನಿತ್ಯ ಜ್ಯೋತಿಷಿಯೂ ಇದ್ದಾನಲ್ಲಾ !

Shishir Hegde Column: ತಲೆಯೊಳಗೊಬ್ಬ ನಿತ್ಯ ಜ್ಯೋತಿಷಿಯೂ ಇದ್ದಾನಲ್ಲಾ !

Vishwavani 3 weeks ago

ಶಿಶಿರಕಾಲ

ತಲೆಹರಟೆ-2)

ಕುಮಟೆ ಬಸ್ ಸ್ಟ್ಯಾಂಡ್ ಸ್ವಲ್ಪ ಇಳಿಜಾರಿನಲ್ಲಿತ್ತು. ಹಾಗಾಗಿ ಎಲ್ಲಾ ಬಸ್ಸುಗಳು ಸ್ವಲ್ಪ ಮುಂದಕ್ಕೆ ವಾಲಿಯೇ ನಿಲ್ಲುತ್ತಿದ್ದವು. ಎದುರುಗಡೆ ಬಸ್ ಸ್ಟ್ಯಾಂಡಿನ ಪಾಗಾರ ಗೋಡೆ, ಅದರಾಚೆ ಅಂಗಡಿಗಳು, ಆಟೋರಿಕ್ಷಾ. ನಮ್ಮೂರಿನಲ್ಲಿ ವಾಸವಾಗಿದ್ದ, ಓಡಾಡಿ ಕೊಂಡಿದ್ದ ಸರಕಾರಿ ಬಸ್ಸುಗಳೋ, ಹೆಚ್ಚಿ ನವು ನಿವೃತ್ತಿಯ ವಯಸ್ಸು ಮೀರಿ ಎರಡನೇ ಜನ್ಮ ಬದುಕುತ್ತಿದ್ದವು.

ಅಲ್ಲಿ ಆಗೀಗ ಇದೊಂದು ಘಟನೆ ನಡೆಯುತ್ತಿತ್ತು. ಕೆಲವೊಮ್ಮೆ ಬಸ್‌ನ ಹ್ಯಾಂಡ್ ಬ್ರೇಕ್ ಹಾಕಿದ್ದು ಸರಿಯಾಗದಿದ್ದಲ್ಲಿ ಬಸ್ ಇಳಿಜಾರಿನಲ್ಲಿ ಮುಂದೆ ಹೊರಟು ಬಿಡುತ್ತಿತ್ತು.

ನಿಲ್ದಾಣದ ಮುಂದಿನ ಗೋಡೆಗೆ ನಿಧಾನಕ್ಕೆ ಹೋಗಿ ಬಡಿದು ನಿಲ್ಲುತ್ತಿತ್ತು. ತಮಾಷೆಗಲ್ಲ, ಇದು ವರ್ಷಕ್ಕೆ ಒಂದೆರಡು ಬಾರಿ ಆಗುತ್ತಿತ್ತು. ಬಸ್‌ಗೆ ಏನೋ ಆಹ್ವಾನವಾದಂತೆ- ಡ್ರೈವರ್‌ಲೆಸ್ ಡ್ರೈವಿಂಗ್! ಇದರಿಂದಾಗಿ ಬಸ್ ಹೊರಡುವ ಮುನ್ನ ಕೂತ ಎಲ್ಲಾ ಪ್ರಯಾಣಿಕರಲ್ಲೂ ಅಂತರ್ಗಾ ಮಿ ಹೆದರಿಕೆ. ಈ ಕಾರಣಕ್ಕೋ ಏನೋ, ಅಕ್ಕಪಕ್ಕದ ಬಸ್ಸುಗಳು ಒಮ್ಮೆಲೆ ಸರಿದರೆ ಬಸ್‌ ನೊಳಗೆ ಕೂತವರೆಲ್ಲ ದಸಕ್ಕೆಂದು ಹೆದರುತ್ತಿದ್ದರು. ಕೆಲವರು ಕಿರುಚಿಕೊಳ್ಳುತ್ತಿದ್ದರು, ಇನ್ನು ಕೆಲವರು ಸೀಟಿನ ಹ್ಯಾಂಡಲ್ ಹಿಡಿದುಕೊಳ್ಳುತ್ತಿದ್ದರು. ಆಮೇಲೆ ಆಚೀಚೆ ಒಬ್ಬರನ್ನೊಬ್ಬರು ನೋಡಿ ನಗೋದು. ಎಲ್ಲರಿಗೂ ಈ ರೀತಿಯ ಅನುಭವ ಸಣ್ಣ ಮಟ್ಟಿಗೆ ಆಗಿರುತ್ತದೆ. ಪಕ್ಕದ ವಾಹನ ಸರಿದಾಗ ನಾವು ಹಿಮ್ಮುಖ ಸರಿದಂತೆ!

ಕುಮಟೆಯ ಬಸ್ ಸ್ಟ್ಯಾಂಡ್‌ನಲ್ಲಿ ಇದು ಆಗೀಗ ಹಾರ್ಟ್ ಅಟ್ಯಾಕ್ ಆದಂತ ಅನುಭವವಾಗಿತ್ತು. ಹೆದರುವುದೆಂದರೆ ಬಹುತೇಕರಿಗೆ ಅಕ್ಷರಶಃ ಬಸ್ ಮುನ್ನಡೆದಂತೆ ಇಡೀ ದೇಹದಲ್ಲೂ ಅನುಭವ ವಾಗುತ್ತಿತ್ತು!

ಮನುಷ್ಯನ ಮೆದುಳು ನಿರಂತರ ಊಹಿಸುವ ಕಾರ್ಯಾಗಾರ. ನಾನಿಲ್ಲಿ ಹೇಳುತ್ತಿರುವುದು ನಾವು ಯೋಚಿಸುವ ಊಹೆ, ಕಲ್ಪನೆಗಳಲ್ಲ, ಬದಲಿಗೆ ಮೆದುಳಿನ ಸ್ವಾಭಾವಿಕ ಕಲ್ಪನೆ, ಊಹೆ. ಮೇಲೆ ಹೇಳಿದ ಬಸ್ಸಿನ ಅನುಭವದಲ್ಲಿ, ಕಣ್ಣಿಗಾದ ಪಕ್ಕದ ಬಸ್ಸು ಹಿಂಜರಿಯುವ ಅನುಭವ ಮೆದುಳಿಗೆ ಮುಟ್ಟುವಾಗ ದೇಹಕ್ಕೆ ನಮ್ಮ ಬಸ್ ಸರಿದ ಅನುಭವವಾಗುವುದಿಲ್ಲ. ಏಕೆಂದರೆ ಅಲ್ಲಿ ದೇಹ, ಬಸ್ಸು ನಿಜವಾಗಿಯೂ ಸರಿದಿರುವುದಿಲ್ಲ. ಆದರೆ ಮೆದುಳು ಇಡೀ ದೇಹಕ್ಕೆ ಸರಿದ ಅನುಭವ ಕೊಟ್ಟು ತಕ್ಷಣ ಸೀಟಿನ ಹಿಡಿಕೆಯನ್ನು ಹಿಡಿಯುವಂತೆ ಮಾಡುತ್ತದೆ. ಅದು ಊಹೆಯಿಂದ ನಡೆಯುವ ಸಾದೃಶ ಅನುಭವ!

Shishir Hegde Column: ಎಲ್ಲರ ತಲೆಯೊಳಗಿರುವ ಅವನೊಬ್ಬ ವಿಚಿತ್ರ ಇತಿಹಾಸಕಾರ !

ಬಸ್ ಸ್ಟ್ಯಾಂಡ್‌ನ ಎರಡನೇ ಅನುಭವ ತೆಗೆದುಕೊಳ್ಳೋಣ. ಯಾವುದೇ ಬಸ್ ಸ್ಟ್ಯಾಂಡ್ ಶಬ್ದಗಳ ಆರ್ಕೆಸ್ಟ್ರಾ. ಬಸ್ಸುಗಳ ಯಂತ್ರದ, ಬ್ರೇಕ್‌ನ ಶಬ್ದ, ಕಂಡಕ್ಟರ್‌ನ ವಿಸಿಲ, ವ್ಯಾಪಾರಿಗಳ ಕೂಗಾಟ, ಪ್ರಯಾಣಿಕರ ಮಾತು, 'ಪ್ರಯಾಣಿಕರ ಗಮನಕ್ಕೆ, ಬಸ್ ನಂಬರ್' ಎಂಬ ಮೈಕಿನ ಒದರಾಟ, ಮೊಬೈಲ್ ಲೌಡ್ ಸ್ಪೀಕರ್ ಹಾಡು, ಮಕ್ಕಳ ಅಳು, ಕಾಗೆಯ ಕೂಗು ಇತ್ಯಾದಿ.

ಇದೆಲ್ಲವನ್ನು ಕೇಳುವಾಗ ಕೂಡ ನಮ್ಮ ತಲೆ ಅಂತಹುದೇ ಊಹೆಯನ್ನು ಮಾಡುತ್ತದೆ. ಹೌದು. ಕೇಳುವಾಗಲೂ ಊಹೆಯೇ. ಹೇಗೆಂದರೆ ಈ ಎಲ್ಲಾ ಶಬ್ದಗಳು ಕಿವಿಯ ತಮಟೆಯ ಮೇಲೆ ಬಿದ್ದಾಗ ಅವು ಇಲೆಕ್ಟ್ರಿಕ್ ಸಂಕೇತಗಳಾಗಿ ಮೆದುಳನ್ನು ತಲುಪುತ್ತವೆ. ಆ ಸಂದೇಶಗಳನ್ನು ಪ್ರತ್ಯೇಕಿಸುವ ಮತ್ತು ವರ್ಗೀಕರಿಸುವ ಕೆಲಸ ಆಗುವುದು ಮೆದುಳಿನಲ್ಲಿ.

ಹೇಗೆಂದರೆ ಎಲ್ಲಾ ಶಬ್ದ ಸಂಕೇತಗಳು ಮೆದುಳಿಗೆ ತಲುಪಿದಾಗ, ಮಿಸಾಳ್ ಬಾಜಿ- ಕಲಸು ಮೇಲೋಗರ. ಇಂತಿಂತಹ ಫ್ರೀಕ್ವೆನ್ಸಿ- ಉದಾಹರಣೆಗೆ ಬಸ್‌ನಿಂದ ಎಂಜಿನ್, ಬ್ರೇಕ್ ಇತ್ಯಾದಿ ಶಬ್ದಗಳನ್ನು ಮೆದುಳು ವರ್ಗೀಕರಿಸಿ ಊಹಿಸುತ್ತದೆ. ಹಿಂದೆ ಕೇಳಿದ ಬಸ್ ಶಬ್ದವನ್ನು ನೆನಪಿನ ತಾಳೆ ಹಾಕಿ, ಇವಿಷ್ಟು ಶಬ್ದ ಬಸ್ಸಿನದು, ಇದು ಮಕ್ಕಳ ನಗುವಿನದು, ಇದು ಮೊಬೈಲ್ ಶಬ್ದ ಎಂದು ಅದರ ತರಂಗಾಂತರಗಳನ್ನು ಕಲ್ಪಿಸಿಕೊಂಡು ಶಬ್ದ ಕೇಳಿದ ಅನುಭವವಾಗುವುದು.

ಇದರರ್ಥ ನಾವು ಎಲ್ಲಾ ಸಮಯದಲ್ಲಿ ಕೇಳುವ ಶಬ್ದ ಕೇವಲ ಕಿವಿಯ ಮೇಲೆ ಬೀಳುವ ಶಬ್ದವಲ್ಲ. ಕಿವಿಯ ಮೇಲೆ ಬಿದ್ದ ಶಬ್ದ ಹಾಗೆಯೇ ಕೇಳಿದರೆ ಏನೇನೆಂದರೆ ಏನೂ ತಿಳಿಯುವುದಿಲ್ಲ- ಇಲ್ಲಿ ಕಿವಿ ಕೇವಲ ಮೈಕ್ರೋಫೋನ್ ಇದ್ದಂತೆ. ಅದೆಲ್ಲ ಶಬ್ದವಾಗಿ, ಪ್ರತ್ಯೇಕವಾಗಿ ಕೇಳುವುದು ಮೆದುಳಿನಲ್ಲಿ, ಊಹೆಗಳಿಂದ.

ನಮಗೆ ಜಗತ್ತಿನ ಸಕಲ ಅನುಭವಗಳು ಆಗುವುದೇ ಮೆದುಳಲ್ಲಿ ಎನ್ನುವುದು ನಿಮಗೆ ಗೊತ್ತೇ ಇದೆ. ಯಾವುದೇ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇಲ್ಲ. ಇನ್ನೊಂದು ಕಡೆ ಮೆದುಳು, ಅದಂತೂ ಎಂದಿಗೂ ನೇರವಾಗಿ ಹೊರಜಗತ್ತನ್ನು ಸಂಧಿಸುವುದೇ ಇಲ್ಲ. ಅದರದ್ದೇನಿದ್ದರೂ ತಲೆಯ ಚಿಪ್ಪಿ ನೊಳಗಿನ ಕಗ್ಗತ್ತಲೆಯ ಬದುಕು.

ಮೆದುಳು ಮತ್ತು ಇಂದ್ರಿಯ, ಇವೆರಡರ ನಡುವಿನ ಸಂವಹನ ಪರಮಾದ್ಭುತವಾದದ್ದು. ಆದರೆ ರಜ್ಜು ಸರ್ಪ- ಹಗ್ಗ ಹಾವಾಗಿ ಕಾಣುವುದು, ಹಾವು ಕಂಡಂತೆಯೇ ದೇಹವಿಡೀ ಅನುಭವವಾಗು ವುದು, ಪಾಯಿಖಾನೆಗೆ ಇನ್ನೇನು ಒಳಹೊಗಬೇಕು, ಆ ಕ್ಷಣ ಆಗುವ ಮೂತ್ರದೊತ್ತಡ ಎಲ್ಲವೂ ಇದೇ ತಲೆಯ ಊಹೆಯ, ಊಹೆಯಿಂದಾಗಿ ದೇಹವನ್ನು ತಯಾರಿ ಮಾಡಿಬಿಡುವ ಚಾಳಿಯ ಅನುಭವ ಗಳು. ನಾವೇ ನಮಗೆ ಕಚಗುಳಿ ಮಾಡಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲದಿರುವುದಕ್ಕೂ ಇದೇ ಮೆದುಳಿನ ಅತಿಚುರುಕಿನ ಊಹೆ ಕಾರಣ!

ನಮ್ಮ ಮೆದುಳಿಗೆ ನಾವು ಮೊದಲು ಜೀವಂತವಿರಬೇಕು, Survival ಆಮೇಲೆ! ಹಾಗಾಗಿಯೇ ನಮ್ಮ ತಲೆಯಲ್ಲಿ ನಿರಂತರ 'ಮುಂದೇನಾಗಬಹುದು' ಎಂಬುದರದ್ದೇ ಲೆಕ್ಕಾಚಾರ. ಮೊದಲು ಲೆಕ್ಕಾಚಾರ ಹಾಕೋದು, ಆಮೇಲೆ ಬರುವ ವಿಷಯವನ್ನು ತಾಳೆ ಹಾಕೋದು. ಬಸ್ ಮುಂದೆ ಸರಿದಾಗ ರಕ್ಷಣೆ ಮೊದಲು, ಮುಖ್ಯ. ಹಾಗಾಗಿಯೇ ಏನಾಯ್ತೆಂದು ತಿಳಿಯುವ ಮೊದಲೇ ಕೈಕಾಲು ದಡಬಡಾಯಿ ಸೋದು. ತೆರೆಮರೆಯಲ್ಲಿರುವುದು ಹುಲಿಯೋ ಎಂದು ವಿವೇಚಿಸುವು ದಕ್ಕಿಂತ ಮೊದಲು ಓಡಿ ಬಿಡಬೇಕು, ಆಮೇಲೆ ಹುಲಿಯೋ ಅಲ್ಲವೋ ನೋಡಬೇಕು. ಅದಕ್ಕೆ ತಕ್ಷಣ ಎದೆಬಡಿತ ಹೆಚ್ಚಿಸಿಕೊಳ್ಳ ಬೇಕು, ಉಸಿರಾಟ ತಕ್ಷಣಕ್ಕೆ ಹೆಚ್ಚಬೇಕು ಇತ್ಯಾದಿ. ಒಟ್ಟಾರೆ ಇಲಿ ಇದ್ದರೂ ಹುಲಿಯೆಂದೇ ಭಾವಿಸಿದ ರಷ್ಟೇ ಬಚಾವ್- ಬದುಕು.

ವಿಕಸನದ ಕಾರಣ. ಮೆದುಳು ಮುಂದಿನ ಕ್ಷಣಕ್ಕೆ ದೇಹ ಹೇಗೆ ಸನ್ನದ್ಧವಾಗಿರಬೇಕು ಎಂಬುದನ್ನು ನಿರಂತರ ಊಹಿಸುತ್ತಿರುತ್ತದೆ. ಊಹಿಸಿ ಸುಮ್ಮನಿರುವುದೇ? ಮೊದಲು ಅಪಾಯವೆಂದೇ ಗ್ರಹಿಸಿ, ದೇಹವನ್ನು ಅಪಾಯಕ್ಕೆ ತಯಾರು ಮಾಡಿಬಿಡುತ್ತದೆ. ಬದುಕಿದ್ದರೆ ಆಮೇಲೆ ನೋಡಿಕೊಂಡ ರಾಯ್ತು ಎಂಬ ಸ್ಮೃತಿಗತ ಮನೋಭಾವ. ಇಲ್ಲಿ ತೆರೆಮರೆಯಲ್ಲಿ ಸರಿದದ್ದನ್ನು ಹುಲಿ ಎಂದು ಭಾವಿಸಿದಾಗ ಏನಾಗುತ್ತದೆ? ರಕ್ತದೊತ್ತಡ, ಎದೆ ಬಡಿತ ಹೆಚ್ಚುವುದು ಇತ್ಯಾದಿ ಸರಿ, ಆದರೆ ಅಸಲಿಗೆ ಆಗುವುದೇನು? ನಮ್ಮ ಮೆದುಳು ಇಡೀ ದೇಹದ ಗಮನ ಮತ್ತು ಶಕ್ತಿಯನ್ನು ಅವಶ್ಯಕ ಭಾಗದಿಂದ ಅನವಶ್ಯಕ ಭಾಗಗಳಿಗೆ ವರ್ಗಾಯಿಸುತ್ತದೆ.

ರಕ್ತ ಕರುಳು, ಮೆದುಳು ಹೀಗೆ ಎಲ್ಲ ಭಾಗದಿಂದ ಕೈಕಾಲಿನ ಸ್ನಾಯುಗಳಿಗೆ ನಿರ್ದೇಶಿಸುತ್ತದೆ. ಆದರೆ ಇಂದಿನ ದಿನವ್ಯವಹಾರದಲ್ಲಿ ಯಡವಟ್ಟಾಗುವುದೇ ಇಲ್ಲಿ. ಈಗ ಬದುಕು ಆದಿಮಾನವ ನಂತಲ್ಲ ವಲ್ಲ. ಆಫೀಸ್ ಕೆಲಸದಲ್ಲಿ, ವ್ಯವಹಾರದಲ್ಲಿ ಏನೋ ಒಂದು ಸಮಸ್ಯೆ ನಡೆಯುತ್ತಿದೆ ಎಂದುಕೊಳ್ಳಿ. ಮೊಬೈಲ್ʼನಲ್ಲಿ ಇಮೇಲ, ಗ್ರಾಹಕ ಅಥವಾ ಬಾಸ್ ಕಳುಹಿಸಿದ ಮೆಸೇಜ್ ಟಿಂಗ್ ಎಂದರೆ ಸಾಕು. ಮೆದುಳು ಅದನ್ನು ಕೂಡ ಚಿಕ್ಕ ಅಪಾಯವೆಂದೇ ಗ್ರಹಿಸುವುದು. ಅದರ ಹುಟ್ಟುಬುದ್ಧಿ. ಹಾಗಾಗಿ ಚಿಕ್ಕಪುಟ್ಟ ವಿಷಯಕ್ಕೂ ಅನವಶ್ಯ ಎದೆಬಡಿತ, ರಕ್ತದೊತ್ತಡ ಇತ್ಯಾದಿ ಏರುತ್ತದೆ.

ಒಟ್ಟಾರೆ ಬಾಸ್‌ನ ಸಂದೇಶ ಬಂದಾಗ ವಿವೇಚಿಸುವುದಕ್ಕಿಂತ ಮೊದಲು ದೇಹ ಹುಲಿ ಕಂಡಂತೆ ಓಡಲು ತಯಾರಾಗಿ ಬಿಡುತ್ತದೆ. ಆದರೆ ನಾವು ಓಡುವುದಿಲ್ಲ. ಹಾಗಾಗಿ ಆ ಒತ್ತಡ ಅಲ್ಲಿಯೇ ತಿನ್ನಬೇಕು. ಕೆಲಸದೊತ್ತಡ- ಹಾಗಾಗಿ ಬ್ಲಡ್ ಪ್ರೆಶರ್, ಶುಗರ್ ಇತ್ಯಾದಿ ಎನ್ನುತ್ತಾರೆ ಅಲ್ಲವೇ? ಹೇಗೆ? ಇದೇ ತಲೆಯ ಗುಣದಿಂದ.. ಮೆದುಳಿನ ಅತಿ ಜಾಗೃತಿ, ಎಲ್ಲವನ್ನೂ ಅಪಾಯವೆಂಬಂತೆ ಗ್ರಹಿಸುವು ದರಿಂದ.

ನಿರಂತರ ಇಂತಹ ಚಿಕ್ಕ ಚಿಕ್ಕ ಒತ್ತಡಗಳು ಇಡೀ ದೇಹದ ಶಕ್ತಿಸಮತೋಲನ- ಪ್ರಾಣವನ್ನು ಏರು ಪೇರಾಗಿಸಿಬಿಡುತ್ತದೆ. ಇದು ನಿತ್ಯ ನಿರಂತರವಾದಾಗ, ಪ್ರತೀ ಬಾರಿ ಗ್ರಾಹಕ ಪ್ರಶ್ನಿಸಿದಾಗ, ಬಾಸ್ ಕರೆ ಮಾಡಿದಾಗ, ಮೀಟಿಂಗ್‌ನಲ್ಲಿ ಸೇರಿದಾಗ ಅಕ್ಷರಶಃ ಕಾಡಿನ ಮಧ್ಯದಲ್ಲಿ ಸುತ್ತಲೂ ಇಲಿ ಬಿಟ್ಟು ಕೊಂಡಂತಾಗಿ ಬಿಡುತ್ತದೆ. ದೇಹ ಸುಸ್ತಾಗುತ್ತದೆ, ಸೋಲುತ್ತದೆ, ಗುಳಿಗೆ ಬೇಡುತ್ತದೆ!

ಇದುವೇ ಈ ಶತಮಾನದ ಮನುಷ್ಯ ಕುಲದ ಅತಿ ದೊಡ್ಡ ಸಮಸ್ಯೆ. ಆಂಕ್ಸೈಟಿ ಮತ್ತು ಡಿಪ್ರೆಷನ್. ಇದು ಈಗ ಪೇಟೆಯ ಬದುಕಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಲೆಕ್ಕಾಚಾರ ಎಡೆಯೂ ತಪ್ಪುತ್ತಿದೆ. ಏಕೆಂದರೆ ಆಧುನಿಕ ಬದುಕು ಸುಲಭ ಮಾಡಿಕೊಳ್ಳುವ ಭರದಲ್ಲಿ ಸಂಕೀರ್ಣತೆ ಎಡೆಯೂ ಹೆಚ್ಚಿದೆ. ಸಂಕೀರ್ಣತೆ ಎಂದರೆ ಹೆಚ್ಚಿನ ಅನಿಶ್ಚಿತತೆ. ಅನಿಶ್ಚಿತತೆ ಎಂದರೇನು? ನಮ್ಮ ತಲೆಯ ಲೆಕ್ಕಾಚಾರ ತಪ್ಪುವುದು. ಈಗೊಂದು ಹೊಸ ಸಿದ್ಧಾಂತವನ್ನು ವಿಜ್ಞಾನ ಪ್ರತಿಪಾದಿಸುತ್ತಿದೆ.

Action is prediction running in the opposite direction. ಹಾಗಂದರೆ? ಈಗ ನೀವು ಚಹಾ ಕಪ್ ಅನ್ನು ಕೈಗೆತ್ತಿಕೊಳ್ಳಲು ಮುಂದೆ ಬಾಗಿದಿರಿ ಎಂದಿಟ್ಟುಕೊಳ್ಳಿ. ಮೆದುಳು ಅದರ ಮುಂದಿನ ಹಂತ- ನೀವು ಅದನ್ನು ಕೈಗೆತ್ತಿಕೊಂಡದ್ದನ್ನು ಮೊದಲು ಊಹಿಸುತ್ತದೆ. ಆ ಊಹೆಯ ಪ್ರಕಾರ ದೇಹ ಚಲಿಸುತ್ತದೆ. ಇದು ಸ್ವಲ್ಪ ವಿತಂಡವಾದವೆಂದೆನಿಸಿದರೂ ನರವಿಜ್ಞಾನ ಇದನ್ನು ಗ್ರಹಿಸುವುದು ಹೀಗೆ.

ನಡೆಯುವುದು, ಮಾತನಾಡುವುದು, ಬರೆಯುವುದು, ದೇಹ ಸಮತೋಲನ ಎಲ್ಲವೂ ಮೆದುಳಿನ ಊಹೆಯಿಂದಲೇ ಆಗಬೇಕು. ಕಣ್ಣು ಮುಚ್ಚಿ ಮೇಲಿಂದ ಕೆಳಕ್ಕೆ ಹಾರಿದಾಗ ದೇಹ ಸಮತೋಲನ ತಪ್ಪುವುದೇಕೆ ಎಂಬ ಪ್ರಶ್ನೆಗೆ ಉತ್ತರವೇ ಇದೆಲ್ಲದಕ್ಕೆ ಸಾಕ್ಷಿ.

ಮೆದುಳು ವಿಕಸನ ಹೊಂದಿರುವುದೇ ಹಾಗೆ. ಎಲ್ಲದಕ್ಕೂ ಏನೋ ಒಂದು ಅರ್ಥ ಕಲ್ಪಿಸಿಕೊಳ್ಳಲೇ ಬೇಕು. ಮೆದುಳಿನಲ್ಲಿ ಯಾವುದಕ್ಕೂ ಉತ್ತರವಿಲ್ಲ ಎಂಬಂತಿಲ್ಲ. ನಾವು ಸ್ವಾಭಾವಿಕವಾಗಿ ಋಣಾತ್ಮಕ ಸ್ವಭಾವದ ಪ್ರಾಣಿ, ಉಳಿದ ಪ್ರಾಣಿಗಳಂತೆ. ಇದನ್ನು ವಿಜ್ಞಾನ reptilian brain ಎಂದು ಕರೆಯುತ್ತದೆ. ರಕ್ಷಣೆ ಪರಮಾದ್ಯತೆ. ಆದರೆ ಬೆಳವಣಿಗೆ, ಸೃಜನಶೀಲತೆ, ಪ್ರೀತಿ, ಆವಿಷ್ಕಾರ, ಸಂಬಂಧ ಗಳು, ಬುದ್ಧಿವಂತಿಕೆ ಇವೆಲ್ಲದಕ್ಕೆ ನಾವು ಮೆದುಳಿನ ಊಹೆಯಾಚೆ ವ್ಯವಹರಿಸುವ ಅವಶ್ಯಕತೆ ಯಿರುತ್ತದೆ.

ಆದರೆ ಈ ತಲೆಯೊಳಗಿನ ಜ್ಯೋತಿಷಿ, ಮುನ್ಸೂಚಕನ ಮಾತನ್ನೇ ಕೇಳಿ ಬಿಟ್ಟರೆ ಬದುಕು ಕಷ್ಟವಾಗು ತ್ತಲೇ ಹೋಗುತ್ತದೆ. ಅವನ ಮಾತನ್ನು ಪ್ರಶ್ನಾತೀತವಾಗಿ ನಂಬಿಕೊಂಡರೆ, ನಾವು ನಮ್ಮ ಹಿಂದಿನ ಅನುಭವಗಳ ಖೈದಿಯಾಗಿ ಬಿಡುತ್ತೇವೆ. ಎಲ್ಲ ಸರಿ- ಸಮಸ್ಯೆ ಎಲ್ಲರಿಗೂ ಗೊತ್ತು. ಹಾಗಂತ ಈಗ ಆ ಜ್ಯೋತಿಷಿಯನ್ನು ಮನೆ- ಮನದಿಂದ ಹೊರಹಾಕುವುದು ಪರಿಹಾರವೇ? ಸಾಧ್ಯವಿಲ್ಲದ ಮಾತು. ಏಕೆಂದರೆ ಅವನಿಲ್ಲದೆ ನಾವು ಒಂದು ಹೆಜ್ಜೆ ಮುಂದೆ ಇಡಲಾರೆವು, ಒಂದು ಚಹಾಕಪ್ ಎತ್ತಲಾರೆವು, ಬಸ್ಸಿನಿಂದ ಇಳಿಯಲಾರೆವು. ಅವನ ಊಹೆಯೇ ನಮ್ಮ ಬದುಕು. ಆದರೆ ಅವನ ಪ್ರತಿಭವಿಷ್ಯವಾಣಿ ಯನ್ನೂ ತೀರ್ಪೆಂದು ಸ್ವೀಕರಿಸಬೇಕಿಲ್ಲ.

ಹಗ್ಗ ಹಗ್ಗವೇ. ಆದರೆ ಮೊದಲ ಕ್ಷಣ ಅದು ಹಾವೇ. ಹಾವೆಂದು ಬೆಚ್ಚಿಬಿದ್ದ ಕ್ಷಣ ಮತ್ತು ಹಗ್ಗವೆಂದು ಗೊತ್ತಾದ ಕ್ಷಣ- ಇವೆರಡರ ನಡುವೆ ಒಂದು ಕೂದಲೆಳೆಯಷ್ಟು ಸಂಧಿಯಿದೆ. ನಮ್ಮ ಇಡೀ ಸ್ವಾತಂತ್ರ್ಯ ಅಡಗಿರೋದು ಆ ಸಂಧಿಯಲ್ಲಿಯೇ. ಆ ಸಂಧಿ ಕೈಗೆ ಸಿಗದೇ ಹೋದರೆ, ಕಂಡ ಪ್ರತಿ ಹಗ್ಗಕ್ಕೂ ನಾವು ಜಿಗಿಯುತ್ತಲೇ ಇರಬೇಕಾಗುತ್ತದೆ.

ನಮ್ಮ ಬಹುತೇಕ ಭಾವನೆಗಳು, ಅವುಗಳ ಏರಿಳಿತ ಕೂಡ ಇದೇ ತಲೆಯೊಳಗಿನ ಜ್ಯೋತಿಷಿಯ ಕಿತಾಪತಿ. ನೀವು ಇದೆಲ್ಲದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಒಂದು ಹಿಂಪ್ರಯೋಗ (Reverse Experiment) ಮಾಡಬಹುದು. ಸರಳ, ಮಾಡಬೇಕಾದದ್ದು ಇಷ್ಟೆ. ಮುಂದಿನ ಬಾರಿ ಸಿಟ್ಟು ಬಂದಾಗ, ಅಥವಾ ಬೇಸರವಾದಾಗ, ಅಥವಾ ಯಾವುದೇ ಭಾವನಾತ್ಮಕ ಏರುಪೇರಾದಾಗ ಐದು ಕ್ಷಣ ನಿಲ್ಲಬೇಕು.

ಒಂದಲ್ಲ- ಎರಡಲ್ಲ, ಭರ್ತಿ ಐದು ಕ್ಷಣ. ನಿಂತು ಏನನ್ನೂ ಮಾಡಬೇಕಾಗಿಲ್ಲ- ಕೇವಲ ಆ ಸಮಯ ದಲ್ಲಿ ನಮ್ಮ ಇಡೀ ದೇಹವನ್ನೊಮ್ಮೆ ಗಮನಿಸಬೇಕು. ದೇಹದಲ್ಲಿ ಎಲ್ಲಿ ಬಿಗುವಿನ ಅನುಭವಾಗು ತ್ತಿದೆ ಎನ್ನುವುದನ್ನು ಒಮ್ಮೆ ಗ್ರಹಿಸಬೇಕು. ಅಷ್ಟೇ ಮಾಡಬೇಕಾದದ್ದು. ಆ ಬಿಗಿತಗಳನ್ನು ಗ್ರಹಿಸಿದರೆ ತಕ್ಷಣ ಅಲ್ಲಿನ ಸ್ನಾಯುಗಳ ಒತ್ತಡದ ಅರಿವು ಮೆದುಳಿಗೆ ಆಗುತ್ತದೆ. ಮೆದುಳೇ ಇದೆಲ್ಲದಕ್ಕೆ ಕಾರಣವಾದರೂ ಹೀಗೊಂದು ಗ್ರಹಿಸುವಿಕೆ ಅದರದೇ ಭವಿಷ್ಯವನ್ನು ತಕ್ಷಣಕ್ಕ ಪ್ರಶ್ನಿಸುತ್ತದೆ. ಪರಿಣಾಮ ಸ್ನಾಯುಗಳು ಬಿಗಿತಗೊಳ್ಳಬೇಕಾಗಿಲ್ಲ ಎನ್ನುವ ಅರಿವಾಗಿ, ದೇಹ ಸಹಜಕ್ಕೆ, ಸಮಾಧಾನಕ್ಕೆ ಮರಳುತ್ತದೆ.

ಆಗ ಸಹಜವಾಗಿ ತಲೆಯೊಳಗಿನ ಭಾವೋದ್ವೇಗ ಕಡಿಮೆಯಾಗುತ್ತದೆ. ಒಂದೇ ಪ್ರಯೋಗ ಸಾಕು. ಆದರೆ ಇದು ಪರಿಹಾರವಲ್ಲ, ಏಕೆಂದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ತಲೆ ಕೆಟ್ಟುಹೋದಾಗ, ಸಿಟ್ಟು ಬಂದಾಗ ಇದ್ಯಾವುದೂ ನೆನಪಿರುವುದಿಲ್ಲ, ನೆನಪಾಗುವುದಿಲ್ಲ. ಪಿತ್ತ ನೆತ್ತಿಗೇರಿದಾಗ ಶಿಶಿರಕಾಲ ಲೇಖನ ಯಾರಿಗೆ ನೆನಪಾಗಬೇಕು? ಪ್ರತಿ ನೆನಪೂ ನಮ್ಮ ತಲೆಯೊಳಗಿನ ಘಟನೆಯ ಮರುಸೃಷ್ಟಿ.

ನೀವು ಹಿಂದಿನ ವಾರ ಆ ವಿಚಿತ್ರ ಇತಿಹಾಸಕಾರನನ್ನು ಭೇಟಿಯಾಗಿದ್ದೀರಿ, ನೆನಪಿರಬಹುದು. ಅವನೋ, ಹಳೆಯದನ್ನು ತನಗೆ ಬೇಕಾದಂತೆ ಬರೆಯುತ್ತಾನೆ, ಈ ಜ್ಯೋತಿಷಿ ಅವನ ಸೋದರ. ಒಬ್ಬ ಹಿಂದಿನದನ್ನು ತಿರುಚುತ್ತಾನೆ, ಇನ್ನೊಬ್ಬ ಮುಂದಿನದನ್ನು ಬೇಕಾಬಿಟ್ಟಿ ಊಹಿಸುತ್ತಾನೆ. ಹಾಗಾಗಿ ಇಲ್ಲಿ ಜ್ಯೋತಿಷಿ ಸೋಲುವುದೇ ಇಲ್ಲ- ಅವನು ಕಾಯುತ್ತಾನೆ. ನಾವು ಅವನಿರುವುದು ಮರೆತ ಮರು ಕ್ಷಣ ಮತ್ತೆ ತನ್ನ ಸಿಂಹಾಸನ ಏರಿ ಕುಳಿತುಕೊಳ್ಳುತ್ತಾನೆ, ಅಸಂಬದ್ಧ ಭವಿಷ್ಯ ಹೇಳಲು ಶುರು ಮಾಡುತ್ತಾನೆ. ಆ ಕೂದಲೆಳೆಯ ಅಂತರದಲ್ಲಿ ಬೇಕಾದ ವಿವೇಕ ನೆನಪಾಗುವುದಿಲ್ಲ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ತಿಳುವಳಿಕೆ ಬೇಕು, ಆದರೆ ತಿಳುವಳಿಕೆ ಮಾತ್ರ ಪರಿಹಾರವಲ್ಲ.

ಹಾಗಾದರೆ? ಸರಳ. ಮರೆವೇ ಸಮಸ್ಯೆ ಎಂದಾದ ಮೇಲೆ, ಪರಿಹಾರ ಇರಬೇಕಾದದ್ದು ಸ್ಮೃತಿಯಲ್ಲಿ. ಹೌದು- ಇಂತಹ ದೈನಂದಿನ ಬದುಕಿನ ಸಮಸ್ಯೆಗಳಿಗೆ ಸ್ಮೃತಿ, ಧ್ಯಾನವೇ ಪರಿಹಾರ ಎಂದು ಸಾವಿರ ಸಾವಿರ ವರ್ಷಗಳಿಂದ ನಮ್ಮಲ್ಲಿ ಹೇಳುತ್ತಲೇ ಬರಲಾಗಿದೆ. ಆಗೇನು ಈಗಿನಂತೆ ಬ್ರೈನ್ ಸ್ಕ್ಯಾನರ್‌ ಗಳಿರಲಿಲ್ಲ; ಆ ಋಷಿ-ಯೋಗಿಗಳು ಕಣ್ಣುಮುಚ್ಚಿ ಕಂಡುಕೊಂಡದ್ದಕ್ಕೆ ಸಾಕ್ಷಗಳಿರಲಿಲ್ಲ

ಹಾಗಾಗಿಯೇ ಪಾಶ್ಚಾತ್ಯ ವಿಜ್ಞಾನ ಅದನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ನಂಬದಿರುವುದಕ್ಕೆ ಸಾಕ್ಷ ಕೊರತೆ ಕಾರಣವಾಗಿತ್ತು. ಆದರೆ ಈಗ ಕಥೆ ಬದಲಾಗಿದೆ. ಕಣ್ಣಿನ ಮೇಲೆ ಬಿದ್ದ ಬೆಳಕು ಹೇಗೆ ಎಲೆಕ್ಟ್ರಿಕ್ ಸಿಗ್ನಲ್ ಆಗಿ ಪರಿವರ್ತನೆಯಾಗುತ್ತದೆ, ಅದು ಮೆದುಳಿನ ಯಾವ ಮೂಲೆಯನ್ನು ತಲುಪುತ್ತದೆ ಎಂಬುದನ್ನು ಯಂತ್ರದಲ್ಲಿ ಕಣ್ಣಾರೆ ಕಾಣಬಹುದು. ಆದರೆ ತಮಾಷೆ ನೋಡಿ- ಇಷ್ಟು ಮುಂದುವರಿದ ವಿಜ್ಞಾನ ಕೂಡ ಕೊನೆಗೆ ಬೆರಳು ತೋರಿಸುತ್ತಿರೋದು ಆ ಓಬೀರಾಯನ ಕಾಲದ ಬರಿಗಾಲಿನ ಮುನಿಯ ಕಡೆಗೆ. ಇದೆಲ್ಲದಕ್ಕೂ ಧ್ಯಾನವೇ ಪರಿಹಾರ ಎಂದು ಇಂದಿನ FMRI ಕೂಡ ಒಪ್ಪುತ್ತದೆ.

ಧ್ಯಾನ ಈಗಿನ ಅಮೆರಿಕಾ ಮೊದಲಾದ ಕಡೆಯ ಹುಚ್ಚಾಸ್ಪತ್ರೆಯ, ಜೈಲುಗಳ ಮಾಡರ್ನ್ ಪ್ರಿಸ್ಕ್ರಿಪ್ಷನ್. ಇದನ್ನು ಹಾರಿಕೆಗೆ ಹೇಳುತ್ತಿಲ್ಲ. ಎಲ್ಲಾ ಮಾನಸಿಕ ಶುಶ್ರೂಷೆಗಳಲ್ಲಿ ಧ್ಯಾನಕ್ಕೆ ಈಗ ಎಲ್ಲಿಲ್ಲದ ಆದ್ಯತೆ. ಹಾಗಾದರೆ ಇದೆಲ್ಲ ಹೇಗೆ? ಸುಮ್ಮನೆ ಕಣ್ಣುಮುಚ್ಚಿ, ಏನನ್ನೂ ಮಾಡದೇ ಕುಳಿತಾಗ ಅಸಲಿಗೆ ಏನಾಗುತ್ತದೆ? ಧ್ಯಾನ ಮಾನಸಿಕ ತರಬೇತಿ ಎಂದಾದರೆ, ಸುಮ್ಮನೆ ಕೂರುವುದು ಕಸರತ್ತಾಗುವುದು ಹೇಗೆ? ಧ್ಯಾನ ಹಿಂದೆಂದಿಗಿಂತ ಈಗೇಕೆ ಹೆಚ್ಚು ಅವಶ್ಯಕ? ಯಾರಿಗೆ? ಹಾಗಾದರೆ ಎಲ್ಲಿಂದ ಶುರು ಮಾಡಬೇಕು? ಅದು ಮೆದುಳಿನೊಳಗೆ ಭೌತಿಕ ಬದಲಾವಣೆಯನ್ನು ತರಬಹುದಂತೆ ಹೌದೆ? ಸಾವಿರ ವರ್ಷದ ಧ್ಯಾನ ಮತ್ತು ಇಂದಿನ ನರವಿಜ್ಞಾನ- ಇವೆರಡೂ ಒಂದೇ ಕಡೆ ಬೆರಳು ತೋರಿಸುತ್ತಿರೋದೇಕೆ? ವಿಜ್ಞಾನಕ್ಕೆ ಸಾಕ್ಷ ಸಿಗಲಿಲ್ಲ ಎಂದು ಅದನ್ನು ಅಲ್ಲವೆನ್ನುವ ವಾದ ಸರಿ, ಆದರೆ ಈಗ ಅದೇ ವಿಜ್ಞಾನ ಹಾಗಲ್ಲ ಹೀಗೆ ಎಂದು ಹೇಳಿದ ಮೇಲೂ ಕೇಳದಿದ್ದರೆ ನಮಗೆ ಹಿಂದಿದ್ದದ್ದು, ಮುಂದೆ ಉಳಿಯುವುದು ಅದೇ ಅಜ್ಞಾನವೇ ಅಲ್ಲವೇ? ಇಂದು ಸಮಸ್ಯೆ ಇದೆ- ಅಂದು ಪರಿಹಾರವಿದೆ ಎಂದಾದರೆ ನಾವೇಕೆ ಅದನ್ನು ಅನ್ವೇಷಿಸಬಾರದು?

(ತಲೆ-ಹರಟೆ ಮುಂದುವರಿಯುತ್ತದೆ)

Dailyhunt
Disclaimer: This content has not been generated, created or edited by Dailyhunt. Publisher: Vishwavani